ಒಂಟಿತನದ ಅಂಜಿಕೆ ಇಲ್ಲ : ಅಕ್ಕ ಮಹಾದೇವಿ #23

ಮದುವೆಯಾದ ಗಂಡನನ್ನು ಒಲ್ಲದೆ, ಜನರ ನೈತಿಕ ತೀರ್ಮಾನಗಳನ್ನೂ ಎದುರಿಸುತ್ತಾ ಇದ್ದ ಸ್ಥಿತಿಯನ್ನು ಆರೂ ಇಲ್ಲದವಳು ಅನ್ನುವ ಮಾತು ವಿವರಿಸುತ್ತದೆ. ಈ ವಚನ ನುಡಿದ ಮನಸು ಅನುಭವಿಸಿದ ಒಂಟಿತನ ಅಗಾಧ. ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ

ಆರೂ ಇಲ್ಲದವಳೆಂದು ಆಳಿಗೊಳಲುಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ.
ತರಗೆಲೆಯ ಮೆಲಿದು ಆನಿಹೆನು,
ಸರಿಯ ಮೇಲೊರಗಿ ಆನಿಹೆನು.
ಚೆನ್ನಮಲ್ಲಿಕಾರ್ಜುನಯ್ಯಾ,
ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು
ನಿಮಗರ್ಪಿಸಿ ಶುದ್ಧಳಹೆನು [೬೪]

[ಆೞಿಗೊಳ್ಳು=ಮೋಸ ಮಾಡು, ಕಾಟಕೊಡು; ಆನಂಜುವಳಲ್ಲ=ನಾನು ಹೆದರುವವಳಲ್ಲ; ತರಗೆಲೆ=ಒಣಗಿದ ಎಲೆ; ಸಱಿ=ಬಂಡೆ, ಕೋಡುಗಲ್ಲು; ಕರ= ಬಹಳ, ತೀವ್ರವಾದ;  ಆನಿಹೆನು=ನಾನಿರುವೆನು]

ನನಗೆ ಯಾರೂ ಇಲ್ಲವೆಂದು ಮೋಸ ಮಾಡಬೇಡ, ಕಾಟಕೊಡಬೇಡ ಚೆನ್ನಮಲ್ಲಿಕಾರ್ಜುನಾ.  ಹಾಗೆ ಮಾಡಿದರೂ ನಾನು ಹೆದರುವವಳಲ್ಲ. ಒಣಗಿದ ಎಲೆ ತಿಂದುಕೊಂಡು, ಕೋಡುಗಲ್ಲಿನ ಮೇಲೆ ಒರಗಿಕೊಂಡು ಬದುಕಿರುತ್ತೇನೆ. ನೀನು ಇನ್ನೂ ಹೆಚ್ಚಿನ ಕೇಡನ್ನು ತಂದರೆ ನನ್ನ ಮೈಯನ್ನು, ಉಸಿರನ್ನು ನಿಮಗೇ ಒಪ್ಪಿಸಿ ಶುದ್ಧಳಾಗುವೆ,

ಅಗಾಧ ಒಂಟಿತನವನ್ನು ಅನುಭವಿಸಿದ ಮನಸು ಹೇಳುವ ಮಾತಿನಂತೆ ಈ ವಚನ ಇದೆ. ಹಾಗೆಯೇ ದೃಢವಾದ ವಿಶ್ವಾಸವೂ ವ್ಯಕ್ತವಾಗುತ್ತದೆ. ಆರೂ ಇಲ್ಲದವಳು ಅನ್ನುವ ಮಾತು ಆಕೆಯ ಒಬ್ಬಂಟಿತನವನ್ನು ಸೂಚಿಸುತ್ತದೆ. ಹಾಗೆಯೇ ಒಂಟಿತನವನ್ನು ಎದುರಿಸುವ ಧೈರ್ಯ. ಚೆನ್ನಮಲ್ಲಿಕಾರ್ಜುನನೇ ಕೊಡಬಹುದಾದ ಎಂಥ ತೊಂದರೆಯನ್ನೂ ಸಹಿಸುವ ನಿರ್ಧಾರ, ತಾನು ನಂಬಿದ್ದಕ್ಕಾಗಿ ಸಾಯುವುದಕ್ಕೂ ಸಿದ್ಧವೆಂಬ ವಿಶ್ವಾಸಗಳೂ ಈ ವಚನದಲ್ಲಿ ಒಟ್ಟಾಗಿ ಬಂದಿರುವುದನ್ನು ಗಮನಿಸಬಹುದು. ಉಳಿದ ವಚನಕಾರರು ತಮ್ಮ ಬಂಧು ಬಳಗವನ್ನು, ಶರಣರ ಸಮುದಾಯವನ್ನು ಅಥವಾ ಗುರುವನ್ನು ನೆನೆದು ತಮ್ಮವರು ಇದ್ದಾರೆ ಅನ್ನುವ ನಂಬಿಕೆ ತೋರ್ಪಡಿಸುತ್ತಾರೆ. ಅಕ್ಕಮಹದೇವಿಯ ಬದುಕಿಗೇ ಅನ್ವಯಿಸಿದರೆ ಆಕೆ ದೇವರಿಗೆ ತನ್ನನ್ನು ಒಪ್ಪಿಸಿಕೊಂಡು, ಮದುವೆಯಾದ ಗಂಡನನ್ನು ಒಲ್ಲದೆ, ಜನರ ನೈತಿಕ ತೀರ್ಮಾನಗಳನ್ನೂ ಎದುರಿಸುತ್ತಾ ಇದ್ದ ಸ್ಥಿತಿಯನ್ನು ಆರೂ ಇಲ್ಲದವಳು ಅನ್ನುವ ಮಾತು ವಿವರಿಸುತ್ತದೆ.

