ನೇರವಾಗಿ ಅನುಭವವೇ ಆಗುವುದಾದರೆ ಆ ಕುರಿತ ಭಾಷೆಯ ಹೊಟ್ಟು, ಧೂಳು, ಮರಳಿಗಾಗಿ ಯಾಕೆ ಹೋರಾಡಬೇಕು? ಇದು ವಚನಕಾರರ ಮತ್ತು ಅನುಭಾವಿಗಳ ನಿಲುವು ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 4, ನೀನೇ ನನ್ನ ಉಸಿರು
ವೇದ ಶಾಸ್ತ್ರ ಆಗಮ ಪುರಾಣಗಳೆಲ್ಲವು
ಕೊಟ್ಟಣವ ಕುಟ್ಟಿದ ನುಚ್ಚು ತೌಡು ಕಾಣಿಭೋ.
ಇವ ಕುಟ್ಟಲೇಕೆ ಕುಸುಕಲೇಕೆ
ಅತ್ತಲಿತ್ತ ಹರಿವ ಮನದ ಶಿರವನರಿದಡೆ ಬಚ್ಚಬರಿಯ ಬಯಲು
ಚೆನ್ನಮಲ್ಲಿಕಾರ್ಜುನಾ [೩೭೨]
[ಕೊಟ್ಟಣ=ಬತ್ತವನ್ನು ಕುಟ್ಟುವ ಕೆಲಸ, ಒರಳು; ಕುಸುಕು=ಬಡಿ, ತೊಳೆಯುವುದು; ಅರಿದಡೆ=ಅರಿ ಇಲ್ಲಿ ಕ್ರಿಯಾಪದ, ಕತ್ತರಿಸು ಎಂಬ ಅರ್ಥ]
ವೇದ, ಶಾಸ್ತ್ರ, ಆಗಮ, ಪುರಾಣ ಇವೆಲ್ಲವೂ ಬತ್ತವನ್ನು ಕುಟ್ಟಿ, ಅಕ್ಕಿ ಮಾಡಿದ ನಂತರ ಉಡಿಯುವ ನುಚ್ಚು, ಹೊಟ್ಟು, ತೌಡು. ಇವನ್ನು ಇನ್ನೂ ಬಡಿಯುವ, ತೊಳೆಯುವ ಕೆಲಸ ಯಾಕೆ, ಏನೂ ಫಲವಿಲ್ಲ. ಅತ್ತ ಇತ್ತ ಚಲಿಸುತ್ತ ಚಂಚಲವಾಗಿರುವ ಮನಸಿನ ಕತ್ತನ್ನು ಕತ್ತರಿಸಿದರೆ ಉಳಿಯುವುದು ಬರಿಯ ಬಯಲು.
ನಾವು ಯಾವುದನ್ನು ಧರ್ಮ, ಸಂಸ್ಕೃತಿಳ ಆಧಾರ ಗ್ರಂಥಗಳು ಅಂದುಕೊಂಡಿದ್ದೇವೋ ಅವೆಲ್ಲ, ಇಂದಿನ ನಮ್ಮ ಅನುಭವಕ್ಕೆ ದಕ್ಕದ ಭಾಷೆಯಲ್ಲಿ ರಾಶಿಯಾಗಿರುವ ಹೊಟ್ಟು ಅನ್ನುವ ಮನೋಧರ್ಮ ವೇದಗಳಷ್ಟೇ ಹಳೆಯದು. ಝೆನ್ ಪಂಥದಲ್ಲಿಯೂ ಅನುಭವವನ್ನು ತಿಳಿಸುವ ಸಲುವಾಗಿ ಬಂಗಾರವನ್ನು ಭಾಷೆಯೆಂಬ ಮರಳಿನಲ್ಲಿ ಬೆರೆಸಬೇಕು ಅನ್ನುವ ಮಾತಿದೆ. ನೇರವಾಗಿ ಅನುಭವವೇ ಆಗುವುದಾದರೆ ಆ ಕುರಿತ ಭಾಷೆಯ ಹೊಟ್ಟು, ಧೂಳು, ಮರಳಿಗಾಗಿ ಯಾಕೆ ಹೋರಾಡಬೇಕು? ಇದು ವಚನಕಾರರ ಮತ್ತು ಅನುಭಾವಿಗಳ ನಿಲುವು. ಉಸಿರೇ ಚೆನ್ನಮಲ್ಲಿಕಾರ್ಜುನನಾದ. ಅಮೇಲೆ ಅವನನ್ನು ವರ್ಣಿಸುವ, ತಿಳಿಯುವ ದಾರಿಗಳನ್ನು ಪಾಠಮಾಡುವ, ಅವನ ಕಥೆಗಳನ್ನು ಹೇಳುವ ವೇದ, ಪುರಾಣ, ಶಾಸ್ತ್ರಗಳೆಲ್ಲ ಜಳ್ಳು ಹೊಟ್ಟು ಅನಿಸುತ್ತದೆ.
