ಹೆಣ್ಣೆಂಬ ಭಾವ ತೋರುವ ಮುನ್ನ । ಅಕ್ಕ ಮಹಾದೇವಿ #10

ಈ ವಚನದಲ್ಲಿ ಬಳಕೆಯಾಗಿರುವ ಯೌವನ ʻಬಾರದʼ, ನಾಚಿಕೆ ʻತೋರದʼ, ಹೆಂಗಸು ಎಂಬ ಭಾವ ಕಾಣಿಸದ ಮುನ್ನ ಅನ್ನುವ ಮಾತುಗಳನ್ನೇ ಗಮನಿಸಿದರೆ ಗಂಡು-ಹೆಣ್ಣೆಂಬ ಖಚಿತ ವಿಂಗಡಣೆ ʻಕಲ್ಪಿತʼ ಅನ್ನಿಸುವಂತೆ ಇದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಉರಕ್ಕೆ ಜವ್ವನಗಳು ಬಾರದ ಮುನ್ನ
ಮನಕ್ಕೆ ನಾಚಿಕೆಗಳು ತೋರದ ಮುನ್ನ
ನಮ್ಮವರಂದೆ ಮದುವೆಯ ಮಾಡಿದರು
ಹೆಂಗೂಸೆಂಬ ಭಾವ ತೋರದ ಮುನ್ನ ನಮ್ಮವರಂದೆ ಮದುವೆಯ ಮಾಡಿದರು
ಸಿರಿಶೈಲ ಚೆನ್ನಮಲ್ಲಿಕಾರ್ಜುನಂಗೆ [೮೪]

[ಉರ=ಎದೆ; ಜವ್ವನ=ಯೌವನ; ಸಿರಿಶೈಲ=ಶ್ರೀಶೈಲ]

ಎದೆಯ ಮೇಲೆ ಯೌವನದ ಚಿಹ್ನೆ ಬರುವ ಮೊದಲು, ಮನಸಿನಲ್ಲಿ ಯಾವುದೇ ಥರದ ನಾಚಿಕೆ ತೋರುವ ಮೊದಲು, ನಾನು ಹೆಂಗಸು ಅನ್ನುವ ಭಾವ ಕಾಣುವ ಮೊದಲು ನಮ್ಮವರು ಶ್ರೀಶೈಲ ಚೆನ್ನಮಲ್ಲಿಕಾರ್ಜುನನಿಗೆ ಕೊಟ್ಟು ಮದುವೆಯ ಮಾಡಿದರು.

ದೇಹ, ಮನಸು, ಭಾವಗಳಲ್ಲಿ ಹೆಣ್ಣುತನ ಮೂಡುತ್ತದೆ; ಹುಟ್ಟಿ ಬೆಳೆದ ವಾತಾವರಣ, ಬಳಸುವ ಭಾಷೆ, ಮನೆತನದ ಆಚರಣೆ ಎಲ್ಲ ಸೇರಿ ಮಗು ಬೆಳೆದ ಹಾಗೆ ತಾನು ಹೆಣ್ಣು ಅಥವಾ ಗಂಡು ಅನ್ನುವ ಕುರುಹು, ನಾಚಿಕೆ, ಅಹಂಕಾರ, ಭಾವನೆ ಎಲ್ಲ ದೃಢವಾಗುತ್ತ ಹೋಗುತ್ತವೆ. ಈ ವಚನದಲ್ಲಿ ಬಳಕೆಯಾಗಿರುವ ಯೌವನ ʻಬಾರದʼ, ನಾಚಿಕೆ ʻತೋರದʼ, ಹೆಂಗಸು ಎಂಬ ಭಾವ ಕಾಣಿಸದ ಮುನ್ನ ಅನ್ನುವ ಮಾತುಗಳನ್ನೇ ಗಮನಿಸಿದರೆ ಗಂಡು-ಹೆಣ್ಣೆಂಬ ಖಚಿತ ವಿಂಗಡಣೆ ʻಕಲ್ಪಿತʼ ಅನ್ನಿಸುವಂತೆ ಇದೆ. ಆ ವಯಸಿನಲ್ಲೇ ನನ್ನನ್ನು ಚೆನ್ನಮಲ್ಲಿಕಾರ್ಜುನನಿಗೆ ಒಪ್ಪಿಸಿದರು ಅನ್ನುವಾಗ ಅಕ್ಕನ ಮನಸ್ಥಿತಿ ಎಂಥದಿರಬಹುದು? ʻಹೆಣ್ಣುʼಭಾವ ಮೂಡಿದ ಮೇಲೆ ಚೆನ್ನಮಲ್ಲಿಕಾರ್ಜುನನನ್ನು ಎಷ್ಟು ಹಂಬಲಿಸಿದರೂ ದೊರೆಯನೆಂಬ ಕೊರಗು ಕೂಡ ಅಕ್ಕನ ವಚನದಲ್ಲಿ ಮುಖ್ಯ. ಹಾಗೇ ಮುಗ್ಧ ಬಾಲ್ಯದಲ್ಲಿ ಒಪ್ಪಿದ ನಿಷ್ಠೆ ಮುಗ್ಧತೆಯ ಕಾರಣಕ್ಕೇ ತೀವ್ರವಾದ ನಂಬಿಕೆ, ಶ್ರದ್ಧೆಗಳಾಗಿ ಬೆಳೆದವು ಅನಿಸಲೂ ಬಹುದು. ಯಾಕೆಂದರೆ ಲೌಕಿಕದ ಸಂಸಾರ, ಆಧ್ಯಾತ್ಮಿಕ ಅಪೇಕ್ಷೆಗಳೆಂಬ ಎರಡೂ ಫಲಗಳನ್ನು ಕೈಯಲ್ಲಿ ಹಿಡಿಯುವ ಕಷ್ಟದ ಬಗ್ಗೆ ಆಕೆ ಹೇಳುವುದುಂಟು. ಲೋಕದ ಗಂಡರನ್ನು ತಿರಸ್ಕರಿಸುವ ದಿಟ್ಟತನವನ್ನು ತೋರುವುದೂ ಉಂಟು. ದೇವರಿಗೆ ಅರ್ಪಣೆಗೊಳ್ಳುವ, ದೇವರನ್ನೇ ತನ್ನವನೆಂದು ಭಾವಿಸಿ ತೊಳಲುವ ಮನಸಿನ ಮಾತುಗಳೇ ಆಕೆಯ ವಚನದ ಮುಖ್ಯ ಧ್ವನಿಗಳಲ್ಲಿ ಒಂದು ಅನ್ನಿಸುತ್ತದೆ. ಅವಳ ಅಂಥದೊಂದು ವಚನ ʻಉಳ್ಳುದೊಂದು ತನುʼ ಎಂದು ಶುರುವಾಗುತ್ತದೆ.ಅದರ ವಿವೇಚನೆ ಪ್ರತ್ಯೇಕವಾಗಿ ಬಂದಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.