ಅಸ್ತಿತ್ವದಲ್ಲಿ ಯಾವ ಪ್ಲಾನಿಂಗ್ ಕೂಡ ಇಲ್ಲ. ಪ್ಲಾನಿಂಗ್ ಇಲ್ಲದ ಬದುಕುಗೆ ಪ್ರಚಂಡವಾದ ಸೌಂದರ್ಯವಿದೆ, ಏಕೆಂದರೆ ಭವಿಷ್ಯದಲ್ಲಿ ಯಾವಾಗಲೂ ಏನೋ ಒಂದು ಆಶ್ಚರ್ಯ ನಮಗಾಗಿ ಕಾಯುತ್ತಿರುತ್ತದೆ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ದಾರಿ ಎಲ್ಲಿಗೆ ಕರದೊಯ್ಯಬಹುದು
ಎನ್ನುವ ಆತಂಕದಿಂದ ದೂರವಿರಿ.
ಬದಲಾಗಿ ನೀವು ಇಡಲು ಮುಂದಾಗುತ್ತಿರುವ
ಮೂದಲ ಹೆಜ್ಜೆಯ ಮೇಲೆ ಮಾತ್ರ
ಧ್ಯಾನವನ್ನು ಕೇಂದ್ರೀಕರಿಸಿ.
ಬದುಕಿನ ಪ್ರಯಾಣದಲ್ಲಿ
ಮೊದಲ ಹೆಜ್ಜೆ ಮಾತ್ರ ಅತ್ಯಂತ ಕಠಿಣ ಭಾಗ
ಅದನ್ನು ಸರಿಯಾಗಿ ನಿಭಾಯಿಸುವುದೊಂದೆ
ನಿಮ್ಮ ಮುಂದಿರುವ ಜವಾಬ್ದಾರಿ.
ಈ ಹೆಜ್ಜೆ ಇಟ್ಟಾದ ಮೇಲೆ
ಎಲ್ಲವನ್ನೂ
ಪ್ರಯಾಣದ ಸಹಜತೆಗೆ ಬಿಟ್ಟು ಬಿಡಿ
ಬಾಕಿ ಎಲ್ಲ ನಿಮ್ಮನ್ನು ಹಿಂಬಾಲಿಸುತ್ತದೆ.
ಹರಿವಿನ ಜೊತೆ ಹರಿಯಬೇಡಿ
ನೀವೇ ಹರಿವಾಗಿ.
~ ಶಮ್ಸ್ ತಬ್ರೀಝಿ
ಭವಿಷ್ಯ ಕೇವಲ ಪುನರಾವರ್ತನೆ ಅಲ್ಲ ; ಏನೋ ಒಂದು ಹೊಸತು ಯಾವಾಗಲೂ ಘಟಿಸುತ್ತಿರುತ್ತದೆ, ಮತ್ತು ಯಾರೂ ಯಾವತ್ತೂ ಇದನ್ನು ಗ್ರಾಂಟೆಡ್ ಆಗಿ ತೆಗೆದುಕೊಳ್ಳಬಾರದು.
ಸುರಕ್ಷಿತ ಜನ ಬೂರ್ಜ್ವಾ ಬದುಕನ್ನು ಬದುಕುತ್ತಾರೆ. ಬೂರ್ಜ್ವಾ ಬದುಕು ಎಂದರೆ, ಬೆಳಿಗ್ಗೆ ಏಳು ಗಂಟೆಗೆ ಹಾಸಿಗೆಯಿಂದ ಎದ್ದೇಳುವುದು, ಎಂಟು ಗಂಟೆಗೆ ಬೆಳಗಿನ ತಿಂಡಿ ಮುಗಿಸಿ, ಎಂಟೂವರೆಯ ಬಸ್ ಹತ್ತಿ ಕೆಲಸಕ್ಕೆ ಹೋಗುವುದು. ಸಂಜೆ ಐದೂವರೆ ಗಂಟೆ ಮವೆಗೆ ವಾಪಸ್ಸಾಗಿ ಸಂಜೆಯ ಚಹಾ ಕುಡಿದು ಸ್ವಲ್ಪ ಪೇಪರ್ ಓದಿ, TV ನೋಡಿ, ಡಿನ್ನರ್ ಮುಗಿಸಿ, ನಿಮ್ಮ ಸಂಗಾತಿಯೊಂದಿಗೆ ಯಾವ ಪ್ರೀತಿಯೂ ಇಲ್ಲದ ಸೆಕ್ಸ್ ಮುಗಿಸಿ, ಮತ್ತೆ ನಿದ್ದೆಗೆ ಹೋಗಿ ಬಿಡುವುದು. ಮರುದಿನ ಮತ್ತೆ ಯಥಾಪ್ರಕಾರ ಇದೇ ರೂಟಿನ್ ನ ಪುನರಾವರ್ತನೆ.
