ಒಲುಮೆ ಮಾತ್ರ ಮುಖ್ಯ : ಅಕ್ಕ ಮಹಾದೇವಿ #35

ತನು ಅಥವ ದೇಹ ಪೂರ್ತಿಯಾಗಿ ಇಲ್ಲವಾಗದೆ ನೀನು ಒಪ್ಪಿಕೊಳ್ಳುವುದಿಲ್ಲ ಅನ್ನುವ ಮಾತು ಅಕ್ಕ ಹೇಳಿರಬಹುದೇ ಅನ್ನಿಸಿಸುತ್ತದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 2, ವಿಶ್ವಾಸ

ಕಾಯ ಕರ್ರನೆ ಕಂದಿದಡೇನಯ್ಯಾ
ಕಾಯ ಮಿರ್ರನೆ ಮಿಂಚಿದಡೇನಯ್ಯಾ
ಅಂತರಂಗ ಶುದ್ಧವಾದ ಬಳಿಕ
ಚೆನ್ನಮಲ್ಲಿಕಾರ್ಜುನಯ್ಯಾ
ನೀನೊಲಿದ ಕಾಯವು ಹೇಗಿದ್ದಡೇನಯ್ಯಾ [೧೬೨]

ದೇಹ ಕರ್ರಗಾದರೇನು, ಮಿರ್ರನೆ ಮಿಂಚಿದರೇನು, ಅಂತರಂಗ ಶುದ್ಧವಾಗಿರುವಾಗ ನೀನು ಮೆಚ್ಚಿದ ಈ ದೇಹ ಹೇಗಿದ್ದರೇನು.

ಗಮನಿಸಬೇಕಾದ ಮಾತೆಂದರೆ ಈ ವಚನ ದೇಹ ಹೇಗಿದ್ದರೇನು ಎಂದು ಕೇಳುತ್ತದೆಯೇ ಹೊರತು ದೇಹವನ್ನೇ ಬೇಡವೆಂದು ನಿರಾಕರಿಸುವುದಿಲ್ಲ. ʻಎನಗೆ ಕಾಯವಿಲ್ಲೆಂಬರು; ಚೆನ್ನಮಲ್ಲಿಕಾರ್ಜುನನೊಲಿವಪರಿ ಇನ್ನೆಂತಯ್ಯʼ ಎಂಬುದು ಅಕ್ಕನದೇ ಪ್ರಶ್ನೆ [೫.೩೦೬] ದೇಹದ ಅಭಿಮಾನ, ಮನದ ಲಜ್ಜೆಗಳನ್ನು ಕಳೆದುಕೊಂಡ ಬಗೆಯನ್ನು ಇನ್ನೊಂದು ವಚನ ಹೇಳುತ್ತದೆ. [೫.೨೫೭] ಕಾಯ, ಕರಣ, ಪ್ರಾಣ ನಿನಗೆ ಮೀಸಲು ಎಂದು ಇನ್ನೊಂದು ವಚನದಲ್ಲಿ ಹೇಳಿರುವುದಿದೆ. [೫.೧೬೯] ನನ್ನ ದೈವ ಒಲಿದ ದೇಹ ಅನ್ನುವುದಷ್ಟು ಸಾಕು, ಅದು ಬೇರೆಯವರಿಗೆ ಹೇಗೆ ಕಂಡರೇನು ಅನ್ನುವುದು ಈ ವಚನದ ಮನೋಧರ್ಮ ಅನಿಸುತ್ತದೆ.

