ಏನೂ ಸಂಭವಿಸುತ್ತಿಲ್ಲ ( Nothing happening ): ಓಶೋ 365 #Day 133

ಎಲ್ಲ ಪ್ರಶಾಂತವಾಗಿದೆ ಎಂದರೆ ಏನೂ ಸಂಭವಿಸುತ್ತಿಲ್ಲ ಎಂದಲ್ಲ. ಪ್ರಶಾಂತತೆಯೂ ಒಂದು ಆಗುವಿಕೆಯೇ. ಮತ್ತು ಇದು ಬೇರೆ ಎಲ್ಲ ಗದ್ದಲದ ಆಗುವಿಕೆಗಳಿಗಿಂತ ಬಹಳ ಮಹತ್ವದ್ದು… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಮನುಷ್ಯರೇ
ನಿಮ್ಮೊಳಗೆ ಅದ್ಭುತಗಳ ಬೀಜ ಅಡಗಿದೆ,
ಈ ಗುಲಾಬಿಯೊಳಗಿನ ಗುಲಾಬಿಯ
ಆಹ್ಲಾದದೊಡನೆ ಒಂದಾಗಿ,

ಇಷ್ಟು ಮಾತ್ರ ಒತ್ತಿ ಹೇಳುವುದು
ಪ್ರವಾದಿಯ ಬದುಕಿನ ಒಂದೇ ಒಂದು ಕಾರಣ.

ಸಂಶಯ, ಅಸ್ತಿತ್ವದ ಒಂದು ಭಾಗ.
ಆತ್ಮದ ಬಗ್ಗೆ ಯಾರು ತಾನೆ ಸಾಕ್ಷಿ ಹೇಳಬಲ್ಲರು?

ಪ್ರಾರ್ಥನೆಯಲ್ಲಿ, ಅಂತಃಕರಣದಲ್ಲಿ
ಆತ್ಮದೊಂದಿಗೆ ಮಾತಿಗಿಳಿದಾಗ ಪ್ರಶ್ನೆ ಮಾಡುತ್ತೇನೆ,

ಆತ್ಮ ನನ್ನ ದೇಹವನ್ನು ಬಿಟ್ಟು ಹೋದಾಗ
ಕವಿತೆಗಳ ಗತಿ ಏನು ?

ಉತ್ತರ ನೋಡಿ ಹೇಗಿದೆ,

ಮೊದಲು ಹಾಗಿತ್ತು
ಯಾವುದರ ಬಗ್ಗೆ ಭಯ ನಿನಗೆ ?

ಪ್ರೇಮ,
ದಯವಿಟ್ಟು ಈ ಕವಿತೆ ಪೂರ್ಣ ಮಾಡು,
ಯಾವ ಪದಗಳು ಅನನ್ಯ ಎನ್ನುವುದು
ನಿನಗೆ ಮಾತ್ರ ಗೊತ್ತು.

ಶಮ್ಸ್ , ಹೆಸರುಗಳ ಅರ್ಥ ಹೇಳು
ನೀನು ಸ್ವತಃ ಒಳಗಿನ ಆಕಾಶ .

~ ರೂಮಿ

ನೀವು ಕಿರುಚುವಾಗ, ಕೂಗುವಾಗ ಏನೋ ಒಂದು ಆಗುತ್ತಿದೆಯೆಂದು ನಿಮಗೆ ಅನಿಸುತ್ತದೆ. ಯಾವಾಗ ಇದ್ಯಾವುದೋ ಆಗುತ್ತಿಲ್ಲವೋ, ಯಾವಾಗ ನೀವು ನಿಮ್ಮೊಳಗೆ ಆಳ ಮೌನವನ್ನು ಅನುಭವಿಸುತ್ತಿದ್ದೀರೋ ಆಗ ಏನೂ ಆಗುತ್ತಿಲ್ಲ ಎಂದು ನೀವು ನಿರ್ಣಯಕ್ಕೆ ಬರುತ್ತೀರ. ಆದರೆ ಇದು ಕೂಡ ಒಂದು ಮಹಾ ಆಗುವಿಕೆ, ಬೇರೆ ಎಲ್ಲಕ್ಕಿಂತ ಮಹತ್ವದ್ದು. ಹಾಗೆ ನೋಡಿದರೆ ಆ ಬೇರೆ ಎಲ್ಲ ಸಂಗತಿಗಳು ಸೇರಿ ಇದಕ್ಕೆ ದಾರಿ ಮಾಡಿಕೊಟ್ಟಿವೆ. ಇದು ಮುಖ್ಯ ಗುರಿ. ಬಾಕಿ ಎಲ್ಲವೂ ಕೇವಲ ಈ ಮುಖ್ಯ ಗುರಿಯ ಸಹಯೋಗಿಗಳು. ಆದರೆ ಮೊದಮೊದಲು ಇದು ಖಾಲೀ ಅನಿಸುತ್ತದೆ. ನೀವು ಸುಮ್ಮನಿದ್ದೀರಿ ಮತ್ತು ಏನೂ ಆಗುತ್ತಿಲ್ಲ ಎಂದು ನಿಮಗೆ ಅನಿಸುತ್ತದೆ.

