ಲಾವೋತ್ಸೇ ಹೇಳುತ್ತಾನೆ : ನಾನು ಮಧ್ಯಮ ಮಾರ್ಗದಲ್ಲಿ ಯೋಚಿಸುವ ಮನುಷ್ಯ. ಯಾವಾಗ ಒಂದು ಸಂಗತಿ ಎಲ್ಲರಿಗೂ ಸ್ಪಷ್ಟವಾಗಿರುತ್ತದೆಯೋ ಆಗ ಅದು ನನಗೆ ಅಸ್ಪಷ್ಟ ; ಯಾವಾಗ ಎಲ್ಲರೂ ಜಾಣರಂತೆ ಕಾಣಿಸುತ್ತಿರುತ್ತಾರೋ ಆಗ ನಾನು ಪೆದ್ದ ~ ಓಶೋ ರಜನೀಶ್, ಕನ್ನಡಕ್ಕೆ ಚಿದಂಬರ ನರೇಂದ್ರ
ನಿಮ್ಮ ಎದುರು ಎಲ್ಲ
ಎಡವಟ್ಟು ಆಯ್ಕೆಗಳೇ ಇದ್ದರೆ
ಈ ಪ್ರೇಮ ಎನ್ನುವ ಎಡವಟ್ಟನ್ನೇ
ಆಯ್ಕೆ ಮಾಡಿಕೊಳ್ಳಿ.
ಭಗವಂತನನ್ನು ಮುಟ್ಟಲು ಇದು
ಬಲು ಸುಲಭದ ದಾರಿ.
ಐಶ್ವರ್ಯ ಅಂತಸ್ತು ಇರದಿದ್ದರೂ
ಅಂಥ ಹೆದರುವ ಕಾರಣ ಇಲ್ಲ,
ಆದರೆ
ಈ ಪ್ರೇಮದ ಎಡವಟ್ಟು ನಿಮ್ಮನ್ನ
ಸತಾಯಿಸದೇ ಹೋದರೆ…..
ದಯವಿಟ್ಟು
ಒಮ್ಮೆ ಶಾಂತ ಮನಸ್ಸಿನಿಂದ
ಚಿಂತೆ ಮಾಡಿ.
– ರೂಮಿ.
ಲಾವೋತ್ಸೇ ಯ ಮಾತಿನ ಅರ್ಥವೇನೆಂದರೆ, ಅವನು ತನ್ನ ಬದುಕಿನ ಬಗ್ಗೆ ಲೆಕ್ಕಾಚಾರ ಹಾಕುವುದಿಲ್ಲ ಬದಲಾಗಿ ಅವನು ತನ್ನ ಬದುಕನ್ನ ಬಾಳುತ್ತಾನೆ. ಅವನು ಪ್ರಾಣಿಯಂತೆ ಬದುಕುತ್ತಾನೆ, ಗಿಡ ಮರಗಳಂತೆ ಬದುಕುತ್ತಾನೆ, ಹಕ್ಕಿಗಳಂತೆ ಬದುಕುತ್ತಾನೆ. ಅವನು ತನ್ನ ಬದುಕನ್ನ ಸರಳವಾಗಿ, ಅದು ಏನು? ಅದು ತನ್ನನ್ನು ಎಲ್ಲಿಗೆ ಕರೆದೊಯ್ಯುತ್ತಿದೆ? ಎನ್ನುವ ಬಗ್ಗೆ ತಲೆಕೆಡಿಸಿಕೊಳ್ಳದೆ ಬದುಕುತ್ತಾನೆ. ಬದುಕು ಎಲ್ಲಿಗೆ ಕರೆದೊಯ್ದರೂ ಒಳ್ಳೆಯದೇ, ಎಲ್ಲಿಗೂ ಕರೆದೊಯ್ಯದಿದ್ದರೂ.
