ಈ ಕ್ಷಣಕ್ಕೆ ನಿಮ್ಮ ಪ್ರತಿಕ್ರಿಯೆ ಇರಲಿ, ಜವಾಬ್ದಾರಿ ಎಂದರೆ ಇದು. ಯಾರೋ ಒಬ್ಬರು ನಿಮ್ಮನ್ನು ಮದುವೆಯಾಗಲು ಬಯಸುತ್ತಿದ್ದಾರೆ. ನಿಮಗೆ OK ಹೇಳಬೇಕೋ, NO ಹೇಳಬೇಕೋ ಎನ್ನುವ ಗೊಂದಲ ಕಾಡುತ್ತಿದೆ. ಆಗ ನೀವು ಪುರಾತನ ಶಾಸ್ತ್ರಗಳ ಸಹಾಯ ಬಯಸುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಇದು ನಿಮ್ಮ ಬದುಕು. ಯಾಕೆ ನಿಮ್ಮ ಬದುಕಿನ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಐದಾರು ಸಾವಿರ ವರ್ಷಗಳ ಹಿಂದೆ ಯಾರೋ ಬರೆದಿಟ್ಟ ಪುಸ್ತಕಕ್ಕೆ ಅವಕಾಶ ಮಾಡಿಕೊಡಬೇಕು? ಅದು ಏನೇ ಇರಲಿ ನೀವು ತಪ್ಪು ಮಾಡಿದರೂ ಸರಿ, ಅಥವಾ ದಾರಿ ತಪ್ಪಿದರೂ, ನಿಮ್ಮ ಸ್ವಂತ ನಿರ್ಧಾರ ಬಹಳ ಮುಖ್ಯ. ಶಾಸ್ತ್ರದ ಪ್ರಕಾರ ನಡೆದುಕೊಂಡ ಕಾರಣ ಅಕಸ್ಮಾತ್ ನೀವು ದಾರಿ ತಪ್ಪದಿದ್ದರೂ, ನೀವು ಯಶಸ್ವಿಯಾದರೂ ಅದು ಸರಿಯಾದ ದಾರಿ ಅಲ್ಲ. ಏಕೆಂದರೆ ಇಲ್ಲಿ ನೀವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದೀರಿ.
ಜವಾಬ್ದಾರಿಯನ್ನು ತೆಗೆದುಕೊಳ್ಳುವ ವ್ಯಕ್ತಿಯ ಬೆಳವಣಿಗೆ ಸಾಧ್ಯವಾಗುತ್ತದೆ. ನಿಮ್ಮ ಬದುಕಿನ ಜವಾಬ್ದಾರಿಯನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಿ. ಕೆಲವು ಜನ ಜವಾಬ್ದಾರಿಯನ್ನು ದೇವರಿಗೆ ವಹಿಸುತ್ತಾರಾದರೆ ಇನ್ನೂ ಕೆಲವರು ಕರ್ಮ, ನಿಯತಿಯ ಮೇಲೆ ಭಾರ ಹಾಕಿಬಿಡುತ್ತಾರೆ. ಮತ್ತು ಹಲವರು ಶಾಸ್ತ್ರದ ಮೊರೆ ಹೋಗುತ್ತಾರೆ. ಯಾವಾಗ ನಾವು ಎಲ್ಲ ಜವಾಬ್ದಾರಿಯನ್ನು ನಮ್ಮ ಹೆಗಲ ಮೇಲೆ ಹೊತ್ತುಕೊಳ್ಳಲು ನಿರ್ಧರಿಸುತ್ತೇವೆಯೋ ಆಗ ನಾವು ಆಧ್ಯಾತ್ಮಿಕರಾಗುತ್ತೇವೆ.
ಜವಾಬ್ದಾರಿ ಪ್ರಚಂಡವಾಗಿದೆ ಮತ್ತು ನಿಮ್ಮ ಹೆಗಲು ದುರ್ಬಲ ಎನ್ನುವುದು ನನಗೆ ಗೊತ್ತು. ಆದರೆ ಯಾವಾಗ ನೀವು ಜವಾಬ್ದಾರಿಯನ್ನು ಹೊರಲು ಸಿದ್ಧರಾಗುತ್ತೀರಿಯೋ ಆಗ ನಿಮ್ಮ ಹೆಗಲು ಸಾಮರ್ಥ್ಯಶಾಲಿಯಾಗುತ್ತದೆ. ಇದನ್ನು ಬಿಟ್ಟರೆ ಶಕ್ತಿಶಾಲಿಯಾಗಲು ಹೆಗಲಿಗೆ ಬೇರೆ ದಾರಿ ಇಲ್ಲ.
