“ಏನೇ ಆದರೂ ನಾನು ಖುಶಿಯಾಗಿಯೇ ಇರುತ್ತೇನೆ; ಆದದ್ದು ನನ್ನ ಮೇಲೆ ಯಾವ ಪರಿಣಾಮ ಬೀರದು. ಸಂದರ್ಭ ಏನೇ ಇರಲಿ, ನಾನು ಖುಶಿಯಾಗಿರುವ ಮಾರ್ಗ ಹುಡುಕಿಕೊಳ್ಳುತ್ತೇನೆ” ಎಂದು ಹೇಳಬಲ್ಲ ಮನುಷ್ಯ ನಿಜವಾಗಿಯೂ ಸ್ವತಂತ್ರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಯಾವ ರಾಜಕಾರಣ, ಯಾವ ವ್ಯತ್ಯಾಸವನ್ನೂ ಮಾಡುವುದಿಲ್ಲ. ಹೊರ ಪ್ರಪಂಚದಲ್ಲಿ ಆಗುವ ಯಾವ ಬದಲಾವಣೆಯೂ ಯಾವ ವ್ಯತ್ಯಾಸವನ್ನು ಮಾಡುವುದಿಲ್ಲ. ಬಡವ ಅಥವಾ ಶ್ರೀಮಂತ, ಭಿಕ್ಷುಕ ಅಥವಾ ರಾಜ ಏನೇ ಆಗಿದ್ದರೂ ಸ್ವತಂತ್ರ ಮನುಷ್ಯನಿಗೆ ಯಾವ ವ್ಯತ್ಯಾಸ ಆಗದು. ಅವನ ಅಥವಾ ಅವಳ ಒಳಗಿನ ಪ್ರಕೃತಿ ಬದಲಾಗುವುದಿಲ್ಲ.
ಇದು ಎಲ್ಲ ಧ್ಯಾನ ಪದ್ಧತಿಗಳ ಮುಖ್ಯ ಉದ್ದೇಶ – ಇಂಥ ಪ್ರಶಾಂತತೆಯಲ್ಲಿ ನೆಲೆಯಾಗುವುದು, ಇಂಥ ಅಚಲ ಸ್ಥಿತಿ, ಯಾವ ಕರಾರುಗಳೂ ಇಲ್ಲದಂಥ ಸ್ಥಿತಿಯನ್ನು ತಲುಪುವುದು. ಆ ನಂತರ ಪರಿಸ್ಥಿತಿ ಏನೇ ಆಗಲಿ, ನೀವು ಖುಶಿಯಲ್ಲಿಯೇ ಇರುತ್ತೀರಾ. ಸಾಮಾನ್ಯ ಖುಶಿಯಲ್ಲ ಪ್ರಚಂಡ ಖುಶಿ. ಆಗ ನಿಮ್ಮನ್ನು ಹಿಂದೆ ಸತಾಯಿಸುತ್ತಿದ್ದ ಸಂಗತಿಗಳು ತಾನೇ ತಾನಾಗಿ ಸಂಭವಿಸಲು ಶುರು ಆಗುತ್ತವೆ. ಥಟ್ಟನೇ ಎಲ್ಲವೂ ಸರಾಗವಾಗುತ್ತವೆ, ಎಲ್ಲವೂ ನಿಮ್ಮ ಪ್ಲಾನ್ ಲ್ಲಿ ಪಕ್ಕಾ ಫಿಟ್ ಆಗಿ ಕುಳಿತುಕೊಳ್ಳುತ್ತವೆ.
ಝೆನ್ ಮಾಸ್ಟರ್ ನ ಆಶ್ರಮದಲ್ಲಿ ಝೆನ್ ಅಭ್ಯಾಸ ಮಾಡುತ್ತಿದ್ದ ಒಬ್ಬ ಯುವ ಸನ್ಯಾಸಿ ತನ್ನ ಕಲಿಕೆಯ ಅವಧಿ ಮುಗಿಯುತ್ತಿದ್ದಂತೆಯೇ ದೇಶಾಂತರ ಹೊರಟು ಬಿಟ್ಟ. ಸುತ್ತಾಟದಲ್ಲಿ ತಾನು ಕಂಡದ್ದನ್ನ ಮತ್ತು ತನ್ನ ಅಧ್ಯಾತ್ಮ ಕಲಿಕೆಯ ಪ್ರಗತಿಯನ್ನು ಪತ್ರದ ಮೂಲಕ ಮಾಸ್ಟರ್ ಗೆ ತಿಳಿಸಬೇಕೆಂದು ಬಯಸಿದ.