ಮೈಂಡ್ ನ ಎತ್ತಿ ಪಕ್ಕಕ್ಕಿಡಿ. ಇದು ಕಷ್ಟ ನಿಜ, ಆದರೆ ಅಸಾಧ್ಯವೇನಲ್ಲ. ಮೈಂಡ್ ನ ಬಳಸದಿರುವುದೆಂದರೆ, ಅದು ಆಧುನಿಕ ಬದುಕಿನ ನಿರ್ಣಾಯಕ ಸಮಸ್ಯೆ. ನೀವು ಸ್ವಲ್ಪ ವೈಲ್ಡ್ ಆಗಿರಬೇಕಾಗುತ್ತದೆ, ಅದು ನಿಮಗೆ ಮುಗ್ಧತೆಯನ್ನು ತಂದುಕೊಡುತ್ತದೆ ; ಪ್ರೇಮದಲ್ಲಿ ಧುಮುಕಲು ನಿಮ್ಮನ್ನು ಸಜ್ಜುಗೊಳಿಸುತ್ತದೆ. ಈ ಸಿದ್ಧತೆ, ನಿರ್ದಿಷ್ಟ ವ್ಯಕ್ತಿಯೊಂದಿನ ಪ್ರೇಮಕ್ಕೆ ಮಾತ್ರ ಸೀಮಿತ ಅಲ್ಲ, ಅದು ಬದುಕಿನೊಂದಿಗೆ, ಅಸ್ತಿತ್ವದೊಂದಿಗೆ ಅಥವಾ ಯಾವುದೇ ಮನುಷ್ಯನೊಂದಿಗಿನ ಪ್ರೇಮಕ್ಕೂ ಅನ್ವಯವಾಗುವಂಥದು. ಅದು ಪೇಂಟಿಂಗ್ ಬಗ್ಗೆ ಇರಬಹುದು, ಕಾವ್ಯದ ಬಗ್ಗೆ ಇರಬಹುದು, ಡಾನ್ಸ್ ಬಗ್ಗೆ ಇರಬಹುದು, ಸಂಗೀತ – ನಾಟಕದ ಬಗ್ಗೆ ಇರಬಹುದು, ಬೇರೆ ಯಾವುದರ ಬಗ್ಗೆಯೂ ಇರಬಹುದು, ಆದರೆ ಇದು ಉತ್ಕಟ ಪ್ರೇಮದ ಬಗ್ಗೆ, ಪ್ರೇಮ ನಿಮ್ಮ ಇಡೀ ಬದುಕನ್ನು ಆವರಿಸಿಕೊಳ್ಳುವ ಬಗ್ಗೆ ಮತ್ತು ಈ ಪ್ರೇಮದಲ್ಲಿ ನೀವು ಎಷ್ಟು ಮುಳುಗಿ ಹೋಗಿರುವಿರೆಂದರೆ, ಹೊರಗೆ ಬಾಕಿ ಏನೂ ಉಳಿದಿಲ್ಲ ; ಆಗ ನೀವು ಮತ್ತು ನಿಮ್ಮ ಪ್ರೇಮ ಒಂದಾಗುತ್ತೀರ. ಈ ಪ್ರಕ್ರಿಯೆ ನಿಮ್ಮ ಬದಲಾವಣೆಗೆ ಕಾರಣವಾಗುತ್ತದೆ.
ಇಲ್ಲಿ ಭಯ ಇದೆ ನಿಜ, ಆದರೆ ನೀವು ಅದನ್ನು ಆಯ್ಕೆ ಮಾಡಿಕೊಳ್ಳಬೇಡಿ. ಯಾರು ಭಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅವರು ತಮ್ಮ ಬದುಕನ್ನ ನಾಶಮಾಡಿಕೊಳ್ಳುತ್ತಾರೆ. ಭಯ ಬೇಕಾದರೆ ಇರಲಿ, ಅದರ ಹೊರತಾಗಿಯೂ ಪ್ರೇಮವನ್ನು ಆಯ್ಕೆ ಮಾಡಿಕೊಳ್ಳಿ.
ಸ್ವರ್ಗದ ಅತ್ಯಂತ ಪ್ರಸಿದ್ಧ ಕೆಫೆಯಲ್ಲಿ ಒಂದು ಮಧ್ಯಾಹ್ನ, ಬುದ್ಧ, ಕನ್ಫ್ಯೂಷಿಯಸ್ ಮತ್ತು ಲಾವೋತ್ಸೇ ಹರಟುತ್ತ ಕುಳಿತಿದ್ದರು. ಅಷ್ಟರಲ್ಲಿಯೇ ಸರ್ವರ್ ಅಲ್ಲಿಗೆ ಮೂರು ಗ್ಲಾಸ್ ‘ಲೈಫ್ ಜ್ಯೂಸ್’ ತೆಗೆದುಕೊಂಡುಬಂದು ಆ ಮೂವರು ತತ್ವಜ್ಞಾನಿಗಳಿಗೂ ಆಫರ್ ಮಾಡಿದ.
