ಬಿಡದ ಬಾಳುವೆಗೆ ಕೊಟ್ಟರೆನ್ನ… । ಅಕ್ಕ ಮಹಾದೇವಿ #11

ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ಸಂಬಂಧ ಅಸಾಧ್ಯವಾದದ್ದು ಅನ್ನುವುದನ್ನು ವಿವರಿಸಲು ಅಸಾಧ್ಯವಾದ ಹೋಲಿಕೆಗಳೇ ಈ ವಚನದಲ್ಲಿ ಬಂದಿವೆ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಜಲದ ಮಂಟಪದ ಮೇಲೆ ಉರಿಯ ಚಪ್ಪರವನಿಕ್ಕಿ
ಆಲಿಕಲ್ಲ ಹಸೆಯ ಹಾಸಿ ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ
ತಲೆಯಿಲ್ಲದ ಗಂಡ ಬಂದು ಮದುವೆಯಾದನು.
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ.
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆನ್ನ ಮದುವೆಯ ಮಾಡಿದರೆಲೆ ಅವ್ವಾ [೨೧೪]

ನೀರಿನ ಮಂಟಪ, ಉರಿ ಬೆಂಕಿಯ ಚಪ್ಪರ, ಆಲಿಕಲ್ಲಿನ ಹಸೆಯನ್ನು ಸಜ್ಜು ಮಾಡಿ, ಕಾಲಿಲ್ಲದ ಹೆಂಡತಿಯೊಡನೆ ತಲೆಯಿಲ್ಲದ ಗಂಡನ ಮದುವೆ ನಡೆಯಿತು. ಎಂದೂ ಬಿಡಲಾಗದ ಬಾಳುವೆಗೆ ನನ್ನನ್ನು ಕೊಟ್ಟರು. ನನ್ನ ಮದುವೆ ಮಾಡಿಕೊಟ್ಟದ್ದು ಚೆನ್ನಮಲ್ಲಿಕಾರ್ಜುನ ಅನ್ನುವ ಗಂಡನಿಗೆ.

ತನ್ನ ಮತ್ತು ಚೆನ್ನಮಲ್ಲಿಕಾರ್ಜುನನ ಸಂಬಂಧ ಅಸಾಧ್ಯವಾದದ್ದು ಅನ್ನುವುದನ್ನು ವಿವರಿಸಲು ಅಸಾಧ್ಯವಾದ ಹೋಲಿಕೆಗಳೇ ಈ ವಚನದಲ್ಲಿ ಬಂದಿವೆ. ತಾನು ಕಾಲಿಲ್ಲದವಳು, ತನ್ನನ್ನು ವರಿಸಿದವನು ತಲೆ ಇಲ್ಲದವನು, ಎಂದೂ ಬಿಡಲಾಗದ ಬಾಳುವೆಗೆ ತನ್ನನ್ನು ಒಳಪಡಿಸಿದರು ಅನ್ನುತ್ತಾಳೆ. ದೇವರು ಅದು ಇಷ್ಟದೈವವೇ ಆದರೂ ಅದರೊಡನೆ ಬೆಳೆಯುವ ʻಸಂಬಂಧʼ ವಾಸ್ತವದ ನೆಲೆಗಟ್ಟಿನದು ಅಲ್ಲವೇ ಅಲ್ಲ. ಭಾವಗಳು ಮಾನುಷವಾದರೂ ಸಂಬಂಧ ಮಾತ್ರ ವಾಸ್ತವವಲ್ಲ. ಹಾಗಾಗಿ ಈ ಆದರ್ಶದ ಮದುವೆ ಚಡಪಡಿಕೆಯನ್ನು, ಪೂರ್ಣತೆಯ ಹಂಬಲವನ್ನು ಮತ್ತಷ್ಟು ಹೆಚ್ಚು ಮಾಡುವುದೇ ಆಗುತ್ತದೆ.

