ಆನಂದ ( Joy ) : ಓಶೋ 365 #Day 120

ಆನಂದ, ಎಲ್ಲ ಭಯದ ವಿಷಕ್ಕೆ ಮದ್ದು. ನೀವು ಬದುಕನ್ನು ಆನಂದಿಸದಿರುವಾಗ ಭಯ ಕಾಡುತ್ತದೆ. ನೀವು ಬದುಕನ್ನು ಆನಂದಿಸುತ್ತಿರುವಾಗ ಭಯ ಮಾಯವಾಗುತ್ತದೆ  ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ


ಒಂದು ಸಣ್ಣ ಮನೆಯಲ್ಲಿ
ದುಃಖ ಮತ್ತು ಗೊಂದಲಗಳೊಡನೆ
ವಾಸವಾಗಿದ್ದೆ.

ಆಮೇಲೊಬ್ಬ ಗೆಳೆಯ ಸಿಕ್ಕ
ರಾತ್ರಿಯಿಡೀ ಹಾಡು, ಕುಣಿತ
ಮತ್ತು ಕುಡಿತ.

ದುಃಖ ಮತ್ತು ಗೊಂದಲ
ಸಿಟ್ಟಿಗೇಳತೊಡಗಿದರು
ಆವಾಜ್ ಹಾಕತೊಡಗಿದರು.

“ಈ ಮೋಜು
ಮುಂದುವರೆಸಿದರೆ
ಮನೆ ಬಿಟ್ಟು ಹೋಗುತ್ತೇವೆ ನೋಡು.”

  • ಹಾಫಿಜ್

ಸಕಾರಾತ್ಮಕವಾಗಿರಿ, ಹೆಚ್ಚು ಆನಂದ ಅನುಭವಿಸಿ, ಹೆಚ್ಚು ನಗು, ಹೆಚ್ಚು ಹಾಡು, ಹೆಚ್ಚು ಕುಣಿತ ನಿಮ್ಮದಾಗಲಿ. ಸಣ್ಣ ಸಣ್ಣ ಸಂಗತಿಗಳ ಬಗ್ಗೆ, ಅತೀ ಸಣ್ಣ ಸಂಗತಿಗಳ ಬಗ್ಗೆ ಕೂಡ ಹೆಚ್ಚು ಉಲ್ಲಸಿತರಾಗಿ, ಹೆಚ್ಚು ಉತ್ಸಾಹಿಗಳಾಗಿ. ಬದುಕು ಇರುವುದೇ ಸಣ್ಣ ಸಣ್ಣ ಸಂಗತಿಗಳನ್ನು ಕೂಡಿಕೊಂಡು, ನೀವು ಈ ಸಂಗತಿಗಳ ಬಗ್ಗೆ ಉಲ್ಲಾಸದ ಕ್ವಾಲಿಟಿಯನ್ನು ಹೊಂದುವಿರಾದರೆ ನಿಮ್ಮ ಸಮಸ್ತ ಬದುಕು ಪ್ರಚಂಡವಾಗಿರುವುದು.

ಯಾವ ಮಹಾ ಸಂಗತಿ ಸಂಭವಿಸುವುದಕ್ಕೆ ಕಾಯಬೇಡಿ. ಮಹಾ ಸಂಗತಿಗಳು ಸಂಭವಿಸುವುದಿಲ್ಲ ಎಂದೇನಲ್ಲ ಆದರೆ ಅವುಗಳಿಗಾಗಿ ಕಾಯಬೇಡಿ. ಯಾವಾಗ ನೀವು ಸಣ್ಣ ಸಣ್ಣ ಸಂಗತಿಗಳನ್ನು, ಸಾಧಾರಣ ಸಂಗತಿಗಳನ್ನು, ದಿನಂಪ್ರತಿ ಸಂಗತಿಗಳನ್ನು ಹೊಸ ಒಳನೋಟಗಳೊಂದಿಗೆ, ಹೊಸ ಉತ್ಸಾಹದೊಂದಿಗೆ, ಹೊಸ ಚೈತನ್ಯದೊಂದಿಗೆ ಬದುಕಲು ಶುರು ಮಾಡುತ್ತೀರೋ ಆಗ ಮಹಾ ಮಹಾ ಸಂಗತಿಗಳು ಸಂಭವಿಸುತ್ತವೆ. ಈ ಎಲ್ಲ ಖುಶಿಗಳು ಸಂಗ್ರಹವಾಗುತ್ತ ಹೋಗಿ ಕೊನೆಗೆ ಅಪ್ಪಟ ಖುಶಿಯ ಚಿಲುಮೆ ಚಿಮ್ಮತೊಡಗುತ್ತದೆ.

