ಸರಳವಾಗಿರುವುದೆಂದರೆ ಬುದ್ಧಿಯಿಂದ ಮನಸ್ಸಿನ ಕಡೆಗೆ ಸಾಗುವುದು ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಮೈಂಡ್ ಬಹಳ ಕಪಟಿ ; ಅದು ಯಾವತ್ತೂ ಸರಳ ಅಲ್ಲ. ಆದರೆ ಹೃದಯ ಯಾವತ್ತೂ ಕಪಟಿಯಲ್ಲ, ಇದು ಸದಾ ಸರಳವಾಗಿರುವಂಥದು. ಸರಳವಾಗಿರುವುದೆಂದರೆ ಬುದ್ಧಿಯಿಂದ ಮನಸ್ಸಿನ ಕಡೆಗೆ ಸಾಗುವುದು.
ನಾವು ಬದುಕುವುದು ಬುದ್ಧಿಯ ಮೇಲೆ ಅವಲಂಬಿತವಾಗಿ. ಆದ್ದರಿಂದಲೇ ನಮ್ಮ ಬದುಕು ಹೆಚ್ಚು ಹೆಚ್ಚು ಸಂಕೀರ್ಣ, ಹೆಚ್ಚು ಹೆಚ್ಚು jigsaw puzzle ನ ಹಾಗೆ : ಯಾವುದೂ ಸರಿಯಾಗಿ ಫಿಟ್ ಆಗುವುದಿಲ್ಲ. ನಾವು ಹೆಚ್ಚು ಜಾಣರಾಗಲು ಪ್ರಯತ್ನ ಮಾಡಿದಂತೆಲ್ಲ ಹೆಚ್ಚು ಹೆಚ್ಚು ಸಂದಿಗ್ಧ ಕ್ಕೆ ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ನಮ್ಮ ಇತಿಹಾಸ : ನಾವು ಹೆಚ್ಚು ಹೆಚ್ಚು ಮೂರ್ಖತನದತ್ತ ಸಾಗಿದ್ದೇವೆ. ಈಗ ಇಡೀ ಜಗತ್ತು ಒಂದು ಹುಚ್ಚರ ಸಂತೆಯಾಗಿದೆ. ಈಗ ಸಮಯ ಸನ್ನಿಹಿತವಾಗಿದೆ, ಮಾನವತೆ ಬಾಳಿ ಬದುಕಬೇಕಾದರೆ , ಒಂದು ಮಹಾ ಬದಲಾವಣೆ ಸಂಭವಿಸಬೇಕಾದರೆ : ನಾವು ಬುದ್ಧಿಯಿಂದ ಹೃದಯ ಕಡೆ ಸಾಗಬೇಕು. ಇಲ್ಲವಾದರೆ ಬುದ್ಧಿ ಆತ್ಮಹತ್ಯೆಗೆ ಮುಂದಾಗುತ್ತದೆ. ಬುದ್ಧಿ ಎಷ್ಟು ಸಂಕಟ, ಎಷ್ಟು boredom, ಎಷ್ಟು ಸಮಸ್ಯೆಗಳನ್ನು ಸೃಷ್ಟಿ ಮಾಡಿಕೊಂಡಿದೆಯೆಂದರೆ, ಅದಕ್ಕೆ ಈಗ ಆತ್ಮಹತ್ಯೆಯಯ ಹೊರತು ಬೇರೆ ದಾರಿ ಇಲ್ಲ. ಇಡೀ ಜಗತ್ತು ಆತ್ಮಹತ್ಯೆಗೆ ಸಿದ್ಧವಾಗುತ್ತಿದೆ. ಏನಾದರೂ ಪವಾಡ ಸಂಭವಿಸದಿದ್ದರೆ, ಜಾಗತಿಕ ಆತ್ಮಹತ್ಯೆ ಖಚಿತ.
ಈ ಆತ್ಮಹತ್ಯೆ ತಪ್ಪ ಬೇಕಾದರೆ ಪವಾಡ ನಡೆಯಲೇ ಬೇಕು, ನಮ್ಮ ದೃಷ್ಟಿಕೋನದಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯವಾಗಬೇಕು, ನಾವು ಹೃದಯದ ಮೇಲೆ ಅವಲಂಬಿತರಾಗಿ ಬದುಕುವುದು ಶುರುವಾಗಬೇಕು. ಬುದ್ಧಿಯ ಜಗತ್ತನ್ನು ನಿರಾಕರಿಸಿ, ಮತ್ತೆ ನಾವು ಚಿಕ್ಕ ಮಕ್ಕಳಂತೆ ಹೊಸದಾಗಿ ಶುರು ಮಾಡಬೇಕು. ಹೃದಯದ ಮೂಲಕ ಬದುಕುವುದು ಶುರುವಾಗಬೇಕು. ತಲೆಯನ್ನು ಕಡಿಮೆ ಉಪಯೋಗಿಸಿ, ಹೃದಯವನ್ನು ಹೆಚ್ಚು ಬಳಸಿ, ತರ್ಕಗಳಿಗಿಂತ ಸಂವೇದನೆಗಳಿಗೆ ಹೆಚ್ಚು ಮಹತ್ವ ಕೊಡಿ. ಹೆಚ್ಚು ಹೆಚ್ಚು ಹೃದಯಪೂರ್ವಕವಾಗಿ ಬದುಕಿದಾಗ, ಬದುಕು ಹೆಚ್ಚು ಹೆಚ್ಚು ಆನಂದಮಯವಾಗುತ್ತದೆ.
