ಹುಟ್ಟಿನಿಂದ ಯಾರೂ ಹಿಂಸಾ ಪ್ರವೃತ್ತಿಯವರಲ್ಲ ; ಇದನ್ನು ಅವರು ಕಲಿಯುತ್ತಾರೆ. ಹಿಂಸಾವಾದಿ ಸಮಾಜದಿಂದ ಪ್ರಭಾವಿತರಾಗಿ ಜನ ಹಿಂಸಾಪ್ರವೃತ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಇದುಬಿಟ್ಟರೆ ಹುಟ್ಟಿದ ಪ್ರತಿ ಮಗುವೂ ಅಹಿಂಸಾವಾದಿಯೇ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮ್ಮ ಅಸ್ತಿತ್ವದಲ್ಲಿ ಹಿಂಸೆಗೆ ಯಾವ ಜಾಗವೂ ಇಲ್ಲ. ಬದಲಾಗಿ ನಾವು ಸಂದರ್ಭಗಳಿಂದ ಪ್ರಭಾವಿತರಾಗಿದ್ದೇವೆ, ಸಂದರ್ಭಗಳಿಂದ ಕಂಡಿಷನ್ ಗೆ ಒಳಗಾಗಿದ್ದೇವೆ. ಬದುಕಿನಲ್ಲಿ ಹಲವಾರು ಸಂಗತಿಗಳಿಂದ ನಮ್ಮನ್ನು ನಾವು ರಕ್ಷಿಸಕೊಳ್ಳಬೇಕಿದೆ ಮತ್ತು ನಾವು ಆಕ್ರಮಣವನ್ನು ರಕ್ಷಣೆಯ ಅತ್ಯುತ್ತಮ ಮಾರ್ಗ ಎಂದುಕೊಂಡಿದ್ದೇವೆ. ಯಾವಾಗ ಒಬ್ಬ ವ್ಯಕ್ತಿ ತನ್ನನ್ನು ಬಹಳಷ್ಟು ಬಾರಿ ರಕ್ಷಿಸಿಕೊಳ್ಳಬೇಕಾದ ಸಂದರ್ಭಗಳನ್ನು ಎದುರುಗೊಳ್ಳುತ್ತಾನೋ ಆಗ ಆ ವ್ಯಕ್ತಿ ಆಕ್ರಮಣಶೀಲನಾಗಿ ರೂಪಗೊಳ್ಳುತ್ತಾನೆ, ಹಿಂಸಾವಾದಿಯಾಗುತ್ತಾನೆ. ಏಕೆಂದರೆ ನಾವು ಹಿಂಸೆಗೊಳಗಾಗುವ ಮೊದಲು ನಾವೇ ಹಿಂಸೆಗೆ ಮುಂದಾಗುವುದು ಒಳ್ಳೆಯದು ಎಂದು ಅವನು ತಿಳಿದುಕೊಳ್ಳುತ್ತಾನೆ. ಯಾರು ಮೊದಲು ಆಕ್ರಮಣ ಮಾಡುತ್ತಾರೋ ಅವರಿಗೆ ಗೆಲ್ಲುವ ಅವಕಾಶಗಳು ಜಾಸ್ತಿ ಎನ್ನುವುದು ಅವನ ವಾದವಾಗುತ್ತದೆ.
ಇದನ್ನೇ Machiavelli ತನ್ನ ಪ್ರಸಿದ್ಧ ಪುಸ್ತಕ “The Prince” ಲ್ಲಿ ಹೇಳಿರುವುದು. ಇದು ರಾಜಕಾರಣಿಗಳ ಬೈಬಲ್. ಅವನ ಪ್ರಕಾರ ಆಕ್ರಮಣ, ರಕ್ಷಣೆಯ ಅತ್ಯುತ್ತಮ ಮಾರ್ಗ. ಕಾಯಬೇಡಿ, ಯಾರಾದರೂ ನಿಮ್ಮ ಮೇಲೆ ಆಕ್ರಮಣ ಮಾಡುವ ಮೊದಲು ನೀವು ಆಕ್ರಮಣ ಮಾಡಿ. Machiavelli ಪ್ರಕಾರ, ನಿಮ್ಮ ಮೇಲೆ ಮೊದಲು ಆಕ್ರಮಣವಾಗಿದೆಯೆಂದರೆ, ನೀವು ಆಗಲೇ ಸೋಲಿನ ದಾರಿಯಲ್ಲಿದ್ದೀರಿ.
ಆದ್ದರಿಂದ ಜನ ವೈಲಂಟ್ ಆಗುತ್ತಾರೆ, ಇಲ್ಲವಾದರೆ ವೈರಿಗಳು ತಮ್ಮನ್ನು ನಾಶ ಮಾಡಿಬಿಡುತ್ತಾರೆ ಎಂದು ಅವರು ತಿಳಿದುಕೊಂಡಿರುತ್ತಾರೆ. ಬದುಕುಳಿಯಲು ಫೈಟ್ ಮಾಡಬೇಕಾದದ್ದು ಅವಶ್ಯಕ ಎನ್ನುವ ಟ್ರಿಕ್ ಅವರಿಗೆ ಒಮ್ಮೆ ಗೊತ್ತಾಯಿತೆಂದರೆ, ಅವರ ಪ್ರಕೃತಿ ಈ ತಿಳುವಳಿಕೆಯಿಂದಾಗಿ ವಿಷಮಯವಾಗುತ್ತದೆ. ಆದರೆ ಇದು ಸ್ವಾಭಾವಿಕವಲ್ಲವಾದ್ದರಿಂದ ಇದನ್ನು ನಾವು ತ್ಯಜಿಸಿಬಿಡಬಹುದು.
