ಕಳವಳದ ಮನ ತಲೆಕೆಳಗಾಗಿ…। ಅಕ್ಕ ಮಹಾದೇವಿ #4

ಚೆನ್ನಮಲ್ಲಿಕಾರ್ಜುನನಿಗೆ ಎರಡರಷ್ಟು ಮುನಿಸು ಬಂದಿದೆ. ದಯವಿಟ್ಟು ಬುದ್ಧಿ ಹೇಳಿ ಅವನನ್ನು ಕರೆದುಕಕೊಂಡು ಬಾ ಎಂದು ಗೆಳತಿಯನ್ನು ಅಂಗಲಾಚುವ ಮಾತು ಇದು… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಕಳವಳದ ಮನ ತಲೆಕೆಳಗಾದುದವ್ವಾ
ಸುಳಿದು ಬೀಸುವ ಗಾಳಿ ಉರಿಯಾದುದವ್ವಾ
ಬೆಳುದಿಂಗಳು ಬಿಸಿಯಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವಾ
ತಿಳುಹಾ,
ಬುದ್ದಿಯ ಹೇಳಿ ಕರೆತಾರೆಲಗಪ್ಪಾ,
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸಪ್ಪಾ [೧೫೫]

[ತಿಳುಹಾ= (ಇವತ್ತಿನ ನುಡಿಗಟ್ಟಿನಲ್ಲಿ ʻತಿಳಿಸಿ ಹೇಳೇʼ ಎಂದಾಗುತ್ತದೆ); ಎಲಗವ್ವಾ=ಎಲಗೇ, ಗೇ, ಅಂಗೇ ಇವು ಈಗಲೂ ಕರ್ನಾಟಕದ ಹಲವು ಪ್ರದೇಶದ ಆಡುನುಡಿಗಳಲ್ಲಿ ಕೇಳಿಸುವ, ಹೆಂಗಸನ್ನು ಸಂಬೋಧಿಸುವ ರೀತಿ, ಎಲಗೇ ಅವ್ವಾ ಎರಡೂ ಸೇರಿ ಎಲಗವ್ವಾ. ʻಹೇಳೇ ಅವ್ವಾʼ ಅನ್ನುವ ಅರ್ಥದ ನುಡಿ.]

ಈ ವಚನದಲ್ಲೂ ಹಿಂದಿನ ವಚನದಲ್ಲಿ ಬಂದಿರುವ ಹೋಲಿಕೆಯೇ ಇದೆ. ಆದರೆ ಹೆಚ್ಚು ನೇರವಾಗಿ, ನಾಟಕೀಯವಾಗಿ ರೂಪುಗೊಂಡಿದೆ. ನನ್ನ ಮನಸು ಕಳವಳಗೊಂಡಿದೆ, ತಲೆಕೆಳಗಾಗಿದೆ.  ಬೀಸುವ ಗಾಳಿಯೂ ಉರಿ ಹುಟ್ಟಿಸುತಿದೆ, ಬೆಳುದಿಂಗಳು ಬಿಸಿಯಾಗಿದೆ, ಪಟ್ಟಣದ ಸುಂಕಿಗನ ಹಾಗೆ ತೊಳಲಿ ಬಳಲಿದ್ದೇನೆ. ಚೆನ್ನಮಲ್ಲಿಕಾರ್ಜುನನಿಗೆ ಎರಡರಷ್ಟು ಮುನಿಸು ಬಂದಿದೆ. ದಯವಿಟ್ಟು ಬುದ್ಧಿ ಹೇಳಿ ಅವನನ್ನು ಕರೆದುಕೊಂಡು ಬಾ ಎಂದು ಗೆಳತಿಯನ್ನು ಅಂಗಲಾಚುವ ಮಾತು ಇದು.

