ನೋಡಿದ್ದು, ಕೂಡಿದ್ದು, ಅರಿತದ್ದು ನಿಜವೇ । ಅಕ್ಕ ಮಹಾದೇವಿ #2

ನಿತ್ಯ ಎಂಬ ಮಾತಿಗೆ ಶಾಶ್ವತ ಅನ್ನುವ ಅರ್ಥ, ಸತ್ಯ ಎಂಬ ಮಾತಿಗೆ “ಇರುವುದು” ಎಂಬ ಅರ್ಥ ಇದೆ. ಇಲ್ಲಿ  ಬದುಕಿನಲ್ಲಿ ನಾವೆಲ್ಲರೂ ಅನುಭವಿಸುವ ಕ್ಷಣ ಮಾತ್ರದಲ್ಲಿ ಘಟಿಸಿ ಇಲ್ಲವಾಗುವ ಸಂಗತಿ, ನೋಟ, ಭಾವ, ವಿಚಾರಗಳನ್ನು ಕುರಿತ ತೊಡಕನ್ನು ಅಕ್ಕ ಇಲ್ಲಿ ವಿವರಿಸುತ್ತಿರುವ ಹಾಗೆ ಕಾಣುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ನೋಡಿಹೆನೆಂದಡೆ
ದೃಷ್ಟಿಮರೆಯಾಯಿತ್ತು
ಕೂಡಿಹೆನೆಂದಡೆ
ಭಾವ ಮರೆಯಾಯಿತ್ತು
ಏನೆಂಬೆನೆಂತೆಂಬೆನಯ್ಯಾ
ಅರಿದಿಹೆನೆಂದಡೆ
ಮರಹು ಮರೆಯಾಯಿತ್ತು.
ನಿನ್ನ ಮಾಯೆಯನತಿಗಳೆವಡೆ ಎನ್ನಳವೆ
ಕಾಯಯ್ಯಾ ಚೆನ್ನಮಲ್ಲಿಕಾರ್ಜುನಾ [೨೭೦]

[ನೋಡಿಹೆನು=ನೋಡಿರುವೆನು; ಎಂದಡೆ=ಅಂದರೆ; ಅರಿದಿಹೆನು=ಅರಿತಿರುವೆನು; ಮರಹು=ಮರೆವು;ಅತಿಗಳೆವಡೆ=ಬಿಡುವುದಾದರೆ; ಎನ್ನಳವೆ=ನನ್ನ ಸಾಮರ್ಥ್ಯಕ್ಕೆ ಒಳಪಟ್ಟದ್ದೇ]

ನೋಡಿದ್ದೇನೆ ಅಂದರೆ ನೋಟ ಹೊರಳಿದ ಕ್ಷಣದಲ್ಲೇ ನೋಡಿದ್ದು ಇಲ್ಲವಾಗುತ್ತದೆ. ಕೂಡಿದೆ ಅಂದರೆ ಆ ಭಾವವೂ ಮರೆಯಾಗುತ್ತದೆ. ಅರಿತಿದ್ದೇನೆ ಅಂದರೆ ಅರಿವು ಮರವೆಗೆ ಒಳಗಾಗುತ್ತದೆ.  ಹಾಗೆ ಇಲ್ಲವಾಗುವುದು ಮಾಯೆ. ಇದು ನಿನ್ನ ಸೃಷ್ಟಿ. ಅದನ್ನು ನಾನು ಗೆಲ್ಲಬಲ್ಲೆನೇ.

ಮಾಯಾ ಎಂಬ ಮಾತಿಗೆ “ಇಲ್ಲದ್ದು” ಅನ್ನುವ ಅರ್ಥವಿದೆ. ನೋಟ, ಭಾವ, ಅರಿವು ಇವು ಯಾವುವೂ ಶಾಶ್ವತವಾಗಿ ಇರುವುದಿಲ್ಲ; ನೋಟ ಇರುವವರೆಗೆ, ಮನಸ್ಸು ಆ ಭಾವದಲ್ಲಿ ಇರುವವರೆಗೆ, ನೆನಪು ಇರುವವರೆಗೆ ಅವು ಇರುತ್ತವೆ. ನಿತ್ಯ ಎಂಬ ಮಾತಿಗೆ ಶಾಶ್ವತ ಅನ್ನುವ ಅರ್ಥ, ಸತ್ಯ ಎಂಬ ಮಾತಿಗೆ “ಇರುವುದು” ಎಂಬ ಅರ್ಥ ಇದೆ. ಇಲ್ಲಿ  ಬದುಕಿನಲ್ಲಿ ನಾವೆಲ್ಲರೂ ಅನುಭವಿಸುವ ಕ್ಷಣ ಮಾತ್ರದಲ್ಲಿ ಘಟಿಸಿ ಇಲ್ಲವಾಗುವ ಸಂಗತಿ, ನೋಟ, ಭಾವ, ವಿಚಾರಗಳನ್ನು ಕುರಿತ ತೊಡಕನ್ನು ಅಕ್ಕ ವಿವರಿಸುತ್ತಿರುವ ಹಾಗೆ ಕಾಣುತ್ತದೆ. ಶಾಶ್ವತವಲ್ಲದ್ದು ಸತ್ಯವಲ್ಲ ಎಂಬ ನಿಲುವು ಎಲ್ಲ ಬಗೆಯ ಮಾಯೆಗಳಿಗೂ ಕಾರಣವಾಗಬಹುದು. ಶಾಶ್ವತವಲ್ಲದ್ದು ಸತ್ಯವಲ್ಲ ಎಂಬ ನಿಲುವು ಎಲ್ಲ ಬಗೆಯ ಮಾಯೆಗಳಿಗೂ ಕಾರಣವೂ ಆಗಬಹುದು. ವಚನಕಾರರು ಒಬ್ಬೊಬ್ಬರೂ ಮಾಯೆಯನ್ನು ಕುರಿತು ಬೇರೆ ಬೇರೆ ರೀತಿಯಲ್ಲಿ, ಮಾತ್ರವಲ್ಲ ಒಬ್ಬೊಬ್ಬರೂ ಹಲವು ರೀತಿಗಳಲ್ಲಿ ಹೇಳಿದ್ದಾರೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.