ಅಥವಾ ನೀನು ಮೋಸ ಮಾಡಿದರೆ ನಾನು ಹೀಗಿರುತ್ತೇನೆ ಅನ್ನುವ ಮಾತುಗಳೆಲ್ಲವೂ ಒಂಟಿತನದ ಹೆದರಿಕೆಯನ್ನು ಇಲ್ಲವಾಗಿಸಿಕೊಳ್ಳಲು ತನಗೇ ಹೇಳಿಕೊಳ್ಳುವ ಸಮಾಧಾನದ ಮಾತುಗಳೋ? ಯಾರೂ ಇಲ್ಲದ ಅ-ನಾಥೆಗೆ ಚೆನ್ನಮಲ್ಲಿಕಾರ್ಜುನನೇ ನಾಥ, ಅವನೂ ಕೇಡನ್ನು ಒಡ್ಡಿದರೆ ಪ್ರಾಣವನ್ನೇ ಕೊಡಲು ಸಿದ್ಧ ಅನ್ನುವ ವಿಶ್ವಾಸವಂತೂ ಇದೆ. ತರಗೆಲೆಯನ್ನು ತಿನ್ನುವ, ಬೆಟ್ಟದ ತುದಿಯ ಕೋಡುಗಲ್ಲಿನ ಮೇಲೆ ಒರಗುವ, ಅಲ್ಲೂ ಕೇಡು ಎದುರಾದರೆ ಧುಮುಕಿ ಪ್ರಾಣಕೊಡುವ ಚಿತ್ರಗಳು ಕಳವಳ ತುಂಬಿದ ಮನಸಿನ ವ್ಯಾಪಾರವನ್ನೂ, ಹತಾಶೆ ಬೆರೆತ ವಿಶ್ವಾಸವನ್ನೂ ತೋರುತ್ತಿವೆ ಅಂತಲೂ ಅನಿಸುತ್ತದೆ.

ʻಶಿರ ಹರಿದು ನೆಲಕ್ಕೆ ಬಿದ್ದಡೆ ನಾಲಗೆ ಕೂಡಲಸಂಗಾʼ ಅನ್ನುತ್ತದೆ (೧.೬೯೨), ʻಎಲುದೋರೆ ಸರಸವಾಡಿದರೆ ಸೈರಿಸಬೇಕುʼ (೧.೭೬೪) ಅನ್ನುವ ಬಸವ ವಚನಗಳು ನೆನಪಾಗುತ್ತವೆ. ಅಕ್ಕಮಹಾದೇವಿಯದೇ ಇನ್ನೊಂದು ವಚನ ಇದೇ ಭಾವವನ್ನು ಮತ್ತಷ್ಟು ನಾಟಕೀಯವಾಗಿ ಚಿತ್ರಿಸುತ್ತದೆ. ಮನೆಮನೆಯಲ್ಲಿ ಭಿಕ್ಷೆ ಬೇಡುವ ಹಾಗೆ ಮಾಡು, ಬೇಡಿದರೆ ಭಿಕ್ಷೆ ಇಕ್ಕದ ಹಾಗೆ ಮಾಡು, ಭಿಕ್ಷೆ ಇಕ್ಕಿದರೆ ಅದು ನೆಲಕ್ಕೆ ಬಿದ್ದು ನಾಯಿಯ ಪಾಲು ಆಗುವಂತೆ ಮಾಡು ಎಂಬ ಸವಾಲಿನಂಥ ಕೋರಿಕೆ ಅದರಲ್ಲಿದೆ (೫.೩೨೭). ವಚನಗಳಲ್ಲಿ ಎದುರಾಗುವ ಇಂಥ ಮಾತುಗಳು ನಾನತ್ವವನ್ನು ಕಳೆದುಕೊಳ್ಳುವ ಹಂಬಲದ ಸೂಚನೆಗಳಂತೆ ಕಾಣುತ್ತವೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.