ನನ್ನ ಉಸಿರು ಮತ್ತು ಸೃಷ್ಟಿ ಬೇರೆಯಲ್ಲ ಎಂಬ ಸ್ಥಿತಿಯ ವಿವರಣೆ ಇದ್ದ ಹಾಗಿದೆ ಈ ವಚನ. ನೀವು ಅನ್ನುವುದು ಚೆನ್ನಮಲ್ಲಿಕಾರ್ಜುನ, ಇಷ್ಟದೈವ, ಇಡೀ ಸೃಷ್ಟಿ ಎಂದು ವ್ಯಾಖ್ಯಾನ ಮಾಡಲು ಸಾಧ್ಯವಿದೆ. ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 4, ನೀನೇ ನನ್ನ ಉಸಿರು
ತನು ನಿಮ್ಮ ರೂಪಾದ ಬಳಿಕ
ಆರಿಗೆ ಮಾಡುವೆ ?
ಮನ ನಿಮ್ಮ ರೂಪಾದ ಬಳಿಕ
ಆರ ನೆನೆವೆ ?
ಪ್ರಾಣ ನಿಮ್ಮ ರೂಪಾದ ಬಳಿಕ
ಆರನಾರಾಧಿಸುವೆ ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ
ಆರನರಿವೆ ?
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮಿಂದ ನೀವೆಯಾದಿರಾಗಿ ನಿಮ್ಮನೆ ಅರಿವುತ್ತಿರ್ದೆನು.[೨೧೯]
[ಮಾಡು=ಪೂಜಿಸು; ನೆನೆವೆ=ಧ್ಯಾನಿಸುವೆ; ಸ್ವಯ=ಒಂದಾಗು; ನಿಮ್ಮಿಂದ ನೀವೆ ಆದಿರಿ=ನಿಮ್ಮ ಇಚ್ಛೆಯಿಂದ ನೀವೇ ನಾನಾದಿರಿ; ಅರಿವುತಿರ್ದೆ=ಅರಿಯುತ್ತಿದ್ದೆ]
ನನ್ನ ದೇಹದ ರೂಪ ನಿಮ್ಮ ರೂಪವೇ ಆದಮೇಲೆ ಯಾರನ್ನು ಪೂಜಿಸಲಿ, ನನ್ನ ಮನಸ್ಸು ನಿಮ್ಮ ರೂಪವವೇ ಆಗಿರುವಾಗ ಯಾರನ್ನು ಕುರಿತು ಧ್ಯಾನ ಮಾಡಲಿ, ನನ್ನ ಉಸಿರು ನಿಮ್ಮ ರೂಪವೇ ಆಗಿರುವಾಗ ಆರಾಧಿಸುವುದು ಯಾರನ್ನು, ನಾನು ಅನ್ನುವುದು ನೀನು ಎಂಬುದರಲ್ಲಿ ಒಂದಾಗಿರುವಾಗ ನನ್ನನ್ನು ಅರಿಯಬೇಕು ಅಂದರೂ ಒಂದೇ. ನಿಮ್ಮನ್ನು ಅರಿಯಬೇಕು ಅಂದರೂ ಒಂದೇ. ಆಗುವ ಅನುಭವವೆಲ್ಲಾ ನೀವೇ ಆಗಿದ್ದೀರಿ. ನಿಮ್ಮನ್ನೇ ಅರಿಯುತ್ತ ಇದ್ದೇನೆ.
ನನ್ನ ಉಸಿರು ಮತ್ತು ಸೃಷ್ಟಿ ಬೇರೆಯಲ್ಲ ಎಂಬ ಸ್ಥಿತಿಯ ವಿವರಣೆ ಇದ್ದ ಹಾಗಿದೆ ಈ ವಚನ. ನೀವು ಅನ್ನುವುದು ಚೆನ್ನಮಲ್ಲಿಕಾರ್ಜುನ, ಇಷ್ಟದೈವ, ಇಡೀ ಸೃಷ್ಟಿ ನನ್ನಿಂದ ಬೇರೆಯಲ್ಲ, ನನ್ನ ಉಸಿರೇ ಅವನು ಎಂದು ವ್ಯಾಖ್ಯಾನ ಮಾಡಲು ಸಾಧ್ಯವಿದೆ.

