ಒಮ್ಮೊಮ್ಮೆ ನೀವು ನಿಮ್ಮ ರೂಮಿನೊಳಗೆ ಕಾಲಿಟ್ಟಾಗ ಎಲ್ಲ ಕತ್ತಲು ಅನಿಸತೊಡಗುತ್ತದೆ. ಆದರೆ ಸ್ವಲ್ಪ ಹೊತ್ತಿನ ನಂತರ ನೀವು ಆ ಕತ್ತಲೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡಾಗ, ಆ ಕತ್ತಲು ನಿಧಾನವಾಗಿ ಕಾಣೆಯಾಗುತ್ತದೆ. ರೂಮಿನೊಳಗೆ ಬೆಳಕು ತುಂಬಿಕೊಂಡಿರುತ್ತದೆ. ಅಲ್ಲಿ ಯಾವ ಬೆಳಕೂ ಹೊರಗಿನಿಂದ ಬಂದಿರುವುದಿಲ್ಲ ಆದರೆ ನಿಮ್ಮ ಕಣ್ಣುಗಳು ಕತ್ತಲೆಯನ್ನು ನೋಡುತ್ತ ನೋಡುತ್ತ ಕತ್ತಲೆಗೆ ಹೊಂದಿಕೊಂಡು ಬಿಟ್ಟಿರುತ್ತವೆ ~ ಓಶೋ ರಜನೀಶ್ ಕನ್ನಡಕ್ಕೆ ಚಿದಂಬರ ನರೇಂದ್ರ
‘ತಾವೋ’ ದಲ್ಲಿ ಒಂದಾಗುವುದೇ
ಒಂದು ಗಳಿಸಬಹುದಾದ ಅರ್ಹತೆ.
ಹೌದು ಹಿಡಿತಕ್ಕೆ ಸಿಗದು
ವ್ಯಾಖ್ಯಾನ ಅಸಾಧ್ಯ.
ತಾವೋ ಹಿಡಿತಕ್ಕೆ, ವ್ಯಾಖ್ಯಾನಕ್ಕೆ ಸಿಗದೇ ಹೋದರೆ
ಹೇಗೆ ಒಂದಾಗಬಹುದು?
ಸಿದ್ಧಾಂತಗಳಿಗೆ ಜೊತು ಬೀಳದೆ.
ತಾವೋ ನಿಗೂಢ, ಅಪರಿಮಿತ ಕತ್ತಲು
ಅಂತೆಯೇ ಶುದ್ಧ ಚೈತನ್ಯ
ಇದೊಂದು ನಿಯಮವಲ್ಲದ ನಿಯಮ.
ಹುಟ್ಟು, ಕಾಲ ದೇಶಗಳಿಗೂ ಮೊದಲು,
ಇರುವುದು ಇರದುದರಾಚೆ, ಮನೆ.
ಖಾತ್ರಿ ಮಾಡಿಕೊಳ್ಳಬೇಕಾದಾಗಲೆಲ್ಲ
ನನ್ನೊಳಗೆ ಇಳಿಯುತ್ತೇನೆ
ಇಳಿದು ಇಣುಕುತ್ತೇನೆ.
~ ಲಾವೋತ್ಸೇ
ಕಳ್ಳರಿಗೆ ಕತ್ತಲೆಯಲ್ಲಿ ಕಣ್ಣುಗಳು ಎಲ್ಲರಿಗಿಂತ ಚೆನ್ನಾಗಿ ಕಾಣುತ್ತವೆಯಂತೆ, ಏಕೆಂದರೆ ಇವರು ಕತ್ತಲೆಯಲ್ಲಿಯೇ ತಮ್ಮ ಕೆಲಸ ಮಾಡಿ ಮುಗಿಸಬೇಕು. ಅವರು ತಮಗೆ ಪರಿಚಿತವಲ್ಲದ ಮನೆಯನ್ನು ಪ್ರವೇಶಿಸಬೇಕು, ಅಲ್ಲಿ ಪ್ರತಿ ಹೆಜ್ಜೆಯಲ್ಲಿಯೂ ಅಪಾಯವಿರುತ್ತದೆ. ಅವರು ಏನನ್ನಾದರೂ ಎಡವಬಹುದು. ಆದರೆ ನಿಧಾನವಾಗಿ ಅವರಿಗೆ ಕತ್ತಲೆಯಲ್ಲಿ ಎಲ್ಲವೂ ಕಾಣಿಸತೊಡಗುತ್ತದೆ. ನಂತರ ಅವರಿಗೆ ಕತ್ತಲು, ಅಷ್ಟು ಕತ್ತಲಲ್ಲ. ಆದ್ದರಿಂದ ಕತ್ತಲೆಯ ಬಗ್ಗೆ ಭಯ ಬೇಡ. ಕಳ್ಳರಂತಾಗಿರಿ, ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳಿ, ಮತ್ತು ಎಷ್ಟು ಸಾಧ್ಯವೋ ಅಷ್ಟು ಆಳವಾಗಿ ಕತ್ತಲೆಯನ್ನು ನೋಡಲು ಶುರುಮಾಡಿ. ಇದು ನಿಮ್ಮ ಧ್ಯಾನವಾಗಲಿ.
