ನಾನು ಹೆಂಗೂಸಲ್ಲ ನಾನು ಸೂಳೆಯಲ್ಲ : ಅಕ್ಕ ಮಹಾದೇವಿ #25

ಈ ವಚನದಲ್ಲಿ ಮತ್ತೆ ಮತ್ತೆ ಬಳಕೆಯಾಗುವ ಅಣ್ಣಾ ಎಂಬ ಸಂಬೋಧನೆ ಹೆಣ್ಣೊಬ್ಬಳು ಸಮಾಜ ಒಪ್ಪಿಕೊಂಡ ಸಂಬಂಧ ಸೂಚಕದ ಬಳಕೆಯ ಮೂಲಕವೇ ತನ್ನ ಗಟ್ಟಿತನವನ್ನು ಘೋಷಿಸುವ ಹಾಗೆ ಕೇಳುತ್ತದೆ  ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ

ಬಟ್ಟಿಹ ಮೊಲೆಯ ಭರದ ಜವ್ವನದ ಚಲುವ ಕಂಡು ಬಂದಿರಣ್ಣಾ.
ಅಣ್ಣಾ
ನಾನು ಹೆಂಗೂಸಲ್ಲ 
ಅಣ್ಣಾ
ನಾನು ಸೂಳೆಯಲ್ಲ.
ಅಣ್ಣಾ
ಮತ್ತೆ ನನ್ನ ಕಂಡು ಕಂಡು ಆರೆಂದು ಬಂದಿರಣ್ಣಾ ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿನ ಪರಪುರುಷನು ನಮಗಾಗದ ಮೋರೆ
ನೋಡಣ್ಣಾ  [೨೯೨]

[ಬಟ್ಟಿಹ=ದುಂಡಗಿರುವ. ವೃತ್ತದ ತದ್ಭವ ರೂಪ ಬಟ್ಟು. ಭರದ ಜವ್ವನ=ಆವೇಗ ತುಂಬಿದ ಯೌವನ]

ಅಣ್ಣಾ, ನನ್ನ ದುಂಡು ಮೊಲೆ, ಆವೇಗ ತುಂಬಿದ ಹರೆಯದ ಚೆಲುವು ನಿಮಗೆ ಕಂಡು ಬಂದಿದ್ದೀರಿ. ನಾನು ಹೆಂಗುಸಲ್ಲ, ಸೂಳೆಯೂ ಅಲ್ಲ. ಮತ್ತೆ ಏನು ಕಂಡು ಬಂದಿರಿ. ಚೆನ್ನಮಲ್ಲಿಕಾರ್ಜುನ ಎಂಬ ಗಂಡನ್ನು ಬಿಟ್ಟು ಬೇರೆ ಯಾವ ಗಂಡಸರನ್ನೂ ನಾನು ಒಲ್ಲೆ.

ಹಿಂದಿನ ವಚನದ ಮತ್ತೊಂದು ಮಗ್ಗುಲು ಇದು ಅನಿಸುತ್ತದೆ. ಹೆಣ್ಣು, ಚೆಲುವೆ, ಸುಖ ಕೊಡುವ ಸೂಳೆ ಎಂಬ, ನೀವು ಗ್ರಹಿಸುವ ಯಾವ ಪಾತ್ರವೂ ನಾನಲ್ಲ. ಒಲಿಯದ ಚೆನ್ನಮಲ್ಲಿಕಾರ್ಜುನನನ್ನು ಒಲಿಸುವುದು ಹೇಗೆ ಅಸಾಧ್ಯವೋ ಹಾಗೇ ಈ ಲೋಕದ ಗಂಡಸರನ್ನು ಒಲ್ಲದ ನನ್ನನ್ನು ನೀವು ಒಲಿಸುವುದೂ ಅಸಾಧ್ಯ. ಈ ವಚನದಲ್ಲಿ ಮತ್ತೆ ಮತ್ತೆ ಬಳಕೆಯಾಗುವ ಅಣ್ಣಾ ಎಂಬ ಸಂಬೋಧನೆ ಹೆಣ್ಣೊಬ್ಬಳು ಸಮಾಜ ಒಪ್ಪಿಕೊಂಡ ಸಂಬಂಧ ಸೂಚಕದ ಬಳಕೆಯ ಮೂಲಕವೇ ತನ್ನ ಗಟ್ಟಿತನವನ್ನು ಘೋಷಿಸುವ ಹಾಗೆ ಕೇಳುತ್ತದೆ. ದೇಹ, ವಯಸು, ಚೆಲುವು ಎಲ್ಲೂ ನಿಮ್ಮದಾದ ಕಾಣುವ ಕಣ್ಣು, ಬಯಸುವ ಮನಸಿನಲ್ಲಿ ಮೂಡುವ ಬಿಂಬವಷ್ಟೇ. ನಿಜವಾಗಿರುವ ನನಗೆ ನಿಮ್ಮ ಮುಖವನ್ನು ಕಂಡರೇ ಆಗುವುದಿಲ್ಲ. ಎದುರಿಗಿರುವ ಮನುಷ್ಯ ಜೀವದ ಭಾವವನ್ನು ಗ್ರಹಿಸುವ ಸೂಕ್ಷ್ಮತೆ ಇರುವ ಗಂಡಾದರೆ ಮಾತ್ರ ಇಂಥ ಮಾತು ಪರಿಣಾಮ ಬೀರೀತು ಅಷ್ಟೇ ಅನ್ನುವುದು ದಿನ ನಿತ್ಯದ ಘಟನೆಗಳನ್ನು ನೋಡುವ ನಮಗೆಲ್ಲಾ ತಿಳಿದಿದೆ ಅಲ್ಲವೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.