ನಂಬಿಕೆ ಒಂದು ಸತ್ತ ವಿಶ್ವಾಸ. ವಿಶ್ವಾಸವಿಲ್ಲದಿದ್ದರೂ ನಿಮಗೆ ಇನ್ನೂ ನಂಬಿಕೆ ಇದೆ. ಆದರೆ ವಿಶ್ವಾಸ ಜೀವಂತಿಕೆಯಿಂದ ಕೂಡಿದ್ದು, ಥೇಟ್ ಪ್ರೀತಿಯಂತೆ ~ ಓಶೋ ರಜನೀಶ್, ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಜವಾದ ನಂಬಿಕೆ
ಅಂತರಂಗಕ್ಕೆ ಸಂಬಂಧಿಸಿದ್ದು.
ಕಳಚಿಕೊಂಡುಬಿಡುತ್ತವೆ
ಬಾಕಿ ಎಲ್ಲ .
ಯಾವ ಶುದ್ಧ ನೀರಿನಿಂದಲೂ ಸ್ವಚ್ಛವಾಗದ
ಒಂದೇ ಒಂದು ಕೊಳಕು ಕೊಳೆಯೆಂದರೆ
ನಮ್ಮ ಆತ್ಮವನ್ನು ಕಲುಷಿತಗೊಳಿಸುತ್ತಿರುವ
ದ್ವೇಷ ಮತ್ತು ಧರ್ಮಾಂಧತೆ.
ನಿಮ್ಮ ದೇಹವನ್ನು
ಉಪವಾಸ ಮತ್ತು ಕಾಮನೆಗಳ ಹತೋಟಿಯಿಂದ
ಸ್ವಚ್ಛವಾಗಿರಿಸಿಕೊಳ್ಳಬಹುದು
ಆದರೆ
ಹೃದಯವನ್ನು ಶುದ್ಧವಾಗಿಡಬಲ್ಲದ್ದು
ಪ್ರೇಮ ಮಾತ್ರ.
~ ಶಮ್ಸ್ ತಬ್ರೀಝಿ
ಎಲ್ಲ ನಂಬಿಕೆಗಳು, ನೀವು ಯಾವುದನ್ನ ಪ್ರಾರ್ಥನೆ ಎನ್ನುತ್ತೀರೋ, ಯಾವುದನ್ನು ಧ್ಯಾನ ಎನ್ನುತ್ತೀರೋ ಆ ಎಲ್ಲವನ್ನೂ ಕಳೆದುಕೊಂಡುಬಿಟ್ಟಿವೆ. ಇಡೀ ಭಾವಾನಂದದ ಭಾಷೆಯನ್ನು ಮರೆತುಬಿಟ್ಟಿವೆ. ಅವೆಲ್ಲವೂ ಬೌದ್ಧಿಕೀಕರಣಗೊಂಡಿವೆ, ಸಿದ್ಧಾಂತಗಳಾಗಿವೆ, ಪದ್ಧತಿ, ಸಂಪ್ರದಾಯಗಳಾಗಿಬಿಟ್ಟಿವೆ. ಅಲ್ಲಿ ಬಹಳ ಪದಗಳಿವೆ ಆದರೆ ಅರ್ಥ ಮಿಸ್ ಆಗಿದೆ, ಮಹತ್ವ ಮಿಸ್ ಆಗಿದೆ. ಹೀಗಾಗಬೇಕಾದದ್ದು ಸ್ವಾಭಾವಿಕ. ಹೀಗಾಗಲೇಬೇಕು.
ಜೀಸಸ್ ಜೀವಂತವಾಗಿದ್ದಾಗ, ಭೂಮಿಯ ಮೇಲೆ ಧರ್ಮ ನಡೆದಾಡುತ್ತಿತ್ತು. ಆ ಕೆಲವು ಅದೃಷ್ಟಶಾಲಿಗಳು ಯಾರು ಜೀಸಸ್ ನ ಗುರುತಿಸಿದರೋ, ಅವನ ಜೊತೆ ಕೆಲ ಹೆಜ್ಜೆ ಹಾಕಿದರೋ ಅವರು ಬದಲಾವಣೆಗೊಳಗಾದರು. ಕ್ರಿಶ್ಚಿಯನ್ ಆಗುವುದು ಕೇವಲ ಮೇಲು ಮೇಲಿನದು, ಜಿಸಸ್ ನಿಮ್ಮ ಒಳಗನ್ನು ಪ್ರವೇಶಿಸಿ, ನಿಮ್ಮ ಬದಲಾವಣೆಗೆ ಕಾರಣನಾದದ್ದು ಮುಖ್ಯ. ನಿಮ್ಮ ಮತ್ತು ಕ್ರಿಸ್ತನ ನಡುವೆ ಏನೋ ಒಂದು ಸಂಭವಿಸಿದೆ, ನೀವು ಪ್ರಾರ್ಥನಾಶಾಲಿಗಳಾಗಿದ್ದೀರ. ನೋಡಲು ನಿಮಗೆ ವಿಭಿನ್ನವಾದ ಕಣ್ಣುಗಳಿವೆ, ವಿಭಿನ್ನ ಹೃದಯದ ಬಡಿತವಿದೆ. ಎಲ್ಲ ಅದೇ ಇರುವಾಗಲೂ ನೀವು ಬದಲಾಗಿದ್ದೀರಿ.
