ವಚನ ಸಂವಾದ : ಪ್ರಸ್ತಾವನೆ

ಹಲವು ಜಾತಿಗಳ, ಹಲವು ಕಸುಬುಗಳು, ಸಮಾಜದ ಬೇರೆ ಬೇರೆ ಸ್ತರದ ಹಿನ್ನೆಲೆಯ ಜನರಿಂದ ರೂಪುಗೊಂಡ ವಚನಗಳೆಲ್ಲವೂ ಒಂದೇ ಬಗೆಯ ವಿಚಾರಗಳನ್ನು, ಒಂದೇ ನಿಲುವನ್ನು ಹೇಳುವುದಿಲ್ಲ. ಒಬ್ಬ ವಚನಕಾರನ ರಚನೆಗಳಲ್ಲೇ ಪರಸ್ಪರ ವಿರುದ್ಧವೆನಿಸುವ ಮಾತು ಕೇಳುವುದೂ ಉಂಟು. ಒಬ್ಬರ ವಿಚಾರವನ್ನು ಒಪ್ಪದಿರುವ ಹಲವು ಜನರ ಮಾತೂ ಕಾಣುವುದುಂಟು. ಹಾಗೆ ಕನ್ನಡ ನಾಡಿನ ಬಹಳ ಚೈತನ್ಯಪೂರ್ಣವಾದ ಹನ್ನೆರಡನೆಯ ಶತಮಾನದ ಸುಮಾರು ಮೂರು ದಶಕಗಳ ಅವಧಿಯಲ್ಲಿ ಕನ್ನಡ ಜನ ಸೃಷ್ಟಿಸಿದ ಚಿಂತನೆಯ ಶ್ರೀಮಂತಿಕೆಯನ್ನು ಮರೆಯಬಾರದು ಅನ್ನುವುದು ಈ ಅಂಕಣದ ಮುಖ್ಯ ಉದ್ದೇಶ । ಓ.ಎಲ್.ನಾಗಭೂಷಣ ಸ್ವಾಮಿ

ಚರ್ಚೆಯಲ್ಲಿ ಗೆಲ್ಲುವ ಹಂಬಲ ಇರುತ್ತದೆ, ಅದು ಗೆಲ್ಲುವ ಹಟವೂ ಆಗಬಹುದು. ಸಂವಾದಕ್ಕೆ ಎದುರಿಗೆ ಇರುವವರನ್ನು ಬದಲಾಯಿಸುವ ಆಸೆ, ಮತ್ತು ಅವರ ಮಾತಿನಿಂದ ತಾನೂ ಬದಲಾಗಬಹುದು ಎಂಬ ಸಾಧ್ಯತೆಯನ್ನು ಒಪ್ಪಿದ, ಅಂಥ ಬದಲಾವಣೆಗೆ ಸಿದ್ಧವಾದ ಮನಸ್ಸು ಅಗತ್ಯ. ವಚನಗಳು ಕನ್ನಡದ ಬಹು ಮುಖ್ಯ ಸಂವಾದದ ದಾಖಲೆಗಳು.

ದುರಂತವೆಂದರೆ ವಚನಕಾರರು ನೀಡಿದ ಉತ್ತರಗಳು ಮಾತ್ರ ಅವರ ವಚನ ರೂಪದಲ್ಲಿ ನಮಗೆ ದೊರೆತಿವೆ, ಆ ಮಾತು ರೂಪುಗೊಳ್ಳಲು ಕಾರಣವಾದ ಸಂದರ್ಭ ಕೈಗೆ ಸಿಗಂತೆ ಮರೆಯಾಗಿದೆ. ಹಾಗಾಗಿ ವಚನಗಳಿಗೆ ಸಂದರ್ಭವನ್ನು ಕಲ್ಪಿಸುವುದೇ ದೊಡ್ಡ ಉದ್ಯಮವೂ ಆಗಿ ಹಲವು ಶತಮಾನಗಳೇ ಕಳೆದಿವೆ.

ಹನ್ನೆರಡನೆಯ ಶತಮಾನದ ಒಂದು ವಚನ ನನ್ನ ಅಥವಾ ನಮ್ಮ ಯಾವ ಪ್ರಶ್ನೆಗೆ  ಉತ್ತರ ಕೊಟ್ಟೀತು ಅನ್ನುವುದು ವಚನ ಸಂವಾದದ ಮುಖ್ಯ ಲಕ್ಷಣವಾಗಬೇಕು ಅನ್ನುವುದು ಆಸೆ. ಈ ವಚನ ನನಗೆ ಇಂತಿಂಥ ಅರ್ಥಸಾಧ್ಯತೆ, ವಿಚಾರಗಳನ್ನು ಮೂಡಿಸಿತು ಎಂದು ಓದುಗರೊಡನೆ ಹಂಚಿಕೊಳ್ಳುವುದು ಮುಖ್ಯ ಉದ್ದೇಶವೇ ಹೊರತು ಇದೇ ವಚನದ ಅರ್ಥವೆಂದು ಯಾರನ್ನೂ ಒಪ್ಪಿಸುವ ಉದ್ದೇಶವಾಗಲೀ ಹಟವಾಗಲೀ ಇಲ್ಲಿ ಇಲ್ಲ.

