ಅಲೆಮಾರಿಗಳು ಹೇಳುವ ಮನುಷ್ಯ ಕಥೆ ಕೇಳುಗರ, ಓದುಗರ ಮನಸಿನಲ್ಲಿ ಹೆಚ್ಚು ಕಾಲ ಉಳಿದಂತೆಲ್ಲ ಅಲೆಮಾರಿಯ ಹೆಜ್ಜೆ ಗುರುತೂ ಶಾಶ್ವತವಾಗಿ ಉಳಿಯುತ್ತವೆ. ಈ ಲೋಕದ ಕಥೆಯನ್ನು ಹೇಳುವವರೆಲ್ಲ ಅಲೆಮಾರಿಗಳೇ… । ಓ.ಎಲ್.ನಾಗಭೂಷಣ ಸ್ವಾಮಿ
ಖಲೀಲ್ ಗಿಬ್ರಾನ್ ತೀರಿಕೊಂಡ ನಂತರ ೧೯೩೨ರಲ್ಲಿ ಈ “ಅಲೆಮಾರಿ” ಸಂಕಲನ ಪ್ರಕಟವಾಯಿತು. ಅವನ ಪ್ರಸಿದ್ಧ ಕೃತಿಗಳಾದ ಪ್ರವಾದಿ (ದಿ ಪ್ರಾಫೆಟ್) ಮತ್ತು ಹರಿಕಾರ (ದಿ ಫೋರ್ ರನರ್)ಗಳೊಡನೆ ಇದನ್ನೂ ಸೇರಿಸಿಕೊಳ್ಳಬಹುದು. ಅಲೆಮಾರಿಯು ಹೊಸ ಬದುಕಿನ ಹರಿಕಾರನೂ ಪ್ರವಾದಿಯೂ ಆದ ಬಗೆ ಈ ಮೂರು ಕೃತಿಗಳಲ್ಲಿದೆ ಅಂದರೆ ಅದು ಬರಿಯ ಜಾಣತನದ ಮಾತಲ್ಲ, ಗಿಬ್ರಾನ್‌ನ ಸ್ವಭಾವದ ಮುಖ್ಯಾಂಶಗಳನ್ನೇ ಈ ಮೂರೂ ಪಾತ್ರಗಳು ತೋರಿಸಿಕೊಡುತ್ತವೆ
ಗಿಬ್ರಾನ್ ಕಲಾವಿದನೂ ಹೌದು. ಬೈರೂತ್ ಹತ್ತಿರವಿರುವ ಅವನು ಹುಟ್ಟಿದ ಊರಿನಲ್ಲಿ ಅವನ ರೇಖಾಚಿತ್ರ, ವರ್ಣಚಿತ್ರಗಳ ಮ್ಯೂಸಿಯಮ್ ಇದೆ. ಗಿಬ್ರಾನ್ ಅವನ ಸಮಕಾಲೀನ ಕಲಾವಿದ ರೋದಿನ್, ಕವಿ ಯೇಟ್ಸ್ ಇವರ ಒಡನಾಟವನ್ನೂ ಹೊಂದಿದ್ದ. ಸೂಫಿ ಅನುಭಾವದ ಹಾದಿ ಹಿಡಿದ ಅವಿಸೆನ್ನಾ (೯೮೦-೧೦೩೭), ಸಂತ ಅಗಸ್ತೀನ್‌ನ (೩೫೪-೪೩೦) ಥರದವನೇ ಎಂದು ಅನಿಸಿದ್ದ ಸಂತ ಗಝಾಲಿ (೧೦೫೮-೧೧೧೧), ಕವಿ ಇಬ್ನ್ ಅಲ್ ಫರೀದ್ (೧೧೮೧-೧೨೩೫) ಇವರೆಲ್ಲ ಗಿಬ್ರಾನ್ ಮೇಲೆ ಪ್ರಭಾವ ಬೀರಿದರು. ಗಿಬ್ರಾನ್ ಹಾಗೆಯೇ ಭಾರತೀಯ ಚಿಂತನೆಗಳ ಪರಿಚಯವನ್ನೂ ಹೊಂದಿದ್ದ. ʻಕನ್‍ಫೂಶಿಯಸನ ತತ್ವ ಆಲಿಸಿದೆ, ಬ್ರಹ್ಮನಿಗೆ ಕಿವಿಗೊಟ್ಟೆ, ಬುದ್ದನ ಸಮೀಪ ಕೂತೆʼ ಎಂದು ಗಿಬ್ರಾನ್ ತನ್ನನ್ನೇ ವರ್ಣಿಸಿಕೊಂಡಿದ್ದಾನೆ. ಧರ್ಮ, ಅನುಭಾವಗಳು