ನಕಾರಾತ್ಮಕತೆಯ ಬಗ್ಗೆ ಯಾವತ್ತೂ ಚಿಂತೆ ಮಾಡಬೇಡಿ. ಸುಮ್ಮನೇ ಒಂದು ದೀಪ ಹಚ್ಚಿ, ಕತ್ತಲು ತಾನೇ ಮಾಯವಾಗಿಬಿಡುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಕತ್ತಲೆಯೊಡನೆ ಫೈಟ್ ಮಾಡಲು ಹೋಗಬೇಡಿ, ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಕತ್ತಲು ಎನ್ನುವುದು ಅಸ್ತಿತ್ವದಲ್ಲಿಯೇ ಇಲ್ಲವಾದ್ದರಿಂದ ಅದರ ಜೊತೆ ಫೈಟ್ ಹೇಗೆ ಸಾಧ್ಯ? ಸುಮ್ಮನೇ ಒಂದು ದೀಪ ಹಚ್ಚಿ, ಕತ್ತಲು ತಾನೇ ಮಾಯವಾಗಿಬಿಡುತ್ತದೆ. ಆದ್ದರಿಂದ ಕತ್ತಲೆಯ ಬಗ್ಗೆ, ಭಯದ ಬಗ್ಗೆ ಮರೆತುಬಿಡಿ. ಸಾಮಾನ್ಯವಾಗಿ ಮನುಷ್ಯರನ್ನು ಕಾಡುವ ಎಲ್ಲ ಋಣಾತ್ಮಕತೆಯ ಬಗ್ಗೆ ಮರೆತುಬಿಡಿ. ಸುಮ್ಮನೇ ಉತ್ಸಾಹದ ದೀಪವೊಂದನ್ನು ಹಚ್ಚಿಬಿಡಿ.
ಮುಂಜಾನೆ ಮೊಟ್ಟಮೊದಲು ಅತ್ಯಂತ ಉತ್ಸಾಹದಲ್ಲಿ ನಿದ್ದೆಯಿಂದ ಎದ್ದೇಳಿ. ಇವತ್ತಿನ ದಿನವನ್ನು ಹೆಚ್ಚಿನ ಖುಶಿಯಲ್ಲಿ ಕಳೆಯುವ ನಿರ್ಧಾರ ಮಾಡಿ ಮತ್ತು ಆ ನಿರ್ಧಾರದಂತೆ ನಡೆದುಕೊಳ್ಳಿ. ಮುಂಜಾನೆಯ ತಿಂಡಿಯನ್ನು ಭಗವಂತನನ್ನೇ ಸೇವಿಸುವಷ್ಟು ಪ್ರೀತಿಯಿಂದ ಸ್ವೀಕರಿಸಿ. ಇದು ನಿಮ್ಮ ದಿವ್ಯ ಸಂಸ್ಕಾರವಾಗಲಿ. ಭಗವಂತ ನಿಮ್ಮೊಳಗೇ ಇದ್ದಾನೆ, ಅವನು ನಿಮ್ಮ ಜೊತೆ ಸ್ನಾನ ಮಾಡುತ್ತಿದ್ದಾನೆ ಎನ್ನುವ ಭಕ್ತಿ, ಕಾಳಜಿಯಲ್ಲಿ ಸ್ನಾನ ಮಾಡಿ. ಆಗ ನಿಮ್ಮ ಸ್ನಾನದ ಮನೆಯೇ ದೇವಾಲಯವಾಗುತ್ತದೆ, ಮತ್ತು ನಿಮ್ಮ ಸ್ನಾನದ ನೀರು ಅಭಿಷೇಕದ ನೀರಾಗುತ್ತದೆ.
