ದೂರದ ಸ್ನೇಹ ಸಾಧ್ಯವಿರದ ಲೋಕ : ಅಕ್ಕ ಮಹಾದೇವಿ #18

ಈ ವಚನದ ಎಲ್ಲ ವಿವರಗಳೂ ದೂರವನ್ನು, ನಿಷ್ಫಲ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ ೧ ಸಂದೇಹ, ಪ್ರಶ್ನೆ

ಧರೆಯ ಮೇಗಣ ಹುಲ್ಲೆ
ಚಂದ್ರಮನೊಳಗಣ ಎರಳೆ
ಕೂರ್ತಡೆ ಫಲವೇನೋ ಕೂಟವಿಲ್ಲದನ್ನಕ್ಕ
ಇಂಬನರಿಯದ ಠಾವಿನಲ್ಲಿ ಕಣ್ಬೇಟವ ಮಾಡಿದಡೆ
ತುಂಬಿದ ತೊರೆಯ ನಡುವೆ ಮಾಮರ ಕಾತಂತೆ.
ಚೆನ್ನಮಲ್ಲಿಕಾರ್ಜುನದೇವಾ
ದೂರದ ಸ್ನೇಹವಮಾಡಲು ಬಾರದ ಭವಕ್ಕೆ ಬಂದೆ  [೨೪೫]

[ಧರೆ=ಭೂಮಿ; ಮೇಗಣ=ಮೇಲಿನ; ಹುಲ್ಲೆ= (ಹೆಣ್ಣು?) ಜಿಂಕೆ; ಎರಳೆ= (ಗಂಡು?) ಜಿಂಕೆ; ಕೂರ್ತಡೆ=ಪ್ರೀತಿಸಿದರೆ; ಕೂಟ=ಕೂಡುವಿಕೆ, ಮಿಲನ; ಇಂಬಱಿಯದ=ಅವಕಾಶವಿರದ, ಸೂಕ್ತವಲ್ಲ; ಠಾವು=ಸ್ಥಳ; ಕಣ್ಬೇಟ=ಕಣ್ಣಿನ ನೋಟದಲ್ಲೆ ಮಿಲನವಾಗುವುದು; ಕಾತಂತೆ=ಹಣ್ಣು ಬಿಟ್ಟ ಹಾಗೆ, ತೀವ್ರಭಾವದಲ್ಲಿ ಕುದಿದ ಹಾಗೆ; ಸ್ನೇಹವ ಮಾಡಲು ಬಾರದ=ಸ್ನೇಹವನ್ನು ಮಾಡಲು ಸಾಧ್ಯವಿರದ]

ಭೂಮಿಯ ಮೇಲಿರುವ ಹುಲ್ಲೆ ಚಂದ್ರನೊಳಗಿರುವ ಜಿಂಕೆಯನ್ನು ಪ್ರೀತಿಸಿದರೆ ಕೂಟವು ಅಸಾಧ್ಯ. ಅಂಥ ಪ್ರೀತಿಯಿಂದ ಫಲವೇನು? ಪ್ರೀತಿಗೆ ಅವಕಾಶವಿರದ ಜಾಗದಲ್ಲಿ ಕಣ್ಣ ನೋಟದಲ್ಲೇ ಪರಸ್ಪರ ಮಿಲನವಾಯಿತು ಅಂದುಕೊಂಡ ಹಾಗೆ ಅಷ್ಟೇ. ತುಂಬಿ ಹರಿಯುವ ತೊರೆಯ ಮಧ್ಯದಲ್ಲಿ ಮಾವಿನಮರವೊಂದು ಹಣ್ಣನ್ನು ಬಿಟ್ಟ ಕೈಗೆಟುಕದ ಹಾಗೆ ಅದು. ದೂರದ ಸ್ನೇಹ ಅಸಾಧ್ಯವಾಗಿರುವ ಈ ಲೋಕಕ್ಕೆ ಬಂದಿದ್ದೇನೆ ನಾನು.