ಮಾತ್ರವಲ್ಲ, ವಿಲಿಯಂ ಬ್ಲೇಕ್ (೧೦೭-೧೮೨೭) ರಾಲ್ಫ್ ವಾಲ್ಡೋ ಎಮರ್ಸನ್ (೧೮೦೩-೧೮೮೨), ಫ್ರೆಡರಿಕ್ ನೀತ್ಸೆ (೧೮೪೪-೧೯೦೦) ಇವರ ಬರವಣಿಗೆಯಿಂದಲೂ ಪ್ರಭಾವಿತನಾಗಿದ್ದ. ಗಿಬ್ರಾನ್ ಹಾಗೆ ಪೂರ್ವ ಮತ್ತು ಪಶ್ಚಿಮಗಳ ನಡುವಿನ ಸೇತುವೆ ಅನ್ನುವ ವರ್ಣನೆಗೆ ತಕ್ಕವನು. ಪೂರ್ವದ ದೇಶಗಳ ಅನುಭಾವವನ್ನೂ ಪಶ್ಚಿಮ ಜಗತ್ತಿನ ಆದರ್ಶಗಳಾದ ವ್ಯಕ್ತಿಸ್ವಾತಂತ್ರ್ಯವನ್ನೂ ಒಟ್ಟಿಗೆ ಬೆಸೆದ ಕಾರಣದಿಂದ ಅವನ ಕೃತಿಗಳ ತಾತ್ವಿಕ ಚೌಕಟ್ಟು ವಿಭಿನ್ನ ಸ್ವಭಾವದ ಬೇರೆ ಬೇರೆ ಕಾಲದೇಶಗಳ ಓದುಗರಿಗೂ ಪ್ರಿಯವಾಯಿತು.
ಗಿಬ್ರಾನ್ ಹೇಳಿದ ಕಥೆಗಳು ಪ್ರೀತಿ, ಸ್ವಾತಂತ್ರ್ಯ, ಮನುಷ್ಯರ ಪಾಡು, ಅಧ್ಯಾತ್ಮ ಇಂಥ ವಿಶ್ವಾತ್ಮಕ ಅನ್ನುವಂಥ ವಿಷಯಗಳನ್ನು ಕುರಿತವು. ಭಾವಗೀತೆಯ ಗುಣವಿರುವ ಗದ್ಯದಲ್ಲಿ, ಕನ್ನಡದ ವಚನಗಳ ಶೈಲಿಯಲ್ಲಿ ಅವನು ನಿರೂಪಿಸಿದ ಕಥೆಗಳು ನೇರವಾಗಿ ಮನಸ್ಸನ್ನು ಮುಟ್ಟುವಂತಿವೆ. ಅವನು ಹೇಳುವ ಕಥೆಗಳೊಡನೆ ಓದುಗರು ಭಾವನಾತ್ಮಕ ಸಂಬಂಧವನ್ನೂ ಬೆಳೆಸಿಕೊಳ್ಳಬಹುದು, ಆ ಕಥೆ ಹುಟ್ಟಿಸುವ ವಿಚಾರದ ಅಲೆಗಳಿಗೂ ಮನಸ್ಸು ಕೊಡಬಹುದು. ಸಾಮತಿ (ಪ್ಯಾರಬಲ್) ಎಂದು ಕರೆಯಲಾಗುವ ಮಾದರಿಯ ಕಥೆಗಳು ಇವು. ಅಧ್ಯಾತ್ಮ ಮತ್ತು ಧಾರ್ಮಿಕ ಚಿಂತನೆಯನ್ನು ಪ್ರಚೋದಿಸುವ ಕ್ರಿಸ್ತ ಹೇಳಿದ ಸಾಮತಿಗಳು, ಮನುಷ್ಯ ಸ್ವಭಾವ, ವರ್ತನೆಗಳಿಗೆ ಕನ್ನಡಿ ಹಿಡಿದ ಹಾಗೆ ಇರುವ ಪಂಚತಂತ್ರದ ಕಥೆಗಳು ಸಾಮತಿಗೆ ಉದಾಹರಣೆಗಳು. ಒಂದು ವ್ಯತ್ಯಾಸವೆಂದರೆ ಗಿಬ್ರಾನ್ ಕಥೆಗಳು ʻನೀತಿʼಯನ್ನು ವಾಚ್ಯವಾಗಿ ಹೇಳದೆ ಓದುಗರೇ ಕಥೆಯ ಥೀಮನ್ನು ಕಟ್ಟಿಕೊಳ್ಳುವ ಹಾಗೆ ಮಾಡುತ್ತವೆ.
