ತುಂಬಿದ್ದು ತುಳುಕುವುದಿಲ್ಲ : ಅಕ್ಕ ಮಹಾದೇವಿ #43

ಚೆನ್ನಾಗಿ ತಿಳಿದಿರುವುದು ಎಂದೂ ಮರೆಯುವುದಿಲ್ಲ. ಈ ಒಂದೊಂದೂ ಸತ್ಯವೆಂದು ಹೇಳಲು ಪ್ರತಿ ವಾಕ್ಯದ ನಂತರವೂ ಒಂದು ಸಣ್ಣ ವಿರಾಮ ನೀಡಿ ನೋಡಾ ಎಂದು ಮತ್ತೆ ಮತ್ತೆ ಹೇಳುತ್ತದೆ ಈ ವಚನ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ತುಂಬಿದುದು ತುಳುಕದು
ನೋಡಾ.
ನಂಬಿದುದು ಸಂದೇಹಿಸದು
ನೋಡಾ.
ಒಲಿದುದು ಓಸರಿಸದು
ನೋಡಾ
ನೆರೆಯರಿದುದು ಮರೆಯದು
ನೋಡಾ
ಚೆನ್ನಮಲ್ಲಿಕಾರ್ಜುನಯ್ಯಾ
[ನೀನೊಲಿದ ಶರಣಂಗೆ ನಿಸ್ಸೀಮಸುಖವಯ್ಯಾ [೨೩೭]

[ಓಸರಿಸು=ಪಕ್ಕಕ್ಕೆ ಸರಿ, ಹಿಂಜರಿ, ಓರೆಯಾಗಿ ಹೋಗು; ನೆಱೆಯಱಿದುದು=ಚೆನ್ನಾಗಿ ತಿಳಿದದ್ದು]

ನೀರು ತುಳುಕುವುದಕ್ಕೆ ಬಿಂದಿಗೆಯೊಳಗೆ ಖಾಲಿ ಜಾಗವಿರಬೇಕು. ಪೂರ್ತಿಯಾಗಿ ತುಂಬಿದ್ದು ತುಳುಕದು. ನಂಬಿಕೆ ಅಂದರೆ ಸಂದೇಹಕ್ಕೆ ಅವಕಾಶವೇ ಇರದ ಸ್ಥಿತಿ. ಒಲುಮೆ ಅಂದರೆ ಒಂದಿಷ್ಟೂ ಹಿಂಜರಿಯದ, ಪಕ್ಕಕ್ಕೆ ಸರಿಯದ, ಒಲಿದದ್ದನ್ನು ಎದುರುಗೊಳ್ಳುವ ವರ್ತನೆ. ಚೆನ್ನಾಗಿ ತಿಳಿದಿರುವುದು ಎಂದೂ ಮರೆಯುವುದಿಲ್ಲ. ಈ ಒಂದೊಂದೂ ಸತ್ಯವೆಂದು ಹೇಳಲು ಪ್ರತಿ ವಾಕ್ಯದ ನಂತರವೂ ಒಂದು ಸಣ್ಣ ವಿರಾಮ ನೀಡಿ ನೋಡಾ ಎಂದು ಮತ್ತೆ ಮತ್ತೆ ಹೇಳುತ್ತದೆ ಈ ವಚನ.