ಒಂದು ಚೇಳು ನದಿಯ ದಂಡೆಯ ಮೇಲೆ ನಿಂತು, ಅತ್ತಿತ್ತ ನೋಡುತ್ತಿತ್ತು. ಆ ಚೇಳಿಗೆ ನದಿ ದಾಟಿ ಆಚೆಯ ದಂಡೆಗೆ ಹೋಗಬೇಕಿತ್ತು. ಚೇಳಿನ ಅದೃಷ್ಟ, ಕಪ್ಪೆಯೊಂದು ನೀರಿನಲ್ಲಿ ಈಜುತ್ತ ದಂಡೆಗೆ ಬಂತು.
“ ನನಗೊಂದು ಸಹಾಯ ಮಾಡುತ್ತೀಯ?” ಕೇಳಿತು ಚೇಳು. “ ನಾನು ನಿನ್ನ ಬೆನ್ನ ಮೇಲೆ ಕೂತುಕೊಳ್ಳುತ್ತೇನೆ. ನೀನು ನನ್ನನ್ನು ಆಚೆ ದಂಡೆಗೆ ಮುಟ್ಟಿಸು” ಚೇಳು, ಕಪ್ಪೆಯನ್ನು ಕೇಳಿಕೊಂಡಿತು.
“ ನನ್ನ ಹುಚ್ಚ ಅಂದ್ಕೊಡ್ಡಿದ್ದೀಯಾ, ನೀನು ದಾರಿಯಲ್ಲಿ ನನ್ನ ಕಚ್ಚಿದರೆ ನಾನು ಸತ್ತು ಹೋಗುತ್ತೇನೆ “ ಉತ್ತರಿಸಿತು ಕಪ್ಪೆ.
“ ಸ್ವಲ್ಪ ತರ್ಕ ಬದ್ಧವಾಗಿ ವಿಚಾರ ಮಾಡು, ದಾರಿಯಲ್ಲಿ ನೀನು ಸತ್ತರೆ ನಾನೂ ಕೂಡ ನದಿಯಲ್ಲಿ ಮುಳುಗಿ ಸತ್ತು ಹೋಗುತ್ತೇನಲ್ಲವೆ? “ ಚೇಳು, ತನ್ನ ವಿನಂತಿಯನ್ನು ಸಮರ್ಥಿಸಿಕೊಂಡಿತು.
“ ಹೌದಲ್ವಾ, ಬಾ ನನ್ನ ಬೆನ್ನ ಮೇಲೆ ಕೂಡು. ನಿನ್ನನ್ನು ಆಚೆ ದಡಕ್ಕೆ ಮುಟ್ಟಿಸುತ್ತೇನೆ “ ಕಪ್ಪೆ, ಚೇಳನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯಲ್ಲಿ ಈಜತೊಡಗಿತು.
ನದಿಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ಕಪ್ಪೆಗೆ ಯಾರೋ ತನ್ನ ಕುತ್ತಿಗೆಯನ್ನು ತೀಕ್ಷ್ಣವಾಗಿ ಕಚ್ಚಿದಂತೆ ಭಾಸವಾಯಿತು, ಕಪ್ಪೆಯ ಕಣ್ಣು ಮಂಜಾಗ ತೊಡಗಿತು. ಆಗ ಕಪ್ಪೆ, ತನ್ನ ಬೆನ್ನ ಮೇಲೆ ಕೂತಿದ್ದ ಚೇಳನ್ನು ಪ್ರಶ್ನೆ ಮಾಡಿತು.
“ ನೀನು ಹೇಳಿದ್ದೆ, ನಾನು ನಿನ್ನನ್ನು ನದಿ ದಾಟಿಸುತ್ತಿರುವಾಗ ನೀನು ಯಾವ ಕಾರಣಕ್ಕೂ ನನ್ನ ಕಚ್ಚಲಾರೆ ಅಂತ. ಹಾಗೇನಾದರೂ ಕಚ್ಚಿದರೆ ಅದು ನಿನ್ನ ಪ್ರಾಣಕ್ಕೇ ಸಂಚುಕಾರ ಅಂತ. ಮತ್ತು ಆ ಕ್ಷಣದಲ್ಲಿ ನನ್ನ ಕಚ್ಚುವುದು ತರ್ಕ ಬದ್ಧ ಕೂಡ ಅಲ್ಲ ಅಂತ. ಮತ್ತೆ ಯಾಕೆ ಕಚ್ಚಿದೆ?”
“ ನನಗೆ ಕಚ್ಚುವುದು ತರ್ಕದ ವಿಷಯ ಅಲ್ಲ , ಅದು ನನ್ನ ಸ್ವಭಾವ “ ಚೇಳು ಉತ್ತರಿಸಿತು.

