ವಚನ ಸಂವಾದದ ನೆನ್ನೆಯ ಕಂತಿಗೆ ( https://aralimara.com/2025/04/09/samvada-15/ ) ಪೂರಕವಾಗಿ ಓ.ಎಲ್.ಎನ್ ಅವರು ನೀಡಿದ ಟಿಪ್ಪಣಿ ಇಲ್ಲಿದೆ…
ಗೆಳೆಯ ಎಚ್. ಎಸ್. ಆರ್ ವಚನ ಸಂವಾದದ ೪ನೆಯ ಸಂಚಿಕೆಯ ಬರವನ್ನು ಓದಿ, ನನ್ನೊಡನೆ ಖಾಸಗಿಯಾಗಿ ಸಂವಾದ ಮಾಡುತ್ತ “ಎರಡರ ಮುನಿಸು ಎನ್ನುವುದನ್ನು ಇನ್ನೊಮ್ಮೆ ಪರಿಶೀಲಿಸಬೇಕು. ಎರಡರಷ್ಟು ಎಂದು ತೀರ್ಮಾನ ಮಾಡುವುದು ಹೇಗೆ? ಯಾವುದರ ಎರಡರಷ್ಟು” ಎಂಬ ಪ್ರಶ್ನೆಯನ್ನು ಕೇಳಿದರು. ಹಾಗಾಗಿ ಎರಡರ ಮುನಿಸು ಎಂಬ ಮಾತಿನ ಬಗ್ಗೆ ಇನ್ನಷ್ಟು ಯೋಚನೆ ಮಾಡಿದೆ. ಅಕ್ಕಮಹಾದೇವಿಯವರ ಇನ್ನೂ ನಾಲ್ಕಾರು ವಚನಗಳಲ್ಲಿ ಎರಡರ, ಎರಡು ಅನ್ನುವ ಪದ ಬಳಕೆಯಾಗಿದೆ. ಎರಡು ಅನ್ನುವುದನ್ನು ನಾಮಪದವಾಗಿ ಬಳಕೆ ಮಾಡಿರುವಂತೆ ತೋರುತ್ತದೆ
ಎರಡು ಎಂದರೆ ಹಲವು ಎಂಬ ಅರ್ಥದಲ್ಲಿ, ಏಕವಲ್ಲದ ಅನ್ನುವ ಅರ್ಥದಲ್ಲಿ ಬಳಕೆಯಾಗಿದೆ. ಇದನ್ನು ಒಪ್ಪಿದರೆ ನನ್ನ ಮನಸ್ಸು ಹೊಳಲ ಸುಂಕಿಗನ ಹಾಗೆ (ಮನೆಮನೆ ತಿರುಗಿ ತೆರಿಗೆ ವಸೂಲು ಮಾಡುವ ಅಧಿಕಾರಿಯಂತೆ) ಹಲವು ಎಡೆಗಳಲ್ಲಿ ತಾಕಲಾಡುತ್ತ ನನ್ನ ಮನಸ್ಸು ಬಳಲಿದೆ. ನನ್ನಲ್ಲಿ ಹಾಗೆ ಏಕತ್ವವಿರದೆ ನಾನು ಹಲವಾಗಿ ಚೆದುರಿ ಹೋಗಿರುವುದರಿಂದ ಚೆನ್ನಮಲ್ಲಿಕಾರ್ಜುನ ಮುನಿದಿದ್ದಾನೆʼ ಅನ್ನುವ ಅರ್ಥ ಈ ವಚನದ ಸಂದರ್ಭದಲ್ಲಿ ಹೊಂದಿಕೆಯಾಗುವಂತೆ ತೋರುತ್ತದೆ.