ಈ ವಚನದ ಎಲ್ಲ ವಿವರಗಳೂ ದೂರವನ್ನು, ನಿಷ್ಫಲ ಪ್ರೀತಿಯನ್ನು ವ್ಯಕ್ತಪಡಿಸುತ್ತವೆ. ಹೆಣ್ಣಿರುವುದು ನೆಲದ ಮೇಲೆ, ಚೆನ್ನಮಲ್ಲಿಕಾರ್ಜುನ ಇರುವುದು ಶಿವನ ತಲೆಯ ಚಂದ್ರನಲ್ಲಿ. ಇವೆರಡೂ ಜೀವ ಪ್ರೀತಿಸಿದರೆ “ಫಲ”ವೇನು? ಕೂಟವು ಅಸಾಧ್ಯ. ಕೂಡುವುದು ಅಸಾಧ್ಯವಾಗಿರುವ ಸ್ಥಳದಲ್ಲಿ ನೋಟದಲ್ಲೇ ಬೇಟವನ್ನು ಮಾಡಿದರೆ ಅದು ಪ್ರವಾಹದ ನಡುವೆ ಸವಿಯಲಾಗದ ಹಣ್ಣು ಬಿಟ್ಟಿರುವ ಹಾಗೆ. ನೆಲ-ಆಕಾಶ, ತೊರೆಯ ನಡುವೆ ಹಣ್ಣು ಬಿಟ್ಟ ಮರ ಎರಡೂ ಅಸಾಧ್ಯ ಅಂತರವನ್ನು ಸೂಚಿಸುತ್ತವೆ. ಹೆಚ್ಚೆಂದರೆ ನೋಟದಲ್ಲಿ ಪ್ರೀತಿ ಮಾಡಬಹುದು, ಪ್ರೀತಿಯ ಫಲ ದೊರೆಯದು. ಹಾಗೆ ದೂರದ ಸ್ನೇಹವನ್ನು ಸಾಧಿಸುವುದು ಈ ಲೋಕದಲ್ಲಿ ಅಸಾಧ್ಯ. ಮೊದಲಲ್ಲಿ ಮಾತಿನ ವರಸೆಯಾಗಿ ಬಂದ ಫಲವೇನೋ ಅನ್ನುವ ಪ್ರಶ್ನೆ ವಚನದ ಕೊನೆಗೆ ದೂರದ, ಸವಿಯಲು ಅಸಾಧ್ಯವಾದ ಹಣ್ಣನ್ನು ಹೊತ್ತ ಮಾವಿನ ಮರವಾಗಿ ಬೆಳೆದಿದೆ! ಇಂಗ್ಲಿಶ್‌ ಭಾಷೆಯಲ್ಲಿ ಐಡಿಯಲ್‌ ಲವ್‌ ಅನ್ನುತ್ತಾರಲ್ಲ ಅದು ನಿಷ್ಫಲ, ಸವಿಯಲಾರದ ಹಣ್ಣು. ಕಣ್ಣ ಬೇಟದಿಂದ ಮಿಲನದ ಪೂರ್ಣತೆ ಅಸಾಧ್ಯ. ದೈವಿಕ ಆದರ್ಶ, ಮನುಷ್ಯ ಪರಿಮಿತಿಗಳ ಪ್ರಶ್ನೆಯನ್ನೂ ಈ ವಚನ ಎತ್ತುವಂತೆ ತೋರುತ್ತದೆ.

*

ಅಕ್ಕಮಹದೇವಿಯವರ ವಚನಗಳಲ್ಲಿ ಮೊದಲ ಭಾಗವಾಗಿ ಆಯ್ಕೆ ಮಾಡಿಕೊಂಡ ಈ ಹದಿನೆಂಟು ವಚನಗಳಲ್ಲಿ—

೧) ನನ್ನ ನಾನು ತಿಳಿವ ಮುನ್ನ ನೀನೇನಾಗಿದ್ದೆ ಅನ್ನುವ ಪ್ರಶ್ನೆಯಿಂದ ಶುರುವಾಗಿ, ನೋಟ, ಭಾವ ಎಲ್ಲವೂ ಮರೆಯಾಗುವ ಮಾಟವನ್ನು ಮೀರಲು ಸಾಧ್ಯವೇ ಅನ್ನಿಸುವ ಸ್ಥಿತಿಯ ವರ್ಣನೆ ಇದೆ.

೨)  ಚೆನ್ನಮಲ್ಲಿಕಾರ್ಜುನನನ್ನು ಮುಟ್ಟಿಯೂ ಮುಟ್ಟಲಾಗದೆ, ಮನಸು ಹಲವು ದಾರಿ ಹಿಡಿದು ಅವನು ನನ್ನನ್ನು ಒಪ್ಪಲಿಲ್ಲವೋ ಅನ್ನುವ ಸಂಶಯ ಮೂಡಿ,ಕಳವಳದ ಮನಸು ತಲೆಕೆಳಗಾಗಿ ಅವನನ್ನು ಕರೆತನ್ನಿರೆಂದು ಗೋಗರೆದು, ಲೌಕಿಕ-ಪರಮಾರ್ಥಗಳೆರಡನ್ನೂ ನಿಭಾಯಿಸಲಾರೆ ಅನ್ನುವ ಅನುಮಾನ ಹುಟ್ಟುವ ಸ್ಥಿತಿಯ  ಚಿತ್ರಣವಿದೆ,

೩) ಈ ಸಂಸಾರವೇ ಹಗೆ ಅನ್ನಿಸಿ, ನನ್ನ ಮನಸ್ಸೇ ಏನೇನನ್ನೋ ಬಯಸುತ್ತಾ ಗೂಡುಕಟ್ಟಿಕೊಂಡು ಒದ್ದಾಡುತ್ತಿದೆ, ನಿನ್ನತ್ತ ಬರುವ ದಾರಿ ತೋರು ಎಂದು ಅವನನ್ನೇ ಬೇಡುವುದು; ಹಾಗೆ ಬೇಡುವಾಗಲೂ ತನ್ನ ಮನಸು ಕುಸಿಯುತಿರುವ ದಡ, ಕುಲುಮೆಯ ಹೊಗೆಯಾಗಿದೆ ಅನ್ನುವ ಅರಿವು ಇದೆ,

