ಈ ವಚನದಲ್ಲಿ ವ್ಯಕ್ತವಾಗುವ ಆತ್ಮವಿಶ್ವಾಸ ಮತ್ತು ಯಾಚನೆ ಗಮನ ಸೆಳೆಯುತ್ತವೆ. ನಿನಗಿದು ವಿಧಿಯೆ, ನೀನೊಲ್ಲದೊಡೆ ನಾನೊಲಿಸುವ ಪರಿ ಎಂತು, ಕೊಂಬ ಪರಿ ಎಂತು ಎಂಬ ಮೂರು ಮಾತು ಈ ವಚನವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮಾಡುತ್ತವೆ. ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಅಯ್ಯಾ
ನೀನೆನ್ನ ಮೊರೆಯನಾಲಿಸಿದಡಾಲಿಸು
ಆಲಿಸದಿರ್ದಡೆ ಮಾಣು
ಅಯ್ಯಾ
ನೀನೆನ್ನ ದುಃಖವ ನೋಡಿದಡೆ ನೋಡು
ನೋಡದಿರ್ದಡೆ ಮಾಣು
ನಿನಗಿದು ವಿಧಿಯೆ
ನೀನೊಲ್ಲದಡೆ ಆನೊಲಿಸುವ ಪರಿಯೆಂತಯ್ಯಾ
ಮನವೆಳಸಿ ಮಾರುವೋಗಿ ಮರೆವೊಕ್ಕಡೆ
ಕೊಂಬ ಪರಿಯೆಂತಯ್ಯಾ ಚೆನ್ನಮಲ್ಲಿಕಾರ್ಜುನಾ [೩೪]
ಮೊರೆ=ಕರುಣಾಜನಕವಾದ ಯಾಚನೆ; ಆಲಿಸಿದೊಡಾಲಿಸು=ಕೇಳಿದರೆ ಕೇಳು; ಮಾಣು=ಬಿಡು; ನೀನೊಲ್ಲದಡೆ=ನೀನು ಬೇಡವೆಂದರೆ; ಆನೊಲಿಸುವ=ನಾನು ನಿನ್ನನ್ನು ಒಲಿಸುವ; ಮನವೆಳಸಿ=ಮನಸ್ಸನ್ನು ಎಳೆಯಿಸಿ, ಸೆಳೆದುಕೊಂಡು; ಮಱೆವೊಗು=ರಕ್ಷಣೆಯನ್ನು ಬೇಡಿ ಮೊರೆಹೊಗು; ಕೊಂಬ=ಸ್ವೀಕರಿಸುವ, ಕೊಳ್ಳುವ; ಪರಿ=ರೀತಿ]
ಅಯ್ಯಾ, ನೀನು ನನ್ನ ಮೊರೆಯನ್ನು ಕೇಳಿದರೆ ಕೇಳು, ಕೇಳದಿದ್ದರೆ ಬಿಡು. ನನ್ನ ದುಃಖವನ್ನು ನೋಡಿದರೆ ನೋಡು, ನೋಡದಿದ್ದರೆ ಬಿಡು. ಹಾಗೆ ಕೇಳಲೇಬೇಕು, ನೋಡಲೇಬೇಕು ಅನ್ನುವುದು ವಿಧಿಯ ಹಾಗೆ ಕಡ್ಡಾಯವಲ್ಲ. ನೀನು ಒಲ್ಲೆ ಎಂದಾದರೆ ನಾನು ನಿನ್ನನ್ನು ಒಲಿಸುವ ರೀತಿ ಯಾವುದು? ಮನಸು ನಿನ್ನತ್ತ ಸೆಳೆತಕ್ಕೆ ಒಳಗಾಗಿ, ನಿನ್ನ ರಕ್ಷಣೆಯನ್ನು ಬಯಸಿ ಬಂದರೆ [ಒಲವಿರದ ನೀನು] ಅದನ್ನು ಯಾವ ರೀತಿ ಹೇಗೆ ಸ್ವೀಕರಿಸುತ್ತೀಯೆ ಚೆನ್ನಮಲ್ಲಿಕಾರ್ಜುನಾ.