ಇಲ್ಲಿ ಎಲ್ಲವೂ ಪೂರ್ವ ನಿಶ್ಚಿತ, ಇಲ್ಲಿ ಯಾವ ಬೆರಗು, ಯಾವ ಅಚ್ಚರಿಗೆ ಜಾಗ ಇಲ್ಲ. ಇಲ್ಲಿ ಭವಿಷ್ಯ ಎಂದರೆ ಹಿಂದೆ ಆಗಿರುವುದರ ಮತ್ತೆ ಮತ್ತೆ ಪುನರಾವರ್ತನೆ. ಸಹಜವಾಗಿ ಇಲ್ಲಿ ಯಾವ ಭಯಕ್ಕೆ ಆಸ್ಪದವಿಲ್ಲ. ಈ ಸಂಗತಿಗಳನ್ನ ನೀವು ಬದುಕಿನಲ್ಲಿ ಎಷ್ಟೋ ಬಾರಿ ಮಾಡಿ ಮಾಡಿ ಇದರಲ್ಲಿ ಕೌಶಲ್ಯತೆಯನ್ನು ಸಾಧಿಸಿಬಿಟ್ಟಿದ್ದೀರಿ. ಮತ್ತೆ ಮತ್ತೆ ಇವನ್ನು ಮಾಡುವುದರಲ್ಲಿ ನಿಮಗೆ ಯಾವ ಬೇಸರವಿಲ್ಲ.
ಹೊಸತು ಏನಾದರೂ ಎದುರಾದರೆ ಅದರ ಜೊತೆ ಭಯವೂ ಇರುತ್ತದೆ. ಏಕೆಂದರೆ ನಿಮ್ಮಿಂದ ಇದು ಸಾಧ್ಯವೇ ಎನ್ನುವ ಅಳುಕು ನಿಮ್ಮನ್ನು ಕಾಡುತ್ತಿರುತ್ತದೆ. ಆದರೆ ಈ ಸವಾಲು, ಈ ಸಾಹಸದಲ್ಲಿಯೇ ಬದುಕಿನ ಜೀವಂತಿಕೆ ಇದೆ.
ಒಂದು ದಿನ ಒಬ್ಬ ಪ್ರಯಾಣಿಕ ಬೆಟ್ಟ ಗುಡ್ಡಗಳ ಮೂಲಕ ಹಾಯ್ದು ಹೋಗುವಾಗ, ವೃದ್ಧ ಸನ್ಯಾಸಿಯೊಬ್ಬ ಬಾದಾಮಿ ಗಿಡದ ಸಸಿ ನೆಡುತ್ತಿರುವುದನ್ನು ಗಮನಿಸಿದ. ಬಾದಾಮಿ ಸಸಿ ಬೆಳೆದು ಫಲ ನೀಡಲು ಸಾಕಷ್ಟು ವರ್ಷಗಳಾಗುತ್ತದೆ ಎನ್ನುವುದನ್ನು ಬಲ್ಲ ಪ್ರಯಾಣಿಕ, ವೃದ್ಧನನ್ನು ಪ್ರಶ್ನಿಸಿದ.
ಇಷ್ಟು ನಿಧಾನವಾಗಿ ಬೆಳೆಯುವ ಮರವನ್ನು ಯಾಕೆ ಬೆಳೆಸುತ್ತಿದ್ದೀಯಾ? ನಿನ್ನ ಆಯಸ್ಸು ಇನ್ನು ಎರಡು ಮೂರು ವರ್ಷವೂ ಇದ್ದ ಹಾಗಿಲ್ಲ.
ವೃದ್ಧ ಸನ್ಯಾಸಿ ಉತ್ತರಿಸಿದ.
ಬದುಕಲು ನನಗೆ ಎರಡು ಸಿದ್ಧಾಂತಗಳಿವೆ.
ಒಂದು, ನನ್ನ ಬದುಕು ಶಾಶ್ವತ. ಮತ್ತು
ಎರಡನೇಯದು, ಇವತ್ತು ನನ್ನ ಬದುಕಿನ ಕೊನೆಯ ದಿನ.

