ಕುಸಿಯುವ ದಡ, ಕುಲುಮೆಯ ಹೊಗೆ । ಅಕ್ಕ ಮಹಾದೇವಿ #8

ಚೆನ್ನಮಲ್ಲಿಕಾರ್ಜುನನ ಹರಿವಿನ ವೇಗಕ್ಕೆ ಇವಳು ದಡದ ಹಾಗೆ ಕರಗಿ ಕರಗಿ ಹೋಗುತ್ತಾ, ಮರಳಿನ ಹಾಗೆ ಕುಸಿಯುತ್ತಾ ಇದ್ದಾಳೆ. ಇದು ಕನಸೋ? ಕನಸೇ ಆಗಿದ್ದರೂ ಕಳವಳ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಎರೆಯಂತೆ ಕರಕರಗಿ
ಮಳಲಂತೆ ಜರಿಜರಿದು
ಕನಸಿನಲ್ಲಿ ಕಳವಳಿಸಿ
ಆನು ಬೆರಗಾದೆ
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರನಾರನೂ ಕಾಣೆ
ಅರಸಿ ಕಾಣದ ತನುವ
ಬೆರಸಿ ಕೂಡದ ಸುಖವ
ಎನಗೆ ನೀ ಕರುಣಿಸಾ
ಚೆನ್ನಮಲ್ಲಿಕಾರ್ಜುನಾ [೧೧೦]

[ಎರೆ=ದಡ; ಜರಿ=ಕುಸಿ; ಅರಸಿ=ಹುಡುಕಿ; ಆವಿಗೆ= ಇಟ್ಟಿಗೆ, ಹೆಂಚು, ಮಡಕೆ ಮೊದಲಾದವನ್ನು ಸುಡುವ ಕುಲುಮೆ]

ಹೊಳೆಯ ದಡ ನೀರಿನ ಪ್ರವಾಹಕ್ಕೆ ಸಿಕ್ಕಿದ ಮರಳು ಇಷ್ಟಿಷ್ಟೆ ಕರಗುವ ಹಾಗೆ, ಕುಸಿದು ಬೀಳುವ ಹಾಗೆ ಕನಸಿನಲ್ಲಿ/ಕನಸಿನಲ್ಲೂ ಕಳವಳಪಟ್ಟು ನಾನು ಬೆರಗಾದೆ. ಕುಲುಮೆಯ ಕಿರಿಯ ಜಾಗದಲ್ಲಿ ಅಲ್ಲಲ್ಲೇ ಸುಳಿಯುವ ಜ್ವಾಲೆಯ ಹಾಗೆ ನಾನು ಬೆಂದು ಹೋದೆ. ನನಗೆ ಆಪತ್ತು ಒದಗಿರುವ ಗಳಿಗೆಯಲ್ಲಿ ಸಖಿಯರೂ ಕಾಣುತ್ತಿಲ್ಲ.  ಹುಡುಕಿದರೂ ಕಾಣದ ಬೆರೆಸಿದರೂ ಕೂಡದಿರುವ [ಕೂಡದೆಯೂ ಬೆರೆಯುವ?] ಸುಖವನ್ನು ನನಗೆ ಕರುಣಿಸು.