ಈ ವಚನದಲ್ಲಿ ವ್ಯಕ್ತವಾಗುವ ಆತ್ಮವಿಶ್ವಾಸ ಮತ್ತು ಯಾಚನೆ ಗಮನ ಸೆಳೆಯುತ್ತವೆ. “ನಿನಗಿದು ವಿಧಿಯೆ”, “ನೀನೊಲ್ಲದೊಡೆ ನಾನೊಲಿಸುವ ಪರಿ ಎಂತು”, “ಕೊಂಬ ಪರಿ” ಎಂತು ಎಂಬ ಮೂರು ಮಾತು ಈ ವಚನವನ್ನು ಸೂಕ್ಷ್ಮವಾಗಿ ಗಮನಿಸುವಂತೆ ಮಾಡುತ್ತವೆ. ನನ್ನ ದುಃಖ ಕೇಳಲೇಬೇಕು ಅನ್ನುವುದು ನಿನ್ನ ವಿಧಿ ಅನ್ನುವ ಡಿಮಾಂಡ್ ಅಂದುಕೊಳ್ಳಬೇಕೋ ಅಥವಾ ಕೇಳುವುದು, ನೋಡುವುದು ಕಡ್ಡಾಯವಲ್ಲ, ನಿನ್ನಿಷ್ಟ ಅಂದುಕೊಳ್ಳಬೇಕೋ! ನನಗೇನೋ ನಿನ್ನಿಷ್ಟ ಅನ್ನುವುದೇ ಸೂಕ್ತ ಅನಿಸುತ್ತದೆ. ನನ್ನ ಮನಸು ಸೆಳೆತಕ್ಕೆ ಒಳಗಾಗಿದೆ ಅನ್ನುವಾಗ ಅದರಲ್ಲಿ ಚೆನ್ನಮಲ್ಲಿಕಾರ್ಜುನನ ಹೊಣೆ ಏನೂ ಇಲ್ಲ, ನನ್ನ ಮನಸೇ ಆಕರ್ಷಣೆಗೆ ಒಳಗಾಯಿತು ಅನ್ನುವ ಅರಿವೂ ಇದೆ. ನೀನು ಒಲ್ಲೆ ಅನ್ನುವುದಾರೆ, ಅಂದರೆ-ನನ್ನ ಕೋರಿಕೆ, ದುಃಖ, ನಾನು ಅನುಭವಿಸುತ್ತಿರುವ ಸೆಳೆತ, ಪ್ರೀತಿ ಎಲ್ಲವನ್ನೂ ಒಲ್ಲೆ ಎನ್ನುವುದಾದರೆ, [ಆ ಸ್ವಾತಂತ್ರ್ಯ ನಿನಗಿದೆ] ನಾನು ಹೇಗೆ ನಿನ್ನ ಒಲಿಸಲಿ. ಅದು ಅಸಾಧ್ಯವೆನ್ನುವ ದನಿ ಇದೆಯೋ, ನಿನ್ನ ಒಲಿಸುವ ರೀತಿ, ನಿನಗೇನು ಇಷ್ಟ ಅನ್ನುವುದನ್ನು ನೀನೇ ಹೇಳು ಅನ್ನುವ ಅಸಹಾಯ ಕೋರಿಕೆ ಇದೆಯೋ. ಕೊನೆಯ ಸಾಲಂತೂ ಬೆರಗು ಹುಟ್ಟಿಸುತ್ತದೆ. ನಾನು ನಿನ್ನನ್ನು ಒಲಿಸಲು ಆಗದಿದ್ದರೆ ಮೊರೆಹೊಕ್ಕು ಬಂದ ನನ್ನನ್ನು ಹೇಗೆ ಸ್ವೀಕರಿಸುತ್ತೀಯೆ ಅನ್ನುವ ಪ್ರಶ್ನೆಯನ್ನು ಕೇಳುತ್ತ ಉತ್ತರಕ್ಕೆ ಕಾಯುವ ತಾಳ್ಮೆ, ಅಥವಾ ಅಸಹಾಯ ಮುನಿಸು ಇರುವಂತಿದೆ. ಈ ವಚನ ಓದುಗರ ಮನಸ್ಥಿತಿ ಮತ್ತು ಭಾವ ಗ್ರಹಿಕೆಯನ್ನು ಅನುಸರಿಸಿ ಹಲವು ಭಾವ ಸಾಧ್ಯತೆಗಳನ್ನು ತೋರುತ್ತದೆ.
ಅಕ್ಕನ ಈ ವಚನ ಓದುತ್ತಿರುವಾಗ ಗಜೇಶ ಮಸಣಯ್ಯನ ಇನ್ನೊಂದು ವಚನ ನೆನಪಾಗುತ್ತದೆ.
ಒಲಿದವರ ಕೊಲುವಡೆ ಮಸೆದ ಕೂರಲಗೇಕೆ/ಅವರನೊಲ್ಲೆನೆಂದಡೆ ಸಾಲದೆ/ಮಹಾಲಿಂಗ ಗಜೇಶ್ವರನ [ಶರಣರ]ನಗಲಿದಡೆ
ತುಪ್ಪದಲ್ಲಿ ಕಿಚ್ಚ ನಂದಿಸಿದಂತಾದೆನವ್ವಾ [೭.೨೧೫]
ಅಯ್ಯಾ, ನೀನು ಕೇಳಿದಡೆ ಕೇಳು, ಕೇಳದಡೆ ಮಾಣು ಎಂದು ಆರಂಭವಾಗುವ ಅಕ್ಕನ ಇನ್ನೊಂದು ವಚನ [೫.೩೩] ಹೆಚ್ಚು ವಿಸ್ತಾರವಾದದ್ದು, ಅತಿ ಸರಳವಾದದ್ದು. ಈ ವಚನದಲ್ಲಿರುವ ಭಾವಗಳ ಹೊರಳು ಅದರಲ್ಲಿ ಇಲ್ಲ ಅನಿಸಿತು.