ಈ ವಚನದಲ್ಲಿ ಬರುವ ನೀರು, ಉರಿ, ಆಲಿಕಲ್ಲು ಇವನ್ನು ಬೆಡಗಿನ ಪದಗಳೆಂದು ಅರ್ಥ ಹೇಳುವುದುಂಟು. ಅಂಥ ವಿವರಣೆಯನ್ನು ಗಮನಿಸದೆಯೂ ವಚನವನ್ನು ತಿಳಿಯಲು ಪ್ರಯತ್ನಿಸಬಹುದು. ಇಲ್ಲಿ ಕಾಣುವ ಒಂದಕ್ಕೊಂದು ವಿರುದ್ಧವಾದ ಸಂಗತಿಗಳ ಮೇಳ ವಾಸ್ತವಕ್ಕೆ ವಾಸ್ತವಕ್ಕೆ ದೂರವೋ ಮನುಷ್ಯ-ಇಷ್ಟ ದೈವದ ಸಂಬಂಧವೂ  ಅಷ್ಟೇ ʻವಾಸ್ತವʼ ದೂರ; ಅಥವಾ ಅದು ನಾವು ಖಚಿತವೆಂದು ಒಪ್ಪಿ ವ್ಯವಹರಿಸುವ ವಿರೋಧಗಳನ್ನು ಇಲ್ಲವಾಗಿಸಿದ ಸಂಬಂಧ ಅನ್ನುವುದನ್ನು ಈ ವಚನ ಸೂಚಿಸುತ್ತದೆ. ಮನುಷ್ಯ ಸಂಬಂಧಗಳಿಗೆ ಇರುವ ಕಟ್ಟುಪಾಡುಗಳಿಲ್ಲದ ಸಂಬಂಧ ಅದು. ಆ ಸಂಬಂಧಕ್ಕೆ ಒಮ್ಮೆ ಒಳಗಾದರೆ ಕಟ್ಟುಪಾಡುಗಳ ಸಂಬಂಧ ಅರ್ಥವಿಲ್ಲದ್ದು ಅನಿಸೀತು. ಅಕ್ಕನ ಈ ವಚನಕ್ಕೆ ನಿಗದಿಯಾದ ಅರ್ಥವನ್ನು ಒಪ್ಪದೆ ಸುಮ್ಮನೆ ನೆನೆಯುತ್ತಿದ್ದರೆ ನಮ್ಮ ಮನಸಿನಲ್ಲೂ ವಿವಿಧ ಸಂಭವನೀಯ ಅರ್ಥಗಳು ರೂಪುಗೊಳ್ಳುತ್ತ ಕರಗುತ್ತ ಮತ್ತೇನೋ ಆಗುವುದು ಹೊಳೆಯುತ್ತದೆ.

ಅಕ್ಕಮಹದೇವಿಗೆ ಮದುವೆಯಾಗಿತ್ತು, ಆಗಿರಲಿಲ್ಲ, ಆಕೆ ಹುಟ್ಟಿನಿಂದ ಮಹಾ ವಿರಕ್ತಳು ಎಂಬ ಮೂರು ನಿರೂಪಣೆಗಳಿವೆ. ಪಚ್ಚೆಯ ನೆಲೆಗಟ್ಟು, ಕನಕದ ತೋರಣ, ವಜ್ರದ ಕಂಬ, ಎಂದು ಆರಂಭವಾಗುವ ಅಕ್ಕನ ವಚನ [೨೭೬]  ಆಕೆಯನ್ನು ಕೌಶಿಕನೆಂಬ ಹೆಸರಿನ ಅರಸ ಅಥವಾ ಊರಿನ ಮುಖ್ಯಸ್ಥ ಬಲವಂತದಿಂದ ಮದುವೆಯಾದ ಎಂಬ ನಿರೂಪಣೆಗೆ ಸಮರ್ಥನೆ ಒದಗಿಸುವ ಹಾಗೆ ಕಾಣುತ್ತದೆ. ಗುರುವೆ ತೆತ್ತಿಗನು  ಎಂದು ಆರಂಭವಾಗುವ ವಚನ [೨೦೨] ಮತ್ತು ಗುರುವೆ ತೆತ್ತಿಗನಾದ [೨೦೩] ಎಂದು ಆರಂಭವಾಗುವ ಇನ್ನೆರಡು  ಎರಡು ವಚನಗಳು ಅಕ್ಕ ಮತ್ತು ಚೆನ್ನಮಲ್ಲಿಕಾರ್ಜುನನ ಮದುವೆಯನ್ನು ಧಾರ್ಮಿಕ ಸಂಕೇತವೆಂಬಂತೆ ನಿರೂಪಿಸುತ್ತವೆ. ಈ ಮೂರೂ ವಚನಗಳು ಅಕ್ಕನನ್ನು ಕುರಿತ ಮೂರು ದೃಷ್ಟಿಗಳ  ಉದಾಹರಣೆಯಾಗಿ ಕಾಣುತ್ತವೆ. ಚಾರಿತ್ರಿಕ ಸತ್ಯವನ್ನು ವಚನಗಳ ಆಧಾರದ ಮೇಲೆ ಹೇಳುವುದು ಕಷ್ಟ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.