ಎರಡರ ಮುನಿಸು ಎಂದು ಇರುವ ವಚನವು ಅದರ ಹಿಂದಿನ ವಚನದ ಅರ್ಥದ ವ್ಯಾಖ್ಯಾನವೆಂಬಂತೆ ಆನಂತರದಲ್ಲಿ ರಚನೆಯಾಗಿರಬಹುದೋ ಅನ್ನುವ ಯೋಚನೆ ಮೂಡತ್ತದೆ. ಹಿಂದಿನ ವಚನದಲ್ಲಿ ನೀನು ಆನಪ್ಪ ಪರಿ ಎಂತು ಎಂಬ ಪ್ರಶ್ನೆಯನ್ನು ಚೆನ್ನಮಲ್ಲಿಕಾರ್ಜುನನಿಗೆ ಕೇಳಿದ್ದರೆ ಇಲ್ಲಿ ತಾನೇ ವಿಚಲಿತಳಾಗಿದ್ದೇನೆ, ಚೆನ್ನಮಲ್ಲಿಕಾರ್ಜುನನದು ತಪ್ಪಿಲ್ಲ ಎಂದು ಹೇಳುವ, ಕೋರುವ ದನಿ ಕೇಳುತ್ತದೆ.
ಮುಂದಿನ ಉದಾಹರಣೆಗಳಲ್ಲಿ ʼಒಂದಲ್ಲದೆ ಎರಡರಿಯೆನಯ್ಯಾʼ, ʻಒಂದಲ್ಲ,ಎರಡಲ್ಲʼ, ಒಳಗಣ ಗಂಡ ಮತ್ತು ಹೊರಗಣ ಮಿಂಡ ಎರಡನೂ ನಡೆಸಲು ಬಾರದು, ʻಎರಡುವರಿಯದೆ ಕೂಡಿದೆʼ ಎಂಬ ಬಳಕೆಗಳನ್ನು ಗಮನಿಸಿ. ಆಗ ಈ ವಚನದ ಕೊನೆಯ ಸಾಲಿಗೆ ʻನನ್ನ ಮನಸ್ಸು ಇಡಿತನವನ್ನು ಕಳೆದುಕೊಂಡು ಚೆದುರಿ ಹೋಗಿದ್ದರಿಂದ, ಹೊಳಲ ಸುಂಕಿಗನ ಹಾಗೆ ಬಳಲುತ್ತಿರುವುದರಿಂದ ಚೆನ್ನಮಲ್ಲಿಕಾರ್ಜುನ ನನ್ನ ಮೇಲೆ ಮುನಿದಿದ್ದಾನೆ. ನನಗೆ ನೆಮ್ಮದಿಯಿಲ್ಲ, ಹೋಗಿ ಕರೆದುಕೊಂಡು ಬಾʼ ಎನ್ನವ ಅರ್ಥ ಇರುವಂತೆ ತೋರುತ್ತದೆ.
*
ಶ್ರೀಮತಿ ರೇಖಾಂಬಾ ಅವರು ನನಗೆ ಬರೆದ ಟಿಪ್ಪಣಿಯಲ್ಲಿ “ನಿಜ, ನನಗೂ ಏಕವಲ್ಲದ್ದು ಅನ್ನೋದು ಹೆಚ್ಚು ಹೊಂದುವ ಅರ್ಥವೆನಿಸತ್ತೆ… ಶರಣರಿಗೆ ಇಹ-ಪರ ಎಂಬ ಎರಡರ ನಂಬಿಕೆಯಿತ್ತೇ? ನಾನು-ಶಿವ ಎಂಬ ಎರಡರ ಕಲ್ಪನೆಯಿತ್ತೇ? ಹೊಳಲ ಸುಂಕಿಗನಂತೆ ಅನ್ನುವಾಗ ಲೌಕಿಕ ವ್ಯವಹಾರದಿಂದ ಬಿಡುಗಡೆ ಬಯಸುವ ಮುಕ್ತಿ ಕಲ್ಪನೆಯಿತ್ತೇ? ಅಥವಾ ಹಲವು ವಿಷಯಗಳಲ್ಲಿ ಚದುರಿ ಬಳಲುವ ಮನಸ್ಸನ್ನು ಏಕತ್ರಗೊಳಿಸುವ ಶ್ರದ್ಧೆ-ನಿಷ್ಠೆಯ ಕಲ್ಪನೆಯಾಗಿತ್ತೇ” ಎಂದು ಹೇಳಿದ್ದಾರೆ.
