ಅಕ್ಕನ ವಚನ ಕೇವಲ ತರ್ಕಕ್ಕೆ ಮನಸ್ಸು ತೆತ್ತು ಪ್ರತಿಯೊಂದನ್ನೂ ಸ್ವಂತ ಅನುಭವದಿಂದ ಪರೀಕ್ಷೆ ಮಾಡಿಯೇ ಒಪ್ಪುತ್ತೇನೆ ಅಂದರೆ ಅದಕ್ಕೆ ಅರ್ಥವಿಲ್ಲ ಎಂದು ಹೇಳುವಂತಿದೆ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ
ಕಂಗಳಲ್ಲಿ ಕಾಂಬೆನೆಂದು
ಕತ್ತಲೆಯ ಹೊಕ್ಕಡೆಂತಹುದಯ್ಯಾ
ಬೆಟ್ಟದ ತುದಿಯ ಮೆಟ್ಟಲೆಂದು
ಹಳ್ಳಕೊಳ್ಳಂಗಳಲ್ಲಿ ಇಳಿದಡೆಂತಹುದಯ್ಯಾ
ನೀನಿಕ್ಕಿದ ಸಯದಾನವನೊಲ್ಲದೆ
ಬೇರೆ ಬಯಸಿದೊಡೆಂತಹುದಯ್ಯಾ
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು
ಕಿರುಕುಳಕ್ಕೆ ಸಂದಡೆಂತಹುದಯ್ಯಾ [೧೩೬]
[ಕಾಂಬೆನೆಂದು=ಕಾಣುತ್ತೇನೆಂದು; ಸಯದಾನ=ನೈವೇದ್ಯ; ಘನ=ಹಿರಿಮೆ, ಕಿರುಕುಳ=ಯುಕ್ತವಲ್ಲದ ಸಂಗತಿ]
ಕಣ್ಣಾರೆ ನೋಡುತ್ತೇನೆಂದು ಕತ್ತಲೆಯನ್ನು ಹೊಕ್ಕರೆ ಆದೀತೆ, ಬೆಟ್ಟದ ತುದಿಯ ಮೆಟ್ಟಿಲು ಎಂದು ಹಳ್ಳಕೊಳ್ಳಕ್ಕೆ ಇಳಿದರೆ ಆದೀತೆ, ಈ ಬದುಕು ನೀನು ನೀಡಿದ ನೈವೇದ್ಯ, ಅದನ್ನು ಒಲ್ಲದೆ ಬೇರೆ ಬಯಸಿದರೆ ಆದೀತೆ, ಚೆನ್ನಮಲ್ಲಿಕಾರ್ಜುನನ ಹಿರಿಮೆಯನ್ನು ಅರಿಯಲು ಕಿರುಕುಳಕ್ಕೆ ಮನಸ್ಸು ಕೊಟ್ಟರೆ ಆದೀತೆ.
ಈ ವಚನವನ್ನು ನೋಡುವಾಗ ಅಲ್ಲಮ ಹೇಳುವ ʻಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ, ಧೀರರೂ ಅಲ್ಲʼ ಎನ್ನುವ ಮಾತು ನೆನಪಾಗುತ್ತದೆ [ಸಂ.೨, ವಚನ ೧೨೭] ನಮ್ಮ ಪಾಲಿಗೆ ಬಂದ ಬದುಕನ್ನು ದೇವರಿಗೆ ಮಾಡಿದ ನೈವೇದ್ಯವೆಂದು, ಅಥವಾ ನಮ್ಮ ಪಾಲಿಗೆ ಬಂದ ಪ್ರಸಾದವೆಂದು ಒಪ್ಪಬೇಕು ಅನ್ನುವುದು ಒಂದು ನಿಲುವು. ಅಕ್ಕನ ವಚನ ಕೇವಲ ತರ್ಕಕ್ಕೆ ಮನಸ್ಸು ತೆತ್ತು ಪ್ರತಿಯೊಂದನ್ನೂ ಸ್ವಂತ ಅನುಭವದಿಂದ ಪರೀಕ್ಷೆ ಮಾಡಿಯೇ ಒಪ್ಪುತ್ತೇನೆ ಅಂದರೆ ಅದಕ್ಕೆ ಅರ್ಥವಿಲ್ಲ ಎಂದು ಹೇಳುವಂತಿದೆ. ಇದು ಸರಿ, ಇದು ಸರಿಯಲ್ಲ ಅನ್ನುವ ಅರಿವು ಮನಸಿಗೆ ಗೊತ್ತಾದರೆ ಸಾಕಲ್ಲ, ಕಾಣಲೆಂದು ಕತ್ತಲೆಯಲ್ಲಿ ಕಳೆದು ಹೋಗುವುದು, ಏರುವ ಬದಲು ಇಳಿಯುವುದು, .ಅಯೋಗ್ಯವನ್ನು ಅರಿತರೆ ಮಾತ್ರ ಯೋಗ್ಯವಾದದ್ದು ತಿಳಿಯುವುದು ಎಂದೆಲ್ಲ ವಾದ ಮಾಡುವುದು ಸರಿಯೇ? ಸ್ವಂತ ಅನುಭವ ಅನ್ನುವ ವಾದಕ್ಕೆ ಇರುವ ಮಿತಿಯನ್ನು ಈ ವಚನ ಹೇಳುವಂತೆ ತೋರುತ್ತದೆ.