ಆಶ್ರಮ ಬಿಟ್ಟು ಒಂದು ತಿಂಗಳಾದ ಮೇಲೆ ಮಾಸ್ಟರ್ ಗೆ ಮೊದಲ ಪತ್ರ ಬರೆದ “ ಮಾಸ್ಟರ್, ನನ್ನ ಪ್ರಜ್ಞೆ ವಿಸ್ತಾರಗೊಳ್ಳುತ್ತಿದೆ, ಬ್ರಹ್ಮಾಂಡದೊಂದಿಗೆ ಒಂದಾಗುತ್ತಿರುವ ಹಾಗೆ ಅನುಭವವಾಗುತ್ತಿದೆ “
ಪತ್ರ ಓದುತ್ತಿದ್ದಂತೆಯೇ ಮಾಸ್ಟರ್, ಪತ್ರ ಬಿಸಾಕಿ ಬಿಟ್ಟ.
ಎರಡನೇ ಪತ್ರದಲ್ಲಿ ಶಿಷ್ಯ ಹೀಗೆ ಬರೆದಿದ್ದ, “ ಸಮಸ್ತ ಚರಾಚರಗಳಲ್ಲಿ ಹುದುಗಿರುವ ದೈವಿಕತೆಯನ್ನು ನಾನು ಕಂಡುಕೊಂಡೆ “
ಪತ್ರ ಓದಿ ಮಾಸ್ಟರ್ ಗೆ ತೀವ್ರ ಹತಾಶೆಯಾಯಿತು.
ಒಂದು ತಿಂಗಳ ನಂತರ ಮತ್ತೆ ಪತ್ರ ಬಂತು
“ ಪ್ರಕೃತಿಯ ರಹಸ್ಯ ನನ್ನ ದಿವ್ಯ ದೃಷ್ಟಿಗೆ ಗೋಚರವಾಯಿತು “
ಪತ್ರ ಓದಿ ಮಾಸ್ಟರ್, ಆಕಳಿಸಿದ.
ಎರಡು ತಿಂಗಳ ನಂತರ ಬಂದ ಪತ್ರದಲ್ಲಿ ಹೀಗೆ ಬರೆದಿತ್ತು “ ಯಾರೂ ಹುಟ್ಟಿಲ್ಲ, ಯಾರೂ ಬದುಕುತ್ತಿಲ್ಲ, ಯಾರೂ ಸಾಯುವುದೂ ಇಲ್ಲ, ಏಕೆಂದರೆ ಆತ್ಮ ಒಂದು ಭ್ರಮೆ”
ಮಾಸ್ಟರ್ ಗೆ ಎಷ್ಟು ನಿರಾಶೆಯಾಯಿತೆಂದರೆ ಛೇ ಎನ್ನುತ್ತ ಗಾಳಯಲ್ಲಿ ತನ್ನ ಕೈ ತೂರಿದ.
ಹೀಗೇ ಒಂದು ವರ್ಷ ಕಳೆಯಿತು, ಶಿಷ್ಯನಿಂದ ಪತ್ರಗಳು ಬರುತ್ತಲೇ ಇದ್ದವು. ಮಾಸ್ಟರ್ ಗೆ ಸಮಾಧಾನವಾಗಲಿಲ್ಲ, ಶಿಷ್ಯನ ಕರ್ತವ್ಯಗಳನ್ನು ನೆನಪಿಸುತ್ತ, ಅವನ ಅಧ್ಯಾತ್ಮದ ಹಾದಿಯಲ್ಲಿನ ಸಮಸ್ಯೆಗಳನ್ನು ವಿವರಿಸಿ ಪತ್ರ ಬರೆದ.
ಶಿಷ್ಯ ತಿರುಗಿ ಉತ್ತರ ಬರೆದ “ ನಿಮ್ಮ ತಿಳುವಳಿಕೆ ಯಾರಿಗೆ ಬೇಕು? “
ಈ ಉತ್ತರ ಓದುತ್ತಿದ್ದಂತೆಯೇ, ಮಾಸ್ಟರ್ ಮುಖದಲ್ಲಿ ತೃಪ್ತಿ ಕಾಣಿಸಿಕೊಂಡಿತು.
“ ಓಹ್! ಕೊನೆಗೂ ತಿಳಿದುಕೊಂಡುಬಿಟ್ಟ ಬಡ್ಡಿಮಗ ”

