ಇಪ್ಪತ್ತನೆಯ ಶತಮಾನದ ಕನ್ನಡ ಅಕ್ಕನನ್ನು ಹೆಣ್ಣು ವ್ಯಕ್ತಿತ್ವದ ಒಂದು ಮಾದರಿ, ಸ್ವಂತಿಕೆ, ವಿಶ್ವಾಸ, ಧೈರ್ಯ, ತನ್ನ ಭಾವನೆಗಳನ್ನು ಅಳುಕಿಲ್ಲದೆ ಹೇಳುವ, ಹಾಗೆ ಹೇಳುತ್ತ ಹೆಣ್ಣು ನುಡಿಯ ಕನ್ನಡವನ್ನು ಸೃಷ್ಟಿಸಿದ ಮೊದಲಿಗಳು ಅನ್ನುವ ನೋಟ ಬೆಳೆದಿದೆ. ಧಾರ್ಮಿಕ ದೃಷ್ಟಿಯೇ ಪ್ರಬಲವಾಗಿರುವವರಿಗ ಅಕ್ಕಮಹಾದೇವಿಯ ವ್ಯಕ್ತಿತ್ವ ಬಸವ, ಅಲ್ಲಮ, ಸಿದ್ಧರಾಮ, ಚೆನ್ನಬಸವಣ್ಣನವರಷ್ಟೇ ಪ್ರಮುಖಳಾದ ಶರಣೆಯಾಗಿ ಪೂಜಾರ್ಹವಾಗಿದೆ. ʻಅಕ್ಕನ ಬಳಗʼಗಳು ಕನ್ನಡ ನಾಡಿನಾದ್ಯಂತ ಇವೆ । ಓ.ಎಲ್.ನಾಗಭೂಷಣ ಸ್ವಾಮಿ
ಈಗಿನ ಶಿವಮೊಗ್ಗ ಜಿಲ್ಲೆಯ ಉಡುತಡಿಯ ಅಕ್ಕ ಮಹಾದೇವಿಯ ೪೫೪ ವಚನಗಳು ದೊರೆತಿವೆ. ʻಯೋಗಾಂಗ ತ್ರಿವಿಧಿʼ, ʻಸೃಷ್ಟಿಯ ವಚನʼ, ಹಾಡಿನ ರೂಪದ ಪದಗಳು ಅಕ್ಕ ಮಹಾದೇವಿಯ ಇತರ ಕೃತಿಗಳು ಎಂದು ಹೇಳುವುದುಂಟು. ಆದರೆ ಇವುಗಳ ರಚನೆಯನ್ನು ನೋಡಿದರೆ ವಚನಗಳನ್ನು ಸೃಷ್ಟಿಸಿದ ಮನಸ್ಸೇ ಈ ಕೃತಿಗಳನ್ನೂ ರಚಿಸಿತು ಎಂದು ನಂಬುವುದು ಕಷ್ಟವಾಗುವಂತಿದೆ.
ಅಕ್ಕನ ತಂದೆ ತಾಯಿಯರು ಶಿವಭಕ್ತ-ಶಿವಭಕ್ತೆ, ನಿರ್ಮಲ-ಸುಮತಿ, ಓಂಕಾರ ಸೆಟ್ಟಿ-ಲಿಂಗಮ್ಮ, ವಿಮಲ-ಕುಟಿಲಾಲ ಎಂಬ ವಿವರಗಳು ಬೇರೆ ಬೇರೆ ಆಕರಗಳಲ್ಲಿ ದೊರೆಯುತ್ತವ ನಿರ್ಮಲ ಮತ್ತು ಸುಮತಿ ಎಂಬ ಗುಣಗಳಿರುವ ಅಪ್ಪ ಅಮ್ಮ ಎಂಬ ಕಲ್ಪನೆ ಹೆಚ್ಚು ಒಪ್ಪಿಗೆ ಪಡೆದಿದೆ.
ಉಡುತಡಿಯ ಮಹದೇವಿ, ಉಡುತಡಿಯ ಮಹದೇವಿಯಕ್ಕ, ಅಕ್ಕ, ಕಮಲವ್ವಾ, ರೇಕವ್ವಾ ಎಂಬ ಹಸರುಗಳೂ ಬೇರೆ ಬೇರೆ ಉಲ್ಲೇಖಗಳಲ್ಲಿವೆ. ಉಡುತಡಿಯ ಬಳಿಯ ಕಮಲಗಂಗವ್ವ ಎಂಬ ವಿಗ್ರಹ ಅಕ್ಕನದು ಎಂಬ ಪ್ರತೀತಿ ಇದೆ.
