ಎಲ್ಲ ಮಹತ್ತರವಾದದ್ದೂ ಭಾಷೆಯನ್ನು ಮೀರಿರುವುದೇ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮೊಳಗಿರುವ ಸತ್ಯ
ಮಹಾ ಮೌನಿ.
ಆದರೆ ಕಲಿತದ್ದು ಮಾತ್ರ
ಬಲು ವಾಚಾಳಿ.
~ ಖಲೀಲ್ ಜಿಬ್ರಾನ್
ಬಹಳಷ್ಟು ಹೇಳುವುದು ಇದ್ದಾಗ, ಅದನ್ನು ಹೇಳುವುದು ಯಾವತ್ತೂ ಕಷ್ಟವಾಗುತ್ತದೆ. ಕೇವಲ ಸಣ್ಣ ಸಣ್ಣ ಸಂಗತಿಗಳನ್ನು ಮಾತ್ರ ಹೇಳಿಕೊಳ್ಳಬಹುದು. ಕೇವಲ ಕ್ಷುಲಕಗಳನ್ನು ಮಾತ್ರ ಹೇಳಬಹುದು, ಕೇವಲ ನಿರಸವಾದದ್ದನ್ನು ಮಾತ್ರ ಹೇಳಿಕೊಳ್ಳಬಹುದು. ಯಾವಾಗ ನೀವು ಅತಿಶಯವನ್ನು ಅನುಭವಿಸುತ್ತಿದ್ದೀರೋ, ಅದನ್ನು ಹೇಳಿಕೊಳ್ಳುವುದು ಅಸಾಧ್ಯ. ಏಕೆಂದರೆ ಪದಗಳು ಅವಶ್ಯಕವನ್ನು ಹಿಡಿದಿಡಲು ಬಹಳ ಸಣ್ಣವು.
ಪದಗಳು ಉಪಯೋಗಕ್ಕೆ, ಪ್ರತಿದಿನದ ನೀರಸ ಕ್ರಿಯೆಗಳಿಗೆ ಬಳಸುವಂಥವು. ನೀವು ಸಾಧಾರಣ ಬದುಕನ್ನು ಮೀರಿ ಮುನ್ನಡೆಯುವಾಗ ಪದಗಳ ಸಾಮರ್ಥ್ಯ ಸಾಕಾಗುವುದಿಲ್ಲ. ಪ್ರೇಮದಲ್ಲಿ ಇವು ಉಪಯೋಗಕ್ಕೆ ಬರುವುದಿಲ್ಲ ; ಪ್ರಾರ್ಥನೆಯಲ್ಲಂತೂ ಇವು ಯಾವ ಉಪಯೋಗಕ್ಕೂ ಅನರ್ಹ.
ಎಲ್ಲ ಮಹತ್ತರವಾದದ್ದೂ ಭಾಷೆಯನ್ನು ಮೀರಿರುವುದೇ. ಯಾವಾಗ ನಿಮಗೆ ಏನು ಹೇಳುವುದೂ ಅಸಾಧ್ಯ ಅನಿಸುತ್ತದೆಯೋ ಆಗ ನೀವು ನಿಮ್ಮ ಗಮ್ಯಕ್ಕೆ ತಲುಪುದ್ದೀರಿ ಎಂದು ಅರ್ಥ. ಆಗ ಬದುಕು ಮಹಾ ಸುಂದರ, ಮಹಾ ಪ್ರೇಮಮಯಿ, ಮಹಾ ಆನಂದ , ಮಹಾ ಸಂಭ್ರಮ.
ಒಂದು ದಿನ ಪ್ರಾಂತದ ದೊರೆ ತನ್ನ ಯಾತ್ರಾ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ, ಲಾವೋ ತ್ಸು ನ ಆಶ್ರಮಕ್ಕೆ ಬಂದ.
ಲಾವೋ ತ್ಸು ನನ್ನು ಭೇಟಿ ಮಾಡಿ ಅವನಿಗೆ ತನ್ನ ವಂದನೆ ಸಲ್ಲಿಸಿ ಅವನಿಂದ ಜ್ಞಾನಮಾರ್ಗದ ಬಗ್ಗೆ ತಿಳಿದುಕೊಳ್ಳುವ ಆಸೆ ರಾಜನಿಗೆ.
“ರಾಜ್ಯವನ್ನು ನೋಡಿಕೊಳ್ಳುವಲ್ಲಿ ನನ್ನ ಪೂರ್ತಿ ಸಮಯ ಹೋಗಿಬಿಡುತ್ತದೆ. ಸತ್ಸಂಗ ಮುಂತಾದವುಗಳಿಗೆ ಸಮಯವೇ ಸಿಕ್ಕುವುದಿಲ್ಲ.”
“ ನನ್ನಂಥ ಬಿಡುವಿಲ್ಲದ ಮನುಷ್ಯನಿಗೆ ಧರ್ಮದ ಸಾರವನ್ನು ಒಂದು ಅಥವಾ ಎರಡು ಶಬ್ದಗಳಲ್ಲಿ ಹೇಳಿ ಕೊಡುವುದು ಸಾಧ್ಯವೇ?
ರಾಜ, ಲಾವೋ ತ್ಸು ಹತ್ತಿರ ತನ್ನ ಸಮಸ್ಯೆ ಹೇಳಿಕೊಂಡ.
ಆಗಬಹುದು ರಾಜ. ಒಂದು ಶಬ್ದ ಸಾಕು.
ಹೌದಾ? ಯಾವುದು ಆ ಶಬ್ದ?
“ ಮೌನ “
ಮೌನ ನಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ?
“ ಧ್ಯಾನ “
ಮತ್ತೆ ಧ್ಯಾನ ನಮ್ಮನ್ನು ಎಲ್ಲಿ ಮುಟ್ಟಿಸುತ್ತದೆ?
“ ಮೌನ “

