ಸಂಗ್ರಹ – ಅನುವಾದ : ಚಿದಂಬರ ನರೇಂದ್ರ
ಒಮ್ಮೆ, ಒಂದು ಹಿಂದಿ ಸಿನೇಮಾಕ್ಕೆ ನುಸ್ರತ್ ಫತೇ ಅಲೀ ಖಾನ್ ಸಂಗೀತ ಸಂಯೋಜಿಸಿ ಹಾಡಬೇಕಿತ್ತು ಮತ್ತು ಆ ಗೀತೆಗಳನ್ನ ಸುಪ್ರಸಿದ್ಧ ಗೀತ ರಚನಾಕಾರ ಆನಂದ ಬಕ್ಷಿ ಬರೆಯಬೇಕಿತ್ತು. ಪಾಕಿಸ್ತಾನದಿಂದ ಆಗಮಿಸಿದ ನುಸ್ರತ್ ಎರಡು ದಿನ ಮುಂಬಯಿಯ ಸ್ಟುಡಿಯೋದಲ್ಲಿ ಆನಂದ ಬಕ್ಷಿಯವರಿಗಾಗಿ ಕಾಯ್ದುರು. ಆದರೆ ಏನು ಕಾರಣವೋ ಬಕ್ಷಿಯವರು, ಸ್ಟುಡಿಯೋಕ್ಕೆ ಬರಲೇ ಇಲ್ಲ.
ಕೊನೆಗೊಮ್ಮೆ ನುಸ್ರತ್ ಅವರೇ ಕಾರ್ ಮಾಡಿಕೊಂಡು ಬಕ್ಷಿಯವರ ಮನೆಗೆ ಬಂದು ಬಿಟ್ಟರು. ಅಜಾನುಬಾಹು ನುಸ್ರತ್ ತಮ್ಮ ಮನೆಯ ಮೆಟ್ಟಿಲು ಹತ್ತಲು ಕಷ್ಟಪಡುತ್ತಿರುವುದನ್ನ ಮೂರನೇ ಮಹಡಿಯಿಂದ ನೋಡಿದ ಬಕ್ಷಿಯವರು, ಓಡಿ ಬಂದು ನುಸ್ರತ್ ಅವರನ್ನು ಅಪ್ಪಿಕೊಂಡು ಅಳಲು ಶುರು ಮಾಡಿದರು.
“ಯಾರೋ ಪಾಕಿಸ್ತಾನದಿಂದ ಹಾಡುಗಾರ ಬರುತ್ತಾರೆಂದು ನಾನ್ಯಾಕೆ ಅವರನ್ನು ನೋಡಲು ಸ್ಟುಡಿಯೋಕ್ಕೆ ಹೋಗಲಿ ಎನ್ನುವ ವಿಚಿತ್ರ ಅಹಂನಿಂದ ನಾನು ಎರಡು ದಿನದಿಂದ ಸ್ಟುಡಿಯೋಕ್ಕೆ ಬಂದಿರಲಿಲ್ಲ. ಆದರೆ ನೀವು ಇಷ್ಟು ಕಷ್ಟಪಡುತ್ತ ನನ್ನ ಮನೆಗೆ ಬಂದದ್ದು ನೋಡಿ ನನ್ನ ಸೊಕ್ಕೆಲ್ಲ ಇಳಿದು ಹೋಯಿತು” ಎಂದು ಬಕ್ಷಿಯವರು ನುಸ್ರತ್ ಸಾಹೇಬರನ್ನು ಅಪ್ಪಿಕೊಂಡು ಒಂದೇ ಸವನೇ ಅತ್ತುಬಿಟ್ಟರು.