ಪ್ರತಿ ಮುಂಜಾನೆಯನ್ನು, ಖಚಿತತೆಯಲ್ಲಿ, ಸ್ಪಷ್ಟತೆಯಲ್ಲಿ, ನಿರ್ಧಾರಾತ್ಮಕತೆಯಲ್ಲಿ ಶುರು ಮಾಡಿ. ಇವತ್ತಿನ ದಿನ ಅತ್ಯಂತ ಸುಂದರವಾಗಿರಲಿದೆ ಮತ್ತು ನೀವು ಈ ದಿನವನ್ನು ಅದ್ಭುತವಾಗಿ ಬದುಕಲಿದ್ದೀರಿ ಎಂದು ನಿಮಗೆ ನೀವೇ ಪ್ರಾಮಿಸ್ ಮಾಡಿಕೊಳ್ಳಿ. ಮತ್ತು ಪ್ರತಿ ರಾತ್ರಿ ನಿದ್ದೆಗೆ ಜಾರುವಾಗ ಇವತ್ತು ಎಷ್ಟೊಂದು ಅದ್ಭುತ ಸಂಗತಿಗಳು ಘಟಿಸಿದವು ಎನ್ನುವುದನ್ನು ನೆನಪು ಮಾಡಿಕೊಳ್ಳಿ. ಕೇವಲ ಈ ನೆನಪು ನಿಮ್ಮ ನಾಳೆಯನ್ನು ಸುಂದರವಾಗಿಸುತ್ತದೆ. ನಿಮ್ಮ ಕನಸುಗಳು ಸುಂದರವಾಗಿರಲಿವೆ. ಅವು ನಿಮ್ಮ ಉತ್ಸಾಹವನ್ನು ಮರುದಿನಕ್ಕೆ ದಾಟಿಸಲಿವೆ. ಮತ್ತು ನೀವು ಕೂಡ ಕನಸುಗಳಿಂದ ಪ್ರೇರಿತರಾಗಿ ಹೊಸ ಸಾಮರ್ಥ್ಯದೊಂದಿಗೆ ಮರುದಿನವನ್ನು ಎದುರುಗಾಣುತ್ತೀರಿ. ಹೀಗೆ ನಿಮ್ಮ ಪ್ರತಿ ಕ್ಷಣವನ್ನೂ ಪವಿತ್ರವಾಗಿಸಿಕೊಳ್ಳಿ.
ಹಳೆಯ ಜಪಾನಿನಲ್ಲಿ, ಬಿದಿರು ಮತ್ತು ಕಾಗದಗಳಿಂದ ಕಂದೀಲುಗಳನ್ನು ತಯಾರಿಸಿ, ಅದರಲ್ಲಿ ಮೇಣದ ಬತ್ತಿ ಇಟ್ಟು ಉಪಯೋಗಿಸುತ್ತಿದ್ದರು.
ಕುರುಡನೊಬ್ಬ ತನ್ನ ಗೆಳೆಯನ ಮನೆಗೆ ಬಂದಿದ್ದ. ರಾತ್ರಿ ಅವ ವಾಪಸ್ ಹೋಗುವಾಗ, ಗೆಳೆಯ ಅವನಿಗೆ ದಾರಿಯಲ್ಲಿ ಬಳಸಲು ಒಂದು ಕಂದೀಲು ಕೊಟ್ಟ.
ಕುರುಡ : ನನಗೇಕೆ ಕಂದೀಲು? ಮೊದಲೇ ನನಗೆ ಕಣ್ಣು ಕಾಣಿಸುವುದಿಲ್ಲ. ಕತ್ತಲು, ಬೆಳಕು ಎಲ್ಲ ಒಂದೇ ನನಗೆ.
ಗೆಳೆಯ : ಗೊತ್ತು ನನಗೆ, ದಾರಿ ತೋರಿಸಲು ನಿನಗೆ ಕಂದೀಲು ಬೇಕಿಲ್ಲ. ಆದರೆ ಕಂದೀಲು ನಿನ್ನ ಹತ್ತಿರ ಇರದೇ ಹೋದರೆ, ದಾರಿಹೋಕರು ನಿನಗೆ ಡಿಕ್ಕಿ ಹೊಡೆಯಬಹುದು. ನಿನ್ನ ಜೊತೆ ಈ ಕಂದೀಲು ಇರಲಿ.
ಕುರುಡ ಕಂದೀಲು ಹಿಡಿದುಕೊಂಡು ರಸ್ತೆಯಲ್ಲಿ ನಡೆಯತೊಡಗಿದ. ಕತ್ತಲೆಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ, ಒಬ್ಬ ದಾರಿಹೋಕ ಕುರುಡನಿಗೆ ಡಿಕ್ಕಿ ಹೊಡೆದ.
ಯಾಕೆ ದಾರಿ ಕಾಣುವುದಿಲ್ಲವೆ? ನನ್ನ ಕೈಯಲ್ಲಿರುವ ಕಂದೀಲಿನ ಬೆಳಕು ಕಾಣುವುದಿಲ್ಲವೆ? ಕುರುಡ ಚೀರಿದ.
ನಿನ್ನ ಕೈಯಲ್ಲಿರುವ ಕಂದೀಲು ಆರಿ ಹೋಗಿದೆ ಗೆಳೆಯ, ದಾರಿಹೋಕ ಉತ್ತರಿಸಿದ.