ನಾವು ಬದುಕಿರುವ ಕಾಲಕ್ಕೆ ಸಲ್ಲುವವರೇ ಹೊರತು ಮತ್ತೆ ಯಾವುದೋ ಭೂತ ಅಥವ ಭವಿಷ್ಯದ ಕಾಲದವರಾಗಲು ಸಾಧ್ಯವಿಲ್ಲ. ವಚನಗಳಲ್ಲಿ ಸ್ವಂತ ಅನುಭವಕ್ಕೆ ಮಾತಿನ  ರೂಪ ಕೊಡುವ ಪ್ರಯತ್ನ, ವ್ಯಕ್ತಿಯ ಬದುಕು ಸಮಾಜದ ಬದುಕು ಹೇಗಿದ್ದರೆ ಸಹನೀಯ, ಅಪೇಕ್ಷಣೀಯ ಅನ್ನುವ ಸೂಚನೆ, ಮತಾಚರಣೆ, ತತ್ವಚಿಂತನೆ, ಅಧ್ಯಾತ್ಮ, ಸಮಾಜ ವಿಮರ್ಶೆ ಎಲ್ಲವೂ ಇವೆ. ಮುಖ್ಯವಾದ ಮಾತೆಂದರೆ ಹನ್ನೆರಡನೆಯ ಶತಮಾನದ ವಚನಗಳು ಬರವಣಿಗೆಯ ರೂಪದಲ್ಲಿ ನಮಗೆ ದೊರೆಯುವುದು ಹದಿನೈದನೆಯ ಶತಮಾನದ ಹೊತ್ತಿನ ಹಸ್ತಪ್ರತಿಗಳಲ್ಲಿ. ಅಂದರೆ ಹಲವು ಶತಮಾನಗಳ ಕಾಲ ಕನ್ನಡ ಮನಸು ವಚನಗಳನ್ನು ತಮಗೆ ಸೂಕ್ತವೆನಿಸಿದ ಕ್ರಮದಲ್ಲಿ ರೂಪಿಸಿಕೊಂಡಿದೆ ಅನ್ನುವುದನ್ನು ಒಪ್ಪಲೇಬೇಕು. ನಮ್ಮ ಈಗಿನ ತಿಳಿವಳಿಕೆ, ಈಗಿನ ಅನುಭವಕ್ಕೆ ವಚನಗಳು ಏನು ಕೊಡುತ್ತವೆ ಅನ್ನುವ ಹುಡುಕಾಟ ಈ ಬರವಣಿಗೆಯ ಹಿಂದೆ ಇದೆ.

ಮತ, ಆಚರಣೆಗಳನ್ನು ಕುರಿತಾದ ಮತ್ತು  ತೀರ ಜಿಗುಟಾದ ತತ್ವಚಿಂತನೆಯ ವಚನಗಳನ್ನು ಕುರಿತ ಆಸಕ್ತಿ ಈ ಬರಹದ್ದಲ್ಲ. ಮನುಷ್ಯ ಮನಸಿನ ವರ್ತನೆ, ಅನುಭವಕ್ಕೆ ಮಾತಿನ ರೂಪ ಕೊಡುವ ರೀತಿ, ಸ್ಪಷ್ಟ, ನಿರ್ದಿಷ್ಟ ಚಿತ್ರಗಳೊಡನೆ ಅಮೂರ್ತ ವಿಚಾರಗಳನ್ನು ದಾಟಿಸುವ ಮಾತಿನ ಕ್ರಮ ಇಂಥವು ನನ್ನ ಗಮನವನ್ನು ಹೆಚ್ಚಾಗಿ ಸೆಳೆದಿವೆ. ಪ್ರಮುಖ ವಚನಕಾರರು ಮಾತ್ರವಲ್ಲದೆ ಸಾಧ್ಯವಾದಷ್ಟೂ ಹೆಚ್ಚಿನ ಸಂಖೆಯ ವಚನಕಾರರ ರಚನೆಗಳು ಇಲ್ಲಿವೆ.