ಝೆನ್ ಮಾಸ್ಟರ್ ನ ಆಶ್ರಮದಲ್ಲಿ ಝೆನ್ ಅಭ್ಯಾಸ ಮಾಡುತ್ತಿದ್ದ ಒಬ್ಬ ಯುವ ಸನ್ಯಾಸಿ ತನ್ನ ಕಲಿಕೆಯ ಅವಧಿ ಮುಗಿಯುತ್ತಿದ್ದಂತೆಯೇ ದೇಶಾಂತರ ಹೊರಟು ಬಿಟ್ಟ. ಸುತ್ತಾಟದಲ್ಲಿ ತಾನು ಕಂಡದ್ದನ್ನ ಮತ್ತು ತನ್ನ ಅಧ್ಯಾತ್ಮ ಕಲಿಕೆಯ ಪ್ರಗತಿಯನ್ನು ಪತ್ರದ ಮೂಲಕ ಮಾಸ್ಟರ್ ಗೆ ತಿಳಿಸಬೇಕೆಂದು ಬಯಸಿದ.
ಆಶ್ರಮ ಬಿಟ್ಟು ಒಂದು ತಿಂಗಳಾದ ಮೇಲೆ ಮಾಸ್ಟರ್ ಗೆ ಮೊದಲ ಪತ್ರ ಬರೆದ “ ಮಾಸ್ಟರ್, ನನ್ನ ಪ್ರಜ್ಞೆ ವಿಸ್ತಾರಗೊಳ್ಳುತ್ತಿದೆ, ಬ್ರಹ್ಮಾಂಡದೊಂದಿಗೆ ಒಂದಾಗುತ್ತಿರುವ ಹಾಗೆ ಅನುಭವವಾಗುತ್ತಿದೆ “
ಪತ್ರ ಓದುತ್ತಿದ್ದಂತೆಯೇ ಮಾಸ್ಟರ್, ಪತ್ರ ಬಿಸಾಕಿ ಬಿಟ್ಟ.
ಎರಡನೇ ಪತ್ರದಲ್ಲಿ ಶಿಷ್ಯ ಹೀಗೆ ಬರೆದಿದ್ದ, “ ಸಮಸ್ತ ಚರಾಚರಗಳಲ್ಲಿ ಹುದುಗಿರುವ ದೈವಿಕತೆಯನ್ನು ನಾನು ಕಂಡುಕೊಂಡೆ “
ಪತ್ರ ಓದಿ ಮಾಸ್ಟರ್ ಗೆ ತೀವ್ರ ಹತಾಶೆಯಾಯಿತು.
ಒಂದು ತಿಂಗಳ ನಂತರ ಮತ್ತೆ ಪತ್ರ ಬಂತು
“ ಪ್ರಕೃತಿಯ ರಹಸ್ಯ ನನ್ನ ದಿವ್ಯ ದೃಷ್ಟಿಗೆ ಗೋಚರವಾಯಿತು “
ಪತ್ರ ಓದಿ ಮಾಸ್ಟರ್, ಆಕಳಿಸಿದ.
ಎರಡು ತಿಂಗಳ ನಂತರ ಬಂದ ಪತ್ರದಲ್ಲಿ ಹೀಗೆ ಬರೆದಿತ್ತು “ ಯಾರೂ ಹುಟ್ಟಿಲ್ಲ, ಯಾರೂ ಬದುಕುತ್ತಿಲ್ಲ, ಯಾರೂ ಸಾಯುವುದೂ ಇಲ್ಲ, ಏಕೆಂದರೆ ಆತ್ಮ ಒಂದು ಭ್ರಮೆ”
ಮಾಸ್ಟರ್ ಗೆ ಎಷ್ಟು ನಿರಾಶೆಯಾಯಿತೆಂದರೆ ಛೇ ಎನ್ನುತ್ತ ಗಾಳಯಲ್ಲಿ ತನ್ನ ಕೈ ತೂರಿದ.
ಹೀಗೇ ಒಂದು ವರ್ಷ ಕಳೆಯಿತು, ಶಿಷ್ಯನಿಂದ ಪತ್ರಗಳು ಬರುತ್ತಲೇ ಇದ್ದವು. ಮಾಸ್ಟರ್ ಗೆ ಸಮಾಧಾನವಾಗಲಿಲ್ಲ, ಶಿಷ್ಯನ ಕರ್ತವ್ಯಗಳನ್ನು ನೆನಪಿಸುತ್ತ, ಅವನ ಅಧ್ಯಾತ್ಮದ ಹಾದಿಯಲ್ಲಿನ ಸಮಸ್ಯೆಗಳನ್ನು ವಿವರಿಸಿ ಪತ್ರ ಬರೆದ.
ಶಿಷ್ಯ ತಿರುಗಿ ಉತ್ತರ ಬರೆದ “ ನಿಮ್ಮ ತಿಳುವಳಿಕೆ ಯಾರಿಗೆ ಬೇಕು? “
ಈ ಉತ್ತರ ಓದುತ್ತಿದ್ದಂತೆಯೇ, ಮಾಸ್ಟರ್ ಮುಖದಲ್ಲಿ ತೃಪ್ತಿ ಕಾಣಿಸಿಕೊಂಡಿತು.
“ ಓಹ್! ಕೊನೆಗೂ ತಿಳಿದುಕೊಂಡುಬಿಟ್ಟ”

