ಸಂಬಂಧಗಳು ತನ್ನಿಂದ ತಾನೇ ಶೂನ್ಯದಲ್ಲಿ ಹುಟ್ಟಿಕೊಳ್ಳುವುದಿಲ್ಲ, ಅದರ ಹುಟ್ಟಿಗೆ ನಿಮ್ಮ ಸಹಾಯ ಅವಶ್ಯಕ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ಹಕ್ಕಿಗಳ ಅತ್ಯಂತ ಇಷ್ಟದ ಹಾಡುಗಳನ್ನ
ನೀವು ಯಾವತ್ತೂ ಕೇಳಿರಲಾರಿರಿ.
ಹಕ್ಕಿಗಳ ಎದೆಯಾಳದ ಹಾಡು
ಕೇವಲ ಅಕಾಶದಲ್ಲಿ ನಿರಾಳವಾಗಿ ರೆಕ್ಕೆ ಬಿಚ್ಚಿದಾಗ,
ಬಿಡುಗಡೆಯ ಆಫೀಮು
ಒಳಕ್ಕಿಳಿದಾಗ ಮಾತ್ರ.
ಕೈದಿಗಳಿಗಂತೂ ಇರಲೇಬೇಕು
ಈ ಒಂದು ನಂಬಿಕೆ;
ಒಂದಿಲ್ಲೊಂದು ದಿನ ನಾವೂ
ನಮ್ಮ ಇಷ್ಟದ ಜಾಗ ತಲುಪುತ್ತೇವೆ,
ಬದುಕಿನ ನಿಯಮಾತೀತ
ಅದ್ಭುತ ಹತೋಟಿಗೆ ಎದುರಾಗುತ್ತೇವೆ,
ಎಲ್ಲ ಗಾಯ, ಬಾಕಿಗಳಿಂದ
ಮುಕ್ತರಾಗುತ್ತೇವೆ.
ಒಮ್ಮೆ ಹಕ್ಕಿಯನ್ನು ನಿಲ್ಲಿಸಿ ಮಾತನಾಡಿಸಿದೆ.
ಈ ಕತ್ತಲ ಗುರುತ್ವದಿಂದ ಪಾರಾಗಿ
ಹೇಗೆ ಹಾರುತ್ತೀ ನೀನು ?
ಹಕ್ಕಿ ನಕ್ಕು ಹೇಳಿತು ;
ಪ್ರೇಮ, ನನ್ನ ಎತ್ತರಕ್ಕೇರಿಸುತ್ತದೆ .
-ಹಾಫಿಜ್
ಸಂಬಂಧಗಳಲ್ಲಿ, ನೀವು ಇನ್ನೊಬ್ಬರ ಮೇಲೆ ಎಲ್ಲ ಜವಾಬ್ದಾರಿಯನ್ನು ಹಾಕಿ ಬಿಡಬಹುದು : ನಿಮ್ಮ ಹತ್ತಿರ ಯಾರೂ ಬರುತ್ತಿಲ್ಲ, ನೀವು ಕಾಳಜಿ ಮಾಡುವಷ್ಟು ಯಾರೂ ಯೋಗ್ಯರಲ್ಲ, ಅಥವಾ ನಿಮಗೆ ಇನ್ನೊಬ್ಬರ ಬಗ್ಗೆ ಯಾವ ಭಾವನೆಗಳಿಲ್ಲ, ಇತ್ಯಾದಿಯಾಗಿ. ಆಗ ನೀವು ಮಾಡಬಹುದಾದರೂ ಏನು? ಆದರೆ ಇವುಗಳ ನಡುವೆ ಆಳವಾದ ಸಂಬಂಧವಿದೆ. ನೀವು ಮುಂದುವರೆದಾಗ, ಫೀಲ್ ಮಾಡಿಕೊಳ್ಳಲು ಶುರು ಮಾಡುತ್ತೀರಿ. ಇನ್ನೊಬ್ಬರ ಬಗ್ಗೆ ನಿಮ್ಮಲ್ಲಿ ಫೀಲಿಂಗಳಿದ್ದಾಗ, ನೀವು ಹೆಚ್ಚು ಮುಂದುವರೆಯುತ್ತೀರಿ. ಈ ಸಂಗತಿಗಳು ಪರಸ್ಪರ ಪೂರಕವಾಗಿ ಕೆಲಸ ಮಾಡುತ್ತವೆ, ಮತ್ತು ಯಾರಾದರೊಬ್ಬರು ಮೊದಲ ಹೆಜ್ಜೆ ಇಡಲೇ ಬೇಕು.
ಈ ಜಗತ್ತಿನಲ್ಲಿ ಎಷ್ಟೋ ಅತ್ಯುತ್ತಮ ಜನರು ಲಭ್ಯರಿದ್ದಾರೆ. ಪ್ರತಿಯೊಬ್ಬರೂ ಪ್ರೀತಿಯನ್ನು ಬಯಸುತ್ತಿದ್ದಾರೆ, ಪ್ರೀತಿಗಾಗಿ ಹುಡುಕಾಡುತ್ತಿದ್ದಾರೆ. ಅವರಿಗೆ ಲಭ್ಯವಾಗಿರಿ. ಸ್ವಲ್ಪ ನೀವೇ ಮೈಚಳಿ ಬಿಟ್ಟು ಅವರನ್ನು ಸಂಪರ್ಕಿಸಿ, ಅವರಿಗೆ ಲಭ್ಯವಾಗಿರಿ : ಇಲ್ಲವಾದರೆ ಪ್ರೀತಿ ಸಂಭವವಿಲ್ಲ.
