ನಿಮ್ಮಲ್ಲಿ ಸಿಲುಕಿದ ಬಳಿಕ… । : ಅಕ್ಕ ಮಹಾದೇವಿ #13

ವಚನ ಲೌಕಿಕ/ಪಾರಮಾರ್ಥಿಕ ಅನ್ನುವ ದ್ವಂದ್ವವನ್ನು ಒಪ್ಪಿದ ನುಡಿಯಂತೆ ತೋರುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಲೋಕದ ಚೇಷ್ಟೆಗೆ ರವಿ ಬೀಜವಾದಂತೆ,
ಕರಣಂಗಳ ಚೇಷ್ಟೆಗೆ ಮನವೇ ಬೀಜ.
ಎನಗುಳ್ಳುದೊಂದು ಮನ.
ಆ ಮನ ನಿಮ್ಮಲ್ಲಿ ಸಿಲುಕಿದ ಬಳಿಕ ಎನಗೆ ಭವವುಂಟೆ ಚೆನ್ನಮಲ್ಲಿಕಾರ್ಜುನಾ ? [೩೬೧]

[ಚೇಷ್ಟೆ=ಚಲನೆ, ವರ್ತನೆ; ಕರಣ=ದೇಹದ ಇಂದ್ರಿಯಗಳು;  ಭವ=ಲೋಕದ ವ್ಯವಹಾರ]

ಲೋಕ, ಅಂದರೆ ಕಣ್ಣಿಗೆ ಕಾಣುವ ಜಗತ್ತು ಏನಿದೆ ಅದರ ಎಲ್ಲ ವರ್ತನೆಗೆ, ಚಲನೆಗೆ ಸೂರ್ಯನೇ ಬೀಜ; ದೇಹ ಮನಸುಗಳ ವರ್ತನೆಗೆ ಮನಸ್ಸೇ ಬೀಜ. ನನಗೆ ಇರುವ ಒಂದು ಮನಸ್ಸು ನಿಮ್ಮಲ್ಲಿ ಸಿಲುಕಿದ ಮೇಲೆ ನನಗೆ ಈ ದೈನಿಕ  ವ್ಯವಹಾರಗಳ ಲೋಕದ ಹಂಗಿಲ್ಲ.

ಮನುಷ್ಯರ ಬಂಧನ, ಮೋಕ್ಷಗಳಿಗೆ ಮನಸ್ಸೇ ಕಾರಣ ಎಂಬ ಭಗವದ್ಗೀತೆಯ ಸಸುಪ್ರಸಿದ್ಧ ಮಾತು ನೆನಪಾಗುತ್ತದೆ. ಈ ವಚನ ಲೌಕಿಕ/ಪಾರಮಾರ್ಥಿಕ ಅನ್ನುವ ದ್ವಂದ್ವವನ್ನು ಒಪ್ಪಿದ ನುಡಿಯಂತೆ ತೋರುತ್ತದೆ. ಮನಸ್ಸು ನಿನ್ನನ್ನು ಒಪ್ಪಿದ ಮೇಲೆ ನನಗೆ ಭವ ಇರಲು ಸಾಧ್ಯವೇ ಅನ್ನುವ ಪ್ರಶ್ನೆಯಂತೆ ಕಾಣುವ ಮಾತಿನಲ್ಲಿ, ನನಗೆ ಭವವಿಲ್ಲ ಅನ್ನುವ ವಿಶ್ವಾಸ, ಸಂತೋಷಗಳೂ ಕಾಣುತ್ತವೆ. ವಚನಗಳನ್ನು ಓದುವಾಗ ಭವ ಮತ್ತು ಅದರೊಡನೆಯೇ ಬರುವ ಭವಿ ಇವು ಬಳಕೆಯಾಗಿರುವ ರೀತಿ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ. ತನುವ ನೋಯಿಸಿ, ಮನವ ಬಳಲಿಸಿ/ನಿಮ್ಮ ಪಾದವಿಡಿದವರೊಳರೆ/ ಈ ನುಡಿ ಸುಡದಿಹುದೆ
ಕೂಡಲಸಂಗಮದೇವಾ, (೪೦೭) ಎಂಬ ವಚನ ದೇಹ, ಮನಸುಗಳ ದಂಡನೆಯಿಂದ ಫಲವಿಲ್ಲ ಅನ್ನುವ ಅರ್ಥ ಹೊಮ್ಮಿಸಿದರೆ,