ಹಿಂದಿನ ವಚನದಲ್ಲಿ ತನ್ನ ಮನಸಿನ ಸ್ಥಿತಿಯನ್ನು ಹೇಳಿಕೊಂಡರೆ ಇಲ್ಲಿ ವಿರಹ ಮಾತ್ರವೇ ಮುಖ್ಯವಾಗಿ ಗೆಳತಿಯ ನೆರವನ್ನು ಯಾಚಿಸುವ ಚಿತ್ರಣವಿದೆ. ಮೊದಲ ರಚನೆಯ ಅಸ್ಪಷ್ಟ ಅಂಶಗಳನ್ನು ಸರಳಗೊಳಿಸಲು ಈ ವಚನವನ್ನು ಆನಂತರ ಕಾಲದಲ್ಲಿ ಹೀಗೆ ಪ್ರತಿಕಾರರೋ ಪ್ರಾಚೀನ ಸಂಕಲನಕಾರರೋ ಬದಲಿಸಿರಬಹುದೋ ಅನ್ನುವ ಪ್ರಶ್ನೆ ಹುಟ್ಟುತ್ತದೆ. ಹಿಂದಿನ ವಚನದಲ್ಲಿ ಅತ್ಯಂತ ಚಪಲಚಿತ್ತದಿಂದ ಕಲ್ಪನೆ ಭಾವನೆಗಳೊಡನೆ ಆಡುವ, ಆದ್ದರಿಂದಲೇ ಬರಡಾಗದ ಮನಸ್ಸು ನನ್ನದು. ನೀನು ಹಾಗಲ್ಲ. ನೀನು ನನ್ನ ಹಾಗೆ ಆಗದೆ, ನನ್ನ ಕಳವಳ ಸ್ಥಿತಿಯನ್ನು ತಿಳಿಯುವುದು ಹೇಗೆ ಅನ್ನುವ ಪ್ರಶ್ನೆ ಈಲ್ಲಿ ಮಾಯವಾಗಿ ಚೆನ್ನಮಲ್ಲಿಕಾರ್ಜುನನಿಗೆ ಮನಿಸು ನನಗೆ ಕಳವಳ, ದಯವಿಟ್ಟು ಕರೆದುಕೊಂಡು ಬಾ ಅನ್ನುವ ಸರಳ ಕೋರಿಕೆಯ ರೂಪ ತಳೆದ ಹಾಗಿದೆ.

ಎರಡರ ಮುನಿಸು ಅನ್ನುವ ಮಾತಿಗೆ ಇತರ ಅರ್ಥಸಾಧ್ಯತೆಗಳೂ ಇವೆ ಅನಿಸುತ್ತದೆ. ಎರಡರ ಜ್ವರ ಅನ್ನುವ ಮಾತನ್ನು ಚಿಕ್ಕಂದಿನಲ್ಲಿ ಕೇಳಿದ್ದೆ. ದಿನಬಿಟ್ಟು ದಿನ ಬರುವ ಜ್ವರ ಅನ್ನುವುದು ಒಂದು ಅರ್ಥ; ರೇಶಿಮೆಯ ಹುಳುವಿನ ಬೆಳವಣಿಗೆಯಲ್ಲಿ ಎರಡರ ಜ್ವರ ಅನ್ನುವ ಮಾತನ್ನೂ ಕೇಳಿದ್ದ  ಅಸ್ಪಷ್ಟ ನೆನಪು. ಚೆನ್ನಮಲ್ಲಿಕಾರ್ಜುನನಿಗೆ ಬಂದ ಜ್ವರ ಇಳಿಸಲು ನನ್ನ ಉಪಚಾರ ಬೇಕು, ಬರದೆ ಮುನಿಸಿಕೊಂಡಿದ್ದಾನೆ, ಕರೆದು ತಾ ಅನ್ನುತ್ತಿರಬಹುದೇ? ಅಕ್ಕಮಹಾದೇವಿಯವರ ಇನ್ನೊಂದು ವಚನದಲ್ಲಿ ತೆರಣಿಯ ಹುಳುವಿನ ರೂಪಕದೊಡನೆ ಇದು ಹೊಂದುವಂತೆ ತೋರುತ್ತದೆ. ವಚನಗಳೇ ಹಾಗೆ. ಧ್ಯಾನಿಸಿದಷ್ಟೂ ಅರ್ಥವಿಸ್ತಾರವಾಗುತ್ತಲೇ ಇರುತ್ತದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a Reply

This site uses Akismet to reduce spam. Learn how your comment data is processed.