ʻಮರುಕಮ್ಮʼ ಕಥೆ ಚರಿತ್ರೆಯನ್ನು ಕುರಿತ ವ್ಯಾಖ್ಯಾನವಾಗಿ, ʻಅನ್ವೇಷಣೆʼ ಯಾಂತ್ರಿಕವಾದ ಬೌದ್ಧಿಕ ಅನ್ವೇಷಣೆಯನ್ನು ಲೇವಡಿ ಮಾಡುವ ಕಥೆಯಾಗಿ, ʻಗೆಲುವಿನ ಬಯಲುʼ ನಾವು ತೊಂಬತ್ತರ ದಶಕದಲ್ಲಿ ಕಂಡ ಬಾಬರಿ ಮಸೀದಿಯ ಕಥೆಯಾಗಿ, ಅಥವಾ ಈಗ ನಡೆಯುತ್ತಿರುವ ಶಿವಾಜಿ-ಔರಂಗಜೇಬರ ಕಥೆಯ ವಿಡಂಬನೆಯಾಗಿ, ʻರಾಜದಂಡʼ ಆಳುವವರ ಒಣಹೆಮ್ಮೆಯ ಲೇವಡಿಯಾಗಿ ʻತಿಮಿಂಗಿಲ-ಚಿಟ್ಟೆʼ ಪ್ರೇಮಿಗಳು ತಮ್ಮಲ್ಲೆ ತಾವು ಕಳೆದು ಹೋಗುವ ಭ್ರಮೆಯ ಕಥೆಯಾಗಿ, ʻಹದ್ದು ಮತ್ತು ಬಾನಾಡಿʼ ಸದ್ಯದ ಕರ್ನಾಟಕದ ರಾಜಕೀಯದ ಪ್ರತಿಬಿಂಬವಾಗಿ ಕಂಡಿದ್ದವು. ಓದುಗರು ತಮ ತಮಗೆ ಕಂಡ ರೀತಿಯಲ್ಲಿ ಮಾಡಿಕೊಳ್ಳುವ ವ್ಯಾಖ್ಯಾನಕ್ಕೆ ಇಲ್ಲಿನ ಎಲ್ಲ ಕಥೆಗಳೂ ಹೊಂದುತ್ತವೆ.