ಆದರೂ ದೇಹದ ಸೌಷ್ಠವಕ್ಕಿಂತ ಅರಿವು, ಅದನ್ನು ವ್ಯಕ್ತಪಡಿಸುವ ರೀತಿ ಮುಖ್ಯ ಅನ್ನುವುದು ಬಹುಮಟ್ಟಿಗೆ ಎಲ್ಲ ಭಕ್ತಿ ಪರಂಪರೆಗಳಲ್ಲಿ ಒಪ್ಪಿತವಾದ ಸಂಗತಿ. ಅನುಭವಕ್ಕೆ ದೇಹ ಮುಖ್ಯ, ಅದರೂ ಅನುಭ, ಅರಿವು ಅದಕ್ಕಿಂತ ಮುಖ್ಯ. ಅದು ಅಂತರಂಗಕ್ಕೆ ಸಂಬಂಧಪಟ್ಟದ್ದಾದ್ದರಿಂದ ದೇಹ ಹೇಗಿದ್ದರೂ ಕೇರ್‌ ಮಾಡುವುದು ಬೇಕಿಲ್ಲ ಅನ್ನುವ ಮನೋಧರ್ಮವೂ ಇದೆ.  ಅಷ್ಟಾವಕ್ರನ ಚಿತ್ರದಿಂದ ಹಿಡಿದು ಅರಿವಿನ ಬೆಳಕು ಕಂಡಾಗ ಬುದ್ಧ ಎಲುಬಿನ ಗೂಡಾಗಿದ್ದ ಅನ್ನುವ ಚಿತ್ರಣ, ಜೈನ ಸಾಧಕರು ಅನುಭವಿಸುವ ಕಾಯ ಕ್ಲೇಶಗಳ ವರ್ಣನೆ, ಇಂದೂ ಕಾಣುವ ಮುಳ್ಳಿನ ಪಾದರಕ್ಷೆಯ ಮೇಲೆ ನಿಲ್ಲುವ, ಬಾಯಿಗೆ ಬೀಗ ಹಾಕಿಕೊಳ್ಳುವ, ಚಾವಟಿಯಲ್ಲಿ ಹೊಡೆದುಕೊಳ್ಳುವ ಪದ್ಧತಿಗಳನ್ನು ನೋಡಿದರೆ ದೇಹವು ಆಧ್ಯಾತ್ಮಿಕ ಸಾಧನೆಗೆ ಅಡ್ಡಿ ಅನ್ನುವ ಮನೋಧರ್ಮವೇ ಬಲವಾಗಿತ್ತು, ಇದೆ ಅನ್ನಿಸುತ್ತದೆ. ಈ ವಚನವನ್ನು ಹೇಳುತ್ತಿರುವ ಮನಸ್ಸು ಹಾಗೆ ಕಾಯವನ್ನು ಪೂರ್ತಿಯಾಗಿ ನಿರಾಕರಿಸುವ, ದಂಡಿಸುವ ಧೋರಣೆಯನ್ನು ವ್ಯಕ್ತಪಡಿಸುವುದಿಲ್ಲ.

ಚೆನ್ನಮಲ್ಲಿಕಾರ್ಜುನನ ಅನುಭವ ಪಡೆಯಲು ದೇಹ ಬೇಕು, ಅದು ನೋಡುವವರ ಕಣ್ಣಿಗೆ ಚಂವವಾಗಿ ಕಾಣಬೇಕು ಅನ್ನುವ ಆಸೆ ಮಾತ್ರ ಇಲ್ಲ. ಹಾಗಿರುವಾಗ ಬಹಳ ಜನಪ್ರಿಯವಾಗಿರುವ ʻತನುಕರಗದವರಲ್ಲಿ…ʼ ಎಂಬ ವಚನ ಅಚ್ಚರಿ ಹುಟ್ಟಿಸುತ್ತದೆ. ತನು ಅಥವ ದೇಹ ಪೂರ್ತಿಯಾಗಿ ಇಲ್ಲವಾಗದೆ ನೀನು ಒಪ್ಪಿಕೊಳ್ಳುವುದಿಲ್ಲ ಅನ್ನುವ ಮಾತು ಅಕ್ಕ ಹೇಳಿರಬಹುದೇ ಅನ್ನಿಸಿಸುತ್ತದೆ.