ಹಸ್ತಪ್ರತಿಗಳಲ್ಲಿ  ವಚನಗಳು ಗದ್ಯದ ಹಾಗೆ ಇರುವುದನ್ನು ನೋಡಬಹುದು. ವಚನಗಳು ಮಾತಿನ ರೂಪದಲ್ಲಿದ್ದವು, ಯಾವುದೇ ಲೇಖನ ಚಿಹ್ನೆಗಳು ಇರಲಿಲ್ಲ, ವಚನವನ್ನು ಹೇಳಿದ ಸಂದರ್ಭದಲ್ಲಿ ಧ್ವನಿಯ ಏರಿಳಿತದ ಮೂಲಕ ಅದರ ಭಾವ, ಅರ್ಥ ಕೇಳುವವರಿಗೆ ಹೊಳೆಯುತ್ತಿದ್ದವು.

ಹಳಕಟ್ಟಿಯವರು ಮೊದಲು ವಚನಗಳನ್ನು ಸಂಗ್ರಹಿಸಿ ಪ್ರಕಟಿಸಿದಾಗ ಅವು ಗದ್ಯದ ಹಾಗೆ ಮುದ್ರಣವಾಗಿದ್ದವು. ಬಸವನಾಳರು ಮೊದಲ ಬಾರಿಗೆ ವಚನಗಳನ್ನು ಲಯಕ್ಕೆ ಅನುಸಾರವಾಗಿ ಜೋಡಿಸಿ, ಲೇಖನ ಚಿಹ್ನೆಗಳನ್ನು ಬಳಸಿ ಒಂದೊಂದೂ ಕವಿತೆಯ ಹಾಗೆ ಕಾಣುವಂತೆ ಮಾಡಿದರು. ವಚನಗಳನ್ನು ನಾವು ಓದುವ ರೀತಿಯಲ್ಲಿ, ಯಾವುದೇ ಲೇಖನ ಚಿಹ್ನೆ ಇರದೆ ವಿಂಗಡಿಸಿ ಕೊಡುವುದರಿಂದ ಓದುಗರು ತಮ್ಮಷ್ಟಕ್ಕೇ ವಚನಗಳ ಲೋಕದಲ್ಲಿ ಸಂಚರಿಸಲು ಅನುಕೂಲವಾಗುತ್ತದೆ, ಲೇಖನ ಚಿಹ್ನೆಗಳ ಮೂಲಕ ಅರ್ಥದ ನಿರ್ಧಾರವನ್ನು ಮಾಡುವುದು ಬೇಡವೆಂದು ಬಹಳ ಹಿಂದೆಯೇ ವಚನ ಸಾವಿರವನ್ನು ಸಂಪಾದಿಸುವಾಗ ನಿರ್ಧರಿಸಿದ್ದೆ. ಅದನ್ನು ಇಲ್ಲಿಯೂ ಅನುಸರಿಸಿದ್ದೇನೆ. ಲೇಖನ ಚಿಹ್ನೆಗಳ ಬದಲಾಗಿ ಸಾಲು ಕೊನೆಗೊಳಿಸಿದಲ್ಲಿ ಸ್ವಲ್ಪ ವಿರಾಮ ನೀಡಿ ಓದಿಕೊಂಡರೆ ಅದು ಮಾತಿನ ಲಯಕ್ಕೆ ಹತ್ತಿರವಾಗಿರುತ್ತದೆ. ಸಂಬೋಧನೆಯ ʻಅಯ್ಯಾ,ʼ  ʻಅವ್ವಾʼ ಕೆಳದಿ ಇಂಥ ಮಾತುಗಳನ್ನು ಮತ್ತು ಸಾಧ್ಯವಿರುವ ಸ್ಥಳಗಳಲ್ಲೆಲ್ಲ ಅಂಕಿತವನ್ನೂ ಪ್ರತ್ಯೇಕ ಸಾಲುಗಳಾಗಿ ಮಾಡಿದ್ದೇನೆ. ಸಂಬೋಧನೆಯ ಮಾತು ಆದಮೇಲೂ ವಿರಾಮವನ್ನು ನೀಡುವುದು ಸೂಕ್ತ. ಹೀಗೆ ಓದಿಕೊಂಡಾಗ ವಚನದ ಭಾವಾಭಿನಯ ಚೆನ್ನಾಗಿ ವ್ಯಕ್ತವಾಗುತ್ತದೆ ಅನ್ನಿಸಿತು. ಇನ್ನೊಂದು ಕಾರಣವೆಂದರೆ ಆಧುನಿಕ ಕನ್ನಡ ಕವಿತೆಯನ್ನು ಓದುವ ಕಣ್ಣುಗಳಿಗೆ ಈ ಬಗೆಯ ವಿನ್ಯಾಸ ಹೆಚ್ಚು ಸಮಕಾಲೀನ ಅನಿಸುತ್ತದೆ ಅನ್ನುವ ನಂಬಿಕೆ. ಹೆಚ್ಚಿನ ಸೇರ್ಪಡೆ ಇರಬಹದು ಅನಿಸುವ ಪದ, ನುಡಿಗಟ್ಟುಗಳಿಗೆ ಚೌಕಕಂಸ ಬಳಿದ್ದೇನೆ. ತೀರ ಅಪರೂಪಕ್ಕೆ ಸಾಲಿನ ಅನುಕ್ರಮ ಬದಲಾಗಬೇಕು ಅನಿಸಿದ್ದರೆ ಅದನ್ನೂ ಸ್ಪಷ್ಟವಾಗಿ ಹೇಳಿದ್ದೇನೆ. ಲೇಖನ ಚಿಹ್ನೆ, [] ಮತ್ತು ಅಪರೂಪಕ್ಕೆ ಸಾಲಿನ ಅನುಕ್ರಮ ಬಿಟ್ಟರೆ ಉಳಿದಂತೆ ಕರ್ನಾಟಕ ಸರ್ಕಾರ ಪ್ರಕಟಿಸಿರುವ ಸಮಗ್ರ ವಚನ ಸಂಪುಟದ ಮೊದಲ ಒಂಬತ್ತು ಭಾಗಗಳಲ್ಲಿರುವ ಪಠ್ಯವನ್ನು ಹಾಗೇ ಬಳಸಿದ್ದೇನೆ. 