ಧ್ಯಾನಕ್ಕೆ ಆಳವಾದ ಪ್ರೀತಿ ಅತ್ಯಂತ ಅವಶ್ಯಕ. ಈ ಎರಡೂ, ಹಕ್ಕಿಯ ಎರಡು ರೆಕ್ಕೆಗಳಿದ್ದಂತೆ, ಮತ್ತು ಕೇವಲ ಒಂದು ರೆಕ್ಕೆಯಿಂದ ಹಾರುವುದು ಸಾಧ್ಯವಾಗುವುದಿಲ್ಲ. ಒಂದು ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವಾಗ ಇನ್ನೊಂದು ಸುಮ್ಮನೇ ಲಭ್ಯವಾಗಿರಬೇಕಾಗುತ್ತದೆ. ಯಾವುದೂ ಕೆಲಸ ಮಾಡದೇ ಇರುವಾಗ, ದುಃಖ, ದುಗುಡಗಳಿಗೆ ಸೆಟಲ್ ಆಗಬೇಕಾಗುತ್ತದೆ. ಇನ್ನೊಂದು ಅಲಭ್ಯವಾಗಿರುವಾಗ ಒಂದೇ ರೆಕ್ಕೆಯಿಂದ ಹಾರಾಟ ಸಾಧ್ಯವಾಗುವುದಿಲ್ಲ.
ಚೈನಾ ದೇಶದಲ್ಲಿ ಒಬ್ಬ ಮುದುಕಿಯಿದ್ದಳು. ಸುಮಾರು ಇಪ್ಪತ್ತು ವರ್ಷಗಳಿಂದ ಆಕೆ ಸನ್ಯಾಸಿಯೊಬ್ಬನ ಯೋಗಕ್ಶೇಮ ನೋಡಿಕೊಳ್ಳುತ್ತಿದ್ದಳು. ಅವನಿಗಾಗಿ ಒಂದು ಗುಡಿಸಲು ಕಟ್ಚಿಸಿ ಕೊಟ್ಟಿದ್ದಳು. ಅವನು ಧ್ಯಾನ ಮಾಡುವಾಗ ಅವನ ಸಕಲ ಬೇಕು ಬೇಡಗಳ ಬಗ್ಗೆ ನಿಗಾ ವಹಿಸುತ್ತಿದ್ದಳು.
ಹೀಗಿರುವಾಗ ಮುದುಕಿಗೆ ಸನ್ಯಾಸಿಯನ್ನು ಅವನ ಧ್ಯಾನ, ಅಧ್ಯಾತ್ಮದ ವಿಷಯವಾಗಿ ಪರೀಕ್ಷಿಸುವ ಮನಸ್ಸಾಯಿತು. ಆಕೆ ಒಬ್ಬ ಸುಂದರ ಯುವತಿಯನ್ನು ಕರೆಸಿ, ಸನ್ಯಾಸಿಯನ್ನು ಅಪ್ಪಿಕೊಂಡು, ಉತ್ತೇಜಿಸುವಂತೆ ಮನವಿ ಮಾಡಿದಳು.
ಯುವತಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಅವನನನ್ನು ಅಪ್ಪಿಕೊಂಡು “ ಮುಂದೇನು “ ಎಂದು ಕೇಳಿದಳು.
“ ಚಳಿಗಾಲದ ಕೊರೆಯುವ ಬಂಡೆಯ ಮೇಲೆ, ಹಳೆಯ ಮರವೊಂದು ಮತ್ತೆ ಚಿಗಿತು ಕೊಳ್ಳುತ್ತದೆ. ಎಲ್ಲೂ ಅನ್ಯೋನ್ಯತೆಗೆ ಜಾಗವಿಲ್ಲ”
ಸನ್ಯಾಸಿ ಕಾವ್ಯಮಯವಾಗಿ ಉತ್ತರಿಸಿದ.
ಯುವತಿ ನಡೆದ ಸಂಗತಿಯನ್ನೆಲ್ಲ ಮುದುಕಿಗೆ ವಿವರಿಸಿದಳು. ಮುದುಕಿಗೆ ಭಯಂಕರ ಸಿಟ್ಟು ಬಂತು. “ ನಿನ್ನ ಬಯಕೆಗಳ ಬಗ್ಗೆ, ಅಗತ್ಯದ ಬಗ್ಗೆ ಅವನು ವಿಚಾರ ಮಾಡಲಿಲ್ಲ, ನಿನ್ನ ಸ್ಥಿತಿಯ ಬಗ್ಗೆ ಕಾರಣ ಕೇಳಲಿಲ್ಲ. ಅವನು ನಿನ್ನ ಉತ್ತೇಜನಕ್ಕೆ ಪ್ರತಿಕ್ರಿಯಿಸಬೇಕಿರಲಿಲ್ಲ ಆದರೆ ನಿನ್ನ ಬಗ್ಗೆ , ನಿನ್ನ ಸ್ಥಿತಿಯ ಬಗ್ಗೆ ಸಹಾನೂಭೂತಿಯಿಂದ ವರ್ತಿಸಬೇಕಿತ್ತು”
ಎನ್ನುತ್ತಾ ಮುದುಕಿ, ಸನ್ಯಾಸಿಯ ಗುಡಿಸಲಿಗೆ ಹೋಗಿ ಗುಡಿಸಲಿಗೆ ಬೆಂಕಿ ಹಚ್ಚಿಬಿಟ್ಟಳು.
********************************