ಗಿಡ ಮರಗಳು ಹಸಿರಾಗಿಯೇ ಇವೆ ಆದರೆ ಈಗ ವಿಭಿನ್ನವಾಗಿ. ಹಸಿರುತನ ಈಗ ಜೀವಂತಿಕೆಯಿಂದ ಕೂಡಿದೆ. ನೀವು ನಿಮ್ಮ ಸುತ್ತ ಇರುವ ಬದುಕನ್ನ ಬಹುತೇಕ ಸ್ಪರ್ಶ ಮಾಡಬಹುದು. ಆದರೆ ಒಮ್ಮೆ ಜೀಸಸ್ ಹೊರಟು ಹೋದ ಮೇಲೆ ಅವನು ಹೇಳಿದ ಎಲ್ಲವನ್ನೂ ಸಮೀಕರಣಗೊಳಿಸಿ ಪದ್ಧತಿಗಳನ್ನಾಗಿಸಲಾಯಿತು. ಜನ ಬೌದ್ಧಿಕವಾಗಿ ಕ್ರಿಶ್ಚಿಯನ್ ಆದರು, ಆದರೆ ಅವರೊಳಗೆ ಈಗ ಜೀವಂತ ದೇವರ ವಿಳಾಸವಿಲ್ಲ.
ನಂಬಿಕೆ ಒಂದು ಸತ್ತ ವಿಶ್ವಾಸ. ವಿಶ್ವಾಸವಿಲ್ಲದಿದ್ದರೂ ನಿಮಗೆ ಇನ್ನೂ ನಂಬಿಕೆ ಇದೆ. ಆದರೆ ವಿಶ್ವಾಸ ಜೀವಂತಿಕೆಯಿಂದ ಕೂಡಿದ್ದು, ಥೇಟ್ ಪ್ರೀತಿಯಂತೆ.
ಕೆಡುಕಿನ ಅಧಿಪತಿ ಮಾರ ತನ್ನ ಸೇವಕರೊಡನೆ ಭಾರತ ದೇಶದ ಹಳ್ಳಿಯೊಂದರ ಮೂಲಕ ಹಾಯ್ದು ಪ್ರಯಾಣ ಮಾಡುತ್ತಿದ್ದ.
ಹೀಗೆ ಪ್ರಯಾಣ ಮಾಡುವಾಗ, ಧ್ಯಾನದಲ್ಲಿ ತಲ್ಲೀನನಾಗಿದ್ದ ಒಬ್ಬ ಮನುಷ್ಯ ಅವನ ಕಣ್ಣಿಗೆ ಬಿದ್ದ. ಅವರು ನೋಡ ನೋಡುತ್ತಿದ್ದಂತೆಯೇ, ಧ್ಯಾನಿಯ ಮುಖ ಪ್ರಖರ ತೇಜಸ್ಸಿನಿಂದ ಹೊಳೆಯತೊಡಗಿತು.
ಯಾಕೆ ಆ ಮನುಷ್ಯನ ಮುಖದ ಸುತ್ತ ಈ ದಿವ್ಯ ಪ್ರಭಾವಳಿ ಎಂದು ಸೇವಕರು ಮಾರನನ್ನು ಕೇಳಿದರು.
“ ಅವನು ಈಗ ತಾನೇ ಸತ್ಯವೊಂದನ್ನು ಕಂಡು ಕೊಂಡಿದ್ದಾನೆ” ಮಾರ ಉತ್ತರಿಸಿದ.
“ಓ ! ಕೆಡಕಿನ ಅಧಿಪತಿ, ಅವನು ಸತ್ಯವೊಂದನ್ನು ಕಂಡುಕೊಂಡಿದ್ದಾನೆ ಎಂದರೆ ನಿನಗೆ ಇನ್ನು ಚಿಂತೆ ಶುರು”
ಸೇವಕನೊಬ್ಬ ಕೇಳಿದ.
“ ಬಹುತೇಕ ಸತ್ಯವನ್ನು ಕಂಡುಕೊಂಡ ಜನ ಮರು ಘಳಿಗೆಯಲ್ಲೇ ಅದರಿಂದ ನಂಬಿಕೆಯೊಂದನ್ನು ಹುಟ್ಟು ಹಾಕುತ್ತಾರೆ, ಹಾಗಾಗಿ ನನಗೇನು ಭಯವಿಲ್ಲ “
ಮಾರ ನಗುತ್ತ ಉತ್ತರಿಸಿದ.
*****************************

