ಯಾವಾಗ ನೀವು ಸಂಶಯಕ್ಕೆ ಅವಕಾಶ ಮಾಡಿಕೊಡುತ್ತೀರೋ ಆಗ ನಿಮ್ಮ ಹೃದಯದಲ್ಲಿ ಒತ್ತಡ ಕಾಣಿಸುಕೊಳ್ಳುತ್ತದೆ. ಏಕೆಂದರೆ, ವಿಶ್ವಾಸದಲ್ಲಿ ಹೃದಯ ರಿಲ್ಯಾಕ್ಸ್ ಮಾಡುತ್ತದೆಯಾದರೆ, ಸಂಶಯದಲ್ಲಿ ಕುಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಪ್ರೀತಿ ಮತ್ತು ಸಂಶಯ
ಯಾವತ್ತೂ
ಪರಸ್ಪರ ಮುಖಕೊಟ್ಟು
ಮಾತನಾಡುವದಿಲ್ಲ.
~ ಖಲೀಲ್ ಜಿಬ್ರಾನ್
ಸಾಧಾರಣವಾಗಿ ಜನರಿಗೆ ಹೃದಯ ಮತ್ತು ಸಂಶಯದ ಈ ಡೈನಾಮಿಕ್ಸ್ ಬಗ್ಗೆ ಗೊತ್ತಿಲ್ಲ. ಬಹುತೇಕ ಅವರ ಹೃದಯ ಕುಗ್ಗಿದ ಸ್ಥಿತಿಯಲ್ಲಿಯೇ ಇರುತ್ತದೆ. ಅವರಿಗೆ ರಿಲ್ಯಾಕ್ಸ್ಡ್ ಹೃದಯ ಹೇಗಿರುತ್ತದೆ ಎನ್ನುವುದು ಮರೆತೇ ಹೋಗಿದೆ. ಆದ್ದರಿಂದ ಅವರು ಎಲ್ಲ ಸರಿಯಾಗಿದೆ ಎಂದೇ ತಿಳಿದುಕೊಂಡಿರುತ್ತಾರೆ. ನೂರು ಜನರಲ್ಲಿ ತೊಂಭತ್ತೊಂಭತ್ತು ಜನರ ಹೃದಯ ಹೀಗೆ ಕುಗ್ಗಿದ ಸ್ಥಿತಿಯಲ್ಲಿಯೇ ಇರುತ್ತದೆ.
ನೀವು ಹೆಚ್ಚು ಹೆಚ್ಚು ತಲೆ ಉಪಯೋಗಿಸಿದಂತೆಲ್ಲ ಹೃದಯ ಹೆಚ್ಚು ಹೆಚ್ಚು ಕುಗ್ಗುತ್ತ ಹೋಗುತ್ತದೆ. ನೀವು ನಿಮ್ಮ ತಲೆ ಬಿಟ್ಟು ಇಳಿದುಬಂದಾಗ ಹೃದಯ ಕಮಲದಂತೆ ಅರಳಿಕೊಳ್ಳುತ್ತದೆ, ಮತ್ತು ಹೀಗಾದಾಗ ಅದು ಅತೀ ಸುಂದರವಾದ ಅನುಭವ. ಆಗ ನೀವು ನಿಜವಾಗಿಯೂ ಜೀವಂತ, ಮತ್ತು ನಿಮ್ಮ ಹೃದಯ ನಿಜವಾಗಿಯೂ ರಿಲ್ಯಾಕ್ಸ್ಡ್. ಆದರೆ ಹೃದಯ ರಿಲ್ಯಾಕ್ಸ್ ಆಗೋದು ಪ್ರೇಮ ಮತ್ತು ವಿಶ್ವಾಸದಲ್ಲಿ ಮಾತ್ರ. ಅಪನಂಬಿಕೆ ಮತ್ತು ಸಂಶಯ ಇದ್ದಾಗ ಮೈಂಡ್ ನ ಪ್ರವೇಶವಾಗುತ್ತದೆ. ಸಂಶಯ, ಮೈಂಡ್ ನ ಬಾಗಿಲು ; ಅಪನಂಬಿಕೆ ಮೈಂಡ್ ಗೆ ಆಹಾರ.
ಒಮ್ಮೆ ನೀವು ಸಂಶಯದಲ್ಲಿ ಸಿಕ್ಕಿಹಾಕಿಕೊಂಡುಬಿಟ್ಟರೆ, ಮೈಂಡ್ ನ ಜಂಜಡದಲ್ಲಿ ಸಿಕ್ಕಿಹಾಕಿಕೊಂಡಂತೆ. ನಿಮ್ಮ ಸಂಶಯ ಯಾವಾಗಲೂ ತಪ್ಪು ಎಂದು ನಾನು ಹೇಳುತ್ತಿಲ್ಲ. ನಿಮ್ಮ ಸಂಶಯ 100% ಸರಿ ಇರಬಹುದು ಆದರೆ ಅದು ಹೃದಯವನ್ನು ಕುಗ್ಗಿಸುವುದರಿಂದ ಅಪಾಯಕಾರಿ. ಅನವಶ್ಯಕ ಸಂಶಯದ ಬಗ್ಗೆ ಹುಷಾರಾಗಿರಿ.