ಅಕ್ಕ ಚಿಕ್ಕಂದಿನಲ್ಲೇ ಚೆನ್ನಮಲ್ಲಿಕಾರ್ಜುನನನ್ನು ವರಿಸಿದಳು ಎಂಬ ಕಥನ ಇರುವಂತೆಯೇ ಊರಿನ ಮುಖ್ಯಸ್ಥ ಕೌಶಿಕ ಮಹದೇವಿಯನ್ನು ಮದುವೆಯಾಗಲು ಬಯಸಿ ಒತ್ತಾಯಿಸಿ ಅಕ್ಕ ಶರತ್ತುಗಳನ್ನು ವಿಧಿಸಿ ಮದುವೆಗೆ ಒಪ್ಪಿದರೂ ಕೌಶಿಕ ವಚನ ಭಂಗ ಮಾಡಿದಾಗ ಉಡುಗೆಯನ್ನೂ ತೊರೆದು ಮನೆ ಬಿಟ್ಟು ಹೊರಟಳು ಅನ್ನುವ ಕಥನವೂ ಇದೆ. ಈ ಕಥೆ ಹರಿಹರನಲ್ಲಿ ಬರುತ್ತದೆ. ಕೌಶಿಕ ತನ್ನ ತಾಯಿ ತಂದೆಯರಿಗೆ ತೊಂದರೆ ಕೊಡದಿರಲೆಂದು ಅಕ್ಕ ತಾನೇ ಕೌಶಿಕನ ಅರಮನೆಗೆ ಮದುವೆಯಾಗದೆಯೂ ಹೋದಳೆಂಬ ಕಥೆಯೂ ಇದೆ
ಶೂನ್ಯಸಂಪಾದನೆ ನಿರೂಪಿಸುವ ಕಥನದಂತೆ ಆಕೆ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತಾ ಕಲ್ಯಾಣಕ್ಕೆ ಬರುತ್ತಾಳೆ. ಅಲ್ಲಿ ಅಲ್ಲಮ, ಬಸವ ಮೊದಲಾದವರೊಡನೆ ಭೇಟಿಯಾಗುತ್ತದೆ. ಆದರೆ ಶೂನ್ಯಸಂಪಾದನೆಯಲ್ಲಿ ಅವಳ ಪೂರ್ವ ಕಥನ ಇಲ್ಲ.
ಅಕ್ಕನ ಬದುಕನ್ನು ಸುಮಾರು ನಾಲ್ಕು ಶತಮಾನಗಳಲ್ಲಿ ಮೂರು ವಿಧವಾಗಿ ಕಲ್ಪಿಸಿಕೊಂಡಿದ್ದಾರೆ. ಮತನಿಷ್ಠವಾದ, ಪಾರಿಭಾಷಿಕಗಳು ಹೇರಳವಾಗಿರುವ, ಹಲವು ಪುಟಗಳಷ್ಟು ವಿಸ್ತಾರವಾದ ವಚನಗಳೂ ಇವೆ. ಅವು ಆನಂತರದ ಸೇರ್ಪಡೆ ಇರಬಹುದು ಅನ್ನುವ ಸಂಶಯವೂ ಮೂಡುತ್ತದೆ.
ಇಪ್ಪತ್ತನೆಯ ಶತಮಾನದ ಕನ್ನಡ ಅಕ್ಕನನ್ನು ಹೆಣ್ಣು ವ್ಯಕ್ತಿತ್ವದ ಒಂದು ಮಾದರಿ, ಸ್ವಂತಿಕೆ, ವಿಶ್ವಾಸ, ಧೈರ್ಯ, ತನ್ನ ಭಾವನೆಗಳನ್ನು ಅಳುಕಿಲ್ಲದೆ ಹೇಳುವ, ಹಾಗೆ ಹೇಳುತ್ತ ಹೆಣ್ಣು ನುಡಿಯ ಕನ್ನಡವನ್ನು ಸೃಷ್ಟಿಸಿದ ಮೊದಲಿಗಳು ಅನ್ನುವ ನೋಟ ಬೆಳೆದಿದೆ. ಧಾರ್ಮಿಕ ದೃಷ್ಟಿಯೇ ಪ್ರಬಲವಾಗಿರುವವರಿಗ ಅಕ್ಕಮಹಾದೇವಿಯ ವ್ಯಕ್ತಿತ್ವ ಬಸವ, ಅಲ್ಲಮ, ಸಿದ್ಧರಾಮ, ಚೆನ್ನಬಸವಣ್ಣನವರಷ್ಟೇ ಪ್ರಮುಖಳಾದ ಶರಣೆಯಾಗಿ ಪೂಜಾರ್ಹವಾಗಿದೆ. ʻಅಕ್ಕನ ಬಳಗʼಗಳು ಕನ್ನಡ ನಾಡಿನಾದ್ಯಂತ ಇವೆ.
