ತಾನು ನವಿಲು, ಹಂಸ, ಕೋಗಿಲೆ; ನನಗೆ ತಕ್ಕ ಗಿರಿ, ಕೊಳ, ಮಾಮರ ಚೆನ್ನಮಲ್ಲಿಕಾರ್ಜುನ. ಮಿಕ್ಕದ್ದೆಲ್ಲ ಹುಲ್ಲಿನ ದಿಬ್ಬ, ಪುಟ್ಟ ಹಳ್ಳ, ಮಾಮೂಲು ಮರ. ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆ ಏನನನ್ನೂ ಮನಸ್ಸು ಬಯಸದು ಎಂದು ಗೆಳತಿಯರ ಹತ್ತಿರ ಹೇಳಿಕೊಳ್ಳುತ್ತಿರುವ ಮಾತು… । ~ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ
ಗಿರಿಯಲಲ್ಲದೆ
ಹುಲ್ಲುಮೊರಡಿಯಲ್ಲಾಡುವುದೆ ನವಿಲು
ಕೊಳಕ್ಕಲ್ಲದೆ
ಕಿರುವಳ್ಳಕ್ಕೆಳಸುವುದೆ ಹಂಸೆ ?
ಮಾಮರ ತಳಿತಲ್ಲದೆ
ಸರಗೈವುದೆ ಕೋಗಿಲೆ ?
ಪರಿಮಳವಿಲ್ಲದ ಪುಷ್ಪಕ್ಕೆಳಸುವುದೆ ಭ್ರಮರ ?
ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗಲ್ಲದೆ
ಅನ್ಯಕ್ಕೆಳಸುವುದೆ ಎನ್ನ ಮನ
ಪೇಳಿರೆ
ಕೆಳದಿಯರಿರಾ [೧೯೬]
[ಹುಲ್ಲುಮೊರಡಿ=ಹುಲ್ಲಿನ ಪುಟ್ಟ ದಿಬ್ಬ; ಕಿರುವಳ್ಳ=ಪುಟ್ಟ ಹಳ್ಳ; ತಳಿತಲ್ಲದೆ=ಚಿಗುರದೆ]
ನವಿಲು ಬೆಟ್ಟದ ಮೇಲೆ ಆಡುವುದಲ್ಲದೆ ಹುಲ್ಲಿನ ಪುಟ್ಟ ದಿಬ್ಬದಲ್ಲಿ ಆಡುತ್ತದೆಯೇ? ಹಂಸೆ ಕೊಳವನ್ನು ಬಯಸುವುದಲ್ಲದೆ ಪುಟ್ಟ ಹಳ್ಳಕ್ಕೆ ಆಸೆ ಪಡುತ್ತದೆಯೇ? ಮಾವಿನ ಮರ ಚಿಗುರದೆ ಕೋಗಿಲೆ ಸ್ವರವೆತ್ತಿ ಹಾಡುತ್ತದೆಯೇ? ನನ್ನ ದೇವರು ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆ ಯಾವುದಕ್ಕಾದರೂ ನನ್ನ ಮನಸ್ಸು ಒಲಿಯುವುದೇ, ಹೇಳಿ ಗೆಳತಿಯರೇ.
