“ಸಂಸಾರವೆಂಬ ಶತ್ರು ನನ್ನ ವಂಶವನ್ನು ಹುಡುಕಿಕೊಂಡು ಬರುತ್ತಿದೆ. ನನ್ನವರನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ನಾನು ನಿಮ್ಮ ರಕ್ಷಣೆಯನ್ನು ಬಯಸಿ ಮೊರೆ ಹೊಕ್ಕಿದ್ದೇನೆ. ನನ್ನ ಕೋರಿಕೆಯನ್ನು ದಯವಿಟ್ಟು ಆಲಿಸು” ಅನ್ನುತ್ತಿದ್ದಾಳೆ ಅಕ್ಕ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಸಂಸಾರವೆಂಬ ಹಗೆಯಯ್ಯಾ ಎನ್ನ ತಂದೆ
ಎನ್ನ ವಂಶವಂಶದಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯಾ
ಎನ್ನುವನರಸಿಯರಸಿ ಹಿಡಿದು ಕೊಲುತ್ತಿದೆಯಯ್ಯಾ
ನಿನ್ನ ನಾ ಮರೆಹೊಕ್ಕೆ ಕಾಯಯ್ಯಾ
ಎನ್ನ ಬಿನ್ನಪವನವಧರಿಸಾ,
ಚೆನ್ನಮಲ್ಲಿಕಾರ್ಜುನಾ [೩೮೪]
[ಎನ್ನುವನಱಸಿಯಱಸಿ= ಎನ್ನುವನು-ನನ್ನನ್ನು, ಅಱಸಿ ಅಱಸಿ- ಹುಡುಕಿ ಹುಡುಕಿ; ಮಱೆಹೊಕ್ಕೆ=ಮೊರೆಹೊಕ್ಕೆ, ಅವಧರಿಸಾ-ಗಮನಿವಿಟ್ಟು ನೋಡು, ಪರಿಶೀಲಿಸು, ದಯವಿಟ್ಟು]
ತಂದೇ, ಸಂಸಾರವೆಂಬ ಶತ್ರು ನನ್ನ ವಂಶವನ್ನು ಹುಡುಕಿಕೊಂಡು ಕೊಲ್ಲಲು ಬರುತ್ತಿದೆ. ನನ್ನನ್ನು ಹುಡುಕಿ ಹುಡುಕಿ ಕೊಲ್ಲುತ್ತಿದೆ. ನಾನು ನಿಮ್ಮ ರಕ್ಷಣೆಯನ್ನು ಬಯಸಿ ಮೊರೆ ಹೊಕ್ಕಿದ್ದೇನೆ. ಕಾಪಾಡು. ನನ್ನ ಬಿನ್ನಹವನ್ನು ದಯವಿಟ್ಟು ಆಲಿಸು , ಗಮನಿಸು.
ಚೆನ್ನಮಲ್ಲಿಕಾರ್ಜುನ ಬರಿಯ ನಲ್ಲ, ಗಂಡ ಮಾತ್ರವಲ್ಲ, ಕಾಪಾಡುವ ತಂದೆ ಕೂಡಾ. ಸಂಸಾರವೆಂಬ ಶತ್ರುವಿನ ತೊಂದರೆಯಿಂದ ಅಸಹಾಯಕಳನ್ನು ಕಾಪಾಡು ಅನ್ನುವ ಮೊರೆ ಇಲ್ಲಿದೆ. ವಚನಗಳಲ್ಲಿ ಇಷ್ಟ ದೈವವು ಪತಿ, ತಂದೆ, ಶತ್ರು, ಮಿಂಡ, ಕೋಡಗ ಹೀಗೆ ಬೇರೆ ಬೇರೆ ರೂಪ ತಾಳುತ್ತದೆ. ಆಯಾ ವಚನದ ಭಾವಕ್ಕೆ ತಕ್ಕ ಹಾಗೆ ದೈವದ ಸ್ವರೂಪವೂ ಬೇರೆಯಾಗುತ್ತದೆ ಅನಿಸುತ್ತದೆ.
