ಕಾವ್ಯಾತ್ಮಕರಾಗಿ ( Become Poetic ) : ಓಶೋ 356 # Day 139

ಕವಿಗೆ ಗೊತ್ತಾಗುತ್ತದೆ , ಸತ್ಯದೊಂದಿಗಿನ ಅವನ ಕಾವ್ಯಾತ್ಮಕ ಸಂಬಂಧದಲ್ಲಿ ಮಾತ್ರ ಅನಾವರಣಗೊಳ್ಳುವ ಕೆಲವು ಸಂಗತಿಗಳು ~ ಓಶೋ ರಜನೀಶ್,  ಕನ್ನಡಕ್ಕೆ: ಚಿದಂಬರ ನರೇಂದ್ರ

ನಮ್ಮ ಮಹಾನ್ ಧರ್ಮಗಳೆಲ್ಲ
ಸರಕು ಸಾಗಿಸುವ
ದೊಡ್ಡ ದೊಡ್ಡ ಹಡಗುಗಳಾದರೆ,
ಈ ಕವಿತೆಗಳು
ಜೀವ ರಕ್ಷಕ ದೋಣಿಗಳಂತೆ.

ನನಗೆ ಗೊತ್ತಿರುವ
ಪ್ರತೀ ಜಾಣ ಮನುಷ್ಯನೂ
ಹಡಗಿನಿಂದ ದೋಣಿಗೆ ಹಾರಿದ್ದಾನೆ

ಇದು ಎಂಥ ಒಳ್ಳೆಯ
ವ್ಯವಹಾರ ಅಲ್ಲವೆ ಹಾಫಿಜ್ ?

  • ಹಾಫಿಜ್

ಲೌಕಿಕದ ಜಾಣತನದ ವಿಷಯದಲ್ಲಿ ಕವಿ ಒಬ್ಬ ಪೆದ್ದ. ಸಂಪತ್ತು ಮತ್ತು ಅಧಿಕಾರದ ಜಗತ್ತಿನಲ್ಲಿ ಅವನಿಗೆ ಎಂದೂ ಏಳಿಗೆಯಿಲ್ಲ. ಆದರೆ ತನ್ನ ಈ ಬಡತನದಲ್ಲಿ ಅವನಿಗೆ ಯಾರಿಗೂ ಗೊತ್ತಿಲ್ಲದ, ಜಗತ್ತಿನ ವಿಭಿನ್ನ ಶ್ರೀಮಂತಿಕೆಯ ಪರಿಚಯವಾಗುತ್ತದೆ.

ಕವಿಗೆ ಪ್ರೇಮ ಸಾಧ್ಯ, ಕವಿಗೆ ಭಗವಂತ ಸಾಧ್ಯ. ಯಾರಿಗೆ ಬದುಕಿನ ಸಣ್ಣ ಸಣ್ಣ ಸಂಗತಿಗಳನ್ನು ಆನಂದಿಸುವ ಮುಗ್ಧತೆ ಇದೆಯೋ ಅವರಿಗೆ ಮಾತ್ರ ಭಗವಂತನ ಅಸ್ತಿತ್ವದ ಕುರಿತಾದ ತಿಳುವಳಿಕೆ ಇರುತ್ತದೆ, ಏಕೆಂದರೆ ಭಗವಂತ ಬದುಕಿನ ಸಣ್ಣ ಸಣ್ಣ ಸಂಗತಿಗಳಲ್ಲಿ ನೆಲೆಯಾಗಿದ್ದಾನೆ : ಅವನು ನೀವು ಉಣ್ಣುವ ಊಟದಲ್ಲಿ ನೆಲೆಯಾಗಿದ್ದಾನೆ, ಅವನು ನಿಮ್ಮ ಮುಂಜಾನೆಯ ವಾಕ್ ನಲ್ಲಿ ನೆಲೆಯಾಗಿದ್ದಾನೆ. ನಿಮಗೆ ನಿಮ್ಮ ಪ್ರೇಮಿಯ ಬಗ್ಗೆ ಇರುವ ಪ್ರೇಮದಲ್ಲಿ ಭಗವಂತ ನೆಲೆಯಾಗಿದ್ದಾನೆ, ಗೆಳೆಯರ ಜೊತೆಗಿನ ನಿಮ್ಮ ಗೆಳೆತನದಲ್ಲಿ ಭಗವಂತ ನೆಲೆಯಾಗಿದ್ದಾನೆ. ಮಂದಿರ, ಮಸೀದಿ, ಚರ್ಚ್ ಗಳಲ್ಲಿ ದೇವರಿಲ್ಲ ; ಈ ದೇವಾಲಯಗಳು ಕಾವ್ಯದ ಭಾಗವಲ್ಲ, ಅವು ರಾಜಕಾರಣದ ಭಾಗ.

ಹೆಚ್ಚು ಹೆಚ್ಚು ಕಾವ್ಯಾತ್ಮಕರಾಗಿರಿ. ಧೈರ್ಯ ಬೇಕು ಕಾವ್ಯಾತ್ಮಕರಾಗಲು ; ಜಗತ್ತು ಪೆದ್ದ ಎಂದು ನಿಂದಿಸುತ್ತಿರುವಾಗ ಜಗತ್ತನ್ನು ಎದುರಿಸುವ ಧೈರ್ಯ ಬೇಕು. ಆಗ ಮಾತ್ರ ಕಾವ್ಯಾತ್ಮಕರಾಗುವುದು ಸಾಧ್ಯ. ಕಾವ್ಯಾತ್ಮಕರಾಗುವುದೆಂದರೆ ನೀವು ಕಾವ್ಯ ರಚಿಸಬೇಕು ಎಂದು ನಾನು ಹೇಳುತ್ತಿಲ್ಲ. ಕವಿತೆ, ಕಾವ್ಯ ರಚಿಸುವುದು ನೀವು ಕಾವ್ಯಾತ್ಮಕರಾಗುವುದರ ಬಹಳ ಸಣ್ಣ ಮತ್ತು ಅನಗತ್ಯ ಭಾಗ. ಒಬ್ಬರು ಕವಿಯಾಗಿದ್ದರೂ ಒಂದು ಸಾಲೂ ಕವಿತೆ ಬರೆಯದಿರಬಹುದು ಹಾಗೆಯೇ, ಒಬ್ಬರು ಸಾವಿರಾರು ಕವಿತೆಗಳನ್ನು ರಚಿಸಿಯೂ ಕವಿಯಾಗದಿರಬಹುದು.

ಕವಿಯಾಗುವುದು ಬದುಕನ್ನು ಬಾಳುವ ವಿಧಾನ, ಇದು ಬದುಕಿನ ಗೌರವ, ಇದು ಬದುಕಿನೊಂದಿಗಿನ ಹೃದಯ ಸಂಬಂಧ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.