ನಾಲ್ಕನೆಯ ಸಂಚಿಕೆಯಲ್ಲಿ ಚರ್ಚೆಮಾಡಿರುವ ವಚನವನ್ನು ಹೀಗೂ ವಿಸ್ತರಿಸಿಕೊಳ್ಳಬಹುದು ಅನಿಸುತ್ತದೆ.
ಅಕ್ಕಮಹಾದೇವಿಯವರ ವಚನಗಳಿಂದ ಆಯ್ದ ಇತರ ನಿದರ್ಶನಗಳು
೧. ಅಂದೂ ನೀನೆ, ಇಂದೂ ನೀನೆ, ಎಂದೂ ನೀನೆ, ಕೇಳಾ ತಂದೆ.
ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ
ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ.
ಒಂದಲ್ಲದೆ ಎರಡರಿಯೆನಯ್ಯಾ.
ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ
ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ
೨. ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ
ಎಂಬತ್ತುನಾಲ್ಕುಲಕ್ಷಯೋನಿಯೊಳಗೆ ಬಾರದ ಭವಂಗಳಲ್ಲಿ ಬಂದೆ ಬಂದೆ.
ಉಂಡೆ ಉಂಡೆ ಸುಖಾಸುಖಂಗಳ.
ಹಿಂದಣ ಜನ್ಮ ತಾನೇನಾದಡೆಯೂ ಆಗಲಿ ಮುಂದೆ ನೀ ಕರುಣಿಸಾ,
ಚೆನ್ನಮಲ್ಲಿಕಾರ್ಜುನಾ.
೩. ಒಳಗಣ ಗಂಡನಯ್ಯಾ, ಹೊರಗಣ ಮಿಂಡನಯ್ಯಾ.
ಎರಡನೂ ನಡೆಸಲು ಬಾರದಯ್ಯಾ.
ಲೌಕಿಕ ಪಾರಮಾರ್ಥವೆಂಬೆರಡನೂ ನಡೆಸಲು ಬಾರದಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ, ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದಯ್ಯಾ.
೪. ಅತಿಕಾಮಿ ಚೆನ್ನಮಲ್ಲಿಕಾರ್ಜುನಂಗೆ ತೊಡರಿಕ್ಕಿ
ಎರಡುವರಿಯದೆ ಕೂಡಿದೆನು
೫. ಒಡಲಿಲ್ಲದ ನುಡಿಯಿಲ್ಲದ ಕಡೆಯಿಲ್ಲದ
ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯಾ.
ಭಾಷೆ ಪೈಸರವಿಲ್ಲ, ಓಸರಿಸೆನನ್ಯಕ್ಕೆ,
ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ.
ಆರಳಿದು ಮೂರಾಗಿ, ಮೂರಳಿದು ಎರಡಾಗಿ,
ಎರಡಳಿದು ಒಂದಾಗಿ ನಿಂದೆನಯ್ಯಾ.
ಈ ಐದು ಉದಾಹರಣೆಗಳಲ್ಲದೆ ಎರಡು/ಎರಡರ ಎಂಬ ಪದವನ್ನು ಅಕ್ಕಮಹಾದೇವಿಯವರ ಒಟ್ಟು ಹನ್ನೊಂದು ವಚನಗಳಲ್ಲಿ ಕಾಣಬಹುದು. ಆದರೆ ಇಲ್ಲಿ ಉಲ್ಲೇಖಿಸಿರುವ ವಚನಗಳನ್ನು ಬಿಟ್ಟು ಉಳಿದವು ಬಹಳ ದೀರ್ಘವಾದ ವಚನಗಳು, ಮತ್ತು ಅವುಗಳ ಭಾಷೆ ಕೂಡ ಧಾರ್ಮಿಕ ತತ್ವವನ್ನು ಬೌದ್ಧಿಕವಾಗಿ ವಿವರಿಸುವಂಥ ಭಾಷೆಯಲ್ಲಿವೆ. ಅಲ್ಲಿಯೂ ಎರಡು/ಎರಡರ ಎಂಬ ಮಾತು ದ್ವಯ/ಎರಡಾಗಿರುವ ಸ್ಥಿತಿ ಅನ್ನುವ ಅರ್ಥಗಳನ್ನೇ ಸೂಚಿಸುವಂತೆ ತೋರುತ್ತದೆ.