ಪ್ರತಿದಿನ ೩೦ ನಿಮಿಷ ಮೂಲೆಯಲ್ಲಿ ಕಣ್ಣು ಮುಚ್ಚಿಕೊಂಡು ಕುಳಿತು, ನಿಮ್ಮ ಕಲ್ಪನೆಗೆ ಸಾಧ್ಯವಾದಷ್ಟು ಕತ್ತಲನ್ನು ಸೃಷ್ಟಿಮಾಡಿಕೊಂಡು, ಆ ಕತ್ತಲೆಯನ್ನು ಆಳವಾಗಿ ದಿಟ್ಟಿಸಿ. ಇದು ನಿಮಗೆ ಕಷ್ಟವಾಗುತ್ತಿದೆಯಾದರೆ ನಿಮ್ಮ ಕಣ್ಣೆದುರು ಗಾಢ ಕಪ್ಪು ಹಲಗೆಯನ್ನು ಕಲ್ಪಿಸಿಕೊಂಡು ಅದನ್ನು ದಿಟ್ಟಿಸಿ ನೋಡುವ ಪ್ರಯತ್ನ ಮಾಡಿ. ಮುಂದೆ ಬೇಗ ನಿಮಗೆ ಹೆಚ್ಚು ಕತ್ತಲೆಯನ್ನು ಕಲ್ಪಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಆಗ ನಿಮಗೇ ಆಶ್ಚರ್ಯವಾಗುವಂತೆ, ನೀವು ಕತ್ತಲನ್ನು ದಿಟ್ಟಿಸಿ ನೋಡಿದಷ್ಟು ನಿಮ್ಮ ಕಣ್ಣುಗಳು ಸ್ಪಷ್ಟವಾಗುತ್ತ ಹೋಗುತ್ತವೆ.
ನಿಮ್ಮೊಳಗೆ ಇನ್ನೂ ಭಯ ಇರುವುದಾದರೆ, ಅದಕ್ಕೆ ನಿಮ್ಮನ್ನು ಆವರಿಸಿಕೊಳ್ಳಲು ಅವಕಾಶ ಮಾಡಿಕೊಡಿ. Infact ನೀವು ಇದನ್ನು ಆನಂದಿಸಿ. ಅದು ಇರಲಿ ನಿಮ್ಮೊಳಗೆ, ನಡುಗಲು ಶುರುಮಾಡಿ. ಭಯ ನಿಮ್ಮೊಳಗೆ ವೈಬ್ರೆಷನ್ ಹುಟ್ಟಿಸುತ್ತಿದೆಯಾದರೆ, ಅವಕಾಶ ಮಾಡಿಕೊಡಿ. ಎಷ್ಟು ಸಾಧ್ಯವೋ ಅಷ್ಟು ಭಯದಿಂದ ತಲ್ಲಣವನ್ನು ಅನುಭವಿಸಿ. ಭಯ ನಿಮ್ಮ ಮೈಮೇಲೆ ಬಂದಷ್ಟು ಯಾತನೆ ಪಡಿ. ಆಗ ಗಮನಿಸಿ ಅದು ಎಷ್ಟು ಸುಂದರ ಎಂದು. ಇದು ಒಂದು ಅಮೋಘ ಸ್ನಾನದ ಹಾಗೆ, ನಿಮ್ಮ ಮೇಲಿನ ಎಲ್ಲ ಧೂಳೂ ತೊಳೆಯಲ್ಪಟ್ಟಿದೆ. ಈ ಕಂಪನದಿಂದ ನೀವು ಹೊರಬಂದಾಗ, ನಿಮಗೆ ಹೆಚ್ಚು ಜೀವಂತಿಕೆಯ ಅನುಭವವಾಗುವುದು, ನಿಮ್ಮ ಕಣ ಕಣವೂ ಹೊಸ ಉತ್ಸಾಹದಿಂದ, ಹೊಸ ಜೀವಕಳೆಯಿಂದ ನಳನಳಿಸುವುದು, ಹೊಸ ಶಕ್ತಿಯೊಂದಿಗೆ, ಹಳೆಯ ಎಲ್ಲ ಕೊಳೆಯನ್ನು ಕಳೆದುಕೊಂಡು.