ಈಗ ತಿಳಿದಿರುವ ವಿವರಗಳಿಂದ ಅಕ್ಕನ ಬದುಕಿನ, ವಚನಗಳ ಅನುಕ್ರಮದ ಚಾರಿತ್ರಿಕ ಕಥನವನ್ನು ನಿರೂಪಣೆ ಮಾಡುವುದು ಅಸಾಧ್ಯವೆಂಬ ಸ್ಥಿತಿ ಇದೆ.
ಸ್ವಂತದ ಬದುಕನ್ನು ಮನಸ್ಸನ್ನು ಕುರಿತ, ಸುತ್ತಲ ನಿಸರ್ಗದ ವಿವರಗಳ ಮೂಲಕ ಚಿಂತನೆಯನ್ನು ವ್ಯಕ್ತಪಡಿಸುವ, ತಾನು ಒಲಿದ ಚೆನ್ನಮಲ್ಲಿಕಾರ್ಜುನನನ್ನು ಕುರಿತ, ಮನೆ- ಸಂಸಾರದ ನುಡಿಗಟ್ಟಿನಲ್ಲಿ ಅಧ್ಯಾತ್ಮವನ್ನು ಗ್ರಹಿಸುವ, ಆಧುನಿಕ ಕಾವ್ಯದ ಹಾಗೆಯೂ ಆಶ್ಚರ್ಯವಾಗುವಷ್ಟು ತಾಜಾ ಅನ್ನಿಸುವ ನುಡಿರೂಪಗಳನ್ನು ಸೃಷ್ಟಿಸಿರುವ ಅಕ್ಕನ ಎಪ್ಪತ್ತನಾಲ್ಕು ಆಯ್ದ ವಚನಗಳನ್ನು ಕುರಿತು ಓದುಗರ ಗಮನ ಸೆಳೆಯುವ ಉದ್ದೇಶ ಈ ಸಂವಾದಕ್ಕೆ ಇದೆ.
ವಚನಗಳನ್ನು ಒಬ್ಬೊಬ್ಬ ಓದುಗರೂ ತಮಗೆ ಪ್ರಿಯವಾದ ಕ್ರಮದಲ್ಲಿ ಜೋಡಿಸಿಕೊಳ್ಳಬಹುದು. ಜೋಡಿಸುವ ಕ್ರಮ ಬೇರೆಯಾದರೆ ಒಟ್ಟು ಅರ್ಥವೂ ಬೇರೆಯಾಗುತ್ತದೆ. ಒಬ್ಬೊಬ್ಬ ವಚನಕಾರರ ಒಂದೊಂದು ರಚನೆಯೂ ಸ್ವಯಂಪೂರ್ಣ ಅನ್ನಿಸುವುದರಿಂದಲೇ ವಚನಗಳನ್ನು ಹಲವು ಬಗೆಗಳಲ್ಲಿ ಸಂಕಲಿಸಿದ ನೂರಾರು ಕೃತಿಗಳು ಬಂದಿವೆ. ಇಲ್ಲಿನ ಆಯ್ಕೆಯಲ್ಲಿ ಆರು ಭಾಗಗಳನ್ನು ಮಾಡಿಕೊಂಡಿದ್ದೇನೆ.
