ನೀನಿರಿಸಿದ ಗತಿಯಲ್ಲಿ… : ಅಕ್ಕ ಮಹಾದೇವಿ #42

ನಾನತ್ವ ಇಲ್ಲವಾದ ಮೇಲೆ ಸ್ವಾತಂತ್ರ್ಯ ಯಾರಿಗೆ ಬೇಕು, ಯಾಕೆ ಬೇಕು ಅನ್ನುವ ಪ್ರಶ್ನೆ ಹುಟ್ಟಿ ತಳಮಳವಾಗುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ನಾನು ನಿನಗೊಲಿದೆ
ನೀನು ಎನಗೊಲಿದೆ
ನೀನೆನ್ನನಗಲದಿಪ್ಪೆ
ನಾನಿನ್ನನಗಲದಿಪ್ಪೆನಯ್ಯಾ
ನಿನಗೆ ಎನಗೆ ಬೇರೊಂದು ಠಾವುಂಟೆ
ನೀನು ಕರುಣಿಯೆಂಬುದ ಬಲ್ಲೆನು
ನೀನಿರಿಸಿದ ಗತಿಯೊಳಗಿಪ್ಪವಳಾನು
ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನಾ [೨೫೪]

[ಅಗಲದಿಪ್ಪೆ=ಅಗಲದಿರುವೆ; ಗತಿಯೊಳಗಿಪ್ಪವಳಾನು=ಸ್ಥಿತಿಯಲ್ಲಿ ಇರುವವಳು ನಾನು]

ನೀನು ನನಗೆ ಒಲಿದೆ, ನಾನು ನಿನಗೆ ಒಲಿದೆ, ನೀನು ನನ್ನ ಬಿಡಲಾರೆ, ನಾನು ನಿನ್ನ ಬಿಡಲಾರೆ. ನಿನಗೂ ನನಗೂ ಬೇರೆ ಬೇರೆ ಸ್ಥಳವಿಲ್ಲ, ಇಬ್ಬರೂ ಇರುವುದು ಒಂದೇ ಎಡೆಯಲ್ಲಿ. ನನಗೆ ಗೊತ್ತು, ನೀನು ಕರುಣಿ, ನೀನು ಹೇಗೆ ಇರಿಸುವೆಯೋ ಹಾಗೆ ಇರುತ್ತ, ನೀನು ನಡೆಸಿದ ಹಾಗೆ ನಡೆಯುತ್ತ ಇರುವವಳು ನಾನು.

ಆಯ್ಕೆಯ ಜವಾಬ್ದಾರಿ ನನ್ನದೇ ಆಗಿರುವ ಸ್ಥಿತಿ ಎಂದು ಸ್ವಾತಂತ್ರ್ಯವನ್ನು ವರ್ಣಿಸುವುದುಂಟು. ನನ್ನದು ಅನ್ನುವುದು ನಾನತ್ವ. ಅದಿರುವವರೆಗೆ ನೆಮ್ಮದಿ ಇಲ್ಲವೆಂದಾದರೆ ಪೂರ್ತಿಯಾಗಿ ನಾನುತನವನ್ನು ಇಲ್ಲವಾಗಿಸಿಕೊಳ್ಳಬೇಕು. ಬೆಕ್ಕಿನ ಮರಿಯು ತಾಯಿ ಬೆಕ್ಕಿಗೆ ತನ್ನನ್ನು ಪೂರ್ತಿಯಾಗಿ ಒಪ್ಪಿಸಿಕೊಂಡ ಹಾಗೆ. ಅಮ್ಮನನ್ನು ಬಿಗಿದಪ್ಪುವ ತೀರ್ಮಾನವೂ ಬೆಕ್ಕಿನಮರಿಗೆ ಇಲ್ಲ. ಅಮ್ಮ ಬೆಕ್ಕು ಅದನ್ನು ತಾನೇ ಒಯ್ದು, ಉಣಿಸಿ, ಆರೈಕೆಮಾಡಿ ಬೆಳೆಸುತ್ತದೆ. ಎಲ್ಲ ಧರ್ಮಗಳಲ್ಲೂ ಭಕ್ತಿಯ ಅನುಷ್ಠಾನದಲ್ಲಿ ಮೂಡುವ, ನಾನು ಇಲ್ಲವಾಗಿ ಮಹತ್‌ ಆದುದಕ್ಕೆ ಶರಣಾಗುವುದನ್ನು ದೊಡ್ಡ ಮೌಲ್ಯವಾಗಿ ತಿಳಿಯಲಾಗಿದೆ. ʻಶರಣುಹೋಗಲರಿಯದೆ ಕೆಮ್ಮನೆ ಕೆಟ್ಟೆʼ ಎಂದು ಸಿದ್ಧರಾಮವಚನ, [೪.೧೩೫೬] ಹೇಳಿದರೆ ತಂದೆ ನೀನು ತಾಯಿ ನೀನು ಎಂದು ಆರಂಭವಾಗುವ ಬಸವವಚನ ʻಕೂಡಲಸಂಗಮದೇವಾ ಹಾಲಲದ್ದು ನೀರಲದ್ದುʼ [೧.೪೮೧] ಅನ್ನುತ್ತದೆ.

ನಾನತ್ವ ಇಲ್ಲವಾದ ಮೇಲೆ ಸ್ವಾತಂತ್ರ್ಯ ಯಾರಿಗೆ ಬೇಕು, ಯಾಕೆ ಬೇಕು ಅನ್ನುವ ಪ್ರಶ್ನೆ ಹುಟ್ಟಿ ತಳಮಳವಾಗುತ್ತದೆ. ಈ  ವಚನದ ಇನ್ನೊಂದು ಮಗ್ಗುಲನ್ನು ಮುಂದಿನ ವಚನದಲ್ಲಿ ನೋಡೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.