ಆದರೆ ಅದು ಯಾವಾಗ ಎಂದು ಯಾರಿಗೂ ಗೊತ್ತಿಲ್ಲ. ಬದುಕಿನ ದಂಡೆಯ ಮೇಲಿನ ಸಣ್ಣ ಸಣ್ಣ ಖುಶಿಯ ಕಲ್ಲುಗಳನ್ನ ಸಂಗ್ರಹ ಮಾಡುತ್ತ ಹೋದಾಗ, ಆ ಸಂಗ್ರಹ ಮಹಾ ಖುಶಿಯಲ್ಲಿ ಕೊನೆಗೊಳ್ಳುವುದು. ಒಂದು ಕಲ್ಲನ್ನು ನೀವು ಸಂಗ್ರಹಿಸಿದಾಗ ಅದು ಕೇವಲ ಕಲ್ಲು ಆದರೆ ಯಾವಾಗ ನೀವು ಎಲ್ಲ ಕಲ್ಲುಗಳನ್ನು ಸಂಗ್ರಹಿಸುತ್ತೀರೋ ಆಗ ಅವು ವಜ್ರ ಸಮಾನ. ಇದೇ ಬದುಕಿನ ಪವಾಡ.

ಜಗತ್ತಿನ ಬಹುತೇಕ ಜನ ಈ ಪವಾಡವನ್ನು ಮಿಸ್ ಮಾಡಿಕೊಳ್ಳುತ್ತಾರೆ ಏಕೆಂದರೆ ಅವರು ಮಹಾ ಸಂಗತಿಗಳು ಸಂಭವಿಸುವುದನ್ನು ಕಾಯುತ್ತಿರುತ್ತಾರೆ. ಆದರೆ ಅದು ಹಾಗಾಗುವುದಿಲ್ಲ, ಸಣ್ಣ ಸಂಗತಿಗಳ ಮೂಲಕವೇ ಮಹಾ ಸಂಗತಿ ಸಂಭವಿಸುವುದು : ಮುಂಜಾನೆಯ ತಿಂಡಿ, ವಾಕಿಂಗ್, ಸ್ನಾನ, ಗೆಳಯನೊಡನೆಯ ಮಾತು, ಆಕಾಶ ನೋಡುತ್ತ ಏಕಾಂಗಿಯಾಗಿ ಸುಮ್ಮನೇ ನಿಮ್ಮ ಹಾಸಿಗೆಯ ಮೇಲೆ ಕುಳಿತಿರುವುದು ಇತ್ಯಾದಿಯಾಗಿ. ಈ ಸಣ್ಣ ಸಂಗತಿಗಳಿಂದಾಗಿಯೇ ಬದುಕಿನ ಖುಶಿ ರೂಪಗೊಂಡಿರುವುದು, ಈ ಸಣ್ಣ ಸಂಗತಿಗಳೇ ಬದುಕಿನ ತಿರುಳು.

ಒಬ್ಬ ಝೆನ್ ಮಾಸ್ಟರ್ ಗೆ ಒಬ್ಬ ಅತೃಪ್ತ ಶಿಷ್ಯನಿದ್ದ. ಆತ ಒಂದಿಲ್ಲೊಂದು ಕಾರಣದಿಂದ ಸದಾ ದುಃಖಿಯಾಗಿರುತ್ತಿದ್ದ. ಒಂದು ದಿನ ಶಿಷ್ಯ ಮಾಸ್ಟರ್ ಹತ್ತಿರ ಹೋಗಿ ಕೇಳಿಕೊಂಡ.

