ನಾನತ್ವವನ್ನು ನೀಗಿಕೊಂಡಾಗ ಮಾತ್ರ ನೆಮ್ಮದಿ. ಆದರೆ ಅದು ಸುಲಭವಲ್ಲ. ಈ ತೊಳಲಾಟ ಅಕ್ಕಮಹದೇವಿಯ ವಚನಗಳಲ್ಲಿ ಪ್ರಮುಖವಾಗಿ ಕಾಣುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ.
ಏರಿಲ್ಲದ ಗಾಯದಲ್ಲಿ ನೊಂದೆನವ್ವಾ.
ಸುಖವಿಲ್ಲದೆ ಧಾವತಿಗೊಂಡೆನವ್ವಾ.
ಚೆನ್ನಮಲ್ಲಿಕಾರ್ಜುನದೇವಂಗೊಲಿದು ಬಾರದ ಭವಂಗಳಲ್ಲಿ ಬಂದೆನವ್ವಾ [೧೭೧]
[ಏಱ್=ಪೆಟ್ಟು, ಹೊಡೆತ, ಗಾಯದ ಗುರುತು; ಧಾವತಿ=ದಣಿವು; ಬಾರದ=ಬಾ ಅನ್ನುವ ಮಾತಿಗೆ ಅಲಂಕಾರಿಕವಾಗಿ ಸಂತೋಷ, ಹೆಮ್ಮೆಯಿಂದ ಉಬ್ಬು ಎಂಬ ಅರ್ಥವಿದೆ.]
ಜ್ವಾಲೆ ಕಾಣದ ಬೇಗೆಯಲ್ಲಿ ಬೆಂದೆ, ಗುರುತು ಮೂಡದ ಗಾಯದ ನೋವಿನಿಂದ ನರಳಿದೆ, ಸುಖವಿಲ್ಲದೆ ದಣಿದು ಹೋದೆ, ಚೆನ್ನಮಲ್ಲಿಕಾರ್ಜುನನನ್ನು ಒಲಿದರೂ ಸಂತೋಷಪಡಲು, ಹೆಮ್ಮೆ ಅನುಭವಿಸಲು ಸಾಧ್ಯವಿರದ ಈ ಲೋಕಕ್ಕೆ ಬಂದೆ, ಅವ್ವಾ.
ಅಕ್ಕಮಹದೇವಿಯ ಅನೇಕ ವಚನಗಳು ನಾನತ್ವವನ್ನು ಕಳೆದುಕೊಳ್ಳುವ ಪರಿಯನ್ನು ವಿವರಿಸುತ್ತವೆ. ಚೆನ್ನಮಲ್ಲಿಕಾರ್ಜುನನಿಗೆ ಒಲಿದರೂ ಅವನು ಸಿಗದೆ ನೋವು ಅನುಭವಿಸಿದರೂ ಅದು ತೀರ ಸ್ವಂತದ್ದು, ಯಾರಿಗೂ ತೋರಲು, ಅರ್ಥಮಾಡಿಸಲು ಆಗದ ಅನುಭವ. ಜ್ವಾಲೆ ಇದ್ದರೆ ಬೆಂಕಿ ಕಾಣುತ್ತದೆ, ಬೆಂಕಿ ಕಂಡರೆ ನಾನು ಬೆಂದದ್ದು ಅರ್ಥವಾಗುತ್ತದೆ; ಗಾಯದ ಗುರುತಿದ್ದರೆ ನೊಂದದ್ದು ತಿಳಿಯುತ್ತದೆ, ಪ್ರೀತಿ ಇದ್ದರೂ ಸುಖವಿರದೆ ದಣಿದು ಹೋದೆ. ಆ ದಣಿವನ್ನಂತೂ ಹೇಗೂ ತೋರಲು ಸಾಧ್ಯವೇ ಇಲ್ಲ. ಬೆಂದು, ನೊಂದು, ದಣಿದ ಕ್ರಿಯೆಗಳ ಶಿಖರ ಸ್ಥಿತಿ ವಚನದ ಕೊನೆಯಲ್ಲಿ ಬರುತ್ತದೆ. ಚೆನ್ನಮಲ್ಲಿಕಾರ್ಜುನನನ್ನು ಒಲಿದಿದ್ದರೂ ಅದರಿಂದ ಸಂತೋಷಪಡುವ, ಹೆಮ್ಮೆ ಪಡುವ ಅವಕಾಶವೂ ಇಲ್ಲದ, ದೇಹದ ಸುಖದ ನೋವನ್ನೂ ಆಧ್ಯಾತ್ಮಿಕವಾದ ಒಲವಿನ ನೋವನ್ನೂ ಸಾಬೀತು ಮಾಡಲು ಸಾಕ್ಷಿ ಇರದ ಸ್ಥಿತಿ ಈ ಲೋಕದಲ್ಲಿದೆ.
ಪ್ರತಿಯೊಬ್ಬನು ತನ್ನ ಹೃದಯದ ವ್ಯಾಕುಲವನ್ನು ತಾನು ಗ್ರಹಿಸಿಕೊಳ್ಳುವನು; ಅವನ ಆನಂದದಲ್ಲಿಯೂ ಯಾರೂ ಪಾಲುಗಾರರಾಗುವದಿಲ್ಲ. (ಜ್ಞಾನೋಕ್ತಿಗಳು ೧೪:೧೦) “The heart knoweth his own bitterness; and a stranger doth not intermeddle with his joy.” Proverbs 14:10) ಎಂಬ ಬೈಬಲಿನ ಮಾತು ನೆನಪಾಗುತ್ತದೆ. ಸಂತೋಷವೇ ಆಗಲಿ, ದುಃಖವೇ ಆಗಲಿ ಅದು ಅವರವರ ಹೃದಯಕ್ಕೆ ಮಾತ್ರ ಅರಿವಾಗುವುದೇ ಹೊರತು ಬೇರೆ ಯಾರಿಗೂ ಅದು ಮುಖ್ಯ ಅನಿಸುವುದೇ ಇಲ್ಲ. ನಾನತ್ವ ಇರುವವರೆಗೆ ನನ್ನ ಸಂತೋಷ, ನನ್ನ ದುಃಖ, ಬೇಕು, ಬೇಡ ಇತ್ಯಾದಿಗಳು ಇರುತ್ತವೆ. ನಾನತ್ವವನ್ನು ನೀಗಿಕೊಂಡಾಗ ಮಾತ್ರ ನೆಮ್ಮದಿ. ಆದರೆ ಅದು ಸುಲಭವಲ್ಲ. ಈ ತೊಳಲಾಟ ಅಕ್ಕಮಹದೇವಿಯ ವಚನಗಳಲ್ಲಿ ಪ್ರಮುಖವಾಗಿ ಕಾಣುತ್ತದೆ.