ಮನುಷ್ಯ ಸಂಬಂಧವೇ ಆಗಲಿ, ದೇವ-ಮನುಷ್ಯ ಸಂಬಂಧವೇ ಆಗಲಿ ನಾನತ್ವ ಇರುವವರೆಗೆ ತಿಕ್ಕಾಟ, ಘರ್ಷಣೆ ಇರುತ್ತದೆ. ನಾನು ಅನ್ನುವುದು ಪರಿಮಿತ ತಿಳಿವಳಿಕೆ, ಪರಿಮಿತ ಸಾಮರ್ಥ್ಯ, ಪರಿಮಿತ… ಹೀಗೆ ಸ್ಪಷ್ಟವಾಗಿ ನನ್ನ ಮಿತಿ ನನಗೆ ತಿಳಿದರೆ ಅದನ್ನು ಮರೆಯಲಾಗದು, ಶರಣಾಗತಿ ಸಾಧ್ಯವಾದೀತು. ಹಿಂದಿನ ವಚನದಲ್ಲಿ ನೀನು ನನಗೊಲಿದೆ, ನಾನು ನಿನಗೊಲಿದೆ ಅನ್ನುವ ಮಾತನ್ನು ನೆನೆನದರೆ ಈ ವಚನ ಬಯಸುತ್ತಿರುವ ಸ್ಥಿತಿ ಒಲಿದ ಜೀವಗಳು ಪರಸ್ಪರ ಶರಣಾದ ಸ್ಥಿತಿಯನ್ನು ವಿವರಿಸುತ್ತಿದೆ ಅನಿಸುತ್ತದೆ. ನನ್ನ ಇಷ್ಟ ದೈವ ನನ್ನನ್ನಲ್ಲದೆ ಬೇರೆ ಯಾರನ್ನು ಒಲಿಯಲು ಸಾಧ್ಯ. ನನಗೂ ನಾನತ್ವವಿಲ್ಲ, ನನ್ನ ದೇವರಿಗೂ ಇಲ್ಲ. ಇಬ್ಬರೂ ಇರುವುದು ಒಂದೇ ಠಾವಿನಲ್ಲಿ ಎಂಬ ಮಾತಿಗೆ ಈ ವಚನದಲ್ಲಿ ಹೊಸ ವಿಸ್ತಾರ ದೊರೆಯುತ್ತದೆ. ಹಾಗೇ ಯೋಚನೆಗೆ ಅವಕಾಶಕೊಟ್ಟರೆ ಈ ವಚನ ಬಯಲಿನ ಸ್ಥಿತಿಯನ್ನು, ಚಂಚಲವಾಗಿರುವ ಮತ್ತು ಘನದ ಸ್ಥಿತಿಯನ್ನೂ ಹೇಳುತ್ತಿರಬಹುದು. ಪರಿಮಿತವಾದ ಆವರಣವೊ, ಅವಕಾಶವೋ ಇದ್ದರೆ ತುಳುಕುವುದು, ಪಕ್ಕಕ್ಕೆ ಸರಿಯುವುದು, ಸಂದೇಹಿಸುವುದು, ಮರೆಯುವುದು ಇವಕ್ಕೆಲ್ಲ ಅವಕಾಶ ಇರುತ್ತದೆ. ಮಿತಿಯೇ ಇರದ ಬಯಲೇ ಆಗಿದ್ದರೆ ಎಲ್ಲಿದ್ದರೂ ಬಯಲೇ, ಹೊರಕ್ಕೆ ತುಳುಕಲು ಪಕ್ಕಕ್ಕೆ ಸರಿಯಲು ಬೇರೆ ಜಾಗವೇ ಇರದು! ಬಯಲು ಅಂದರೆ ಘನವೂ ಹೌದು. ಘನವೆಂದರೆ ಸಾಲಿಡ್‌ ಮಾತ್ರವಲ್ಲ, ಕಲ್ಪಿಸಿಕೊಳ್ಳಲು ಆಗದಷ್ಟು ಘನವಾದದ್ದು, ಹಿರಿದಾದದ್ದು, ಅನಂತ ವಿಸ್ತಾರವೂ ಹೌದಲ್ಲವೇ? ನಾನತ್ವ ಅನ್ನುವ ಪರಿಮಿತಿ ಇದ್ದಾಗ ಮಾತ್ರ ನನ್ನ ಹೊರಗಿನದರ ಬಗ್ಗೆ ಸಂಶಯ, ನನ್ನಿಂದ ದೂರವಾದದ್ದು ಅನ್ನುವ ಆತಂಕ, ಪಕ್ಕಕ್ಕೆ ಸರಿಯುವ ಆಸೆ ಎಲ್ಲವೂ ಇರುತ್ತದೆ. ಅಥವಾ ನಾನೆಂಬ ಚಂಚಲ ಸ್ಥಿತಿ ಇರದಿದ್ದಾಗ ಘನ ಸಾಲಿಡ್‌ ಸ್ಥಿತಿ…ಘನವಾದ ದೇವರು ನಾನತ್ವ ನೀಗಿಕೊಂಡು ಘನವಾದ ಬಯಲಾದ ನಾನು…ಹೀಗೆ ಈ ವಚನದ ಅರ್ಥ ಅನ್ನುವುದನ್ನ ಎಷ್ಟೂ ವಿಸ್ತಾರ ಮಾಡಬಹುದು. 

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.