“ತಾನು-ತನ್ನ ತಳಮಳ”: ತನ್ನನ್ನು ಕುರಿತು ಹೇಳಿಕೊಳ್ಳುವ, ಲೋಕದ ಬದುಕೋ ಆಧ್ಯಾತ್ಮಿಕತೆಯ ಆಯ್ಕೆಯೋ ಎಂಬ ಸಂಶಯ ಸಂದೇಹಗಳಿಗೆ ಒಳಗಾದ ಸ್ಥಿತಿಯನ್ನು ವಿವರಿಸುವ ರಚನೆಗಳು
“ಆತ್ಮವಿಶ್ವಾಸ- ಕ್ರಮೇಣ ವಿಶ್ವಾಸ ಗಳಿಸಿದ ಬಗೆಯನ್ನು ಚಿತ್ರಿಸುವ ರಚನೆಗಳು
“ಬದುಕೆಂಬುದು ಪ್ರಸಾದ”, ಒಳಗೇ ಮೂಡಿದ ವಿಶ್ವಾಸದ ಕಾರಣಕ್ಕೆ ಬದುಕನ್ನು ಪ್ರಸಾದವೆಂಬಂತೆ ಸ್ವೀಕರಿಸುವುದನ್ನು ಕಲಿತ ಬಗೆಯನ್ನು ಹೇಳುವ ವಚನಗಳು
“ಉಸಿರಲ್ಲೂ ಇರುವ ಇಷ್ಟದೈವ” ದೈವ ಮತ್ತು ಇಡೀ ಸೃಷ್ಟಿ ಬೇರೆಯಲ್ಲ ತಾನು ಬೇರೆಯಲ್ಲ, ಕ್ಷಣ ಕ್ಷಣದ ಉಸಿರಲ್ಲೂ ಇಷ್ಟದೈವದೊಡನೆ ಒಂದಾದ ಅನುಭವ ಕುರಿತು ಹೇಳುವ ವಚನಗಳು
“ಒಪ್ಪಿಸಿಕೊಳ್ಳುವ ವಚನಗಳು” ಸೃಷ್ಟಿಯೊಡನೆ ಒಂದಾದೆ ಅನ್ನುವುದು ನಿಜವಾಗಬೇಕಾದರೆ ಸೀಮಿತ ಅಹಂಕಾರವನ್ನು ನೀಗಿಕೊಳ್ಳುವ ನೋವನ್ನು ಹೇಳಿಕೊಳ್ಳುವ ವಚನಗಳು,
ಮತ್ತು ಇಷ್ಟದೈವದೊಡನೆ ಒಂದಾದ ಸ್ಥಿತಿಯನ್ನು ವರ್ಣಿಸುವ ರಚನೆಗಳು. ಓದುಗರು ತಮ್ಮ ಅನುಭವದ ಹಿನ್ನೆಲೆಯಲ್ಲಿ ಅಕ್ಕನ ವಚನಗಳನ್ನು ಇನ್ನೂ ಬೇರೆಯ ರೀತಿಯಲ್ಲಿ ಜೋಡಿಸಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಿದೆ.
ಇವು ಅಕ್ಕಮಹಾದೇವಿಯ ರಚನೆಗಳಾದರೂ ಅಕ್ಕನ ಆತ್ಮ ಚರಿತ್ರೆಯ ದಾಖಲೆಗಳಲ್ಲ. ಅಕ್ಕನ ಬದುಕನ್ನು ಹಲವು ಕಥನಗಳಾಗಿ ಕನ್ನಡ ಮನಸ್ಸು ಕಟ್ಟಿಕೊಂಡಿದೆ. ಆ ಎಲ್ಲ ಕಥನಗಳಿಗೂ ಅಕ್ಕನ ವಚನಗಳಲ್ಲಿ ಆಧಾರ ಸಿಗುತ್ತದೆ. ಹಾಗೆ ಅಕ್ಕನ ಜೀವನ ಚರಿತ್ರೆ ಎಂದು ನೋಡುವುದಕ್ಕಿಂತ ಹೆಣ್ಣು ಜೀವವೊಂದು ತನ್ನ ಇಡಿತನವನ್ನು ಕಂಡುಕೊಂಡ ಕಥನವೆಂದು ಈ ವಚನಗಳನ್ನು ನೋಡುವುದು ಹೆಚ್ಚು ಲಾಭಕರವೆನ್ನಿಸುತ್ತದೆ. ಹಾಗಾಗಿ ಅಕ್ಕ ಹೇಳುತ್ತಾಳೆ, ಹೇಳಿದಳು ಅನ್ನುವ ಮಾತನ್ನು ಬಳಸದೆ ಈ ವಚನ ಹೀಗೆ ಹೇಳುತ್ತದೆ ಎಂದು ವಿವರಿಸುವ ಕ್ರಮ ಅನುಸರಿಸಿದ್ದೇನೆ.
ಅಕ್ಕಮಹಾದೇವಿಯ ವಚನಗಳೆಲ್ಲವೂ ಸಮಗ್ರ ವಚನ ಸಂಪುಟಗಳಲ್ಲಿ ಶಿವಶರಣೆಯರ ವಚನಗಳು ಎಂಬ ಹೆಸರಿನ ಐದನೆಯ ಸಂಪುಟದವು. ಬೇರೆಯವರ ವಚನಗಳನ್ನು ಪ್ರಸ್ತಾಪಿಸುವಾಗ ಸಮಗ್ರ ಸಂಪುಟದ ಸಂಖ್ಯೆಯನ್ನು ನೀಡಿದ್ದೇನೆ.