ಅಲ್ಲಮ ವಚನದಲ್ಲಿ ʻಸಂಸಾರವೆಂಬ ಹೆಣ ಬಿದ್ದಿದೆ, ತಿನ್ನಲು ಬಂದ ನಾಯಿಗಳ ಜಗಳ ನೋಡಿರೇʼ ಅನ್ನುವ ಮಾತು ಬರುತ್ತದೆ. ಅಕ್ಕ ಮತ್ತು ಅಲ್ಲಮ ನಾವು ಯಾವುದನ್ನು ಸಂಸಾರ ಅನ್ನುತ್ತೇವೋ ಅದನ್ನು ನಿರಾಕರಿಸಿದವರು. ದ್ವಂದ್ವಗಳನ್ನು ಒಲ್ಲದವರು. ಬಯಲಗಳಿಕೆ ಮಾತ್ರವೇ ಅವರ ಗುರಿ, ಉದ್ದೇಶ. ಅಂಥ ವ್ಯಕ್ತಿಗಳು ಸಂಸಾರವನ್ನು ಹೇಯವಾಗಿ ನೋಡುವುದು ಸಹಜ. ಬಸವಣ್ಣನಂಥವರೂ ಸಂಸಾರದ ಬಗ್ಗೆ ಹೇವರಿಕೆಯ ಮಾತು ಆಡುವುದನ್ನೂ ಸಮಾಜವನ್ನು ತಿದ್ದಲು ಬಯಸುವುದನ್ನೂ ಹೇಗೆ ಹೊಂದಿಸಿ ವಿವರಿಸುವುದು?
ಪ್ರಮುಖ ವಚನಕಾರರಲ್ಲಿ ಸಂಸಾರವನ್ನು ನಿಂದಿಸುವ ವಚನಗಳಲ್ಲಿ ಶೇ.ತೊಂಬತ್ತರಷ್ಟನ್ನು ಆಧುನಿಕ ವಿದ್ವಾಂಸರೆಲ್ಲರೂ ಅಧಿಕವಚನಗಳೆಂದು ವರ್ಗೀಕರಿಸಿದ್ದಾರೆ. ಅಂದರೆ ಧರ್ಮ, ವೈರಾಗ್ಯ, ಭಕ್ತಿ ಇಂಥ ವಿಚಾರಗಳನ್ನು ಕುರಿತ ಸಾಂಪ್ರದಾಯಿಕ ನಿಲುವಿನ ಮನಸುಗಳು ಇಂಥ ರಚನೆಗಳನ್ನು ವಚನ ಸಮುದಾಯದಲ್ಲಿ ಆನಂತರ ಸೇರ್ಪಡೆ ಮಾಡಿರಬಹುದೇ? ಖಚಿತವಾಗಿ ಹೇಳುವುದು ಕಷ್ಟ.
ವಿಶಿಷ್ಟ ವ್ಯಕ್ತಿಯಾದ ನನ್ನನ್ನು ಲೆಕ್ಕಕ್ಕೇ ಇಡದ ಲೋಕದ ಬಗ್ಗೆ ದುಃಖ, ಸಿಟ್ಟು, ಅಸಹ್ಯ ಹುಟ್ಟುವುದು ಮನುಷ್ಯ ಸಹಜ. ಸಂಸಾರವನ್ನು ಜರಿಯುವುದು ನಮ್ಮ ನೆಲದ ಜನರಿಗೆ ಸಲೀಸಾಗಿ ಒದಗುವ ವಿಚಾರ ಧಾರೆ, ಮತ್ತು ನಾಲಗೆಯ ಮೇಲೇ ಇರುವ ನುಡಿ ಬಳಕೆ. ವಚನಕಾರರೂ ಅದನ್ನು ಬಳಸಿಕೊಂಡಿದ್ದಾರೆ, ಎಲ್ಲ ಭಕ್ತಿ ಪಂಥಗಳ ಹಾಗೆ ಅನ್ನಬೇಕೇ. ಈ ಕುರಿತು ತಾತ್ವಿಕವಾದ ಚರ್ಚೆಯನ್ನು ಬೆಳೆಸುವುದಕ್ಕೆ ನಮ್ಮ ಕಾಲದ ಓದುಗರಿಗೆ ಅಪಾರ ಸ್ವಾತಂತ್ರ್ಯವನ್ನು ವಚನಗಳು ನೀಡಿವೆ.

