ಆಧ್ಯಾತ್ಮಿಕ ಬದುಕಿಗೆ ಹೇಗೋ ಲೌಕಿಕ ಬದುಕಿಗೂ ಹಾಗೆಯೇ ಕೋಪಕ್ಕೆ ತಾವಿರದ ಸಮಾಧಾನ, ಮತ್ತು ಮೌನ ಅಗತ್ಯ ಅನ್ನುತ್ತಿದೆ ಈ ವಚನ ಎಂದು ಹೊಳೆಯುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಗಳಿಗಂಜಿದಡೆಂತಯ್ಯಾ
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದಡೆಂತಯ್ಯಾ
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದಡೆಂತಯ್ಯಾ
ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿನಿಂದೆಗಳು ಬಂದಡೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು [೩೦೭]
ಬೆಟ್ಟದಲ್ಲಿ, ಕಡಲ ತಡಿಯಲ್ಲಿ, ಸಂತೆಯಲ್ಲಿ ಮನೆಯನ್ನು ಮಾಡಿ ಮೃಗ, ನೊರೆತೆರೆ, ಸದ್ದಿಗೆ ಅಂಜಿದರೆ ಹೇಗೆ? ಈ ಲೋಕದಲ್ಲಿ ಇರುವಾಗ ಹೊಗಳಿಗೆ ತೆಗಳಿಕೆಗೆ ಅಂಜಿದರೆ ಹೇಗೆ? ಕೋಪ ತಾಳದೆ ಸಮಾಧಾನಿಯಾಗಿರಬೇಕು.
ಹೀಗೆ ತಾತ್ಪರ್ಯ ಹೇಳುವುದಕ್ಕಿಂತ ಈ ವಚನದಲ್ಲಿ ಮಾಡಿ ಎಂಬ ಕ್ರಿಯಾ ಪದ ಅಷ್ಟೊಂದು ಬಳಕೆ ಯಾಕಾಗಿದೆ ಎಂದು ಯೋಚಿಸಿದರೆ ಬೆಟ್ಟ,ಕಡಲು, ಸಂತೆಯಲ್ಲಿ ಮನೆಯ ಮಾಡಿಕೊಂಡದ್ದು ಹಾಗೆ ಅಲ್ಲಿ ಮನೆ ʻಮಾಡಿʼಕೊಂಡವರದ್ದೇ ಜವಾಬ್ದಾರಿ ಎಂದು ಸೂಚಿಸುವಂತಿದೆ. ಕೊನೆಯ ಸಾಲುಗಳಲ್ಲಿ ಬರುವ ಸಂಸಾರ ಹಿಂದಿನ ವಿವರಣೆಗಳ ಜೊತೆ ಬರೆತು ಸಂಸಾರವೆಂಬುದು ಮೃಗಗಳಿರುವ ಬೆಟ್ಟ, ಅಲೆಗಳು ಅಪ್ಪಳಿಸುವ ಕಡಲು, ಸದ್ದಿನ ಸಂತೆ ಈ ಎಲ್ಲ ಲಕ್ಷಣಗಳನ್ನೂ ಹೊಂದಿರುವುದು ಗಮನಕ್ಕೆ ಬರುತ್ತದೆ. ಹಾಗೆಯೇ ಲೋಕದಲ್ಲಿ ʻಮನೆಯನ್ನು ಮಾಡಿʼಕೊಳ್ಳುವುದು ಕೂಡ ಅವರವರ ಜವಾಬ್ದಾರಿ ಎಂದು ಸೂಚಿಸುತ್ತಿದೆ. ಅಂದರೆ, ಪಕ್ಕಾ ಲೌಕಿಕವಾಗಿ ಬದುಕಬೇಕೋ ಆಧ್ಯಾತ್ಮಿಕ ಬದುಕಿಗೆ ಒಲಿಯಬೇಕೋ ಅನ್ನುವುದು ಅವರವರ ಇಚ್ಛೆ, ಆಯ್ಕೆ ಎಂದು ಹೇಳುವಂತಿದೆ. ಇನ್ನೂ ಮುಖ್ಯವಾದ ಮಾತೆಂದರೆ ಲೌಕಿಕಕ್ಕೆ ಒಲಿದರೆ ಬೆಟ್ಟದ ಮೃಗ, ಕಡಲ ಅಲೆ, ಸಂತೆಯ ಸದ್ದು ಎಷ್ಟು ಸಹಜ, ಅನಿವಾರ್ಯವೋ ಅಷ್ಟೇ ಅನಿವಾರ್ಯವಾಗುತ್ತದೆ ಇಲ್ಲಿನ ಸ್ತುತಿ ನಿಂದೆಗಳು. ಹಾಗಾಗಿ ಇವು ಎದುರಾದಾಗ ಕೋಪ ತಾಳದೆ ಸಮಾಧಾನಿಯಾಗಿರಬೇಕು.ಮೃಗದ ಆರ್ಭಟ, ಅಲೆಯ ಮೊರೆತ, ಸಂತೆಯ ಸದ್ದು ಇವುಗಳೊಡನೆ ಸ್ತುತಿ ನಿಂದೆಯ ಗಲಭೆಯೂ ಅದಕ್ಕೆ ಪ್ರತಿಯಾಗಿ ಮನಸು ತಾಳಬೇಕಾದ ಸಮಾಧಾನ, ಮೌನಗಳ ಹೊಂದಾಣಿಕೆಯೂ ಗಮನ ಸೆಳೆಯುತ್ತದೆ. ಆಧ್ಯಾತ್ಮಿಕ ಬದುಕಿಗೆ ಹೇಗೋ ಲೌಕಿಕ ಬದುಕಿಗೂ ಹಾಗೆಯೇ ಕೋಪಕ್ಕೆ ತಾವಿರದ ಸಮಾಧಾನ, ಮತ್ತು ಮೌನ ಅಗತ್ಯ ಅನ್ನುತ್ತಿದೆ ಈ ವಚನ ಎಂದು ಹೊಳೆಯುತ್ತದೆ.