ನೀರು, ಮರಳು, ಬೆಂಕಿಗಳ ಹೋಲಿಕೆಯನ್ನು ಗಮನಿಸಿ. ಚೆನ್ನಮಲ್ಲಿಕಾರ್ಜುನನು ಪ್ರಬಲ ಶಕ್ತಿ. ನದಿಯ ನೀರಿನ ಹಾಗೆ. ಅವನ ಹರಿವಿನ ವೇಗಕ್ಕೆ ಇವಳು ದಡದ ಹಾಗೆ ಕರಗಿ ಕರಗಿ ಹೋಗುತ್ತಾ, ಮರಳಿನ ಹಾಗೆ ಕುಸಿಯುತ್ತಾ ಇದ್ದಾಳೆ. ಇದು ಕನಸೋ? ಕನಸೇ ಆಗಿದ್ದರೂ ಕಳವಳ. ತಟ್ಟನೆ ಅವಳ ಮನೋಭಾವವೇ ಸುಡುವ ಬೆಂಕಿಯಾಗುತ್ತದೆ. ಮೈಯ ಇಕ್ಕಟ್ಟಿನೊಳಗೆ ಸಿಲುಕಿರುವ ಭಾವದ ತೀವ್ರತೆ ಕುಲುಮೆಯೊಳಗಿನ ಬೆಂಕಿಯ ಹಾಗೆ ಅವಳನ್ನು ಸುಡುತ್ತಿದೆ. ಹೇಳಿಕೊಳ್ಳಲು ಗೆಳತಿಯರೂ ಕಾಣುತ್ತಿಲ್ಲ. ಇಲ್ಲಿಯವರೆಗೆ ಸಲೀಸು ಅನ್ನಿಸುವ ವಚನ ಮುಂದಿನ ಎರಡು ಸಾಲುಗಳಲ್ಲಿ ತೊಡಕನ್ನು ಒಡ್ಡುತ್ತದೆ. ಚೆನ್ನಮಲ್ಲಿಕಾರ್ಜುನನು ಹುಡುಕಿದರೂ ಕಾಣದ ʻತನುʼ/ದೇಹ. ಅವನೊಡನೆ ಕೂಡುವುದು ಅಸಾಧ್ಯ ಅನ್ನುತ್ತಿದೆಯೋ ವಚನ? ಅಥವಾ ಕೂಡಲು ಅಸಾಧ್ಯವಾದ ಕಾರಣದಿಂದ ಕೂಡದೆಯೂ ನಿನ್ನೊಡನೆ ಬೆರೆಯುವ ಸುಖವನ್ನು ನನಗೆ ಕರುಣಿಸು ಅನ್ನುತ್ತಿದೆಯೋ? ಅಥವಾ ನಿನ್ನೊಡನೆ ಕೂಡದೆಯೂ ಕೂಡಿದೆ ಅನ್ನಿಸುವ ಭಾವ ತೃಪ್ತಿಯನ್ನು ಬಯಸುತ್ತಿದೆಯೋ? ಓದುಗರು ತಮ್ಮ ತಮ್ಮ ತೀರ್ಮಾನಕ್ಕೆ ಬರಬಹುದು.

ಇಲ್ಲಿ ನನ್ನ ಬಯಕೆ ಎಷ್ಟು ಪ್ರಬಲ ಅನ್ನುವುದು ಮುಖ್ಯವಲ್ಲವೇ ಅಲ್ಲ, ಬೆರೆಸಿ ಕೂಡದ ಸುಖವನ್ನು ʻನೀನುʼ ಅನುಗ್ರಹಿಸಬೇಕು ಅನ್ನುವ ಬೇಡಿಕೆ ಇದೆ. ವಚನಕಾರರೇ ಹಲವು ಬಾರಿ ಬಳಸುವ ʻಸಮರತಿʼ ಅನ್ನುವುದರ ಅಪೇಕ್ಷೆ ಈ ವಚನದಲ್ಲೂ ಕಾಣುವಂತಿದೆ. ಬಯಕೆ ಅನ್ನುವ ಮಾತನ್ನು ಸುಮಾರು ನೂರು ಸ್ಥಳಗಳಲ್ಲಿ ವಚನಕಾರರು ಬಳಸಿದ್ದಾರೆ. ಅವು ಬಹಳ ಬಹಳ ಮಟ್ಟಿಗೆ ಮೈಯ ಬಯಕೆಯನ್ನು ಕುರಿತವಾಗಿರುವುದೇ ಹೆಚ್ಚು. ಆಗೀಗ ಮುಕ್ತಿಯ ಬಯಕೆಯೂ ಬೇಡ, ಕಾಣದ್ದನ್ನು ಬಯಸುವುದು ಬೇಡ ಅನ್ನುವಂಥ ಮಾತೂ ಎದುರಾಗುತ್ತವೆ. ಉಳಿದು ಸಿಕ್ಕಿರುವ ವಚನಗಳಲ್ಲಿ ಮೈಯ ಬಯಕೆಯನ್ನು ತೊರೆಯುವ, ಅದರಿಂದ ಬಿಡಿಸಿಕೊಳ್ಳುವ ಅಪೇಕ್ಷೆಯಾಗಿ ಕಾಣುವುದೇ ಹೆಚ್ಚು. ಅಕ್ಕಮಹಾದೇವಿಯ ವಚನಗಳಲ್ಲಿ ಚೆನ್ನಮಲ್ಲಿಕಾರ್ಜುನನಿಗೆ ತನ್ನ ಮೈ ಮನಸುಗಳನ್ನು ಒಪ್ಪಿಸಿ ಕೂಡುವ ಬಯಕೆ ವ್ಯಕ್ತವಾಗಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.