ಏಕಪಾತ್ರಾಭಿನಯ ( Monodrama ): ಓಶೋ 365 #Day 62

ಧಾರ್ಮಿಕರಾಗುವುದು ಬಹಳ ಕಷ್ಟಕರ ಏಕೆಂದರೆ, ಇಲ್ಲಿ ಪ್ರಯೋಗಕ್ಕೊಳಗಾಗುವವರೂ ನೀವೇ, ಪ್ರಯೋಗ ಮಾಡುವವರೂ ನೀವೇ. ಇಲ್ಲಿ ವಿಜ್ಞಾನಿಯೂ ನೀವೇ, ಪ್ರಯೋಗವೂ ನೀವೇ. ಒಳಗೆ ಯಾವ ಪ್ರತ್ಯೇಕತೆಯೂ ಇಲ್ಲ. ಇಲ್ಲಿ ನೀವು ಏಕಪಾತ್ರಾಭಿನಯ ಮಾಡುತ್ತಿದ್ದೀರಿ ~  ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಬಹುತೇಕ ನಾಟಕಗಳಲ್ಲಿ ಹಲವಾರು ನಟರಿರುತ್ತಾರೆ. ಮತ್ತು ಪಾತ್ರಗಳನ್ನು ಎಲ್ಲರಿಗೂ ಹಂಚಲಾಗಿರುತ್ತದೆ. ಏಕಪಾತ್ರಾಭಿನಯದಲ್ಲಿ ಇರುವುದು ನೀವೊಬ್ಬರೇ. ಇಲ್ಲಿ ಎಲ್ಲ ಪಾತ್ರಗಳನ್ನು ನೀವೇ ಅಭಿನಯಿಸಬೇಕಾಗಿದೆ.

ಬೋಕುಜು ಎನ್ನುವ ಝೆನ್ ಮಾಸ್ಟರ್ ಇದ್ದ. ಬೋಕುಜು ಬಹಳ ಹೊತ್ತು ಒಬ್ಬನೇ ಒಂದು ಗುಹೆಯಲ್ಲಿ ಸಮಯ ಕಳೆಯುತ್ತಿದ್ದ. ಒಮ್ಮೊಮ್ಮೆ ಗುಹೆಯಿಂದ ಜೋರಾಗಿ ಬೋಕುಜನ ಧ್ವನಿ ಕೇಳಿಸುತ್ತಿತ್ತು.

“ ಬೋಕುಜು “

ಮಾಸ್ಟರ್ ತನ್ನ ಹೆಸರನ್ನೇ ಜೋರಾಗಿ ಕೂಗುತ್ತಿದ್ದ ಮತ್ತು ತಾನೇ ಉತ್ತರಿಸುತ್ತಿದ್ದ.

“ ಹಾಂ, ನಾನಿಲ್ಲೇ ಇದ್ದೇನೆ “

“ಬೋಕುಜು ನೆನಪಿರಲಿ, ಇನ್ನೊಂದು ದಿನವನ್ನು ನಿನಗೆ ಕೊಡಲಾಗಿದೆ. ಈ ದಿನವನ್ನು ಪ್ರಜ್ಞಾಪೂರ್ವಕವಾಗಿ ಬಳಸು, ಮೂರ್ಖರಂತೆ ದಿನವನ್ನು ವ್ಯರ್ಥವಾಗಿ ಕಳೆಯಬೇಡ.” ಎಂದು ತಾನೇ ಕೂಗಿ ಹೇಳಿ ತಾನೇ ಉತ್ತರಿಸುತ್ತಿದ್ದ, “ ಹೌದು ಮಾಸ್ಟರ್ ನನಗೆ ಗೊತ್ತು, ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ”.

ಹಗಲು, ರಾತ್ರಿ ಯಾವಾಗಲಾದರೂ ಈ ಸಂಭಾಷಣೆ ಗುಹೆಯಿಂದ ಕೇಳಿ ಬರುತ್ತಿತ್ತು. ಬೋಕುಜು ನ ಶಿಷ್ಯರಿಗೆ ಇದು ಬಹಳ ಕುತೂಹಲ ಹುಟ್ಟಿಸುತ್ತಿತ್ತು. ಮಾಸ್ಟರ್ ನ ಈ ವರ್ತನೆ ಅವರಿಗೆ ಅರ್ಥ ಆಗುತ್ತಿರಲಿಲ್ಲ.