ಮೊದಲಿಗೆ ಈಗ ಬಳಕೆ ತಪ್ಪಿರುವ ಪದಗಳ ಅರ್ಥ ನೀಡಿದ್ದೇನೆ. ವಚನ ಸಂದರ್ಭಕ್ಕೆ ಸೂಕ್ತವಾಗುವ  ಅರ್ಥವನ್ನು ಮೊದಲು ನೀಡಿ ಇತರ ಅರ್ಥಗಳು ಆನಂತರ ಬರುವ ಹಾಗೆ ಹೊಂದಿಸಿದ್ದೇನೆ. ತೀರ ಕಡಿಮೆ ಪ್ರಮಾಣದಲ್ಲಿ ನನ್ನ ಮಾತನ್ನು ಬಳಸಿಕೊಂಡು ವಚನದ ಅರ್ಥವನ್ನು ವಿವರಿಸಿದ್ದೇನೆ. ಕೊನೆಗೆ ವಚನವು ಇಂದು ಹೊಳೆಯಿಸುವ ಚಿಂತನೆಗಳ ಸೂಚನೆ ನೀಡಿದ್ದೇನೆ.

ಹಲವು ಜಾತಿಗಳ, ಹಲವು ಕಸುಬುಗಳು, ಸಮಾಜದ ಬೇರೆ ಬೇರೆ ಸ್ತರದ ಹಿನ್ನೆಲೆಯ ಜನರಿಂದ ರೂಪುಗೊಂಡ ವಚನಗಳೆಲ್ಲವೂ ಒಂದೇ ಬಗೆಯ ವಿಚಾರಗಳನ್ನು, ಒಂದೇ ನಿಲುವನ್ನು ಹೇಳುವುದಿಲ್ಲ. ಒಬ್ಬ ವಚನಕಾರನ ರಚನೆಗಳಲ್ಲೇ ಪರಸ್ಪರ ವಿರುದ್ಧವೆನಿಸುವ ಮಾತು ಕೇಳುವುದೂ ಉಂಟು. ಒಬ್ಬರ ವಿಚಾರವನ್ನು ಒಪ್ಪದಿರುವ ಹಲವು ಜನರ ಮಾತೂ ಕಾಣುವುದುಂಟು. ಹಾಗೆ ಕನ್ನಡ ನಾಡಿನ ಬಹಳ ಚೈತನ್ಯಪೂರ್ಣವಾದ ಹನ್ನೆರಡನೆಯ ಶತಮಾನದ ಸುಮಾರು ಮೂರು ದಶಕಗಳ ಅವಧಿಯಲ್ಲಿ ಕನ್ನಡ ಜನ ಸೃಷ್ಟಿಸಿದ ಚಿಂತನೆಯ ಶ್ರೀಮಂತಿಕೆಯನ್ನು ಮರೆಯಬಾರದು ಅನ್ನುವುದು ಈ ಅಂಕಣದ ಮುಖ್ಯ ಉದ್ದೇಶ.


ಈ ಪ್ರಸ್ತಾವನೆಯೊಂದಿಗೆ ‘ವಚನ ಸಂವಾದ’ ಹೊಸ ಅಂಕಣ ಆರಂಭವಾಗುತ್ತಿದೆ. ಪ್ರತಿ ಎರಡು ದಿನಕ್ಕೊಮ್ಮೆ ಈ ಅಂಕಣ ‘ಅರಳಿಮರ’ದಲ್ಲಿ ಪ್ರಕಟಗೊಳ್ಳುವುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.