ಈ ವಚನದಲ್ಲಿ ಅಸಹಾಯಕತೆಯ ದನಿ ಕೇಳುತ್ತದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಆಲಿಸೆನ್ನ ಬಿನ್ನಪವ
ಲಾಲಿಸೆನ್ನ ಬಿನ್ನಪವ
ಪಾಲಿಸೆನ್ನ ಬಿನ್ನಪವ
ಏಕೆನ್ನ ಮೊರೆಯ ಕೇಳೆಯಯ್ಯಾ ತಂದೆ
ನೀನಲ್ಲದೆ ಮತ್ತಿಲ್ಲ ಮತ್ತಿಲ್ಲ
ನೀನೆ ಎನಗೆ ಗತಿ
ನೀನೆ ಎನಗೆ ಮತಿಯಯ್ಯಾ
ಚೆನ್ನಮಲ್ಲಿಕಾರ್ಜುನಯ್ಯಾ [೬೫]
[ಆಲಿಸು=ಕೇಳು; ಬಿನ್ನಪ=ಬಿನ್ನಹ, ಕೋರಿಕೆ]
ಈ ವಚನದಲ್ಲಿ ಅಸಹಾಯಕತೆಯ ದನಿ ಕೇಳುತ್ತದೆ. ನನ್ನ ಯಾಚನೆಯನ್ನು ಗಮವಿರಿಸಿ ಕೇಳು, ಕೋರಿಕೆಯನ್ನು ಪ್ರೀತಿಯಿಂದ ನೇವರಿಸು, ಅಪೇಕ್ಷೆ ಈಡೇರಿಸು. ನಾನು ಮೊರೆಯಿಟ್ಟರೂ ಯಾಕೆ ಕೇಳುತ್ತಿಲ್ಲ ತಂದೇ. ನೀನಲ್ಲದೆ ಬೇರೆ ಯಾರೂ ಇಲ್ಲ ಅನ್ನುವ ಯಾಚನೆಗೆ ಕಾರಣ ಮುಂದಿನ ವಚನದಲ್ಲಿ ಇರುವಂತಿದೆ.
ಮೊದಲ ಮೂರು ಸಾಲುಗಳಲ್ಲಿ ಮೊದಲಿಗೇ ಬರುವ ಕ್ರಿಯಾಪದಗಳು ಬೇಗ, ಬೇಗ ನನ್ನ ಮೊರೆಯನ್ನು ಕೇಳು ಅನ್ನುವ ಯಾಚನೆಯ ಒತ್ತಾಯದ ದನಿಗೆ ಇಂಬುಕೊಡುವಂತಿವೆ.ಬಿನ್ನಪ ಅನ್ನುವ ಮಾತು ಮತೆ ಮತ್ತೆ ಸಾಲಿನ ಕೊನೆಗೆ, ವಿರಾಮದ ಮುನ್ನ ಕೇಳುತ್ತಾ ನನ್ನ ಮಾತು ಬಿನ್ನಹವೇ ಹೊರತ್ತು ಆಗ್ರವಲ್ಲ ಎಂದು ಮನದಟ್ಟು ಮಾಡುವ ಪ್ರಯತ್ನದ ಹಾಗಿದೆ. ಆಮೇಲೆ ತಟ್ಟನೆ ಬರುವ ಏಕೆ ಅನ್ನುವ ಪ್ರಶ್ನೆ ಇಷ್ಟು ಬೇಡಿದರೂ ಯಾಕೆ ಕೇಳಿಸುತ್ತಿಲ್ಲ ನಿನಗೆ ಅನ್ನುವ ಕರುಣಾಜನಕ ಆಕ್ಷೇಪಣೆ ಅನಿಸುತ್ತದೆ. ಮುಂದಿನ ಮೂರು ಸಾಲುಗಳಲ್ಲಿ ನೀನು ಅನ್ನುವುದೇ ಮೊದಲಿಗೇ ಬಂದು ʼನಾನುʼ ಏನೂ ಅಲ್ಲ, ʻನೀನೇʼ ಎಲ್ಲಾ, ನಿನಗೆ ಶರಣಾದೆ ಅನ್ನುವ ದನಿಯನ್ನು ಹೊಮ್ಮಿಸುವಂತಿದೆ. ವಚನವನ್ನು ಹೀಗೆ ಜೋಡಿಸಿಕೊಂಡರೆ ಅದು ಹೇಳುವ ಭಾವಕ್ಕೂ ಕಣ್ಣಿಗೆ ಕಾಣುವ ರೂಪಕ್ಕೂ ಎಂಥ ಹೊಂದಾಣಿಕೆ ಇದೆ ಅನಿಸಿಬಿಡುತ್ತದೆ.
ʻತಂದೆ ನೀನು ತಾಯಿ ನೀನುʼ ಎಂದು ಆರಂಭವಾಗುವ ಬಸವವಚನ [೧.೪೮೧] ಬಹಳ ಮಟ್ಟಿಗೆ ಇದೇ ಪ್ರತಿಪಾದನೆಯನ್ನು ಮಾಡುತ್ತದೆ.