“ಮಾಸ್ಟರ್, ನನ್ನ ಮೇಲೆ ನಿಮ್ಮ ಆಶೀರ್ವಾದವಿರಲಿ, ನನಗೂ ನಿಮ್ಮ ತಿಳಿವನ್ನು ದಯಪಾಲಿಸಿ, ನನಗೆ ದುಃಖದಿಂದ ಮುಕ್ತಿ ಬೇಕು, ಆನಂದವನ್ನು ಹುಡುಕಬೇಕು ನಾನು “

ಮಾಸ್ಟರ್, ಆ ಅತೃಪ್ತ ಶಿಷ್ಯನಿಗೆ ಒಂದು ಮುಷ್ಟಿ ಉಪ್ಪನ್ನು ಒಂದು ಗ್ಲಾಸ್ ನೀರಿನಲ್ಲಿ ಹಾಕಿ, ಕರಗಿಸಿ, ಕುಡಿಯಲು ಹೇಳಿದರು.

ಒಂದು ಗುಟುಕು ಉಪ್ಪಿನ ನೀರು ಬಾಯಿಗೆ ಬೀಳುತ್ತಲೇ ಶಿಷ್ಯ, ವ್ಯಾಕ್ ಎನ್ನುತ್ತ ಎಲ್ಲ ಉಗಳಿ ಬಿಟ್ಟ.

“ ಯಾಕೆ? ಹೇಗಿದೆ ರುಚಿ ? “ ಕೇಳಿದರು ಮಾಸ್ಟರ್. “

“ ದರಿದ್ರವಾಗಿದೆ “ ಎಂದ ಶಿಷ್ಯ.

ಮಾಸ್ಟರ್, ಶಿಷ್ಯನ ಕೈ ಹಿಡಿದುಕೊಂಡು ದರದರನೇ ಎಳೆದುಕೊಂಡು ಸಮೀಪದ ಕೊಳದ ಹತ್ತಿರ ಬಂದರು.

“ ಈ ಕೊಳದಲ್ಲಿ ಒಂದು ಮುಷ್ಟಿ ಉಪ್ಪು ಹಾಕು ನೋಡೋಣ “ ಎಂದರು.

ಶಿಷ್ಯ, ಮಾಸ್ಟರ್ ಹೇಳಿದಂತೆ ಮಾಡಿದ.

“ ಈಗ ಕೊಳದ ನೀರು ಕುಡಿದು ಹೇಳು, ರುಚಿ ಹೇಗಿದೆ? ಮೊದಲಿನ ಹಾಗೆ ಉಪ್ಪು ಉಪ್ಪಾಗಿದೆಯಾ? “

ಶಿಷ್ಯ, ಕೊಳದಿಂದ ಒಂದು ಬೊಗಸೆ ನೀರು ಕುಡಿದು ಹೇಳಿದ “ ಇಲ್ಲ ಮಾಸ್ಟರ್, ರುಚಿಯಾಗಿದೆ “

ಶಿಷ್ಯನನ್ನು ಕೊಳದ ದಂಡೆಯ ಮೇಲೆ ಕೂರಿಸಿ, ಕೈ ಹಿಡಿದುಕೊಂಡು ಮಾಸ್ಟರ್ ಹೇಳಿದರು.

“ ಬದುಕಿನಲ್ಲಿ ದುಃಖದ ಪ್ರಮಾಣ ಒಂದು ಮುಷ್ಟಿ ಉಪ್ಪಿನಷ್ಟೇ. ಆದರೆ ಅದನ್ನು ಅನುಭವಿಸುವಾಗ, ನೀನು ಗ್ಲಾಸಿನಷ್ಟಾಗಬೇಡ, ಕೊಳದಷ್ಟಾಗು. ದುಃಖವನ್ನು, ಭರಿಸುವ ನಿನ್ನ ಅರಿವಿನ ವ್ಯಾಪ್ತಿ ಕೊಳದಷ್ಟು ವಿಶಾಲವಾಗಲಿ. ಆಗ ನಿನಗೆ ಕೊಳದ ನೀರಿನಂತೆ ಎಲ್ಲ ರುಚಿಯಾಗೇ ಇರುವುದು. “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.