*

ಈ ವಚನದೊಂದಿಗೆ ಆಯ್ಕೆ ಮಾಡಿದ ಅಕ್ಕಮಹಾದೇವಿ ವಚನಗಳ ಎರಡನೆಯ ಭಾಗ ಮುಗಿಯುತ್ತದೆ. ಒಳಗಣ ಗಂಡ/ಪರಮ-ಅರ್ಥ, ಹೊರಗಣ ಮಿಂಡ/ಲೋಕ ಮಗ್ನ ಬದುಕು ಎರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವುದು ಅಗತ್ಯವೆಂಬ ನಿಲುವು,; ನೆಲವು ತಳವಾರನಾಗಿರುವಾಗ ಕಳ್ಳತಪ್ಪಿಸಿಕೊಳ್ಳುವುದು ಎಂದಿಗೂ ಆಗದು ಅನ್ನುವ ನಿಶ್ಚಯಗಳು ಮೂಡುವುದು ಒಂದು ಹಂತ. ತನ್ನ ದೇಹ, ಮನಸುಗಳನ್ನು ಪಕ್ವಮಾಡಿಕೊಂಡು ಏಕಾಂತ-ಲೋಕಾಂತಗಳ ದ್ವಂದ್ವವನ್ನು ಮೀರುವ ದಾರಿ ಕಾಣುವುದು; ಹಾವಿನ ಹಲ್ಲನ್ನು ಕಳೆದು ಹಾವನ್ನು ಆಡಿಸುವ ಹಾಗೆ ದೇಹದ ವಿಕಾರಗಳನ್ನು ಇಲ್ಲವಾಗಿಸಿಕೊಂಡು ದೇಹದೊಡನೆ ಬದುಕುವುದು ಸೂಕ್ತವೆಂಬ ತೀರ್ಮಾನ ಮೂಡುವುದು ಇನ್ನೊಂದು ಹಂತ. ನೀನು ಒಲಿಯದಿದ್ದರೆ ನಿನ್ನನ್ನು ಹೇಗೆ ಒಲಿಸಲಿ, ನೀನಲ್ಲದೆ ಬೇರೆ ಯಾರೂ ನನಗಿಲ್ಲ, ನೀನು ಯಾವ ರೀತಿಯಲ್ಲಾದರೂ ಪರೀಕ್ಷೆ ಮಾಡು ಅನ್ನುವ ದೃಢತೆ ಮೂಡುವುದು ಕಾಣುತ್ತದೆ. ಇದು ಇನ್ನಷ್ಟು ಗಟ್ಟಿಯಾಗಿ ನಾನು ಮನುಷ್ಯ ಜೀವ ಮಾತ್ರ, ಹೆಣ್ಣಲ್ಲ, ಪ್ರಾಯದ ಚೆಲುವಿನವಳಲ್ಲ, ಸುಖ ಕೊಡಲು ಇರುವ ಸೂಳೆಯಲ್ಲ ಅನ್ನುವ ಗಟ್ಟಿತನದಲ್ಲಿ ತನ್ನನ್ನು ಹೀಗೇ ಇಷ್ಟೇ ಎಂದು ನೋಡುವ ದೃಷ್ಟಿಯನ್ನು ಅಲ್ಲಗಳೆಯುವುದೂ ಕಾಣುತ್ತದೆ. ಮತ್ತೂ ಮುಂದುವರೆದು ನನಗೆ ಇರುವ ಅಡಚಣೆ ನಾನು ಮತ್ತು , ನನ್ನ ಮನೋಧರ್ಮಗಳೇ ಆಗಿವೆ,  ನನ್ನನ್ನು ನಾನೇ ಮೀರಬೇಕು ಅನ್ನುವ ದೃಢ ಕಾಣುತ್ತದೆ. ಹಸಿವು, ಮೋಹ ಇತ್ಯಾದಿಗಳನ್ನು ಅಲ್ಲೇ ನಿಲ್ಲಿ ಎಂದು ತಡೆದು ನಿಲ್ಲಿಸುವ ಶೌರ್ಯವೂ ಇದೆ. ದೇಹಕ್ಕೆ ಅಪಾಯವಾದರೆ ಅದು ನನಗೆ ನಿಸರ್ಗ ಮಾಡುವ ಪೂಜೆ ಎಂದು ಭಾವಿಸುವವರೆಗೆ ತನ್ನನ್ನು ತಾನು ಪರೀಕ್ಷೆಗೆ ಒಡ್ಡಿಕೊಳ್ಳುವ ವಿಶ್ವಾಸವಿದೆ. ಈ ಬಂಧವೆ ನಿರ್‌-ಬಂಧ, ಒಲುಮೆ ಒಚ್ಚತವಾಗಿದ್ದರೆ ಸಾಕು, ಸ್ತುತಿ ನಿಂದೆಗಳಿಗೆ ಸಮಾಧಾನ ಕಳೆದುಕೊಳ್ಳಬಾರದು ಅನ್ನುವ ತೀರ್ಮಾನ ಒಳಗಿನಿಂದ ಮೂಡುತ್ತದೆ. ಚೆನ್ನಮಲ್ಲಿಕಾರ್ಜುನನ ಒಲವಿನ ಅಲಗಿಗೆ ಮೈಯೊಡ್ಡಿ ಸಹಿಸುವ ಧೀರತನ, ಯಾವುದನ್ನು ವೀರತ್ವ, ಪೌರುಷ ಅನ್ನುತ್ತಾರೋ ಆ ಗುಣಗಳು ನನ್ನಲ್ಲೂ ಇವೆ ಅನ್ನುವ ಘೋಷಣೆ ಕೇಳುತ್ತದೆ. ಗಂಡುತನ-ಹೆಣ್ಣುತನಗಳ ಕಲ್ಪನೆಗೆ  ಪ್ರಶ್ನೆ ಒಡ್ಡುತ್ತದೆ. ಆತ್ಮಸಂಗಾತಕ್ಕೆ ನೀನಿರುವಾಗ ಭಿಕ್ಷೆ ಬೇಡಲು, ಹಾಳು ಮಂಟಪದಲ್ಲಿ ಮಲಗಲು ನನಗೆ ಅಳುಕಿಲ್ಲ. ಈ ಬದುಕು ಹೇಗಿದ್ದರೂ ಅದು ಚೆನ್ನಮಲ್ಲಿಕಾರ್ಜುನ ಕೊಟ್ಟ ಪ್ರಸಾದ. ಅದನ್ನು ಸ್ವೀಕರಿಸುತ್ತ ಈ ದೇಹ ಮಿಂಚಿದರೂ ಕರ್ರನೆ ಕಂದಿದರೂ ಪರವಾಗಿಲ್ಲ. ಅನ್ನುವ ದೃಢತೆ ಇದೆ.