ಬೋಕುಜು ಹುಚ್ಚನಾಗಿದ್ದಾನೆ ಎಂದು ಶಿಷ್ಯರು ಮಾತನಾಡಿಕೊಳ್ಳಹತ್ತಿದರು. ಆದರೆ ಬೋಕುಜು ಮಾಡುತ್ತಿದ್ದದ್ದು ಏಕಪಾತ್ರಾಭಿನಯವನ್ನ. ಮತ್ತು ನಿಮ್ಮ ಒಳಗಿರುವ ಪರಿಸ್ಥಿತಿ ಇಂಥಹದೇ. ಮಾತನಾಡುವವರೂ ನೀವೇ ಮತ್ತು ಆ ಮಾತನ್ನು ಕೇಳುವವರೂ ನೀವೇ. ಸೂಚನೆಗಳನ್ನು ನೀಡುವವರೂ ನೀವೇ ಮತ್ತು ಅವುಗಳನ್ನು ಪಾಲಿಸುವವರೂ ನೀವೇ. ಇದು ಬಹಳ ಕಠಿಣ ಏಕೆಂದರೆ ಒಮ್ಮೆಮ್ಮೆ ಪಾತ್ರಗಳು ಓವರಲ್ಯಾಪ್ ಆಗುತ್ತವೆ. ನೀವು ಲೀಡರ್ ಆಗಿದ್ದು ನಿಮ್ಮನ್ನು ಹಿಂಬಾಲಿಸುವವರು ಬೇರೆಯವರಾಗಿದ್ದಾಗ ಸುಲಭ . ಪಾತ್ರಗಳನ್ನು ಹಂಚಬಹುದಾಗಿದ್ದಾಗ ಎಲ್ಲವೂ ಸ್ಪಷ್ಟ, ಆಗ ಯಾವುದೂ ಓವರಲ್ಯಾಪ್ ಆಗುವುದಿಲ್ಲ. ನಿಮ್ಮ ನಿಮ್ಮ ಪಾತ್ರಗಳನ್ನು ನೀವೇ ಅಭಿನಯಿಸಬೇಕು. ಇದು ಬಹಳ ಸುಲಭ.

ಆದರೆ ಯಾವಾಗ ಎರಡೂ ಪಾತ್ರಗಳನ್ನು ನೀವೇ ಅಭಿನಯಿಸುತ್ತೀರೋ ಆಗ ಪರಿಸ್ಥಿತಿ ಸಹಜ , ಸ್ವೇಚ್ಛಾನುಸಾರ ಅಲ್ಲ. ಹೌದು ಪರಿಸ್ಥಿತಿ ಖಂಡಿತ ಸಂಕೀರ್ಣ, ಆದರೆ ನಿಧಾನವಾಗಿ ನೀವು ಪರಿಸ್ಥಿತಿಯನ್ನ ನಿಭಾಯಿಸುವುದನ್ನ ಕಲಿಯುತ್ತೀರಿ.

ನಸ್ರುದ್ದೀನ್ ಒಬ್ಬನೇ ತನಗೆ ತಾನೇ ಏನೋ ಮಾತನಾಡಿಕೊಳ್ಳುತ್ತಿದ್ದ. ಬಹಳ ದಿನಗಳಿಂದ ನಸ್ರುದ್ದೀನ್ ನ ಈ ವರ್ತನೆ ಗಮನಿಸುತ್ತಿದ್ದ ಗೆಳೆಯನೊಬ್ಬ ಈ ಬಗ್ಗೆ ಅವನನ್ನು ಪ್ರಶ್ನಿಸಿದ.

“ನಸ್ರುದ್ದೀನ್, ಯಾಕೆ ನೀನು ಒಬ್ಬನೇ ಮಾತನಾಡಿಕೊಳ್ಳುತ್ತೀ ? ಏನು ಸಮಸ್ಯೆ ? “

“ ಎರಡು ಕಾರಣಗಳು” ನಸ್ರುದ್ದೀನ್ ಉತ್ತರಿಸಿದ

“ ಮೊದಲನೇಯದು ನನಗೆ ಜಾಣ ಮನುಷ್ಯನೊಡನೆ ಮಾತನಾಡುವ ಆಸೆ ಮತ್ತು ಎರಡನೇಯದು ನನಗೆ ಜಾಣ ಮನುಷ್ಯನ ಮಾತುಗಳನ್ನ ಕೇಳುವ ಬಯಕೆ “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.