ಯಾವತ್ತು ನೀವು ಇಷ್ಟಪಡುವ ಸಂಗತಿಗಳನ್ನು ಬಯಸುವುದರ ಬದಲಿಗೆ, ನಿಮ್ಮ ಬಳಿ ಇರುವ ಸಂಗತಿಗಳನ್ನು ಇಷ್ಟಪಡಲು ನೀವು ಶುರು ಮಾಡುತ್ತೀರೋ, ಅವತ್ತು ಪ್ರಬುದ್ಧರಾಗುತ್ತೀರಿ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಿಮಗೆ ಇಷ್ಟವಿರುವ ಸಂಗತಿಗಳನ್ನು ನೀವು ಬಯಸುತ್ತಲೇ ಇರಬಹುದು. ಆದರೆ ಅದು ನಿಮ್ಮನ್ನು ಕಷ್ಟಕ್ಕೆ ದೂಕುತ್ತದೆ ಏಕೆಂದರೆ, ಜಗತ್ತು ನಿಮ್ಮ ಇಷ್ಟಪಡುವಿಕೆ, ಇಷ್ಟಪಡದಿರುವಿಕೆಯ ಮೇಲೆ ಡಿಪೆಂಡ್ ಆಗಿ ನಡೆಯುತ್ತಿಲ್ಲ. ನೀವು ಬಯಸುತ್ತಿರುವುದನ್ನೇ ಜಗತ್ತು ನಿಮಗಾಗಿ ಬಯಸುತ್ತಿದೆ ಎಂದು ನಿಶ್ಚಿತವಾಗಿ ಹೇಳಲಿಕ್ಕಾಗುವುದಿಲ್ಲ. ನಿಮಗೆ ಏನೂ ಗೊತ್ತಿರದ ಸಂಗತಿಯೆಡೆಯೇ ಮುಂದುವರೆಯುತ್ತಿರುವುದು ಜಗತ್ತಿನ ನಿಯತಿಯಾಗಿರುವ ಸಾಧ್ಯತೆಯೇ ಬಹಳ ಹೆಚ್ಚು.
ಕೆಲವೊಮ್ಮೆ ನಾವು ಬಯಸಿದ ಸಂಗತಿ ಸಂಭವಿಸಿದಾಗಲೂ ನಮಗೆ ಖುಶಿಯಾಗುವುದಿಲ್ಲ, ಏಕೆಂದರೆ ನಾವು ಡಿಮ್ಯಾಂಡ್ ಮಾಡುವ ಸಂಗತಿಗಳನ್ನೆಲ್ಲ ನಾವು ಈಗಾಗಲೇ ನಮ್ಮ ಕಲ್ಪನೆಗಳಲ್ಲಿ ಬದುಕಿಬಿಟ್ಟಿರುತ್ತೇವೆ. ಆದ್ದರಿಂದ ಈ ಅನುಭವ ಸೆಕೆಂಡ್ ಹ್ಯಾಂಡ್. ನೀವು, ಒಬ್ಬ ನಿರ್ದಿಷ್ಟ ವ್ಯಕ್ತಿ ನಿಮ್ಮ ಪ್ರೇಮವಾಗಬೇಕು ಎಂದು ಬಯಸುತ್ತಿದ್ದರೆ, ನೀವು ಈಗಾಗಲೇ ಆ ವ್ಯಕ್ತಿಯನ್ನು ನಿಮ್ಮ ಕನಸುಗಳಲ್ಲಿ, ಫ್ಯಾಂಟಸಿಗಳಲ್ಲಿ ಪ್ರೀತಿಸಿಬಿಟ್ಟಿದ್ದೀರಿ. ನಿಮ್ಮ ಬಯಕೆ ಪೂರ್ಣವಾದರೆ ಆ ವ್ಯಕ್ತಿ ನಿಮ್ಮ ಕಲ್ಪನೆಗೆ ಪೂರ್ತಿಯಾಗಿ ಮ್ಯಾಚ್ ಆಗದೇ ಇರಬಹುದು. ವಾಸ್ತವ ಯಾವತ್ತೂ ಫ್ಯಾಂಟಸಿಯಷ್ಟು ಫೆಂಟಾಸ್ಟಿಕ್ ಆಗಿ ಇರುವುದಿಲ್ಲ. ಆಗ ನಿಮಗೆ ಇನ್ನೂ ಹತಾಶೆ ಕಾಡುತ್ತದೆ.
ಸಂಭವಿಸುತ್ತಿರುವ ಸಂಗತಿಯನ್ನು ನೀವು ಯಾವ ಜಡ್ಜಮೆಂಟ್ ಇಲ್ಲದೇ ಪೂರ್ತಿಯಾಗಿ, ಇಡಿಯಾಗಿ ಪ್ರೀತಿಸಲು ಶುರು ಮಾಡಿದಾಗ ಮಾತ್ರ ನೀವು ಹತಾಶರಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ಏನೇ ಘಟಿಸಿದರೂ ನೀವು ಯಾವಾಗಲೂ ಸಕಾರಾತ್ಮಕ ಮನೋಭಾವದಲ್ಲಿ ಇರುತ್ತೀರ ಮತ್ತು ಅದನ್ನು ಸ್ವೀಕರಿಸಲು, ಆನಂದಿಸಲು ಸಿದ್ಧರಾಗಿರುತ್ತೀರ.