Nothing is happening ಮತ್ತು ‘Nothing’ ಬಹಳ ಸಕಾರಾತ್ಮಕವಾದದ್ದು. ಜಗತ್ತಿನಲ್ಲಿ ಅದು ಅತ್ಯಂತ ಮಹತ್ವದ ಧನಾತ್ಮಕವಾದ ಸಂಗತಿ. ಈ Nothing ನ್ನೇ ಬುದ್ಧ ನಿರ್ವಾಣ, ಆತ್ಯಂತಿಕ ಎಂದು ಗುರುತಿಸಿದ್ದು. ಆದ್ದರಿಂದ ಇದಕ್ಕೆ ಅವಕಾಶಮಾಡಿಕೊಡಿ, ಖುಶಿಯಿಂದ ಅನುಭವಿಸಿ. ಇದು ಹೆಚ್ಚು ಹೆಚ್ಚು ಆಗಲಿ, ಮುಕ್ತವಾಗಿ ಸ್ವಾಗತಿಸಿ. ಇದು ಸಂಭವಿಸಿದಾಗ ಮತ್ತೆ ಮತ್ತೆ ಸಂಭವಿಸಲು ಕಣ್ಣು ಮುಚ್ಚಿಕೊಂಡು ಆನಂದಿಸಿ. ಇದು ಸಂಪತ್ತು. ನನಗೆ ಗೊತ್ತು ಇದು ಪ್ರತಿಯೊಬ್ಬರ ಅನುಭವ ಕೂಡ. ಜನ ತಮ್ಮೊಳಗೆ ಹಲವಾರು ಸ್ಫೋಟಗಳನ್ನು ಅನುಭವಿಸುತ್ತಾರೆ. ಮತ್ತು ಈ ಸ್ಫೋಟಗಳು ಏನು ಎಂದು ಗೊತ್ತಿರದಿರುವುದರಿಂದ, ಇವು ಮಾಯವಾದಾಗ ಜನ ಇವುಗಳನ್ನು ಮಿಸ್ ಮಾಡಿಕೊಳ್ಳುತ್ತಾರೆ. ಜನ ಇಂಥ ಸ್ಫೋಟಗಳನ್ನ ಮತ್ತೆ ಬಯಸುತ್ತಾರೆ. ಅವರು ಈ ಸ್ಫೋಟಗಳುಗಾಗಿ ಒತ್ತಾಯ ಮಾಡಲು ಶುರು ಮಾಡಿದಾಗ , ಸ್ಫೋಟಗಳ ಚೆಲುವನ್ನು ನಾಶ ಮಾಡಿಕೊಂಡುಬಿಡುತ್ತಾರೆ.

ಆದ್ದರಿಂದ ಕಾಯಿರಿ. ಸ್ಫೋಟ ತನ್ತಾನೆ ಆಗುತ್ತಿದೆಯಾದರೆ ಅಡ್ಡಿಇಲ್ಲ, ಆದರೆ ಫೋರ್ಸ್ ಮಾಡಲು ಹೋಗಬೇಡಿ. ಮೌನ ಸ್ಫೋಟವಾಗುತ್ತಿದೆಯಾದರೆ, ಆನಂದಿಸಿ. ಈ ಬಗ್ಗೆ ನೀವು ಖುಶಿಯಾಗಿರಬೇಕು. ಜಗತ್ತಿನ ಸಮಸ್ಯೆ ಏನೆಂದರೆ, ಜನರಿಗೆ ಯಾವುದು- ಏನು ಎನ್ನುವುದು ಗೊತ್ತಿಲ್ಲ. ಅವರು ಖುಶಿಯಾಗಿರಬೇಕಾದಾಗ ಸಂಕಟ ಅನುಭವಿಸುತ್ತಾರೆ, ಸಂಕಟ ಅನುಭವಿಸಬೇಕಾದಾಗ ಖುಶಿಯಾಗಿರುತ್ತಾರೆ.

ಮಾರುಕಟ್ಟೆಯಲ್ಲಿ ಎರಡೂ ಕಂಕುಳಲ್ಲೂ ಊರುಗೋಲು ಇಟ್ಟುಕೊಂಡು ನಡೆಯುತ್ತಿದ್ದ ನಸ್ರುದ್ದೀನ್ ನನ್ನು ಹೆಣ್ಣು ಮಗಳೊಬ್ಬಳು ನಿಲ್ಲಿಸಿ ಅವನಿಗೆ ಕೈ ಗೆ ಹಣ ಕೊಟ್ಟು ಕಷ್ಟ ಸುಖ ವಿಚಾರಿಸಿದಳು. ಆದರೆ ಅವಳು ಅಷ್ಟಕ್ಕೇ ಸುಮ್ಮನಾಗದೇ ಉಪದೇಶಕ್ಕೆ ಶುರು ಹಚ್ಚಿಕೊಂಡಳು.

“ ಕಾಲಿನಲ್ಲಿ ಶಕ್ತಿ ಇಲ್ಲದವರ ಕಷ್ಟ ನನಗೆ ಅರ್ಥವಾಗುತ್ತದೆ, ಆದರೆ ಒಮ್ಮೆ ಕಣ್ಣು ಇಲ್ಲದವರ ಬಗ್ಗೆ ಯೋಚಿಸು. ಅವರ ಸಂಕಟ ಎಲ್ಲಕಿಂತ ದೊಡ್ಡದು“

ಹೆಣ್ಣು ಮಗಳು ಮಾತು ಮುಗಿಸುವುದೇ ತಡ, ನಸ್ರುದ್ದೀನ್ ಉತ್ತರಿಸಿದ.

“ ಹೌದು ಒಪ್ಪಿದೆ, ಕುರುಡರ ಸಂಕಟ ಎಲ್ಲಕ್ಕಿಂತ ದೊಡ್ಡದು. ಕಳೆದ ತಿಂಗಳು ನಾನು ಕುರುಡನಾಗಿದ್ದಾಗ ಜನ ನನ್ನ ಜೇಬಿಗೆ ಖೋಟಾ ನೋಟು ತುರುಕಿ ಹೋಗುತ್ತಿದ್ದರು “

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.