ಅಕ್ಕಮಹದೇವಿಯ  ವಚನಗಳು ಮನುಷ್ಯರ ಮಾತು ಆಗಿರುವುದರಿಂದಲೇ ಇಂಥ ವಿಶ್ವಾಸ, ನಂಬಿಕೆ, ನಚ್ಚು, ಧೈರ್ಯಗಳನ್ನು ವ್ಯಕ್ತಪಡಿಸುವಾಗಲೇ ಅಲ್ಲಲ್ಲಿ ಸಣ್ಣ ಸಂಶಯದ ಎಳೆ, ಪ್ರಶ್ನೆ ಮಾಡುವ ಹಟ, ಆತಂಕ ಇವೂ ಇವೆ. ಶರಣರನ್ನು, ಸಂತರನ್ನು ಸದಾ ಸಮತಲ ಮನಸ್ಥಿತಿಯವರೆಂದು ಕಲ್ಪಿಸಿಕೊಳ್ಳುವುದು ನಮ್ಮ ಸಮಾಧಾನಕ್ಕಷ್ಟೇ! ಮುಂದಿನ ಭಾಗದ ವಚನದಲ್ಲಿ ಅಕ್ಕ ನಿಶ್ಚಿಂತಳಾಗುವುದನ್ನು ನೋಡೋಣ. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.