ತಾನು ನವಿಲು, ಹಂಸ, ಕೋಗಿಲೆ; ನನಗೆ ತಕ್ಕ ಗಿರಿ, ಕೊಳ, ಮಾಮರ ಚೆನ್ನಮಲ್ಲಿಕಾರ್ಜುನ; ಮಿಕ್ಕದ್ದೆಲ್ಲ ಹುಲ್ಲಿನ ದಿಬ್ಬ, ಪುಟ್ಟ ಹಳ್ಳ, ಮಾಮೂಲು ಮರ. ಚೆನ್ನಮಲ್ಲಿಕಾರ್ಜುನನಲ್ಲದೆ ಬೇರೆ ಏನನನ್ನೂ ಮನಸ್ಸು ಬಯಸದು ಎಂದು ಗೆಳತಿಯರ ಹತ್ತಿರ ಹೇಳಿಕೊಳ್ಳುತ್ತಿರುವ ಮಾತು. “ಎನ್ನ ಮನ…ಅನ್ಯಕ್ಕೆಳೆಸುವುದೇ” ಎಂಬ ಮಾತನ್ನು ಮರೆತರೂ ಈ ವಚನದ ಅರ್ಥ ಉಜ್ವಲವಾಗಿಯೇ ಇರುತ್ತದೆ. ಕುಣಿವ ನವಿಲು, ಹಾಡುವ ಕೋಗಿಲೆ, ವಿಹರಿಸುವ ಹಂಸ, ಭ್ರಮರ ಇವೆಲ್ಲ ಗಂಡು ಪ್ರಾಣಿಗಳು ಅನ್ನುವ ತರ್ಕ ಹಿಡಿದರೂ ಈ ವಚನವನ್ನು ನುಡಿಯುತ್ತಿರುವ ಹೆಣ್ಣು ಅಪಾರ ಆತ್ಮವಿಶ್ವಾಸದಲ್ಲಿ ತಾನು ನವಿಲಿಗೆ ತಕ್ಕ ಗಿರಿ, ಹಂಸಕ್ಕೆ ತಕ್ಕ ವಿಶಾಳ ಕೊಳ, ಕೋಗಿಲೆಗೆ ಹಾಡು ನೀಡುವ ಮಾವಿನ ಮರ, ದುಂಬಿಯನ್ನು ಆಕರ್ಷಿಸುವ ಪರಿಮಳದ ಹೂ ಎಂಬ ಅರಿವಿನಲ್ಲಿ ನುಡಿದ ಮಾತಾಗಿ ಕೇಳುತ್ತದೆ. ಆದರೆ ವಚನದಲ್ಲಿ ಮಾತ್ರ ತಾನೇ ನವಿಲು, ಕೋಗಿಲೆ, ಹಂಸ, ಭ್ರಮರ ಅಂದುಕೊಳ್ಳುತ್ತ ಆಶ್ರಯ ದಾತ ಚೆನ್ನಮಲ್ಲಿಕಾರ್ಜುನ. ಅವನನ್ನು ಬಿಟ್ಟು ಉಳಿದವರೆಲ್ಲ ಪುಟ್ಟ ದಿಬ್ಬ, ಹಳ್ಳ, ಪರಿಮಳವಿರದ ಹೂ ಎಂದೇ ಅನ್ನುತ್ತಿದೆ.
ಹಾಗೆ ತರ್ಕವನ್ನೇ ಸಾಧಿಸಬೇಕು ಎಂದು ಬಯಸಿದರೂ ಅಕ್ಕ ತನ್ನನ್ನು ತಾನು ಗಂಡುಡುಗೆ ತೊಟ್ಟ ವೀರಳು, ಗಂಡಿನ ಹಾಗೆ ಧೀರಳು, ದಿಟ್ಟೆ ಅನ್ನುವ ಮಾತುಗಳನ್ನು ಹೇಳಿರುವುದೂ ಇದೆ. ವಚನ ಸಮಗ್ರದಲ್ಲಿ ಗಜೇಶ ಮಸಣಯ್ಯ, ಉರಿಲಿಂಗದೇವ ರಂಥ ವಚನಕಾರರು ತಮ್ಮನ್ನು ಹೆಣ್ಣಾಗಿಯೇ ಭಾವಿಸಿ ನುಡಿದಿರುವ ಮಾತುಗಳು ದೊಡ್ಡಸಂಖ್ಯೆಯಲ್ಲೇ ಇವೆ. ಬಸವವಚನದಲ್ಲೂ ವಚನ ನುಡಿಯುತ್ತಿರುವುದ ನಿರೂಪಕಿ ಅನಿಸುವಂಥ ಹಲವು ರಚನೆಗಳಿವೆ. ಜೇಡರ ದಾಸಿಮಯ್ಯ ಹೇಳುವ ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ ಅನ್ನುವ ಮಾತಿಗೆ ಉದಾಹರಣೆಯಾಗಿ ವಚನಕಾರ್ತಿಯರು ಗಂಡಾಗಿ, ವಚನಕಾರರು ಹೆಣ್ಣಾಗಿ ನುಡಿದ ವಚನಗಳು ಹೇರಳವಾಗಿ ದೊರೆಯುತ್ತವೆ.

