ತಾನು ಒಪ್ಪಿದ ಆತ್ಮ ಸಂಗಾತಿಯ ಚಿತ್ರವನ್ನು ಅವನಲ್ಲಿ ಏನೇನು ಇಲ್ಲ ಅನ್ನುವುದನ್ನು ಹೇಳುತ್ತ ಕಟ್ಟಿಕೊಟ್ಟಿರುವುದು ಗಮನ ಸೆಳೆಯುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚೆಲುವಂಗೆ
ನಾನೊಲಿದೆ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ ಚೆಲುವಂಗೆ
ನಾನೊಲಿದೆ
ಎಲೆ ಅವ್ವಗಳಿರಾ
ಭವವಿಲ್ಲದ ಭಯವಿಲ್ಲದ ನಿರ್ಭಯ ಚೆಲುವಂಗೊಲಿದೆ ನಾನು
ಸೀಮೆಯಿಲ್ಲದ ನಿಸ್ಸೀಮಂಗೊಲಿದೆ ನಾನು
ಚೆನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆ
ಎಲೆ ಅವ್ವಗಳಿರಾ [೩೯೮]
[ರೂಹಿಲ್ಲದ=ರೂಪವಿಲ್ಲದ; ಎಡೆ=ಜಾಗ, ಸ್ಪೇಸ್; ಕಡೆ=ಅಂತ್ಯ; ತೆರಹಿಲ್ಲದ=ವಸ್ತುಗಳ ನಡುವೆ ಇರುವ ಖಾಲಿ ಜಾಗ, ಗ್ಯಾಪ್; ಕುರುಹು=ಚಿಹ್ನೆ, ಗುರುತು, ದಿ ಸೈನ್; ಭವ=ಈ ಲೋಕದ ಬದುಕಿನ ಜಂಜಡ; ನಿಸ್ಸೀಮ=ಮಿತಿ ಇರದ, ಗಡಿ ಇರದ; ಮಿಗೆ ಮಿಗೆ= ಇನ್ನೂ ಇನ್ನೂ ಹೆಚ್ಚು, ಎಕ್ಸೆಸ್]
ಅವ್ವಗಳಿರಾ—ಸಾವು, ಕೆಡುಕು, ರೂಪು, ಸ್ಥಳ, ಕೊನೆ, ಅಂತರ, ಚಿಹ್ನೆ ಏನೂ ಇಲ್ಲದ ಚೆಲುವನಿಗೆ ನಾನು ಒಲಿದೆ. ಅವನಿಗೆ ಭವವಿಲ್ಲ, ಈ ಲೋಕದ ಜಂಜಡವಿಲ್ಲ, ಯಾವುದೇ ಥರದ ಮಿತಿಯೂ ಇಲ್ಲ. ಅಂಥ ಚೆನ್ನಮಲ್ಲಿಕಾರ್ಜುನ ಅನ್ನುವ ಗಂಡನಿಗೆ ಮತ್ತೂ ಮತ್ತೂ ಒಲಿದೆ.
ತಾನು ಒಪ್ಪಿದ ಆತ್ಮ ಸಂಗಾತಿಯ ಚಿತ್ರವನ್ನು ಅವನಲ್ಲಿ ಏನೇನು ಇಲ್ಲ ಅನ್ನುವುದನ್ನು ಹೇಳುತ್ತ ಕಟ್ಟಿಕೊಟ್ಟಿರುವುದು ಗಮನ ಸೆಳೆಯುತ್ತದೆ. ರೂಪವಿಲ್ಲ, ಒಂದು ಜಾಗಕ್ಕೆ ಬದ್ಧನಲ್ಲ, ಅವನಿಗೂ ಮತ್ತೊಂದಕ್ಕೂ/ ನನಗೂ ತೆರವು ಇಲ್ಲ, ಎಲ್ಲವೂ ಒಂದೇ, ಅವನಿಗೆ ಯಾವ ಕುರುಹೂ ಇಲ್ಲ, ಈ ಬದುಕಿನ ಜಂಜಡವಿಲ್ಲ, ಯಾವ ಥರದ ಮಿತಿಯೂ ಇಲ್ಲ ಅಂಥವನನ್ನು ನಾನು ಮತ್ತೂ ಮತ್ತೂ ಮಿಗಿಲಾಗಿ ಒಲಿದೆ.
ಈ ವಚನ ಚೆಲುವನನ್ನು ವಿವರಿಸಿದರೂ ಆ ಚೆಲುವು ನಾವು ಮಾಮೂಲಾಗಿ ಚೆಲುವು ಎಂದು ಯಾವ ಯಾವ ಲಕ್ಷಣ ಹೇಳುತ್ತೇವೋ ಅವು ಯಾವುದೂ ಇಲ್ಲದ ಚೆಲುವು. ಇದನ್ನು ಒಂದು ಮಾತಿನಲ್ಲಿ ನಿರ್ಗುಣ ಅನ್ನುವುದು ಸರಿಯಲ್ಲ. ಅದು ಫಿಲಾಸಫಿಯ ಭಾರವಾದ ಮಾತು. ನಾನು ತುಂಬ ತುಂಬ ಪ್ರೀತಿಸುವ ಚೆಲುವ ಎಲ್ಲೂ ಇರಲು ಸಾಧ್ಯವಿರದ, ತನ್ನಿಂದ ಬೇರೆಯಾಗಿರದ, ಅಂಥವನು ಇನ್ನೊಬ್ಬನಿಲ್ಲ ಅನಿಸುವಂಥ ಚೆಲುವ, ರೂಪವಿಲ್ಲದ್ದರಿಂದ ಬೇರೆಯವರಿಗೆ ಕಾಣದ ತನಗೆ ಮಾತ್ರ ಕಾಣುವ ಚೆಲುವ ಅನ್ನುವಾಗ ಪ್ರೀತಿಯ, ಮೆಚ್ಚುಗೆಯ ಉತ್ಕಟತೆ ಇದೆಯಲ್ಲ ಅದು ʻನಿರ್ಗುಣʼದಲ್ಲಿ ಇಲ್ಲ. ಜಡವಾದ ಬುದ್ಧಿಯ ಮಾತು ಅದು. ರಕ್ಷಣೆ ಮತ್ತು ಪ್ರೀತಿಯನ್ನು ಸಮಸಮವಾಗಿ ನೀಡಬಲ್ಲ, ಮಿತಿ ಇರದ ಆದರೂ ತನ್ನವನೇ ಆಗಿರುವ ಸಂಗಾತಿಯ ಆದರ್ಶದ ಕಲ್ಪನೆ. ಅವನನ್ನು ಅರಸಿ ತೊಳಲುವುದು ಅಕ್ಕನ ವಚನಗಳ ಒಂದು ಮುಖ್ಯ ಥೀಮು. ಈ ವಚನ ನಿರ್ಗುಣದಂಥ ಅಮೂರ್ತ ಕಲ್ಪನೆಯನ್ನು ಕವಿತೆಯಾಗಿ ಮಾರ್ಪಡಿಸಿ ಪ್ರಿಯವಾಗಿಸುತ್ತದೆ, ಅಂಥ ಮಾರ್ಪಾಡು ಮಾಡಿದ ಮನಸಿನ ಬಗ್ಗೆ ಪ್ರೀತಿ ಗೌರವ ಹುಟ್ಟುತ್ತದೆ. ಹಿಂದಿನ ವಚನದಲ್ಲಿದ್ದಂಥ ಅರ್ಥ ವಿಸ್ತಾರವೇ ಈ ವಚನಕ್ಕೂ ಇದೆ. ನಿರ್ಗುಣ, ನಿರಾಕಾರ, ಸರ್ವವ್ಯಾಪಿ ಇಂಥ ಕ್ಲೀಶೆಯ ಪರಿಭಾಷೆಯನ್ನು ಕೇಳುಗರಿಗೆ ಗೊತ್ತೇ ಆಗದಂತೆ ನಿರಾಕರಿಸಿ ಅನುಭವಪೂರ್ಣ ಒಲಿದ ಜೀವದ ಚಿತ್ರಣ ನೀಡುತ್ತದೆ.
ಇರದ ಚಲುವಿನ ಇಂಥ ಗಂಡ ಕಂಡರೂ ಕನಸಿನಲ್ಲಿ ಮಾತ್ರ ಕಾಣಬಹುದೇನೋ. ಹಾಗಾಗಿ ಅಕ್ಕನ ವಚನಗಳಲ್ಲಿ ಕನಸು ಒಂದು ರೂಪಕವಾಗಿ ಏಳು ವಚನಗಳಲ್ಲಿ ಕಾಣುತ್ತದೆ

