ಸರಳವಾಗಿ ಕಾಣುವ ಆದರೆ ಪೂರ್ತಿ ಸ್ಪಷ್ಟವಾಗದ, ಹಲವು ಅರ್ಥಗಳ ಸಾಧ್ಯತೆ ಇರುವ ವಚನ ಇದು. ಒಲಿದ ಚೆನ್ನಮಲ್ಲಿಕಾರ್ಜುನನಲ್ಲಿ ಮನಸ್ಸು ಒಂದಾಗದೆ ಛಿದ್ರವಾದದ್ದನ್ನು ಈ ವಚನ ಹೇಳುವಂತೆ ತೋರುತ್ತದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಅಯ್ಯಾ
ನಿನ್ನ ಮುಟ್ಟಿ ಮುಟ್ಟದೆನ್ನ ಮನ
ನೋಡಾ
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ
ಚೆನ್ನಮಲ್ಲಿಕಾರ್ಜುನಾ [೨೭]
[ಬಿಚ್ಚಿ: ಕಳಚಿ, ಚೂರುಗಳಾಗಿ ಬೀಸರ=ಮುರಿದು ಹೋಗು, ಬಳಲು.; ಹೊಳಲು=ಪಟ್ಟಣ; ಸುಂಕಿಗ=ತೆರಿಗೆಯ ಅಧಿಕಾರಿ; ಹೊದಕುಳಿ=ಯಾತನೆಪಡು, Suffer; ಆನಪ್ಪ=ನಾನಾಗುವ]
ನಿನ್ನನ್ನು ಮುಟ್ಟಿದೆರೂ ಮನಸು ಮುಟ್ಟಲಿಲ್ಲ. ಮನಸ್ಸು ಸೀಳಿಕೊಂಡು ವ್ಯರ್ಥವಾಯಿತು. ಪಟ್ಟಣದಲ್ಲಿ ಅಲೆಯುವ ತೆರಿಗೆಯ ಅಧಿಕಾರಿಯ ಹಾಗೆ ಮನಸು ಬಳಲಿತು. ನೀನು ಮತ್ತು ನಾನು ಎಂದು ಎರಡಾಗಿ ಛಿದ್ರವಾದ ಮನಸು ಬರಡಾಗಿಲ್ಲ. ಅಂದರೆ ಏನೇನೋ ಊಹೆ ಕಲ್ಪನೆಗಳನ್ನು ಹುಟ್ಟಿಸುತ್ತಿದೆ. ನೀನು ನಾನಾಗುವ ರೀತಿ ಯಾವುದು ಹೇಳು.
ಇದು ಸರಳವಾಗಿ ಕಾಣುವ ಆದರೆ ಪೂರ್ತಿ ಸ್ಪಷ್ಟವಾಗದ, ಹಲವು ಅರ್ಥಗಳ ಸಾಧ್ಯತೆ ಇರುವ ವಚನ. ಒಲಿದ ಚೆನ್ನಮಲ್ಲಿಕಾರ್ಜುನನಲ್ಲಿ ಮನಸ್ಸು ಒಂದಾಗದೆ ಛಿದ್ರವಾದದ್ದನ್ನು ಈ ವಚನ ಹೇಳುವಂತೆ ತೋರುತ್ತದೆ. ಅವನ ಮನಸನ್ನು ಮುಟ್ಟಲಿಲ್ಲವೇನೋ ಅನ್ನುವ ಅನುಮಾನವೇ ಮನಸನ್ನು ಛಿದ್ರಮಾಡಿದೆ. ಅಖಂಡತೆಯನ್ನು ಕಳೆದುಕೊಂಡ ಮನಸು ಏನೇನೋ ಕಲ್ಪನೆ, ಊಹೆಗಳಲ್ಲಿ ಅಂಡಲೆಯುತ್ತಿದೆ. ಮನಸು ಬರಡಾಗುವುದು, ಮನಸ್ಸು ʼಸಂದುʼ ಹೋಗುವುದು, ಅಂದರೆ ಸತ್ತು ಹೋಗುವುದು ಅನುಭಾವಿಗಳು ಸಾಧಿಸಲು ಬಯಸುವ ಸ್ಥಿತಿ. ಮನಸಂದ ಮಾರಿತಂದೆ ಅನ್ನುವ ಹೆಸರನ್ನೇ ಇಟ್ಟುಕೊಂಡಿರುವ ಒಬ್ಬ ವಚನಕಾರನ ರಚನೆಗಳೂ ಸಿಕ್ಕಿವೆ. ಬರಡಾಗದೆ ಕಲ್ಪಪನೆಗಳಲ್ಲಿ ಅಲೆಯುವ ಮನಸ್ಸನ್ನು ಸುಂಕ ಸಂಗ್ರಹಿಸಲು ಊರೆಲ್ಲ ಅಲೆಯುವ ಸುಂಕಿಗನಿಗೆ ಹೋಲಿಸಿದಂತೆ ಕಾಣುತ್ತದೆ. ನೀನು ನಾನಾಗುವ ರೀತಿ ಯಾವುದು ಹೇಳು. ಈ ಕೊನೆಯ ಪ್ರಶ್ನೆ ಅನಿರೀಕ್ಷಿತ. ನಾನು ನಿನ್ನಂತೆ ಆಗುವುದಲ್ಲ, ನೀನು ನನ್ನಂತೆ ಆಗುವುದು ಹೇಗೆ ಅನ್ನುವ ಪ್ರಶ್ನೆ ಚೆನ್ನಮಲ್ಲಿಕಾರ್ಜುನನಿಗೆ ಎಸೆದ ಸವಾಲೋ? ಇದೇ ವಚನವನ್ನು ಇನ್ನೊಂದು ರೀತಿಯಲ್ಲೂ ರೂಪಿಸಿರುವುದು ಕಾಣುತ್ತದೆ. ಅದನ್ನು ಮುಂದಿನ ಸಂಚಿಕೆಯಲ್ಲಿ ನೋಡೋಣ.