ಝೆನ್ ಮಾಸ್ಟರ್ Ryokan ಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳೊಡನೆ ಎಷ್ಟು ಒಂದಾಗಿದ್ದನೆಂದರೆ ತಾನೇ ಸ್ವತಃ ಮಗುವಾಗಿಬಿಟ್ಟಿದ್ದ. ಅವ ಜೀಸಸ್ ಹೇಳುವ ಮಗುವಿನಂಥ ಮನುಷ್ಯ. Ryokan , ಮನುಷ್ಯರು ಇಷ್ಟು ಮುಗ್ಧರಾಗಿರಬಲ್ಲರು ಎಂಬುದನ್ನ ನಂಬಲು ಸಾಧ್ಯವಾಗದಷ್ಟು ಮುಗ್ಧ ಮನುಷ್ಯ. ಅವನೊಳಗೆ ಒಂದಿನಿತೂ ಕಪಟ, ಒಂದಿಷ್ಟೂ ಜಾಣತನವಿರಲಿಲ್ಲ. ಅವನನ್ನು ಪುಟ್ಟ ಹುಚ್ಚ ಎಂದೇ ಸುತ್ತಲಿನ ಜನ ಗುರುತಿಸುತ್ತಿದ್ದರು.
ಮಕ್ಕಳೊಡನೆ ಆಟ ಆಡುವುದು Ryokan ನ ಅತ್ಯಂತ ಪ್ರೀತಿಯ ಹವ್ಯಾಸಗಳ್ಳಲ್ಲೊಂದು. ಒಂದು ದಿನ Ryokan ಮಕ್ಕಳೊಡನೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದ. ಅಂದು ಅವನದು ಅಡಗಿಕೊಳ್ಳುವ ಪಾಳಿ. Ryokan ಓಡಿ ಹೋಗಿ ಹೊಲದಲ್ಲಿನ ಹುಲ್ಲಿನ ಬಣಿವೆಯೊಳಗೆ ಯಾರಿಗೂ ಕಾಣದಂತೆ ಬಚ್ಚಿಟ್ಟುಕೊಂಡ. ಮಕ್ಕಳು ಹುಡುಕಿ ಹುಡುಕಿ ಸುಸ್ತಾದರು, ಕತ್ತಲಾಗುತ್ತ ಬಂದದ್ದರಿಂದ ಮಕ್ಕಳೆಲ್ಲ ತಮ್ಮ ತಮ್ಮ ಮನೆಗೆ ಹೋಗಿಬಿಟ್ಟರು. ಆದರೆ ಇದ್ಯಾವುದೂ ಗೊತ್ತಿರದ Ryokan ಹುಲ್ಲಿನ ಬಣಿವೆಯೊಳಗೆ ಬಚ್ಚಿಟ್ಟುಕೊಂಡು ಆಟ ಮುಂದುವರೆಸಿದ್ದ. ಮರುದಿನ ಮುಂಜಾನೆ ಹೊಲದ ಕೆಲಸಕ್ಕೆ ಬಂದ ರೈತ, ಬಣಿವೆಯಲ್ಲಿ ಅಡಗಿಕೊಂಡು ಕುಳಿತಿದ್ದ Ryokan ನನ್ನು ಗಮನಿಸಿ ಜೋರಾಗಿ ಕೂಗಿದ,
“ ಮಾಸ್ಟರ್ Ryokan ಇಲ್ಲೇನು ಮಾಡುತ್ತಿದ್ದೀಯ ? “
Ryokan ಓಡಿ ಬಂದು ರೈತನ ಬಾಯಿ ಮುಚ್ಚಿದ,
“ ಮೆತ್ತಗೆ ಮಾತಾಡು ಮಕ್ಕಳು ಕೇಳಿಸಿಕೊಂಡುಬಿಟ್ಟಾರು. ಈ ಸಲ ನಾನು ಗೆಲ್ಲುವುದು ಖಚಿತ. ಮಕ್ಕಳೊಡನೆ ಬೆಟ್ಸ್ ಕಟ್ಟಿದ್ದೇನೆ. “
ಇಡೀ ರಾತ್ರಿ ಆಟ ಬಿಟ್ಟುಹೋದ ಮಕ್ಕಳಿಗಾಗಿ ಹುಲ್ಲಿನ ಬಣಿವೆಯಲ್ಲಿ ಕಾಯುತ್ತಿದ್ದ ಮಾಸ್ಟರ್ Ryokan. ಇಂಥ ಮುಗ್ಧತೆ ಝೆನ್. ಇಂಥ ಮುಗ್ಧತೆ ದಿವ್ಯವಾದದ್ದು, ಇದಕ್ಕೆ ಒಳ್ಳೆಯದು ಕೆಟ್ಟದ್ದು ಎನ್ನುವ ಭೇದಭಾವವಿಲ್ಲ. ಈ ಜಗತ್ತು ಆ ಜಗತ್ತು ಎನ್ನುವ ತಾರತಮ್ಯವಿಲ್ಲ. ಇಂಥ ಮುಗ್ಧತೆಯೇ ಜಗತ್ತನ್ನು ಕಾಯುವ ಸಾಚಾತನ. ಮತ್ತು ಇಂಥ ಸಾಚಾತನವೇ ಧರ್ಮದ ಮೂಲ ತಿರುಳು.