*
ಈ ನಾಲ್ಕನೆಯ ಭಾಗಕ್ಕೆಂದು ಆಯ್ದ ವಚನಗಳಲ್ಲಿ ʻನೀನೇ ನನ್ನ ಉಸಿರುʼ ಅಥವಾ ನನ್ನ ಪ್ರಾಣ ಅನ್ನುವ ಭಾವ ಮುಖ್ಯವಾಗಿದೆ. ಹಾಗೆ ತನಗಿಂತ ಮಿಗಿಲಾದುದಕ್ಕೆ ತನ್ನನ್ನು ಕೊಟ್ಟುಕೊಳ್ಳುವ ಅನುಭವವನ್ನು ಪಡೆಯದೆ ಇಂಥ ಮಾತನ್ನು ಎಲ್ಲರೂ ಹೇಳಿದರೆ ಅದಕ್ಕೆ ಅರ್ಥವಿರುವುದಿಲ್ಲ. ಅಕ್ಕನ ವಚನಗಳಲ್ಲಿ ಕೂಡ ಅನುಭವ ಮುಖ್ಯ ಅನ್ನುವ ವಿಶ್ವಾಸ ಬಂದಮೇಲೂ ಅಂಥ ವಿಶ್ವಾಸವನ್ನು ಗಳಿಸಿದ ʻಅಹಂʼ ಅನ್ನು ಪೂರ್ತಿಯಾಗಿ ಇಲ್ಲವಾಗಿಸಿಕೊಂಡು ಪರಿಮಿತ ಅಹಂಕಾರಕ್ಕಿಂತ ಬಹಳ ಬಹಳ ದೊಡ್ಡದಾದ ಅಪರಿಮಿತಕ್ಕೆ ಶರಣಾಗುವ ಹೋರಾಟ ಇನ್ನೂ ಉಳಿದಿರುತ್ತದೆ.
ಅಕ್ಕ ಮಹಾದೇವಿಯ ಅದ್ಭುತ ಅನ್ನಿಸುವಂಥ ವಚನಗಳು ಹೀಗೆ ಅಹಂ ನಿರಸನದ, ನಾನು ಅನ್ನುವುದು ಫನಾ ಆಗುವ (ಇಲ್ಲವಾಗುವ ) ಕಷ್ಟವನ್ನು, ತೊಳಲಾಟವನ್ನು ಹೇಳುವ ವಚನಗಳು. ಅವನ್ನು ಮುಂದಿನ ಭಾಗದಲ್ಲಿ ನೋಡೋಣ. ತನ್ನನ್ನು ತಾನು ಚೆನ್ನಮಲ್ಲಿಕಾರ್ಜುನನಿಗೆ ಬೇಷರತ್ತಾಗಿ ಒಪ್ಪಿಸಿಕೊಂಡ ಬಗೆಯನ್ನು ಹೇಳುವ ವಚನಗಳು ಮುಂದೆ ಬರುತ್ತವೆ.

