ಅಕ್ಕಮಹಾದೇವಿಯ ಈ ವಚನದಿಂದ ಮುಂದಿನ ಹಲವು ರಚನೆಗಳಲ್ಲಿ ಮನಸ್ಸು ಸ್ಥಿಮಿತಕ್ಕೆ ಬರುತ್ತಿರುವ, ತನ್ನ ಬಗ್ಗೆ ತನಗೇ ವಿಶ್ವಾಸ ಮೂಡುತ್ತಿರುವ ಚಿತ್ರಣ ಕಾಣುತ್ತದೆ. ಇದು ಅಕ್ಕನ ವಚನಗಳ ಎರಡನೆಯ ಧಾರೆ.~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಉಸುರಿನ ಪರಿಮಳವಿರಲು
ಕುಸುಮದ ಹಂಗೇಕಯ್ಯಾ?
ಕ್ಷಮೆ ದಮೆ ಶಾಂತಿ ಸೈರಣೆಯಿರಲು
ಸಮಾಧಿಯ ಹಂಗೇಕಯ್ಯಾ?
ಲೋಕವೆ ತಾನಾದ ಬಳಿಕ ಏಕಾಂತದ ಹಂಗೇಕಯ್ಯಾ ಚೆನ್ನಮಲ್ಲಿಕಾರ್ಜುನಾ [೮೭]
[ದಮೆ=ನಿಯಂತ್ರಣ; ಸೈರಣೆ=ಸಹನೆ]
ಅಕ್ಕಮಹಾದೇವಿಯ ಈ ವಚನದಿಂದ ಮುಂದಿನ ಹಲವು ರಚನೆಗಳಲ್ಲಿ ಮನಸ್ಸು ಸ್ಥಿಮಿತಕ್ಕೆ ಬರುತ್ತಿರುವ, ತನ್ನ ಬಗ್ಗೆ ತನಗೇ ವಿಶ್ವಾಸ ಮೂಡುತ್ತಿರುವ ಚಿತ್ರಣ ಕಾಣುತ್ತದೆ. ಇದು ಅಕ್ಕನ ವಚನಗಳ ಎರಡನೆಯ ಧಾರೆ.
ಪರಿಮಳವೆನ್ನುವುದು ಉಸಿರಿನಲ್ಲೇ ಇರುವಾಗ ಹೂವು ಯಾಕೆ? ಮನಸಿನಲ್ಲಿ ಕ್ಷಮೆ, ಹತೋಟಿ, ಶಾಂತಿ, ಸಹನೆ ಇದ್ದರೆ ಸಮಾಧಿಯನ್ನು ಸಾಧಿಸುವ ಚಪಲವೇಕೆ? ನಾನು ಬೇರೆಯಲ್ಲ, ಲೋಕ ಬೇರೆಯಲ್ಲ, ಲೋಕ ನನ್ನೊಳಗಿದೆ, ನಾನು ಲೋಕದಲ್ಲಿದ್ದೇನೆ ಅನ್ನುವ ಅರಿವು ಬಂದರೆ ಸಾಕು, ಏಕಾಂತ ಏಕೆ ಬೇಕು ಎಂದು ಈ ವಚನ ಕೇಳುತ್ತದೆ.
ನಾನು ಬೇರೆ-ಲೋಕ ಬೇರೆ ಅನ್ನುವ ಪ್ರತ್ಯೇಕ ಭಾವನೆಯೇ ಎಲ್ಲ ಕೆಡುಕಿನ ಮೂಲ. ನಾನು ಲೋಕವನ್ನು ತಿದ್ದುತ್ತೇನೆ ಅನ್ನುವಾಗ ನನ್ನನ್ನು ತಿದ್ದಿಕೊಳ್ಳುವ ಅಗತ್ಯವಿಲ್ಲ ಅನ್ನುವ ನಂಬಿಕೆ ಇರುತ್ತದೆ. ಲೋಕ ನನ್ನೊಳಗೆ, ನಾನು ಲೋಕದೊಳಗೆ ಅನ್ನುವ ಅನುಭವ ದಕ್ಕಿದರೆ ತನ್ನೊಳಗೇ ಇರುವ ಏಕಾಂತ-ಲೋಕದೊಳಗೆ ಕಳೆದು ಹೋಗುವ ಲೋಕಾಂತ ಬೇರೆಯಲ್ಲ. ಒಂದು ಬೇಕು ಇನ್ನೊಂದು ಬೇಡ ಅನ್ನುವುದೂ ಇರುವುದಿಲ್ಲ. ಇಹ-ಪರ ಅನ್ನುವ ದ್ವಂದ್ವವೂ ಇಲ್ಲ. ದ್ವಂದ್ವಗಳ ಕಾರಣದಿಂದಲೇ ಶಾಂತಿ, ಸಮಾಧಾನ, ನಿಯಂತ್ರಣ ಇವೆಲ್ಲ ಬೇಕು. ಲೋಕವೇ ತಾನಾಗುವ ಗುರಿ ಮನಸಿಗೆ ತುಂಬ ಸಮಾಧಾನ ತರುವಂತೆ ತೋರುತ್ತದೆ.