೪) ನನ್ನಲ್ಲಿ ಹೆಣ್ಣು ಅನ್ನುವ ಭಾವ ಮೂಡುವ ಮೊದಲೇ ನಮ್ಮವರು ನನ್ನನ್ನು ನಿನಗೆ ಒಪ್ಪಿಸಿದರು, ನೀರಿನ ಮಂಟಪದ ಮೇಲೆ ಉರಿಯ ಚಪ್ಪರವನ್ನು ಹಾಕಿ ಮದುವೆ ಮಾಡಿಸಿದರು; ಆದರೆ ನಾನು ಹಿಂಡನ್ನು ಅಗಲಿದ, ಗಿರಿಯ ಕನಸು ಕಾಣುವ ಆನೆಯ ಹಾಗೆ, ನನ್ನ ಮನಸ್ಸು ನಿನ್ನಲ್ಲಿ ಸಿಲುಕಿದ ಮೇಲೆ ನನಗೆ ಭವವಿಲ್ಲ; ನನ್ನ ಮೊರೆ ಆಲಿಸು, ಲಾಲಿಸು, ಪಾಲಿಸು ನೀನಲ್ಲದೆ ಬೇರೆ ಯಾರೂ ಇಲ್ಲ ಎಂದು ಯಾಚಿಸುವುದಿದೆ, ಚೆನ್ನಮಲ್ಲಿಕಾರ್ಜುನ ನಲ್ಲನೂ ಹೌದು, ಕಾಪಾಡುವ ತಂದೆಗುಣ ಇರುವವನೂ ಹೌದು

೫) ನನ್ನ ಮೈಯನ್ನು ನುಣುಪನ್ನು ಆಸೆಪಟ್ಟವರಿಗೆ ಅದನ್ನು ಕೊಡುವೆ, ನನ್ನ ಮನಸ್ಸನ್ನು ನೀನೇ ಸೂರೆ ಮಾಡಿರುವಾಗ  ನೀನೇ ನನ್ನನ್ನು ಯಾರಿಗಾದರೂ ಮಾರಿದರೂ ನನಗೆ ಚಿಂತೆಯಿಲ್ಲ. ನವಿಲು, ಹಂಸ, ಕೋಗಿಲೆಗಳಿಗೆ ಗಿರಿ, ಸರೋವರ, ಮಾವಿನ ಮರದ ಹಾಗೆ ನನಗೆ ನೀನು. ನನ್ನ ಮೇಲಿನ ಪೂರ್ಣ ಒಡೆತನ ನಿನ್ನದು ಅನ್ನುವ ನಿಲುವು ರೂಪಗೊಳ್ಳುವುದಿದೆ.

೬)  ನನಗೆ ನಾಚಿಕೆ ಇಲ್ಲ, ಕುಲ, ಛಲವಿಲ್ಲ, ಒಲುಮೆಗೆ ಮನ ತೆತ್ತವರು ಲೋಕದ ಕಣ್ಣಿಗೆ ಮರುಳರು ಅನ್ನುವಲ್ಲಿಗೆ ಒಂದು ನಿಲುಗಡೆಗೆ ಬಂದಂತೆ ಕಂಡರೂ ನಾನು ನೆಲದ ಮೇಲಿನ ಹೆಣ್ಣು ಹುಲ್ಲೆ, ನೀನು ಚಂದ್ರನೊಳಗಿರುವ ಎರಳೆ, ಕಣ್ಣಲ್ಲಿ ಕಂಡು ಪ್ರೀತಿ ತಣಿಯದು—ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಪ್ರೀತಿ ಪ್ರವಾಹದ ನಡುವೆ ನಿಂತ ಹೂ ಬಿಟ್ಟ ಮಾಮರದ ಹಾಗೆ ಅನ್ನುವ ಕೊರತೆಯೊಡನೆ  ಈ ಭಾಗ ಮುಗಿಯುತ್ತದೆ.

ಚೆನ್ನಮಲ್ಲಿಕಾರ್ಜುನ ಆತ್ಮಸಂಗಾತಿ, ತಂದೆ, ಮನ ಸೂರೆ ಮಾಡುವ ವೀರ, ಮಾರುವ ಹಕ್ಕು ಇರುವ ಒಡೆಯ; ಐಡಿಯಲ್‌ ಅನ್ನುವ ಅನುಭವ ದಕ್ಕಲಾಗದ ಭವ ಲೋಕವಿದು, ಆದರ್ಶವನ್ನೂ ವಾಸ್ತವವನ್ನೂ ಒಟ್ಟಿಗೆ ಪಡೆಯಲಾಗದ ಮನುಷ್ಯರ ತಳಮಳ ಈ ಭಾಗದ ವಚನಗಳಲ್ಲಿವೆ.   

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.