ಈ ಸಂಕಲನದ ಕೊನೆಯ ಕಥೆ ಇನ್ನೊಬ್ಬ ಅಲೆಮಾರಿ. ಅಲೆಮಾರಿಯಾದವನು ಮಾತ್ರವೇ ತನ್ನ ಅಲೆದಾಟದಲ್ಲಿ ಮನುಷ್ಯ ಸ್ವಭಾವದ ವೈಚಿತ್ರ್ಯಗಳನ್ನೂ ಸಮಾನ ಅಂಶಗಳನ್ನೂ ಕಾಣಬಲ್ಲ, ಕಂಡದ್ದನ್ನು ಹೇಳಿ ನಮಗೂ ಕಾಣಿಸ ಬಲ್ಲ. ಮಹಾಭಾರತದಲ್ಲಿ ಬರುವ ಸೂತರು ಕೂಡ ಅಲೆಮಾರಿಗಳೇ. ರಥ ನಡೆಸುವವರಾಗಿ ಉದ್ಯೋಗ ಅರಸುತ್ತ ದೇಶ ದೇಶ ಸುತ್ತಿದವರು. ಜಾನಪದ ಕಾವ್ಯ ಮಂಟೇಸ್ವಾಮಿಯನ್ನೋ ಮಲೆ ಮಹದೇಶ್ವರನನ್ನೋ ಕುರಿತು ಹಾಡುವವರು ಕೂಡ ಅಲೆಮಾರಿ ಹಾಡುಗಾರರೇ. ತಮಗೆ ಕಂಡ ಬದುಕಿನ ಚಿತ್ರವನ್ನು ತಟ್ಟನೆ ತಮ್ಮ ಹಾಡಿನ ಮಧ್ಯೆ ಸೇರಿಸಿಕೊಂಡು ಹೇಳುವುದನ್ನೂ ಕೇಳಿದ್ದೇನೆ. ಅಲೆಮಾರಿಗಳು ಹೇಳುವ ಮನುಷ್ಯ ಕಥೆ ಕೇಳುಗರ, ಓದುಗರ ಮನಸಿನಲ್ಲಿ ಹೆಚ್ಚು ಕಾಲ ಉಳಿದಂತೆಲ್ಲ ಅಲೆಮಾರಿಯ ಹೆಜ್ಜೆ ಗುರುತೂ ಶಾಶ್ವತವಾಗಿ ಉಳಿಯುತ್ತವೆ. ಈ ಲೋಕದ ಕಥೆಯನ್ನು ಹೇಳುವವರೆಲ್ಲ ಅಲೆಮಾರಿಗಳೇ. ಹುಟ್ಟಿದೂರನ್ನು ತೊರೆದು ಸುತ್ತಾಡುವವರು, ಏನನ್ನೋ ಅರಸುತ್ತ ಸುತ್ತಾಡುವವರು, ಸಾಹಸ ಹುಡುಕುವವರು, ಕೊನೆಗೆ ಅಂತರಂಗದಲ್ಲೇ ಅಲೆದಾಡುವವರೂ ಆಗಿರುತ್ತಾರೆ. ಅಲೆಮಾರಿಯ ಹೆಜ್ಜೆಗುರುತು ನೆಲದ ಮೇಲಲ್ಲ ಕೇಳುಗರ ಮನಸಿನಲ್ಲಿ ಉಳಿಯುತ್ತದೆ. ಈ ಸಂಕಲದ ಆರಂಭದಲ್ಲಿ ಮನೆಯ ಯಜಮಾನ, ಅವನ ಹೆಂಡತಿ, ಮಕ್ಕಳು ಕಥೆ ಕೇಳಲು ಶುರು ಮಾಡುತ್ತಾರೆ. ಕೊನೆಗೆ ಅಲೆಮಾರಿಯು ಇನ್ನೊಬ್ಬ ಅಲೆಮಾರಿಯ ಹಜ್ಜೆಗುರುತು ಇದು ಎಂದು ಕೇಳುಗರಿಗೆ ತೋರಿಸಿಕೊಡುತ್ತಾನೆ.
ಮುಂದಿನ ಕಥೆ ಇನ್ನೊಬ್ಬ ಅಲೆಮಾರಿಯೊಡನೆ ಈ ಸಂಕಲನ ಮುಕ್ತಾಯ ಕಾಣುತ್ತಿದೆ. ಈ ಕಥೆಗಳನ್ನು ಕನ್ನಡದಲ್ಲಿ ಓದಿದವರು ಬೇರೆಯವರಿಗೂ ಈ ಕಥೆ ಹೇಳಿ, ಅಥವಾ ಓದಿಸಿ ಅಲೆಮಾರಿಗಳಾಗಲಿ ಅನ್ನುವುದು ಈ ಅನುವಾದಕನ ಆಸೆ. ಭಾಷೆಗಳಲ್ಲಿ ಅಲೆದು ಈ ಕಥೆಗಳನ್ನು ಕನ್ನಡಕ್ಕೆ ತಂದಿದ್ದು ಆ ಕಥೆಗಳೂ ಅಲೆಮಾರಿಗಳಾಗಲಿ ಅಂತಲೇ!

