ಹೆಣ್ಣು ಮೈಯನ್ನು ಬೆಲೆಕೊಟ್ಟು ಕೊಳ್ಳುವ ಗಂಡುಗಳು ಇರುವ ಹಾಗೇ ಮುನಿದು ಮಾರುವ ಗಂಡರೂ ಇದ್ದಾರೆ ಅನ್ನುವ ಸೂಚನೆ ಈ ವಚನದಲ್ಲಿದೆ. .. ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಕಾಯದ ನುಂಪನೊಬ್ಬ ಕಂಡು ಬಯಸಿದನು
ಅವಂಗೆ ಮಾಂಸವ ಬೆಲೆಮಾಡಿಕೊಡುವೆನು
ಎನ್ನ ಪ್ರಾಣದೊಡೆಯಂಗೆ ಎನ್ನ ಹೃದಯವ ಸೂರೆಗೊಡುವೆನು
ಚೆನ್ನಮಲ್ಲಿಕಾರ್ಜುನದೇವಯ್ಯನು ಮುನಿದು
ಭವಿಗೆ ಮಾರಿದಡೆ ಹೊಲಬುಗೆಡದಿರಾ ಮನವೆ [೧೬೬]
[ನುಂಪು=ನಯ, ನುಣುಪು; ಹೊಲಬುಗೆಡದಿರಾ=ದಾರಿ ತಪ್ಪದಿರು; ಭವಿ=ಭಕ್ತಿ ಇಲ್ಲದ, ಭವದ ಬದುಕಿನಲ್ಲೇ ಮಗ್ನನಾದ ವ್ಯಕ್ತಿ]
ನನ್ನ ಮೈಯ ನುಣುಪು, ನಯ ಕಂಡು ಒಬ್ಬನು ಬಯಸಿದ. ಅವನಿಗೆ ಮೈಯ ಮಾಂಸವನ್ನೆ ಬೆಲೆಗೆ ಕೊಡುತ್ತೇನೆ. ನನ್ನ ಹೃದಯವನ್ನು ಸೂರೆ ಮಾಡುವ ಅವಕಾಶ ಮಾತ್ರ ನನ್ನ ಉಸಿರಿನ ಒಡೆಯ ಚೆನ್ನಮಲ್ಲಿಕಾರ್ಜುನನಿಗೆ. ಅವನು ಏನಾದರೂ ನನ್ನ ಮೇಲೆ ಮುನಿದು ನನ್ನನ್ನು ಭವಿಗೆ ಮಾರಿದರೆ, ಮನಸ್ಸೇ, ನೀನು ಮಾತ್ರ ದಾರಿ ತಪ್ಪಬೇಡ.
ಈ ವಚನದ ಒಂದೊಂದೂ ವಾಕ್ಯದ ಅರ್ಥ ಸಂದಿಗ್ಧತೆಗೆ ಅವಕಾಶವಿರದಷ್ಟ ಸ್ಪಷ್ಟವಾಗಿದೆ. ಒಟ್ಟಾಗಿ ಇಲ್ಲಿನ ವಾಕ್ಯಗಳ ಅರ್ಥವನ್ನು ಕೂಡಿಸಿಕೊಂಡು ನೋಡುವಾಗ ಹಲವು ಪ್ರಶ್ನೆಗಳು ಹುಟ್ಟುತ್ತವೆ. ಹೆಣ್ಣು ಮೈಯನ್ನು ಬೆಲೆಕೊಟ್ಟು ಕೊಳ್ಳುವ ಗಂಡುಗಳು ಇರುವ ಹಾಗೇ ಮುನಿದು ಮಾರುವ ಗಂಡರೂ ಇದ್ದಾರೆ ಅನ್ನುವ ಸೂಚನೆ ಈ ವಚನದಲ್ಲಿದೆ. ಚೆನ್ನಮಲ್ಲಿಕಾರ್ಜುನ ದೇವ ಮುನಿದು “ಮಾರಿದಡೆ” ಅನ್ನುವ ಮಾತನ್ನು ನೋಡಿ. ದೇವರೂ ವ್ಯವಹಾರಿ ಅನ್ನುವ ಟೀಕೆ ಇದೆಯೋ? ದೇಹ ಮನಸುಗಳಲ್ಲಿ ಮನಸೇ ಮುಖ್ಯ. ನನ್ನ ಮನಸನ್ನು ಸೂರೆಗೊಟ್ಟಿರುವುದು ಚೆನ್ನಮಲ್ಲಿಕಾರ್ಜುನನಿಗೆ ಅನ್ನುವಾಗ ಸೂರೆ ಅನ್ನುವ ಯುದ್ಧ ಸಂಬಂಧೀ ಕ್ರಿಯಾ ಪದವನ್ನು ಬಳಸುವುದನ್ನು ನೋಡಿದರೆ ಯುದ್ಧದಲ್ಲಿ ಗೆದ್ದ ಸೈನ್ಯ ಸೋತ ಅರಸನ ಪಟ್ಟಣವನ್ನು ಸೂರೆ ಮಾಡಿದ ಹಾಗೆ ನನ್ನ ಮನಸನ್ನು ಚೆನ್ನಮಲ್ಲಿಕಾರ್ಜುನ ಸೂರೆ ಮಾಡಲು ಒಪ್ಪಿಸಿಕೊಂಡಿದ್ದೇನೆ ಅನ್ನುವ ಮಾತು ಒಪ್ಪಿಸಿಕೊಂಡ ವಿನಯದ ಸೂಚನೆಯೋ, ಚೆನ್ನಮಲ್ಲಿಕಾರ್ಜನನ ಸೂರೆಹೊಡೆಯವ ಪೌರುಷದ ಸೂಚನೆಯೋ? ಅದಕ್ಕಿಂತ ಮಿಗಿಲಾಗಿ ನನ್ನ ಉಸಿರನ್ನು ಸೂರೆಗೊಳ್ಳುವ ಒಡೆಯ ಹಾಗೆ ಮಾರಿದರೂ ನನ್ನ ಮನಸ್ಸು ಮಾತ್ರ ದಾರಿ ತಪ್ಪಬಾರದು ಅನ್ನುವ ಎಚ್ಚರಿಕೆ ಮನಸ್ಸನ್ನು ಒಪ್ಪಿಸಿದ ಹೆಣ್ಣು ತನ್ನ ಗಂಡಿಗೆ ಪೂರಾ ಶರಣಾಗುವುದು ತಪ್ಪಲ್ಲ ಅನ್ನುತ್ತಿದೆಯೋ? ಅಥವಾ ಶರಣಾಗತಿಯ ಉತ್ತುಂಗ ಭಾವ ಈ ವಚನದಲ್ಲಿದೆಯೋ?
ಇದರ ಹಿಂದಿನ ವಚನದಲ್ಲಿ ನನ್ನ ಬಿನ್ನಹವನ್ನು ಆಲಿಸು, ಲಾಲಿಸು, ಪಾಲಿಸು ಎಂದು ಮೊರೆಯಿಡುವ ಮಾತು ಬಂದಿತ್ತಲ್ಲ ಅದರ ಜೊತೆಗೆ ನೋಡಿದಾಗ ಈ ವಚನದಲ್ಲಿ ದೇವರಿಗೆ ಮನಸ್ಸನ್ನು ಒಪ್ಪಿಸಿಕೊಂಡ ಹೆಣ್ಣು ಮನಸಿನೊಡೆಯನ ಇಚ್ಛೆಗೆ ಪೂರ್ಣ ಶರಣಾದ ಸ್ಥಿತಿಯನ್ನು ಹೇಳುವಂತೆ ತೋರುತ್ತದೆ. ದೇಹದ ಸ್ಥಿತಿ ಏನೇ ಆಗಲಿ, ಮನಸನ್ನು ಚೆನ್ನಮಲ್ಲಿಕಾರ್ಜನನಿಗೆ ಸೂರೆಗೊಟ್ಟಮೇಲೆ ಅವನ ಇಚ್ಛೆಯಂತೆ ನಡೆದರೆ ಸಾಕು ಅನ್ನುವ ಭಾವ ವ್ಯಕ್ತವಾಗುವಂತೆ ತೋರುತ್ತದೆ.
ಅಕ್ಕಮಹಾದೇವಿಯ ಇಂಥ ವಚನಗಳು ಆಕೆಗೆ ಒಲ್ಲದ ಮದುವೆಯಾಗಿತ್ತು ಅನ್ನುವ ಕಥನಕ್ಕೆ ಪೂರಕವಾಗಿ ಒದಗಿ ಬಂದಿವೆ.