ನಾನು ಹೊಸದಾಗಿ ಕಾಲೇಜ್ ಒಂದರಲ್ಲಿ ಅಧ್ಯಾಪಕನಾಗಿ ನೇಮಕಗೊಂಡಿದ್ದೆ. ಕಾಲೇಜು ಊರಿನಿಂದ ದೂರ ಇದ್ದುದರಿಂದ ಮತ್ತು ಕಾಲೇಜಿನ ಹತ್ತಿರ ಯಾವ ಒಳ್ಳೆಯ ಹೊಟೆಲ್ ಇಲ್ಲದ ಕಾರಣವಾಗಿ, ನನ್ನ ಎಲ್ಲ ಸಹೋದ್ಯೋಗಿ ಪ್ರೊಫೆಸರ್ ಗಳು ಲಂಚ್ ಗಾಗಿ ಮನೆಯಿಂದ ಊಟ ತರುತ್ತಿದ್ದರು. ನಾವೆಲ್ಲ ಸಹೋದ್ಯೋಗಿಗಳು ಒಂದೇ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದೆವು.
ಒಂದು ದಿನ ಲಂಚ್ ಸಮಯದಲ್ಲಿ ನನ್ನ ಪಕ್ಕ ಕುಳಿತಿದ್ದ ಸಹೋದ್ಯೋಗಿ ತನ್ನ ಲಂಚ್ ಬಾಕ್ಸ್ ಓಪನ್ ಮಾಡಿ, ಅದರೊಳಗಿನ ಊಟ ಗಮನಿಸಿ, ನಿರಾಸೆಯಿಂದ ನಿಟ್ಟುಸಿರುಬಿಟ್ಟ, “ಓಹ್ ಮತ್ತೆ ಇವತ್ತು ಚಪಾತಿ ಮತ್ತು ಆಲೂಗಡ್ಡೆ ಪಲ್ಯ”. ಬಹುಶಃ ಅವನಿಗೆ ಚಪಾತಿ ಮತ್ತು ಆಲೂಗಡ್ಡೆ ಪಲ್ಯ ಇಷ್ಟ ಇರದಿರಬಹುದು ಎಂದು ನನಗನಿಸಿತು.
ಆದರೆ ನಾನು ಕಾಲೇಜಿಗೆ ಹೊಸಬನಾಗಿದ್ದರಿಂದ ಏನೂ ಹೇಳಲು ಹೋಗಲಿಲ್ಲ. ಮರುದಿನ ಮತ್ತೆ ಇದೇ ಘಟನೆ ಮರುಕಳಿಸಿತು. ಮತ್ತೆ ನನ್ನ ಸಹೋದ್ಯೋಗಿ ತನ್ನ ಲಂಚ್ ಬಾಕ್ಸ್ ಬಿಚ್ಚಿ ನೋಡಿ ನಿರಾಸೆಯಿಂದ ಹೇಳಿದ, “ ಓಹ್ ಇವತ್ತೂ ಕೂಡ ಚಪಾತಿ ಮತ್ತು ಆಲೂಗಡ್ಡೆ ಪಲ್ಯ”.
ಈ ಬಾರಿ ನನ್ನಿಂದ ಸುಮ್ಮನಿರಲಾಗಲಿಲ್ಲ, “ನಿಮಗೆ ಇಷ್ಟವಾಗದಿದ್ದರೆ ನಿಮ್ಮ ಹೆಂಡತಿಗೆ ಬೇರೆ ಏನಾದರೂ ಮಾಡಲು ಯಾಕೆ ಹೇಳಬಾರದು?” ನಾನು ಅವನಿಗೆ ಸಲಹೆ ನೀಡಿದೆ.
“ಹೆಂಡತಿ ! ಯಾವ ಹೆಂಡತಿ?” ಅವನಿಗೆ ಆಶ್ಚರ್ಯವಾಯಿತು.
“ನನಗೆ ಮದುವೆಯಾಗಿಲ್ಲ, ನನ್ನ ಲಂಚ್ ನಾನೇ ತಯಾರಿಸುತ್ತೇನೆ”. ಅವನು ಹೇಳಿದ.
ನಿಮ್ಮ ಬದುಕು ಕೂಡ ಹೀಗೆಯೇ ಇದೆ. ನಿಮ್ಮ ಹೊರತಾಗಿ ಅಲ್ಲಿ ಬೇರೆ ಯಾರೂ ಇಲ್ಲ. ನಗುವುದು, ಅಳುವುದು ಎಲ್ಲ ನಿಮ್ಮ ಆಯ್ಕೆಗಳೇ. ಎಲ್ಲದಕ್ಕೂ ನೀವೇ ಜವಾಬ್ದಾರರು. ನೀವು ಯಾರನ್ನೂ ದೂರುವ ಹಾಗಿಲ್ಲ, ಯಾರನ್ನೂ ಹೊಗಳುವ ಹಾಗಿಲ್ಲ. ನಿಮ್ಮ ಆಯ್ಕೆಗಳಲ್ಲಿಯೇ ಇದೆ ನಿಮ್ಮ ಆನಂದ, ಯಾತನೆ ಎಲ್ಲದರ ಕೀಲಿ ಕೈ.

