ವೀರತ್ವ, ಶೌರ್ಯದ ಮಾತಾಡಬೇಡವೋ. ಅದು ಬಹಳ ಭಾರದ ಕೆಲಸ. ಕತ್ತಿಯ ಅಲಗು ಮಿಂಚುವಾಗ ಕೊಂಕದೆ ನಿಲ್ಲಬೇಕು... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಆಳುತನದ ಮಾತನಾಡದಿರೆಲವೊ
ಮೇಲೆ ಕಾರ್ಯದಿಮ್ಮಿತ್ತಣ್ಣಾ
ಅಲಗಿನ ಮೊನೆಯ ಧಾರೆ ಮಿಂಚುವಾಗ
ಕೊಡದೆ ಕೊಂಕದೆ ನಿಲಬೇಕಯ್ಯ
ಬಂಟ ಬೆಟ್ಟ ಭಕ್ತಿಯೊಂದೆ ಕಂಡಯ್ಯ
ಚೆನ್ನಮಲ್ಲಿಕಾರ್ಜುನನಂತಲ್ಲದೊಲ್ಲ [೭೧]
[ಆಳುತನ=ವೀರತ್ವ; ದಿಮ್ಮಿತ್ತು=ದಿಮ್ಮಿತು, ಭಾರವಾಯಿತು, ಕಷ್ಟವಾಯಿತು; ಅಲಗು=ಕತ್ತಿ; ಬಂಟ=ಭಟ, ಧೈರ್ಯವಂತ]
ವೀರತ್ವ, ಶೌರ್ಯದ ಮಾತಾಡಬೇಡವೋ. ಅದು ಬಹಳ ಭಾರದ ಕೆಲಸ. ಕತ್ತಿಯ ಅಲಗು ಮಿಂಚುವಾಗ ಕೊಂಕದೆ ನಿಲ್ಲಬೇಕು. ಬಂಟ ಬೆಟ್ಟ ಭಕ್ತಿ (ಯೋಧನಿಗೆ ಇರುವಂಥ/ಇರಬೇಕಾದ ಬೆಟ್ಟದಂಥ ಭಕ್ತಿ?) ಇರದಿದ್ದರೆ ಚೆನ್ನಮಲ್ಲಿಕಾರ್ಜುನ ಒಪ್ಪುವುದಿಲ್ಲ. ʻಕೊಡದೆ ಕೊಂಕದೆʼ ಎಂಬುದನ್ನು ಹೇಗೆ ವಿವರಿಸಿಕೊಳ್ಳುವುದೋ ತಿಳಿಯದು.
ಈ ವಚನದಿಂದ ಆರಂಭಿಸಿ ಮೂರು ವಚನಗಳು ಗಂಡುತನ-ವೀರತ್ವ-ಹೆಣ್ಣುತನಗಳ ಪ್ರಶ್ನೆಯನ್ನು ಪರಿಶೀಲಿಸುವ ವಚನಗಳಾಗಿ ಕಾಣುತ್ತವೆ. ಇದು ಅಕ್ಕನ ವಚನಗಳಿಗೆ ಮಾತ್ರ ಸೀಮಿತವೂ ಅಲ್ಲ. ಹಿಂದಿನ ಕನ್ನಡ ಸಾಹಿತ್ಯದಲ್ಲಿ ವೀರ ಮತ್ತು ಶೃಂಗಾರಗಳಿಗೆ ಪ್ರಾಮುಖ್ಯವಿತ್ತು. ವಚನಗಳಲ್ಲಿ ವೀರತ್ವ ಶೃಂಗಾರ ಎರಡೂ ಭಕ್ತಿಯಾಗಿ ಮಾರ್ಪಟ್ಟಿವೆ. ಅಕ್ಕ ಮಾತ್ರವಲ್ಲದೆ ಇತರ ವಚನಕಾರ್ತಿಯರೂ ಗಂಡುತನವನ್ನು ಆವಾಹಿಸಿಕೊಂಡು ಮಾತಾಡಿರುವ ಉದಾಹರಣೆಗಳಿವೆ. ʻಮನೆಯಲ್ಲಿ ವೀರ ಧೀರ/ ರಣದಲ್ಲಿ ಓಸರಿಸಿದ ಮತ್ತೆ ಭಾಷೆಯ ಬಂಟನಲ್ಲʼ ಅನ್ನುತ್ತದೆ ಮೋಳಿಗೆ ಮಹದೇವಿಯ ವಚನ (೫.