ಅಂತಿಂಥವರಿಗಲ್ಲ, ಚೆನ್ನಮಲ್ಲಿಕಾರ್ಜುನನಿಗೆ ಓಲೆಯನ್ನು ತಲುಪಿಸಲು ಹೋಗುತ್ತಿದ್ದೇನೆ. ಯಾರೂ ಅಡ್ಡಬರಬೇಡಿ ಎಂಬ ಕೋರಿಕೆ ಇಲ್ಲಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಹಸಿವೆ ನೀನು ನಿಲ್ಲು ನಿಲ್ಲು
ತೃಷೆಯೆ ನೀನು ನಿಲ್ಲು ನಿಲ್ಲು
ನಿದ್ರೆಯೆ ನೀನು ನಿಲ್ಲು ನಿಲ್ಲು
ಕಾಮವೆ ನೀನು ನಿಲ್ಲು ನಿಲ್ಲು
ಕ್ರೋಧವೆ ನೀನು ನಿಲ್ಲು ನಿಲ್ಲು
ಮೋಹವೆ ನೀನು ನಿಲ್ಲು ನಿಲ್ಲು
ಲೋಭವೆ ನೀನು ನಿಲ್ಲು ನಿಲ್ಲು
ಮದವೆ ನೀನು ನಿಲ್ಲು ನಿಲ್ಲು
ಮಚ್ಚರವೆ ನೀನು ನಿಲ್ಲು ನಿಲ್ಲು
ಸಚರಾಚರವೆ ನೀನು ನಿಲ್ಲು ನಿಲ್ಲು
ನಾನು
ಚೆನ್ನಮಲ್ಲಿಕಾರ್ಜುನದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ
ಶರಣಾರ್ಥಿ [೪೧೫]
ಅಂತಿಂಥವರಿಗಲ್ಲ, ಚೆನ್ನಮಲ್ಲಿಕಾರ್ಜುನನಿಗೆ ಓಲೆಯನ್ನು ತಲುಪಿಸಲು ಹೋಗುತ್ತಿದ್ದೇನೆ. ಯಾರೂ ಅಡ್ಡಬರಬೇಡಿ ಎಂಬ ಕೋರಿಕೆ ಇಲ್ಲಿದೆ.
ಈ ವಚನದ ಸರಳ ಪುನರುಕ್ತಿಯ ಕಾರಣದಿಂದಲೇ ಅದನ್ನು ಹೇಳುತ್ತಿರುವ ವ್ಯಕ್ತಿಯಲ್ಲಿರುವ ಆತುರ, ದೃಢ ನಿರ್ಧಾರಗಳನ್ನು ಸೂಚಿಸುತ್ತದೆ. ತನ್ನೊಳಗಿನ ಹಸಿವು, ನೀರಡಿಕೆ, ನಿದ್ದೆಗಳೆಂಬ ಸಹಜ ಸಂಗತಿಗಳನ್ನೂ, ಮನುಷ್ಯರ ಆರು ಪ್ರಮುಖ ವೈರಿಗಳು ಎಂದು ಕರೆಯಲಾಗುವ ಕಾಮ, ಸಿಟ್ಟು, ಮೋಹ, ದುರಾಸೆ, ಜಂಬ, ಅಸೂಯೆಗಳೆಂಬ ಭಾವಸ್ಥಿತಿಗಳನ್ನೂ ಜೊತೆಗೆ ಈ ಲೋಕದ ಚಲಿಸುವ, ಚಲಿಸದ ಎಲ್ಲ ವಸ್ತುಗಳಿಗೂ ಹೇಳುತ್ತಿರುವ ಮಾತಿನಲ್ಲಿ ಕೋರಿಕೆಯೂ ಇದೆ, ಆಜ್ಞೆಯ ದನಿಯೂ ಇದೆ. ಒಂದೊಂದು ನಾಮಪದವಾದ ಮೇಲೂ ಬರುವ ʻನೀನು ನಿಲ್ಲು ನಿಲ್ಲುʼ ಅನ್ನುವ ನುಡಿಯ ಪುನರುಕ್ತಿಯೇ ಈ ವಚನದ ಶಕ್ತಿ.