ಬುದ್ಧ ಕೂಡಲೇ ಕಣ್ಣು ಮುಚ್ಚಿಕೊಂಡು ಲೈಫ್ ಒಂದು ವಿಪತ್ತು ಎನ್ನುತ್ತ ಲೈಫ್ ಜ್ಯೂಸ್ ಕುಡಿಯಲು ನಿರಾಕರಿಸಿದ.
ಯೋಚನೆಯಲ್ಲಿ ಬಿದ್ದ ಕನ್ಫ್ಯೂಷಿಯಸ್ ಅರ್ಧ ಕಣ್ಣು ಮುಚ್ಚಿ ಲೈಫ್ ಜ್ಯೂಸ್ ನ ಗ್ಲಾಸ್ ಎತ್ತಿಕೊಂಡು ಒಂದು ಗುಟಕು ಜ್ಯೂಸ್ ಕುಡಿದು ಘೋಷಿಸಿದ, ಬುದ್ಧ ಹೇಳಿದ್ದು ನಿಜ, ಲೈಫ್ ಒಂದು ವಿಪತ್ತು. ಕನ್ಫ್ಯೂಷಿಯಸ್ ಮಧ್ಯಮಮಾರ್ಗಿ, ಸೈಂಟಿಫಿಕ್ ಮನೋಭಾವದ ಮನುಷ್ಯ, ಯಾವುದನ್ನು ಪರೀಕ್ಷೆ ಮಾಡದೇ ಒಪ್ಪಿಕೊಳ್ಳುವವನಲ್ಲ. ಆದ್ದರಿಂದಲೇ ಅವನು ಲೈಫ್ ಜ್ಯೂಸ್ ನ ಒಂದು ಗುಟುಕು ಕುಡಿದ ಮೇಲಷ್ಟೇ ತನ್ನ ತೀರ್ಮಾನ ಘೋಷಿಸಿದ.
ಸರ್ವರ್, ಲಾವೋತ್ಸೇ ಯ ಮುಂದೆ ಗ್ಲಾಸ್ ತಂದು ಇಟ್ಟಾಗ, ಲಾವೋತ್ಸೇ ಮೂರು ಗ್ಲಾಸ್ ಲೈಫ್ ಜ್ಯೂಸ್ ಕುಡಿದು ಮುಗಿಸಿ, ಕುಣಿಯಲು ಶುರು ಮಾಡಿದ. ಪೂರ್ತಿ ಕುಡಿದು ಅನುಭವಿಸದೇ ಯಾವ ತೀರ್ಮಾನವನ್ನೂ ಹೇಳಲಿಕ್ಕಾಗದು ಎನ್ನುವುದು ಅವನ ತಿಳುವಳಿಕೆಯಾಗಿತ್ತು. “ ನೀನು ಏನು ಹೇಳುತ್ತೀಯ ಲಾವೋತ್ಸೇ ?” ಬುದ್ಧ ಮತ್ತು ಕನ್ಫ್ಯೂಷಿಯಸ್ ಕುತೂಹಲದಿಂದ ಲಾವೋತ್ಸೇಯನ್ನು ಪ್ರಶ್ನೆ ಮಾಡಿದರು.
“ ನಾನು ಹಾಡುತ್ತಿರುವುದು, ಕುಣಿಯುತ್ತಿರುವುದೇ ನನ್ನ ಉತ್ತರ. ಯಾವುದೇ ಒಂದು ಸಂಗತಿಯನ್ನ ಪೂರ್ಣವಾಗಿ ಅನುಭವಿಸದೇ ಯಾವ ತೀರ್ಮಾನವನ್ನೂ ಮಾಡಬಾರದು. ಹಾಗೇ ನೋಡಿದರೆ ಪೂರ್ತಿಯಾಗಿ ಅನುಭವಿಸಿದ ಮೇಲೂ ಏನೂ ಹೇಳಲಿಕ್ಕಾಗುವುದಿಲ್ಲ, ಏಕೆಂದರೆ ನಿಮ್ಮ ಅನುಭವವನ್ನ ಪದಗಳಲ್ಲಿ ಹಿಡಿದಿಡುವುದು ಅಸಾಧ್ಯ.
ಬುದ್ಧ ಒಂದು ತುದಿಯಾದರೆ ಲಾವೋತ್ಸೇ ಇನ್ನೂಂದು ತುದಿ. ಅವನು ಪೂರ್ಣ ಬದುಕನ್ನ ಅನುಭವಿಸಿದವನು, ಬದುಕಿನ ಮೂರೂ ಆಯಾಮಗಳನ್ನು ಬದುಕಿದವನು.

