ಸರಿ / ತಪ್ಪು ಎನ್ನುವ ಯಾವುದೂ ಇಲ್ಲ. ಈ ಎಲ್ಲವೂ ಅವಲಂಬಿತವಾಗಿರುವುದು ನಮ್ಮ ದೃಷ್ಟಿಕೋನದ ಮೇಲೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಂದು ಸಂಗತಿ ಒಬ್ಬರಿಗೆ ಸರಿ ಅನಿಸಿದರೆ ಇನ್ನೊಬ್ಬರಿಗೆ ತಪ್ಪು ಅನಿಸಬಹುದು ಏಕೆಂದರೆ ಈ ಅನಿಸಿಕೆ ಆಯಾ ವ್ಯಕ್ತಿಯನ್ನು ಅವಲಂಬಿಸಿರುತ್ತದೆ. ಅದೇ ಸಂಗತಿ ಒಬ್ಬರಿಗೆ ಒಂದು ಪರಿಸ್ಥಿತಿಯಲ್ಲಿ ಸರಿ ಅನಿಸಿದರೆ ಇನ್ನೊಂದು ಪರಿಸ್ಥಿತಿಯಲ್ಲಿ ತಪ್ಪು ಅನಿಸಬಹುದು, ಏಕೆಂದರೆ ಈ ಅನಿಸಿಕೆ ಸಂದರ್ಭ, ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ.
ನಿಮಗೆಲ್ಲ ಅರಿಸ್ಟಾಟಲ್ ಮಾದರಿಯಲ್ಲಿ ಇದು ಸರಿ ಇದು ತಪ್ಪು ಎಂದು ಗ್ರಹಿಸುವ ರೀತಿಯಲ್ಲಿ ಪಾಠ ಮಾಡಲಾಗಿದೆ. ಇದು ಕಪ್ಪು ಇದು ಬಿಳೀ ಎನ್ನುವ ಹಾಗೆ. ಇದು ದೇವರು ಇದು ಸೈತಾನ ಎನ್ನುವ ಹಾಗೆ. ಈ ರೀತಿಯ ಎಲ್ಲ ವಿಭಾಗಗಳು ತಪ್ಪು. ಬದುಕನ್ನು ಕಪ್ಪು ಬಿಳೀ ಎಂದು ಭಾಗ ಮಾಡಲಾಗಿಲ್ಲ. ಬದುಕಿನ ಬಹು ಭಾಗ ಗ್ರೇ ಬಣ್ಣದ ರೀತಿಯದು.
ನೀವು ಆಳವಾಗಿ ಗಮನಿಸಿದಾಗ, ನಿಮಗೆ ಬಿಳಿಯಾಗಿ ಕಾಣಿಸುತ್ತಿರುವುದು extreme ಗ್ರೇ ಬಣ್ಣ ಮತ್ತು ಕಪ್ಪಾಗಿ ಕಾಣಿಸುತ್ತಿರುವುದು ಗ್ರೇ ಬಣ್ಣದ ಇನ್ನೊಂದು extreme. ಇದು ಹೀಗೆಯೇ ಇರಬೇಕು, ಏಕೆಂದರೆ ಬದುಕನ್ನು ಭಾಗ ಮಾಡುವುದು ಸಾಧ್ಯವಿಲ್ಲ. ಬದುಕನ್ನ ಎರಡು ವಿರುದ್ಧ water tight compartment ಗಳಂತೆ ನೋಡುವುದು ಸಾಧ್ಯವಿಲ್ಲ. ಹೀಗೆ ಭಾಗ ಮಾಡಿ ನೋಡುವುದು ಮೂರ್ಖತನ. ಆದರೆ ನಮ್ಮ ಮೈಂಡ್ ಲ್ಲಿ ಹೀಗೆ ಭಾಗ ಆಗಿ ಹೋಗಿದೆ.
ಆದ್ದರಿಂದ ಸರಿ ಮತ್ತು ತಪ್ಪುಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಯಾರಾದರೂ ಸರಿ ತಪ್ಪುಗಳನ್ನು ಅತ್ಯಂತ ನಿಖರವಾಗಿ ಗುರುತಿಸುವ ಪ್ರಯತ್ನ ಮಾಡುತ್ತಾರಾದರೆ ಅವರು ಪ್ಯಾರಾಲೈಸ್ ಆಗುತ್ತಾರೆ, ಅವರಿಗೆ ಕ್ರಿಯೆ ಸಾಧ್ಯವಾಗುವುದಿಲ್ಲ. ಕ್ರಿಯೆ ಮುಖ್ಯ ಮತ್ತು ಈ ರಿಲೇಟಿವ್ ಜಗತ್ತಿನಲ್ಲಿ ಅದು ಇನ್ನೂ ಮುಖ್ಯ. ಪರಿಪೂರ್ಣ ನಿಖರ ನಿರ್ಧಾರ ಎನ್ನುವುದು ಯಾವುದೂ ಇಲ್ಲ, ಹಾಗಾಗಿ ಅದಕ್ಕಾಗಿ ಕಾಯಬೇಡಿ. ಸುಮ್ಮನೇ ಗಮನಿಸುತ್ತಿರಿ, ನಿಮಗೆ ಯಾವುದು ಸರಿ ಅನಿಸುತ್ತದೆಯೋ ಆ ಪ್ರಕಾರ ಕ್ರಿಯೆಗೆ ಮುಂದಾಗಿ.
ಒಂದು ದಿನ ನಸ್ರುದ್ದೀನ್ ತನ್ನ ಹೆಂಡತಿಯೊಡನೆ ಮಾತನಾಡುತ್ತಿದ್ದ.
ನಸ್ರುದ್ದೀನ್ : ನೀನು ಯಾವಾಗಲೂ ಸರಿ ಹಾಗು ನಾನು ಯಾವಾಗಲೂ ತಪ್ಪು ಅಲ್ವಾ?
ಹೆಂಡತಿ : ಹೌದು ಯಾವಾಗಲೂ.
ನಸ್ರುದ್ದೀನ್ : ಹಾಗಾದರೆ ನೀನು ಸರಿ ಅಂತ ನಾನು ಹೇಳಿದರೆ ನಾನು ತಪ್ಪು ಹೇಳುತ್ತಿದ್ದೀನಾ ?
ನಸ್ರುದ್ದೀನ್ ಪ್ರಶ್ನೆಗೆ ಹೆಂಡತಿ ಇನ್ನೂ ಯೋಚಿಸುತ್ತಲೇ ಇದ್ದಾಳೆ.