ನಾನು ಮಾಡಿಕೊಂಡಿರುವ ನಿಶ್ಚಯಕ್ಕೆ ಅಡ್ಡಿ ಏನಾದರೂ ಬರುವುದಿದ್ದರೆ ಅದು ನನ್ನೊಳಗಿನಿಂದಲೇ ಅನ್ನುವ ಅರಿವಿನಿಂದ ಮೂಡುವ ನಿಶ್ಚಯ, ಇಲ್ಲಿದೆ. ಹೊರಗಿನ ಸಚರಾಚರಗಳು ಅಡ್ಡಿ ಮಾಡಿಯಾವು ಅನ್ನುವ ಎಚ್ಚರವೂ ಇದೆ. ಒಳಗನ್ನು ಗೆದ್ದರೆ ಹೊರಗನ್ನು ಗೆಲ್ಲುವುದು ಸುಲಭವೇನೋ. ಹಾಗಾಗಿ ಹೊರಗಿನ ಸಂಗತಿಗಳ ಪ್ರಸ್ತಾಪ ಕೊನೆಗೆ ಬರುತ್ತದೆ. ಬುದ್ಧನ ಕಥೆ ಬರುತ್ತದಲ್ಲ, ಉಪವಾಸ ಇತ್ಯಾದಿ ಮಾಡುತ್ತ ದಣಿದು, ಕೊನೆಗೆ ಬಾಲಕಿ ತಂದುಕೊಟ್ಟ ಹಾಲು ಕುಡಿದ ಮೇಲೆ ದೇಹ ಅವನಿಗೆ ಸಹಕರಿಸಿ ತಿಳಿವಿನ ಬೆಳಕು ಮೂಡಿದ್ದು ಅದು ನೆನಪಾಗುತ್ತದೆ. ಬುದ್ಧಿ, ಮೈ, ಮನಸುಗಳನ್ನು ಸಂಭಾಳಿಸುವುದೇ ದೊಡ್ಡ ಸಾಧನೆ, ನನ್ನ ಸಾಧನೆಗೆ ನನ್ನ ಸಹಕಾರ ಬೇಕು ಅನ್ನುವ ನಿಶ್ಚಿತ ತಿಳಿವಳಿಕೆ ಈ ವಚನದಲ್ಲಿ ಇದೆ ಅನಿಸುತ್ತದೆ.ಈ ವಚನದ ಸರಳ ಪುನರುಕ್ತಿಯ ಕಾರಣದಿಂದಲೇ ಅದನ್ನು ಹೇಳುತ್ತಿರುವ ವ್ಯಕ್ತಿಯಲ್ಲಿರುವ ಆತುರ, ದೃಢ ನಿರ್ಧಾರಗಳನ್ನು ಸೂಚಿಸುವಂತಿದೆ. ತಾನು ಅಂತಿಂಥವರಿಗಲ್ಲ, ಚೆನ್ನಮಲ್ಲಿಕಾರ್ಜುನನಿಗೆ ತಲುಪಿಸಬೇಕಾದ ಓಲೆ ಒಯ್ಯುತ್ತಿದ್ದೇನೆ, ನೀವು ಯಾರೂ ಅಡ್ಡಬರಬೇಡಿ ಎಂದು ತನ್ನೊಳಗಿನ ಹಸಿವು, ನೀರಡಿಕೆ, ನಿದ್ದೆಗಳನ್ನೂ ಆರು ಪ್ರಮುಖ ವೈರಿಗಳ ಗುಂಪನ್ನೂ ಈ ಲೊಕದ ಚಲಿಸುವ, ಚಲಿಸಲದ ಎಲ್ಲ ವಸ್ತುಗಳಿಗೂ ಆಜ್ಞೆಯ ದನಿ ಬೆರೆತ ಕೋರಿಕೆಯನ್ನು ಸಲ್ಲಿಸುವ ರೀತಿ ಓದುಗರ ಮನಸಿಗೆ ಮುಟ್ಟುತ್ತದೆ.