‘ತನು ಭಕ್ತನಾಯಿತ್ತು, ಎನ್ನ ಮನ ಭವಿ (೨೮೫) ಎಂಬ ಇನ್ನೊಂದು ಬಸವವಚನದಲ್ಲಿ, ʼಮನದ ಕಾಲತ್ತಲು, ತನುವಿನ ಕಾಲಿತ್ತಲುʼ ಎಂಬ ಅಲ್ಲಮ ವಚನದ ನುಡಿಗಳಲ್ಲಿ ಮೈಮನಸುಗಳ, ಭವ ಮತ್ತು ಭವವಲ್ಲದ್ದರ ದ್ವಂದ್ವದಲ್ಲಿ ಸಿಲುಕಿರುವ ಮಾತು ಕೇಳುತ್ತದೆ.ಭವಱಾಟಳ, ಭವರೋಗ, ಭವಸಾಗರ, ಭವ  ಭ್ರಮಣ, ಭವಬಾಧೆ, ಎಂಬಂಥ ಭವವನ್ನು ಒಲ್ಲೆವನ್ನುವ ನೂರಾರು ನುಡಿಗಳು ವಚನ ಸಮಗ್ರದಲ್ಲಿ ಕಾಣುತ್ತವೆ.  ಮಾಯದ ಸಡಗರ (ಬಸವ), ಕಾಯದ ಸಡಗರ (ಚನ್ನಬಸವ), ಕರಣಾದಿಗಳ ಸಡದಗರದ ಓಲಗ (ಅಲ್ಲಮ) ಇಂಥ ಮಾತುಗಳು ಭವದ ಬಗ್ಗೆ ಟೀಕೆಯೇ ಆಗುತ್ತವೆ. ದೇವರನ್ನು ಭವರೋಗವೈದ್ಯ, ಭವಹರ ಎಂದೆಲ್ಲ ಕರೆಯುವುದೂ ಇದೆ. ಭವ/ಸಂಸಾರ ಇವು ಅರ್ಥಹೀನ ಎಂಬುದೇ ವಚನಕಾರರ. ಭಕ್ತಿಸಾಹಿತ್ಯದ ಪ್ರಧಾನ ನಿಲುವೋ? ಅಥವ ಇಂತ ನುಡಿಗಳು ಆನಂತರದ ಸೇರ್ಪಡೆಗಳೋ? ಅಥವಾ ಬದುಕಿನ ಜಂಜಡದಿಂದ ಬೇಸತ್ತ ಮನುಷ್ಯರ ಮಾತೋ ಅನ್ನುವ ಪ್ರಶ್ನೆಗೆ ಉತ್ತರವಿಲ್ಲ. ಬಿಡುಗಡೆ ಕೇವಲ ವೈಯಕ್ತಿಕವಾಗಿ ಮಾತ್ರ ಸಾಧ್ಯ ಅನ್ನುವುದಾದರೆ ಹುಟ್ಟುವ ಪ್ರಶ್ನೆಗಳೂ ಬಹಳ ದೊಡ್ಡವೇ. ಅಕ್ಕ, ಬಸವ ಮಾತ್ರವಲ್ಲದೆ ಇತರ ಅನೇಕರೂ ಕಾಯ, ದೇಹ, ಜಾತಿ, ಇತ್ಯಾದಿಗಳ ಬಗ್ಗೆ ಹೇಳಿರುವ  ಮಾತನ್ನೂ ಈ ನಿಲುವನ್ನೂ ಹೊಂದಿಸಿಕೊಳ್ಳುವುದು ದೊಡ್ಡ ಸವಾಲೇ ಆಗುತ್ತದೆ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.