೧೧೮೯). ಬೀದಿಯಲ್ಲಿ ನುಡಿಯಲೇಕೆ/ಕಾವಲ್ಲಿ ಕಾಣಬಹುದು,ʼ ಎನ್ನುತ್ತದೆ ಅಮುಗೆ ರಾಯಮ್ಮ ವಚನ (೫.೬೫೧). ವೀರನಾದರೆ ಅಲಗಿನ ಮೊನೆಯಲ್ಲಿ ಕಾಣಬಹುದು/ಧೀರನಾದರೆ ತನ್ನಸೋಂಕಿದಲ್ಲಿ ಅರಿಯಬಹುದು/ ಭಕ್ತನಾದರೆ ತಾಗು ನಿರೋಧದಲ್ಲಿ ಅರಿಯಬಹುದು/ ಕೂಡಲಚೆನ್ನಸಂಗಯ್ಯಾ/ಸು ಜ್ಞಾನಿಯಾದರೆ ಸುಳುಹಿನಲ್ಲಿ ಅರಿಯಬಹುದು ಅನ್ನುವುದು ಚೆನ್ನಬಸವಣ್ಣನವರ ವಚನ (೩.೧೭೮) ನಾನು ʻಇರಿಯದ ವೀರ ಇಲ್ಲದ ಸೊಬಗು, ಎಲ್ಲಾ ಒಡೆಯರು ಏರಿಸಿ ನುಡಿವರುʼ ಎನ್ನುತ್ತದೆ ಬಸವ ವಚನ (೧.೩೮೬); ಕಾಳಗದ ಮುಖದಲ್ಲಿ ಕಾಣಬಾರದು/ ಓಡುವ ಮುಖದಲ್ಲಿ ಕಾಣಬಹುದುʼ ಎಂದು ಇನ್ನೊಂದು ಬಸವ ವಚನವಿದೆ (೧. ೪೪೫).
ಭಕ್ತಿ, ವೈರಾಗ್ಯ ಇವು ಪುರುಷರಿಗೆ ಮಾತ್ರ ಸೀಮಿತವೋ ಅನ್ನುವುದು ದೊಡ್ಡ, ಮುಖ್ಯ ಪ್ರಶ್ನೆ. ಅಕ್ಕಮಹದೇವಿ ಮತ್ತು ವಚನಕಾರರು ಗಂಡು-ಹೆಣ್ಣು ಎಂಬ ವ್ಯತ್ಯಾಸ ಇದೆಯೇ ಹೊರತು ಅದು ಮೇಲು ಕೀಳು ಅನ್ನುವ ತೀರ್ಮಾನವಲ್ಲ ಅನ್ನುವ ನಿಲುವಿನವರು. ಈ ವಚನದಲ್ಲಿ ಅಕ್ಕ ಭಕ್ತಿಯನ್ನು ವೀರತ್ವ ಮತ್ತು ಆಳ್ತನದ ಗುಣಗಳು ಎಷ್ಟು ಮಟ್ಟಿನ ಬದ್ಧತೆಯನ್ನು ಬಯಸುತ್ತವೋ ಭಕ್ತಿಯೂ ಹಾಗೆಯೇ. ಭಟನಿಗೆ ಇರುವಂಥ ಬೆಟ್ಟದಂಥ ದೃಢತೆ, ಪರೀಕ್ಷೆಯ ಅಲಗಿನ ಧಾರೆಯನ್ನು ಎದುರಿಸುವ ಗಟ್ಟಿತನ ಬೇಕು ಅನ್ನುತಿದ್ದಾಳೆ. ಈ ಗಂಡುತನವನ್ನು ತನಲ್ಲೇ ಆವಾಹಿಸಿಕೊಳ್ಳುವ ವಚನಗಳು ಮುಂದೆ ಬರುತ್ತವೆ.

